ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರ ಪೂರ್ಣ ಬಂದ್‌, ವಾಹನ ಓಡಾಟ ವಿರಳ

ವಾರಾಂತ್ಯ ಕರ್ಫ್ಯೂ ಭಯ; ಮಧ್ಯಾಹ್ನದವರೆಗೆ ಮಾರುಕಟ್ಟೆಗಳಲ್ಲಿ ಹೆಚ್ಚಿದ ಜನಜಂಗುಳಿ
Last Updated 8 ಆಗಸ್ಟ್ 2021, 15:32 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ವಿಧಿಸಿದ ವಾರಾಂತ್ಯ ಕರ್ಫ್ಯೂಗೆ ಭಾನುವಾರ ಉತ್ತಮ ಸ್ಪಂದನೆ ಸಿಕ್ಕಿದೆ. ಮಧ್ಯಾಹ್ನ 2 ಗಂಟೆಯವರೆಗೆ ನಗರದ ವಿವಿಧ ಮಾರುಕಟ್ಟೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಾಯಿತು.

ಸೂಪರ್‌ ಮಾರ್ಕೆಟ್, ಕಣ್ಣಿ ಮಾರ್ಕೆಟ್‌, ಎಪಿಎಂಸಿ, ಕಿರಣಾ ಬಜಾರ್, ಶಹಾಬಜಾರ್‌, ಪೊಲೀಸ್ ಚೌಕ್‌, ಮುಸ್ಲಿಂ ಚೌಕ್‌, ರಾಮಮಂದಿರ ಸರ್ಕಲ್‌ ಸೇರಿದಂತೆ ಎಲ್ಲ ತರಕಾರಿ ಮಾರುಕಟ್ಟೆಗಳಲ್ಲಿಯೂ ಮಧ್ಯಾಹ್ನದವರೆಗೆ ಹೆಚ್ಚು ಜನ ಜಂಗುಳಿ ಉಂಟಾಯಿತು.

ಭಾನುವಾರ ಭೀಮನ ಅಮಾವಾಸ್ಯೆಯಾದ್ದರಿಂದ ಪೂಜಾ ಸಾಮಗ್ರಿ, ಹಣ್ಣು– ಹೂವು, ಬಾಳೆದಿಂಡು, ಕಬ್ಬಿನ ಜಲ್ಲೆ ಖರೀದಿರುವವರೂ ಮಾರುಕಟ್ಟೆಗೆ ಬಂದ್ದಿದ್ದರು. ಮಧ್ಯಾಹ್ನದ ನಂತರ ವಹಿವಾಟು ಬಂದ್‌ ಆಗುತ್ತದೆ ಎಂಬ ಕಾರಣಕ್ಕೇ ಬೆಳಿಗ್ಗೆಯೇ ಮಾರುಕಟ್ಟೆಗಳಿಗೆ ಎಂದಿಗಿಂತ ಹೆಚ್ಚಿನ ಜನ ನುಗ್ಗಿದರು. ಇದರಿಂದ ಎಲ್ಲಿಯೂ ಕನಿಷ್ಠ ಅಂತರ ಕಾಪಾಡುವುದು ಸಾಧ್ಯವಾಗಲಿಲ್ಲ. ಹಲವು ವ್ಯಾಪಾರಿಗಳು ಮತ್ತು ಗ್ರಾಹಕರು ಮಾಸ್ಕ್‌ ಇಲ್ಲದೇ ಕೆಲಸದಲ್ಲಿ ತೊಡಗಿದ್ದು ಕಂಡುಬಂತು.

ಕಿರಿದಾದ ಮಾರ್ಗಗಳುಳ್ಳ ಕಪಡಾ ಬಜಾರ್‌, ಚಪ್ಪಲ್‌ ಬಜಾರ್, ಶಾಹಿ ಬಜಾರ್‌, ಬಾಂಡೆ ಬಜಾರ್‌, ಪುಟಾಣಿ ಗಲ್ಲಿ, ಮಸ್ಜೀದ್‌ ಗಲ್ಲಿ ಸೇರಿದಂತೆ ಬಹುಪಾಲು ಕಡೆಗಳಲ್ಲಿ ಜನ ಕಿಕ್ಕಿರಿದು ಸೇರಿದರು. ಮಧ್ಯಾಹ್ನ 2ರ ನಂತರ ಸೈರನ್‌ ವಾಹನ ಸಮೇತ ಬಂದ ಪೊಲೀಸರು ನಗರ ಸುತ್ತಿ ಅಂಗಡಿಗಳನ್ನು ಬಂದ್‌ ಮಾಡಿಸಿದರು. ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ತರಕಾರಿ ಮಾರುವವರನ್ನು ಎತ್ತಂಗಡಿ ಮಾಡಿಸಿದರು.‌

ಕಣ್ಣಿ ಮಾರ್ಕೆಟ್‌, ಶಹಾಬಜಾರ್‌, ಕೋಟೆ ರಸ್ತೆ, ಎಂಎಸ್‌ಕೆ ಮಿಲ್‌ ಮಾರ್ಗ, ರೈಲು ನಿಲ್ದಾಣ ಮಾರ್ಗ, ಕೋರ್ಟ್‌ ರಸ್ತೆ, ಸ್ಟೇಷನ್‌ ರಸ್ತೆ, ಹಳೆ ಜೇವರ್ಗಿ– ಹೊಸ ಜೇವರ್ಗಿ ಮಾರ್ಗಗಳಲ್ಲಿ ಇರುವ ಎಲ್ಲ ಮಳಿಗೆಗಳೂ ಮುಚ್ಚಿದವು.

ವಾಹನ ಸಂಚಾರ ಹೆಚ್ಚಳ: ವಾಣಿಜ್ಯ ಚಟುವಟಿಕೆಗಳನ್ನು ನಿಲ್ಲಿಸಿ, ಎಲ್ಲ ಅಂಗಡಿ– ಮುಂಗಟ್ಟುಗಳನ್ನು ಬಂದ್‌ ಮಾಡಲಾಯಿತು. ಹೋಟೆಲ್‌ಗಳು ಕೂಡ ಅರ್ಧ ಬಾಗಿಲು ತೆರೆದು ಪಾರ್ಸೆಲ್‌ಗೆ ಸೀಮಿತವಾದವು. ಆದರೆ, ಶನಿವಾರಕ್ಕಿಂತ ಭಾನುವಾರ ವಾಹನ ಸಂಚಾರ ಹೆಚ್ಚಾಗಿದ್ದು ಕಂಡುಬಂತು.

ನಗರದ ರಾಷ್ಟ್ರಪತಿ ಚೌಕ್‌, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತ, ಜಗತ್‌ ಸರ್ಕಲ್‌, ಬಸ್‌ ನಿಲ್ದಾಣ, ಮುಸ್ಲಿಂ ಚೌಕ್‌, ಎಪಿಎಂಸಿ ಮುಂತಾದ ಕಡೆಗಳಲ್ಲಿ ಪೊಲೀಸರು ವಾಹನ ತಪಾಸಣೆ ಮಾಡಲಿಲ್ಲ. ಇದರಿಂದ ಹಲವರು ಲೀಲಾಜಾಲವಾಗಿ ಎಲ್ಲೆಂದರಲ್ಲಿ ಓಡಾಡಿದರು.

ಪೆಟ್ರೋಲ್‌ ಬಂಕ್‌, ಔಷಧ ಮಳಿಗೆಗಳು, ಹಾಲು ಮಾರಾಟ, ಬೈಕ್‌ ಸರ್ವಿಸ್‌ ಮಳಿಗೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಭಾನುವಾರ ರಜಾ ದಿನವಾದ್ದರಿಂದ ಇಲ್ಲಿನ ಬಸ್‌ ನಿಲ್ದಾಣ, ಹೈಕೋರ್ಟ್‌, ಜಿಲ್ಲಾ ನ್ಯಾಯಾಲಯ, ಮಿನಿ ವಿಧಾನಸೌಧ ಮುಂತಾದ ಸರ್ಕಾರಿ ಕಚೇರಿಗಳ ಸುತ್ತಲೂ ಜನಸಂಚಾರ ವಿರಳವಾಗಿದ್ದು ಕಂಡುಬಂತು.

ಚೆಕ್‌ಪೋಸ್ಟ್‌ ಸಂಚಾರ ವಿರಳ: ಮಹಾಷ್ಟ್ರದ ಗಡಿಗೆ ಹೊಂದಿಗೆ ಆಳಂದ ಹಾಗೂ ಅಫಜಲಪುರ ತಾಲ್ಲೂಕಿನ ಐದು ಚೆಕ್‌ಪೋಸ್ಟ್‌ಗಳಲ್ಲಿಯೂ ಭಾನುವಾರ ವಾಹನ ಸಂಚಾರ ಕಡಿಮೆ ಇತ್ತು. ಆಗೊಮ್ಮೆ– ಈಗೊಮ್ಮೆ ಬಂದ ಖಾಸಗಿ ವಾಹನಗಳನ್ನು ತಡೆದು ತಪಾಸಣೆ ಮಾಡುವುದನ್ನು ಪೊಲೀಸರು ಮುಂದುವರಿಸಿದರು.

ಇನ್ನೊಂದೆಡೆ, ಭಾನುವಾರ ಎಪಿಎಂಸಿ ಮಾರುಕಟ್ಟೆಯಲ್ಲೂ ಅಡತ ಅಂಗಡಿಗಳು ಬಂದ್ ಆಗಿದ್ದರಿಂದ ರೈತರು, ವರ್ತಕರು ಹೆಚ್ಚಾಗಿ ಕಾಣಿಸಲಿಲ್ಲ.

box

ವ್ಯಾಪಾರಿಗಳ ಸಂಕಷ್ಟ ಏನು?

ಕೊರೊನಾ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳಿಗೂ ನಮ್ಮ ಸಹಮತವಿದೆ. ಆದರೆ, ಕರ್ಫ್ಯೂ, ಲಾಕ್‌ಡೌನ್‌ ತರದ ನಿರ್ಧಾರವನ್ನು ಏಕಾಏಕಿ ಪ್ರಕಟಿಸುವುದು ನಮ್ಮನ್ನು ಹೈರಾಣು ಮಾಡಿದೆ. ಕನಿಷ್ಠ ಎರಡು ದಿನ ಮುಂಚಿತ ಹೇಳಿದರೆ ನಷ್ಟದಿಂದ ಪಾರಾಗಬಹುದು.

–ಗುರುಪ್ರಸಾದ್‌, ವ್ಯಾಪಾರಿ

*

ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಮಾಡಿದ ಪೂರ್ಣ ಲಾಕ್‌ಡೌನ್‌ ಕಾರಣ ಸಾಕಷ್ಟು ಹಾನಿ ಅನುಭವಿಸಿದ್ದೇವೆ. ಬಟ್ಟೆ, ಪಾತ್ರೆ, ಚಪ್ಪಲಿ ಮುಂತಾದ ವ್ಯಾಪಾರಿಗಳಿಗಿಂತ ದಿನಸಿ ಮಾರುವವರಿಗೇ ಹೆಚ್ಚು ಪೆಟ್ಟು ಬೀಳುತ್ತದೆ. ನಾವೇನು ಲಾಭ ಗಳಿಸಲೇಬೇಕು ಎಂಬ ಆಸೆ ಇಲ್ಲ. ಕನಿಷ್ಠ ಹಾನಿ ಆತದಂತೆ ವ್ಯಾಪಾರ ಮಾಡಿಕೊಳ್ಳಲು ಅನುವು ಮಾಡಿಕೊಡಬೇಕು.

–ಲತಾ ಬಿಲಗುಂದಿ, ದಿನಸಿ ಅಂಗಡಿ

*
ಮೂರನೇ ಅಲೆಯ ಭಯ ಒಂದು ಕಡೆಯಾದರೆ, ವ್ಯಾಪಾರದಲ್ಲಿ ಆಗುವ ನಷ್ಟ ಇನ್ನೊಂದು ಕಡೆ. ಅಂತರ ಕಾಪಾಡಿಕೊಂಡು ವ್ಯಾಪಾರ ಮಾಡುವ ಬಗ್ಗೆ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಯಾರಿಗೂ ತೊಂದರೆ ಆಗುವುದಿಲ್ಲ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮುಗಿಬಿದ್ದು ಆಮೇಲೆ ಲಾಕ್‌ ಮಾಡಿದರೆ ಏನೂ ಪ್ರಯೋಜವಿಲ್ಲ.

‌–ಗೌರೀಶ ಪಾಟೀಲ, ವರ್ತಕ

*

ನಮ್ಮ ಹಿರಿಯರ ಕಾಲದಿಂದಲೂ ಸುಮಾರು 53 ವರ್ಷಗಳಿಂದ ಸೂಪರ್‌ ಮಾರ್ಕೆಟ್‌ನಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡಿದ್ದೇವೆ. ಇಷ್ಟೊಂದು ಹಾನಿ ಯಾವಾಗಲೂ ಸಂಭವಿಸಿರಲಿಲ್ಲ. ಈ ವಾರದಲ್ಲೇ ₹ 70 ಸಾವಿರಕ್ಕೂ ಹೆಚ್ಚು ಬೆಲೆಬಾಳುವ ‘ಮಾಲ್‌’ ತರಿಸಿಕೊಂಡಿದ್ದೇನೆ. ಏಕಾಏಕಿ ಕರ್ಫ್ಯೂ ಹೇರಿದ್ದರಿಂದ ಅದರಲ್ಲಿ ಅರ್ಧ ಹಾಳಾಗಿದೆ. ಈ ಕಷ್ಟ ಯಾರಿಗೇ ಹೇಳೋಣ.

–ತೌಫಿಕ್‌, ಹೂವಿನ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT