ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡ್ರಾಮಿ: ಕ್ಲಿನಿಕ್, ಔಷಧಾಲಯ ಬಂದ್

Last Updated 29 ಮಾರ್ಚ್ 2020, 14:48 IST
ಅಕ್ಷರ ಗಾತ್ರ

ಯಡ್ರಾಮಿ: ದೇಶದಲ್ಲಿ ಕೊರೊನಾ ವೈರಸ್ ಹಿಮ್ಮೆಟ್ಟಿಸಲು ವೈದ್ಯರು ಹಗಲು ರಾತ್ರಿಯನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದರೆ ಪಟ್ಟಣದಲ್ಲಿನ ವೈದ್ಯರು ತಮ್ಮ ಆಸ್ಪತ್ರೆಗಳು ಮತ್ತು ಮೆಡಿಕಲ್‌ ಸ್ಟೋರ್‌ಗಳನ್ನು ಬಂದ್ ಮಾಡಿದ್ದಾರೆ.

ಪಟ್ಟಣದಲ್ಲಿ 15ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿವೆ. ಕೊರೊನಾ ಸೋಂಕಿಗೆ ಹೆದರಿ ಯಾರೊಬ್ಬ ವೈದ್ಯರು ಸಹ ಆಸ್ಪತ್ರೆಗೆ ಬಾರದೆ ಇರುವುದರಿಂದ ಸಾರ್ವಜನಿಕರ ಕಟು ಟೀಕೆಗೆ ಒಳಗಾಗಿದ್ದಾರೆ.

ವೈದ್ಯರಿಲ್ಲದೆ ರೋಗಿಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಧಿಕಾರಿ ಶರತ್. ಬಿ ಅವರು ಖಾಸಗಿ ಆಸ್ಪತ್ರೆಗಳು ಮುಚ್ಚುವ ಹಾಗಿಲ್ಲ ಎಂದು ಹೇಳಿದರೂ ಸಹ ಅದನ್ನೂ ಲೆಕ್ಕಿಸದೆ ವೈದ್ಯರು ಕ್ಲಿನಿಕ್‌ಗಳನ್ನು ಮುಚ್ಚಿದ್ದು, ಎಷ್ಟು ಸರಿ ಎನ್ನುತ್ತಿದ್ದಾರೆ ಪಟ್ಟಣದ ಜನತೆ.

ತುರ್ತು ಸಂದರ್ಭ ಎದುರಿಸಲು ಖಾಸಗಿಯವರಿಗೆ ಮನವರಿಕೆ ಮಾಡಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ವಹಿಸಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕೆಂದು ಆರೋಗ್ಯ ಇಲಾಖೆ ಕಟ್ಟಪ್ಪಣೆ ಹೊರಡಿಸಿದೆ. ಆದರೆ ಖಾಸಗಿ ವೈದ್ಯರು ಸರ್ಕಾರದ ಸೂಚನೆಯನ್ನು ಲೆಕ್ಕಕ್ಕೇ ತೆಗೆದುಕೊಂಡಿಲ್ಲ. ಸಣ್ಣಪುಟ್ಟ ಕಾಯಿಲೆಗಳಿಗೂ ಸ್ಥಳೀಯವಾಗಿ ಚಿಕಿತ್ಸೆ ಸಿಗದೆ ಜನರು ಹತಾಶರಾಗಿದ್ದಾರೆ.

ಇನ್ನೊಂದು ಮಾಹಿತಿ ಪ್ರಕಾರ ಯಡ್ರಾಮಿ ಪಟ್ಟಣದ ಬಹುತೇಕ ಖಾಸಗಿ ವೈದ್ಯರ ನೋಂದಣಿ ಅವಧಿ ಮುಗಿದಿದ್ದು, ಬಾಗಿಲು ಮುಚ್ಚಿವೆ ಎಂದು ಹೇಳಲಾಗುತ್ತಿದೆ. ಇನ್ನು ಕೆಲವು ವೈದ್ಯರು ನವೀಕರಿಸಲು ಅರ್ಜಿ ಹಾಕಿದ್ದು, ಅಧಿಕಾರಿಗಳು ಕೊರೊನಾ ಹಿನ್ನೆಲೆಯಲ್ಲಿ ಒತ್ತಡದಲ್ಲಿ ಇರುವುದರಿಂದ ನವೀಕರಣ ಆಗಿಲ್ಲ ಎಂದು ಹೇಳಲಾಗುತ್ತಿದೆ. ಏನೇ ಆದರೂ ಇಂತಹ ಸಮಯದಲ್ಲಿ ಖಾಸಗಿ ವೈದ್ಯರು ಸರ್ಕಾರದ ಜೊತೆ ಕೈಜೋಡಿಸಿದರೆ ಒಳ್ಳೆಯದು ಎಂಬ ಮಾತುಗಳು ಸಾರ್ವಜನಿಕವಾಗಿ ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT