ಮಂಗಳವಾರ, ಮೇ 11, 2021
26 °C
ಚಿತ್ತಾಪುರ: ಪ್ರಗತಿ ಪರಿಶೀಲನೆ ಸಭೆಯಲ್ಲಿ ಪೊಲೀಸರಿಗೆ ಶಾಸಕ ಪ್ರಿಯಾಂಕ್ ಖರ್ಗೆ ಸೂಚನೆ

ಮರಳು ದಂಧೆ ತಡೆಗೆ ಕಠಿಣ ಕ್ರಮ ಕೈಗೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ಅನಧಿಕೃತ ಮತ್ತು ಅಪರಾಧ ಚಟುವಟಿಕೆ ತಡೆಯಬೇಕಾದ ಪೊಲೀಸರು ದಕ್ಷತೆಯಿಂದ ಕೆಲಸ ಮಾಡಬೇಕು. ರಕ್ಷಕರೆ ಭಕ್ಷಕ ರಾಗಬಾರದು. ಸಾಮಾಜಿಕ ಕಳಕಳಿ ಯಿಂದ ಕೆಲಸ ಮಾಡಬೇಕು ಎಂದು ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ಒಂದೂವರೆ ವರ್ಷದಿಂದ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ನಿಮಗೆ ಸಿಗದ ಮಾಹಿತಿ ಪತ್ರಿಕೆಯವರಿಗೆ ಹೇಗೆ ಸಿಗುತ್ತದೆ ಎಂದು ಸಭೆಯಲ್ಲಿ ‘ಪ್ರಜಾವಾಣಿ’ ವರದಿ ಪ್ರದರ್ಶಿಸಿದ ಅವರು, ಇಷ್ಟೊಂದು ನಿರ್ಭಯವಾಗಿ ನಡೆಯುತ್ತಿರುವ ಮರಳು ದಂಧೆ ನಿಮಗೆ ಕಾಣಿಸುವುದಿಲ್ಲವೇ? ಅದಕ್ಕೆ ಕಡಿವಾಣ ಏಕೆ ಹಾಕುತ್ತಿಲ್ಲ ಎಂದು ಪೊಲೀಸರ ವಿರುದ್ಧ ತೀವ್ರವಾಗಿ ಹರಿಹಾಯ್ದರು.

ಮರಳು ಅನಧಿಕೃತ ಸಾಗಣೆ ಕುರಿತು ಬಹಳ ಕಡಿಮೆ ಪ್ರಕರಣ ದಾಖಲಿಸಿದ್ದೀರಿ. ಅಕ್ರಮ ದಂಧೆ ತಡೆಯಲು ನಿಮಗೇನಾದರೂ ತೊಂದರೆಯಿದೆಯಾ? ಎಂದು ಪ್ರಶ್ನಿಸಿದ ಅವರು, ನನ್ನ ಕ್ಷೇತ್ರದಲ್ಲಿ ಇನ್ಮುಂದೆ ಮರಳು ದಂಧೆ ನಡೆಯುವಂತ್ತಿಲ್ಲ ಎಂದು ಎಚ್ಚರಿಸಿದರು.

ಐಪಿಲ್ ಬೆಟ್ಟಿಂಗ್‌ ನಡೆಯುತ್ತಿದೆ. ಜೂಜಾಟದ ಕ್ಲಬ್ ಶುರುವಾಗಿವೆ. ಮಟಕಾ ದಂಧೆ ರಾಜಾರೋಷ ನಡೆಯುತ್ತಿದೆ. ಗಾಂಜಾ ಪತ್ತೆಯಾಗುತ್ತಿದೆ. ಎಲ್ಲಾ ಅಕ್ರಮ ಮತ್ತು ಅಪರಾಧ ಚಟುವಟಿಕೆಗೆ ಕಡಿವಾಣ ಹಾಕಬೇಕು. ಕಡೆಗಣಿಸಿದರೆ ಶಿಸ್ತಿನ ಕ್ರಮ ಅನಿವಾರ್ಯ ಎಂದು ತಾಕೀತು ಮಾಡಿದರು.

ಪೊಲೀಸ್ ಠಾಣೆಯಲ್ಲಿ ರಾಜಕೀಯ ಇಷ್ಟೊಂದು ರೀತಿ ಮೊದಲು ನಡೆದಿರಲಿಲ್ಲ. ವಿರೋಧ ಪಕ್ಷದವರು ಠಾಣೆಗೆ ಬಂದು ಅಧಿಕಾರಿಗಳ ಜೊತೆ ಕುಳಿತು ಎಫ್.ಐ.ಆರ್ ದಾಖಲಿಸುವುದು ನಡೆಯುತ್ತಿದೆ. ಪೊಲೀಸ್ ಆಡಳಿತದ ಮೇಲೆ ಅಧಿಕಾರಿಗಳ ಹಿಡಿತವಿಲ್ಲವಾಗಿದೆ. ರಾಜಕೀಯಕ್ಕೆ ಅವಕಾಶ ನೀಡಬೇಡಿ. ರೌಡಿ ಶೀಟರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಧರ್ಮ, ಸಂಘಟನೆ ಹೆಸರಲ್ಲಿ ಮೆರೆದಾಡಲು ಬಿಡಬೇಡಿ ಎಂದು ಸಿಪಿಐ ಕೃಷ್ಣಪ್ಪ ಅವರ ವಿರುದ್ಧ ಪ್ರಿಯಾಂಕ್ ವಾಗ್ದಾಳಿ ಮಾಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ಪಾಟೀಲ್, ತಹಶೀಲ್ದಾರ್ ಉಮಾಕಾಂತ ಹಳ್ಳೆ, ಸಿಡಿಪಿಒ ರಾಜಕುಮಾರ ರಾಠೋಡ್, ಪಿ.ಆರ್.ಇ ಎಇಇ ಶ್ರೀಧರ್, ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಗಂಗಾಧರ್, ಪಿಎಸ್ಐ ಮಂಜುನಾಥರೆಡ್ಡಿ ಅವರು ತಮ್ಮ ಇಲಾಖೆಯ ಪ್ರಗತಿ ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ್, ಉಪಾಧ್ಯಕ್ಷ ಹರಿನಾಥ ಚವಾಣ್, ಜಿ.ಪಂ ಶಿವರುದ್ರ ಭೀಣಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಇದ್ದರು.

‘ಬುಲೆಟಿನ್ ಮೇಲೆ ನಂಬಿಕೆಯಿಲ್ಲ’
ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಆದರೆ ವೈದ್ಯರು ನೀಡುವ ವರದಿ ಮತ್ತು ಸರ್ಕಾರ ಬಿಡುಗಡೆ ಮಾಡುತ್ತಿರುವ ಬುಲೆಟಿನ್‌ಗಳ ಅಂಕಿ ಅಂಶಗಳು ಹೊಂದಾಣಿಕೆಯಾಗುತ್ತಿಲ್ಲ. ಬುಲೆಟಿನ್ ಮೇಲೆ ನಮಗೆ ನಂಬಿಕೆಯಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಆರೋಗ್ಯ ಇಲಾಖೆಗೆ ಸರ್ಕಾರದ ನಿರ್ದೇಶನ ಏನಿದೆಯೊ ಎಂದು ತಿಳಿಯುತ್ತಿಲ್ಲ. ನಿಖರವಾದ ಅಂಕಿಅಂಶ ಮುಚ್ಚಿಟ್ಟರೆ ಕೊರೊನಾ ತಡೆಯಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು ಮಾಧ್ಯಮ ಪ್ರಕಟಣೆ ನಂಬಿ ಅಥವಾ ಪರಿಹಾರ ಪೋರ್ಟಲ್ ಮಾಹಿತಿ ಆಧರಿಸಿ ಕೊರೊನಾ ನಿಯಂತ್ರಣ ಮಾಡಲು ಸಿದ್ದತೆ ಮಾಡಿಕೊಳ್ಳಬೇಕಾ ಎಂದು ಅವರು ಸರ್ಕಾರದ ವಿರುದ್ಧ ಹರಿಹಾಯ್ದರು.

ಹೊರರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ವಲಸಿಗರು ತಮ್ಮ ಊರಿಗೆ ವಾಪಸ್ ಬರುತ್ತಿದ್ದಾರೆ. ಅವರ ಮೇಲೆ ಕಟ್ಟೆಚ್ಚರದ ನಿಗಾ ಇಡಬೇಕು. ಕೋವಿಡ್ ಕೇಂದ್ರ ತೆರೆಯುವ ಕುರಿತು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅವರು ತಹಶೀಲ್ದಾರ್, ಸಿಪಿಐ ಮತ್ತು ಆರೋಗ್ಯಾಧಿಕಾರಿಗೆ ಸೂಚಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು