ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತಃಕರಣದಿಂದ ವರದಿ ಮಾಡಿ: ಪತ್ರಕರ್ತರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ

ಪತ್ರಕರ್ತರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿವಿಮಾತು
Last Updated 5 ಜನವರಿ 2022, 4:54 IST
ಅಕ್ಷರ ಗಾತ್ರ

ಕಲಬುರಗಿ: ಪತ್ರಕರ್ತರು ಅಂತಃಕರಣ ಹಾಗೂ ಮಾನವೀಯ ಕಾಳಜಿಯಿಂದ ವರದಿ ಮಾಡಿದರೆ ಸಮಾಜದಲ್ಲಿ ದೊಡ್ಡ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಇಲ್ಲಿನ ಅಪ್ಪ ಪಬ್ಲಿಕ್ ಸ್ಕೂಲ್‌ನ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ 36ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಜಾಗತೀಕರಣ, ಖಾಸಗೀಕರಣ, ಉದಾರೀಕರಣ‌ ನೀತಿ ಹಾಗೂ ಮಾರುಕಟ್ಟೆ ಆಧಾರಿತ ವ್ಯವಸ್ಥೆಯಲ್ಲಿ ಕೇವಲ ಲಾಭ ನಷ್ಟ ಬಂದಾಗ ಮೌಲ್ಯಗಳ ಸ್ಥಾನ ಎಲ್ಲಿದೆ? ಅದನ್ನು ಉಳಿಸುವವರು ಯಾರು? ಎನ್ನುವ ಪ್ರಶ್ನೆಗಳು ಉದ್ಭವವಾಗುತ್ತವೆ. ಈ ಎಲ್ಲದರ ನಡುವೆ ಅಂತಃಕರಣವನ್ನು ಹಿಡಿದಿಟ್ಟುಕೊಳ್ಳುವುದು ಮುಖ್ಯ. ಸಮಾಜದಲ್ಲಿ ಬದಲಾವಣೆಗೆ ಪತ್ರಕರ್ತರು ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ಸದಾ ಜಾಗೃತರಿದ್ದರೆ ಸಮಾಜ ಹಾಗೂ ಸರ್ಕಾರ ಸರಿದಾರಿಯಲ್ಲಿ ಇರುತ್ತದೆ‘ ಎಂದು ಅವರು ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯ ಪೂರ್ವದಿಂದಲೂ ಪತ್ರಿಕಾರಂಗ ಕೆಲಸ ಮಾಡುತ್ತಾ ಬಂದಿದೆ. ಪತ್ರಿಕೆಗಳು ಸ್ವಾತಂತ್ರ್ಯ ಹೋರಾಟ ರೂಪಿಸುವಲ್ಲಿ ಬಹಳ ದೊಡ್ಡ ಪಾತ್ರ ನಿರ್ವಹಿಸಿವೆ. ಎರಡನೆಯ ಮಹಾಯುದ್ದದ ನಂತರ ಪತ್ರಿಕಾರಂಗ ತನ್ನ ಸ್ವಂತಿಕೆಯನ್ನು ಅಳವಡಿಕೊಳ್ಳಲು ಪ್ರಾರಂಭಿಸಿತು ಎಂದು ಬೊಮ್ಮಾಯಿ ಹೇಳಿದರು.

‘ವಿಜಯವಾಣಿ’ ಸಂಪಾದಕ ಕೆ.ಎನ್. ಚನ್ನೇಗೌಡ ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುದ್ರಣ ಕಾಗದದ ಮೇಲಿನ ತೆರಿಗೆಯನ್ನು ಮುಂದಿನ ಜಿಎಸ್‌ಟಿ ಮಂಡಳಿ ಸಭೆಯಲಿ ರದ್ದು ಮಾಡಬೇಕು. ಪತ್ರಕರ್ತರ ಕಲ್ಯಾಣ ನಿಧಿಗೆ ಅನುದಾನ ಒದಗಿಸಬೇಕು’ ಎಂದು ಆಗ್ರಹಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ‘ವಿಜಯ ಕರ್ನಾಟಕ’ ಸಂಪಾದಕ ಹರಿಪ್ರಕಾಶ್ ಕೋಣೆಮನೆ, ‘ಕೊರೊನಾದಂತಹ ಮಹಾಮಾರಿಯನ್ನು ಈ ದೇಶ ಯಶಸ್ವಿಯಾಗಿ ಎದುರಿಸಿದೆ. ಈ ತಲೆಮಾರಿನ ಪತ್ರಕರ್ತರು ಯುದ್ದದಂತಹ ವಾತಾವರಣವನ್ನು ನೋಡಿರಲಿಲ್ಲ ಆದರೆ ಕೊರೊನಾ ಸಮಯದಲ್ಲಿ ಯುದ್ಧೋಪಾದಿಯಲ್ಲಿ ಕೆಲಸ ಮಾಡಿದ್ದಾರೆ’ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಬರೆದಿರುವ ‘ಕೊರೊನದ ಕಾಲಘಟ್ಟದಲ್ಲಿ‘ ಹಾಗೂ ಡಾ.ಸ್ವಾಮಿರಾವ್ ಕುಲಕರ್ಣಿ ಬರೆದಿರುವ ‘ಮಾಧ್ಯಮ ಹೆಜ್ಜೆಗಳು ಹಾಗೂ ಅವಲೋಕ‌ನ‘ ಪುಸ್ತಕ ಹಾಗೂ ಕ್ಯಾಲೆಂಡರನ್ನು ಬಿಡುಗಡೆ ಮಾಡಲಾಯಿತು.

ಶರಣಬಸವ ದಾಸೋಹ ಸಂಸ್ಥಾನದ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ, ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ.ಉಮೇಶ ಜಾಧವ, ಸಚಿವ ಮುರುಗೇಶ ನಿರಾಣಿ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೆಯ ಪಾಟೀಲ ರೇವೂರು, ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಅಜಯ್ ಸಿಂಗ್, ಶಾಸಕರಾದ ಸುಭಾಷ್ ಗುತ್ತೇದಾರ, ಡಾ.ಅವಿನಾಶ ಜಾಧವ, ಬಸವರಾಜ ಮತ್ತಿಮಡು, ವಿಧಾನಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ, ಶಶೀಲ್ ಜಿ. ನಮೋಶಿ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಇತರರು ವೇದಿಕೆಯಲ್ಲಿದ್ದರು.

ನಮಗೂ, ನಿಮಗೂ ಬಿಡಿಸದ ನಂಟು!

‘ರಾಜಕಾರಣಿಗಳು ಹಾಗೂ ಪತ್ರಕರ್ತರ ನಡುವೆ ಬಿಡಿಸಲಾಗದ ನಂಟಿದೆ. ನಿಮ್ಮನ್ನು ಬಿಟ್ಟು ನಾವಿಲ್ಲ, ನಮ್ಮನ್ನು ಬಿಟ್ಟು ನೀವಿರಲು ಸಾಧ್ಯವಿಲ್ಲ. ಒಂದು ದಿನ ರಾಜಕಾರಣದ ಸುದ್ದಿ ಇಲ್ಲದೇ ಬರೀ ಸಿನಿಮಾದ ಸುದ್ದಿ ಹಾಕಿ ನೋಡಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಟಾಕಿ ಹಾರಿಸಿದರು.

ನಮಗೂ ಬೆಳಿಗ್ಗೆ ಎದ್ದ ಕೂಡಲೇ ಪತ್ರಿಕೆ ನೋಡದಿದ್ದರೆ ಸಮಾಧಾನ ಆಗುವುದಿಲ್ಲ. ಕೆಲ ವಿಚಾರಗಳಲ್ಲಿ ಪತ್ರಕರ್ತರೊಂದಿಗೆ ಭಿನ್ನಾಭಿಪ್ರಾಯ ಇರಬಹುದು. ಆದರೆ, ಅಂತಿಮವಾಗಿ ರಾಜಕಾರಣಿಗಳು, ಪತ್ರಕರ್ತರು ಒಂದಾಗಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕಿದೆ ಎಂದು ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT