ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಮಾರುಕಟ್ಟೆ ಕೊರತೆ; ಅರಿಸಿನ ಬೆಲೆ ಕುಸಿತ, ಬೆಳೆಗಾರರು ಕಂಗಾಲು

Last Updated 13 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನಲ್ಲಿ ಸುಮಾರು 500 ಹೆಕ್ಟೇರ್‌ಗಿಂತಲೂ ಅಧಿಕ ಪ್ರದೇಶದಲ್ಲಿ ಅರಿಸಿನ ಬೇಸಾಯ ನಡೆಯುತ್ತಿದೆ. ಆದರೆ ತಮ್ಮ ಉತ್ಪನ್ನ ಮಾರಾಟ ಮಾಡಲು ರೈತರಿಗೆ ಸ್ಥಳೀಯವಾಗಿ ಮಾರುಕಟ್ಟೆಯೇ ಇಲ್ಲ.

ಪ್ರಸ್ತುತ ಅರಿಸಿನ ಬೆಳೆಗಾರರು ತೆಲಂಗಾಣದ ಸದಾಶಿವಪೇಟ, ಕರ್ನಾಟಕದ ಮಹಾಲಿಂಗಪುರ ಮತ್ತು ಮಹಾರಾಷ್ಟ್ರದ ಸಾಂಗ್ಲಿಯ ಮಾರುಕಟ್ಟೆಗಳನ್ನು ಅವಲಂಬಿಸಿದ್ದಾರೆ.

ಅರಿಸಿನ ಬೆಳೆ ಕೊಯ್ಲಿಗೆ ಬರುತ್ತಿದ್ದಂತೆ ದಲ್ಲಾಳಿಗಳು ತಾಲ್ಲೂಕಿಗೆ ಬರುತ್ತಾರೆ. ಇವರು ರೈತರನ್ನು ಸಂಪರ್ಕಿಸಿ ಮಾರುಕಟ್ಟೆಯ ಬೆಲೆಗಿಂತ ತುಂಬ ಕಡಿಮೆ ಬೆಲೆಗೆ ಉತ್ಪನ್ನ ಖರೀದಿಸಿ ಒಯ್ಯುತ್ತಾರೆ. ವರ್ಷ ಕಾಲ ರೈತರು ಬೆವರು ಸುರಿಸಿ ಬೆಳೆದ ಉತ್ಪನ್ನದ ಲಾಭ ದಲ್ಲಾಳಿಗಳ ಪಾಲಾಗುತ್ತಿದೆ.

ತಾಲ್ಲೂಕಿನಲ್ಲಿ ಸ್ಥಳೀಯ ತಳಿ ಮತ್ತು ಸೇಲಂ ತಳಿಯ ಅರಿಸಿನ ಅಧಿಕ ಪ್ರಮಾಣದಲ್ಲಿ ಬಿತ್ತನೆ ನಡೆಸಿದ ರೈತರು ಮಾರುಕಟ್ಟೆಯಲ್ಲಿ ದರ ಕುಸಿತದಿಂದ ಕಂಗಾಲಾಗಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕುದಿಸಿದ (ಸಂಸ್ಕರಿಸಿದ) ಅರಿಸಿನಕ್ಕೆ ಪ್ರತಿ ಕ್ವಿಂಟಲ್‌ಗೆ ₹4500ರಿಂದ 5 ಸಾವಿರ ಇದೆ. ಕಳೆದ ತಿಂಗಳು ₹8 ಸಾವಿರ ಇತ್ತು.

ಅರಿಸಿನ ಕೊಯ್ಲು ಮಾಡಿ ಗಂಟು ಮತ್ತು ಬೋಟುಗಳನ್ನು ಬೇರ್ಪಡಿಸಿ ಕುದಿಸಿ ಒಣಗಿಸಿದ ಮೇಲೆ ಮಾರಾಟಕ್ಕೆ ಸಿದ್ಧವಾಗುತ್ತದೆ.

ನೀರಾವರಿ ಸೌಲಭ್ಯದ ರೈತರು ಮಾತ್ರ ಬೆಳೆಯುವ ಇದರ ಬೇಸಾಯದ ಅವಧಿ 10ರಿಂದ11 ತಿಂಗಳು. ಜಿಲ್ಲೆಯಲ್ಲಿ ಚಂದ್ರಂಪಳ್ಳಿ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಅರಸಿನ ಬೆಳೆಯುತ್ತಾರೆ. ಪ್ರಸಕ್ತ ವರ್ಷ ಮಳೆಯ ಅಭಾವದಿಂದ ಚಂದ್ರಂಪಳ್ಳಿ ಜಲಾಶಯ ಭರ್ತಿಯಾಗಿಲ್ಲ. ಕೇವಲ ಅರ್ಧದಷ್ಟು ನೀರು ಸಂಗ್ರಹವಾಗಿತ್ತು. ಆರಂಭದಿಂದಲೂ ಮಳೆಯ ಅಭಾವ ಎದುರಾಗಿದ್ದರಿಂದ ರೈತರು ಅರಿಸಿನ ಬೇಸಾಯಕ್ಕೆ ಹಿಂದೇಟು ಹಾಕಿದ್ದರು.

ಚಿಂಚೋಳಿ ತಾಲ್ಲೂಕು ಚಿಕ್ಕಲಿಂಗದಳ್ಳಿಯ ರೈತ ಅಶೋಕ ಈದಲಾಯಿ ಅರಿಶಿಣ ಹುಲುಸಾಗಿ ಬೆಳೆದಿರುವುದು
ಚಿಂಚೋಳಿ ತಾಲ್ಲೂಕು ಚಿಕ್ಕಲಿಂಗದಳ್ಳಿಯ ರೈತ ಅಶೋಕ ಈದಲಾಯಿ ಅರಿಶಿಣ ಹುಲುಸಾಗಿ ಬೆಳೆದಿರುವುದು

ಮಾರುಕಟ್ಟೆಯಲ್ಲಿ ಈಗ ಬೆಲೆ ಕುಸಿರುವುದರಿಂದ ಸರ್ಕಾರ ಬೆಂಬಲ ಬೆಲೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮೂಲಕ ಅರಿಸಿನ ಖರೀದಿಸಬೇಕು ಎಂದು ರೈತರಾದ ಅಶೋಕ ಈದಲಾಯಿ ಮತ್ತು ನೆಲ್ಲಿ ಮಲ್ಲಿಕಾರ್ಜುನ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT