ಶನಿವಾರ, ಡಿಸೆಂಬರ್ 4, 2021
26 °C
ದೊಡ್ಡ ಭೂಕಂಪ ಸಾಧ್ಯತೆ ಕಡಿಮೆ: ಭೂಕಂಪನ ಪೀಡಿತ ಪ್ರದೇಶಗಳಿಗೆ ಇಂದು ತಜ್ಞರ ಭೇಟಿ, ಪರಿಶೀಲನೆ

ಕಲಬುರಗಿ: ಭೂಕಂಪನ ಪರಿಣಾಮ ಚಿಂಚೋಳಿ, ಕಾಳಗಿಯಲ್ಲಿ ಮನೆ ಕುಸಿಯುವ ಭೀತಿ

ಜಗನ್ನಾಥ ಡಿ. ಶೇರಿಕಾರ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ (ಕಲಬುರಗಿ ಜಿಲ್ಲೆ): ಭೂಕಂಪನ ಮನುಷ್ಯನನ್ನು ಸಾಯಿಸುವುದಿಲ್ಲ. ಆದರೆ ಕಟ್ಟಡಗಳನ್ನು ಕೊಲ್ಲುತ್ತದೆ ಎಂಬ ಮಾತಿದೆ. ಈ ಮಾತನ್ನು ಅವಲೋಕಿಸಿದರೆ ಭೂಕಂಪನ ಪೀಡಿತ ಚಿಂಚೋಳಿ ಮತ್ತು ಕಾಳಗಿ ತಾಲ್ಲೂಕುಗಳಲ್ಲಿನ ಮನೆಗಳು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ.

ಶತಮಾನಕ್ಕಿಂತ ಹಳೆಯ ಮನೆಗಳ ಗೋಡೆಗಳು ಮೀಟರ್ ಅಗಲ ಹೊಂದಿವೆ. ದಶಕಗಳ ಹಿಂದೆ ನಿರ್ಮಿಸಿದ ಮನೆಯ ಗೋಡೆಗಳ ಅಗಲ ಒಂದರಿಂದ ಒಂದೂವರೆ ಅಡಿಯಿವೆ. ಇವು ಶಹಾಬಾದ (ಸುಣ್ಣದ) ಕಲ್ಲುಗಳಿಂದ ನಿರ್ಮಿಸಲಾಗಿದ್ದು, ಮಧ್ಯದಲ್ಲಿ ಮಣ್ಣು ಹಾಗೂ ಕಲ್ಲು ಚಿಪ್ಪುಗಳನ್ನು ಬಳಸಲಾಗಿದೆ. ಮೇಲ್ಛಾವಣಿಯಾಗಿ ತೆಳು ಪದರಿನ ಸುಣ್ಣದ ಕಲ್ಲು ಹೊದಿಸಿರುವುದು ನಿದ್ದೆಗೆಡಿಸುವಂತಿದೆ.

ಹೀಗೆ ನಿರ್ಮಿಸಿದ ಎರಡಂತಸ್ತಿನ ದೊಡ್ಡ ದೊಡ್ಡ ಮನೆಗಳನ್ನು ಇಲ್ಲಿ ಸಾಕಷ್ಟು ಇವೆ. ಇಂತಹ ಮನೆಗಳು ಹೊಂದಿರುವ ಬಹುತೇಕ ಜನರು ಊರು ಖಾಲಿ ಮಾಡಿ ನೆಂಟರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.

ಗಡಿಕೇಶ್ವಾರ ಸುತ್ತಮುತ್ತಲಿನ ಪ್ರದೇಶದಲ್ಲಿ ಅಕ್ಟೋಬರ್ 8ರಿಂದ ನಿರಂತರ ಭೂಕಂಪನ ಸಂಭವಿಸುತ್ತಿದ್ದು, ಅಕ್ಟೋಬರ್ 11ರಂದು ಸಂಭವಿಸಿದ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.0 ದಾಖಲಾಗಿತ್ತು. ಅಕ್ಟೋಬರ್ 12ರಂದು ಸಂಭವಿಸಿದ ಭೂಕಂಪನ ತೀವ್ರತೆ 3.5 ದಾಖಲಾಗಿದೆ. ಇದರಿಂದ ಇಲ್ಲಿ ಶತಮಾನಕ್ಕಿಂತ ಹಳೆಯ ಹಾಗೂ ಹಲವು ದಶಕಗಳ ಹಿಂದೆ ನಿರ್ಮಿಸಿದ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೆಲ ಗೋಡೆಗಳು ಕುಸಿದಿವೆ.

ಇದರಿಂದ ಸರ್ಕಾರಕ್ಕೆ ಇಲ್ಲಿನ ಮನೆಗಳ ನಿರ್ಮಾಣದ ಸ್ವರೂಪವೇ ಈಗ ಸವಾಲಾಗಿ ಪರಿಣಮಿಸಿದೆ. ಗಡಿಕೇಶ್ವಾರ ಸುತ್ತಮುತ್ತಲಿನ ಸುಮಾರು 20 ಕಿ.ಮೀ ವ್ಯಾಪ್ತಿಯಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿವೆ. ಇಲ್ಲಿನ ಗಡಿಕೇಶ್ವಾರ, ಕೊಡದೂರು, ಹಲಚೇರಾ, ಕುಪನೂರ, ಕೊರವಿ ಗ್ರಾಮಗಳ ವ್ಯಾಪ್ತಿಯಲ್ಲಿ ಭೂಕಂಪನ ಸಂಭವಿಸಿದೆ.

‘ಭೂಕಂಪನದ ಕೇಂದ್ರ ಬಿಂದುಗಳು ದಾಖಲಾದ ಗ್ರಾಮಗಳು ಮತ್ತು ಅಕ್ಕಪಕ್ಕದ ಗ್ರಾಮಗಳಲ್ಲಿನ ಮನೆಗಳು ತುಂಬಾ ಹಳೆಯದಾಗಿವೆ. ಇದರಿಂದಲೇ ಅಲ್ಪಪ್ರಮಾಣದ ಕಂಪನದಿಂದಲೇ ಮನೆಯ ಗೋಡೆಗಳು ಕುಸಿಯುತ್ತಿವೆ. ಹೀಗಾಗಿ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು’ ಎಂದು ವಿಜಯಕುಮಾರ ಚೇಂಗಟಿ ಹೇಳುತ್ತಾರೆ.

‘ಕಲಬುರಗಿ ಜಿಲ್ಲೆಯ ಭೂಮಿಯ ರಚನೆ ಅವಲೋಕಿಸಿದರೆ ಇಲ್ಲಿ ಭಾರಿ ಭೂಕಂಪನ ಆಗುವ ಸಾಧ್ಯತೆ ಕಡಿಮೆಯಿದೆ. ಆದರೆ, ಈಗಿನ ಪರಿಸ್ಥಿತಿಯ ಹಿನ್ನಲೆಯಲ್ಲಿ ಇವು ಪೂರ್ವ ಕಂಪನಗಳಾಗಿದ್ದರೆ, ಉಪೇಕ್ಷಿಸುವಂತಿಲ್ಲ’ ಎನ್ನುತ್ತಾರೆ ಬೆಂಗಳೂರು ವಿಶ್ವವಿದ್ಯಾಯದ ಭೂವಿಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ.ಬಿ.ಸಿ ಪ್ರಭಾಕರ.

‘ಕಾಳಗಿಯ ಬುಗ್ಗೆ ಮತ್ತು ಅಲ್ಲಿನ ದೇವಾಲಯ ಭೂಮಿಯ ಆಳಕ್ಕೆ ಕುಸಿದಿರುವುದು. ಬುಗ್ಗೆಗಳು, ಗಣಿಗಾರಿಕೆ, ನದಿ ಮತ್ತು ಜಲಾಶಯಗಳು ಹಾಗೂ ಭೂಮಿಯ ರಚನೆ, ಭೂ ಪದರುಗಳು, ಭೂಮಿಯ ಒಳಗಡೆ ಇರಬಹುದಾದ ಟೊಳ್ಳು ಪತ್ತೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಅಧ್ಯಯನ ನಡೆಯಬೇಕಿದೆ. ಇದನ್ನು ಹೈದರಾಬಾದ್‌ನಲ್ಲಿರುವ ಪ್ರತಿಷ್ಠಿತ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ ತಜ್ಞರು ಅಧ್ಯಯನ ನಡೆಸಬೇಕು’ ಎಂದು ಅವರು ತಿಳಿಸಿದರು.

‘ಭೂಕಂಪನಕ್ಕೆ ಇಂಥದ್ದೇ ಸಮಯ ಎಂಬುದಿಲ್ಲ. ಆದರೆ, ಈ ಭಾಗದಲ್ಲಿ 25 ವರ್ಷಗಳ ಹಿಂದೆ ಮಹಾರಾಷ್ಟ್ರದ ಖೀಲಾರಿಯ ಭೂಕಂಪ ನಸುಕಿನ 3 ರಿಂದ 4 ಗಂಟೆ ಅವಧಿಯ‌ಲ್ಲಿ ಸಂಭವಿಸಿತ್ತು. ಇದರಿಂದ ಸಾವು ನೋವುಗಳು ಹೆಚ್ಚಾದವು. ಹಗಲಿನಲ್ಲಿ ಭೂಕಂಪ ಸಂಭವಿಸಿದ್ದರೆ, ಸಾವಿನ ಪ್ರಮಾಣ ಕಡಿಮೆಯಾಗುತ್ತಿತ್ತು. ಜನ ಮನೆ ಹೊರಗಡೆ ಓಡಿ ಬರುತ್ತಿದ್ದರು. ಹೀಗಾಗಿ ರಾತ್ರಿ ಮಲಗುವುದಕ್ಕೆ ಸುರಕ್ಷತೆಯ ದೃಷ್ಟಿಯಿಂದ ಶೆಡ್ ನಿರ್ಮಿಸುವುದು ಸೂಕ್ತ’ ಎಂದು ಅವರು ತಿಳಿಸಿದರು.

‘ಗಡಿಕೇಶ್ವಾರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಭವಿಸುತ್ತಿರುವ ಅಲ್ಪಪ್ರಮಾಣದ ಭೂಕಂಪನ ಒಂದು ರೀತಿಯಲ್ಲಿ ಒಳ್ಳೆಯದ್ದು. ಇವು ಭೂಮಿಯ ಒಳಗಡೆ ನಡೆಯುವ ಪ್ರಕ್ರಿಯೆಗಳಿಂದ ಸೃಷ್ಟಿಯಾದ ಶಕ್ತಿ ಬಿಡುಗಡೆಗೊಂಡಾಗ ಅದು ಸದ್ದು ಇಲ್ಲವೇ ಕಂಪನಕ್ಕೆ ಕಾರಣವಾಗುತ್ತದೆ. ಇಂತಹ ಚಿಕ್ಕಪುಟ್ಟ ಕಂಪನಗಳಿಂದ ಭೂಮಿ ಒಳಗಡೆಯ ಒತ್ತಡ ಕಡಿಮೆಯಾಗುತ್ತದೆ ಎಂಬ ಅಭಿಪ್ರಾಯವೂ ಇದೆ. ಹೀಗಾಗಿ ಜನರಲ್ಲಿ ಭೂಕಂಪನದ ವೇಳೆಯಲ್ಲಿ ವಹಿಸಬೇಕಾದ ಮುಂಜಾಗ್ರತೆ ಜಾಗೃತಿ ಮೂಡಿಸುವುದು, ಮನೆಗಳ ಬಲವರ್ಧನೆಯತ್ತ ಸರ್ಕಾರ ಗಮನ ಹರಿಸಬೇಕು’ ಎಂದು ತಜ್ಞರು ಹೇಳುತ್ತಾರೆ.

ಗಡಿಕೇಶ್ವಾರ ಸುತ್ತಲಿನ ಹಳ್ಳಿಗಳ ಜನರು ಭೂಕಂಪನಕ್ಕೆ ಹೆದರಿ ಊರು ತೊರೆದಿದ್ದಾರೆ. ಸಿಮೆಂಟ್ ಕಾಂಕ್ರಿಟ್ ಕಾಲಂ ಬಳಸಿ ನಿರ್ಮಿಸಿದ ಮನೆಗಳು ಹೊಂದಿದವರು ಬೀಗ ಹಾಕಿಕೊಂಡು ಬೇರೆ ಊರು ಸೇರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು