ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಚಿತ ಆರೋಗ್ಯ ಸೌಲಭ್ಯಕ್ಕೆ ಹೋರಾಟ’

ಭಾರತ ಕಮ್ಯುನಿಸ್ಟ್ ಪಕ್ಷದ 14ನೇ ಜಿಲ್ಲಾ ಸಮ್ಮೇಳನದಲ್ಲಿ ಸಾತಿ ಸುಂದರೇಶ
Last Updated 10 ಸೆಪ್ಟೆಂಬರ್ 2022, 14:38 IST
ಅಕ್ಷರ ಗಾತ್ರ

ಕಲಬುರಗಿ: ‘ಕೋವಿಡ್ ವೇಳೆ ಬಡವರು ದುಡಿಮೆ ಇಲ್ಲದೇ ಸಂಕಷ್ಟಕ್ಕೆ ಒಳಗಾದರೆ, ದೇಶದ ಶ್ರೀಮಂತ ಉದ್ಯಮಿಗಳ ಸಂಪತ್ತು ಹಲವು ಪಟ್ಟು ಹೆಚ್ಚಿತು. ಇದಕ್ಕೆ ಸರ್ಕಾರದ ಬಂಡವಾಳಶಾಹಿಗಳ ಪರ ನೀತಿಗಳೇ ಕಾರಣ. ಆರೋಗ್ಯ ಸೇವೆ ಖಾಸಗೀಕರಣ ಆಗುತ್ತಿದ್ದು, ಜನರಿಗೆ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸುವಂತೆ ಪಕ್ಷದಿಂದ ಹೋರಾಟ ರೂಪಿಸಲಾಗುತ್ತಿದೆ’ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ರಾಜ್ಯ ಘಟಕದ ಕಾರ್ಯದರ್ಶಿ ಸಾತಿ ಸುಂದರೇಶ ತಿಳಿಸಿದರು.

ಸಿಪಿಐ 14ನೇ ಜಿಲ್ಲಾ ಸಮ್ಮೇಳನದ ಪ್ರಯುಕ್ತ ನಗರದಲ್ಲಿ ಶನಿವಾರ ನಡೆದ ಸಮ್ಮೇಳನದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರಿ ಸ್ವಾಮ್ಯದ ಎಲ್ಲ ಉದ್ದಿಮೆಗಳನ್ನು ತಮ್ಮ ಉದ್ಯಮಿ ಗೆಳೆಯರಿಗೆ ಧಾರೆಯೆರೆದು ಕೊಡುತ್ತಿದ್ದಾರೆ’ ಎಂದರು.

‘ಪ್ರಧಾನಿಯವರ ನೆಚ್ಚಿನ ಉದ್ಯಮಿ ಗೌತಮ್ ಅದಾನಿ ಆಸ್ತಿ 87 ಬಿಲಿಯನ್ ಡಾಲರ್ ತಲುಪಿದ್ದು, ವಿಶ್ವದ ಮೂರನೇ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. 2014ರ ಚುನಾವಣೆ ಸಂದರ್ಭದಲ್ಲಿ ಮೋದಿ ಅವರಿಗೆ ಅದಾನಿ ತಮ್ಮ ವಿಮಾನವನ್ನು ಚುನಾವಣಾ ಪ್ರಚಾರಕ್ಕಾಗಿ ನೀಡಿದ್ದರು’ ಎಂದು ಅವರು ಟೀಕಿಸಿದರು.

‘ಪ್ರಧಾನಿ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪುಕೋಟೆಯ ಮೇಲೆ ನಿಂತು ನಾರಿ ಶಕ್ತಿಯ ಬಗ್ಗೆ ಮಾತನಾಡಿದರು. ಆದರೆ, ಅದೇ ಸಂದರ್ಭದಲ್ಲಿ ಗುಜರಾತ್‌ನ ನರಮೇಧದ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಎಂಬ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಲ್ಲದೇ, ಆಕೆಯ ಮಗುವನ್ನು ನೆಲಕ್ಕೆ ಅಪ್ಪಳಿಸಿದ ಕೊಲೆಗಾರರು, ಅತ್ಯಾಚಾರಿಗಳಿಗೆ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ. ಗುಜರಾತ್‌ನಲ್ಲೂ ಬಿಜೆಪಿ ಸರ್ಕಾರ ಇದೆ’ ಎಂದರು.

‘ಸಿಪಿಐ ಆರು ಪ್ರಮುಖ ವಿಚಾರಗಳನ್ನು ಇಟ್ಟುಕೊಂಡು ದೇಶದಾದ್ಯಂತ ಹೋರಾಟ ರೂಪಿಸಲಿದೆ. ಕೆಲ ದಿನಗಳಲ್ಲಿ ವಿಜಯವಾಡದಲ್ಲಿ ನಡೆದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗುವುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ, ಉತ್ತಮ ಚಿಕಿತ್ಸೆ ಲಭ್ಯವಾಗಬೇಕು. ಭೂಸುಧಾರಣಾ ಕಾಯ್ದೆ ಜಾರಿಗೊಳಿಸಬೇಕು. ಬಡವರಿಗೆ ನಿವೇಶನ, ವಸತಿ ಸೌಲಭ್ಯ ಕಲ್ಪಿಸಬೇಕು. ಆಹಾರ ಭದ್ರತೆ ಖಾತ್ರಿಪಡಿಸಬೇಕು‘ ಎಂದು ಒತ್ತಾಯಿಸಲಾಗುವುದು’ ಎಂದರು.

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಹಿರಿಯ ಪತ್ರಕರ್ತ ಸನತಕುಮಾರ್ ಬೆಳಗಲಿ, ‘ನಾಲ್ಕು ದಶಕಗಳ ಹಿಂದೆ ಕಲಬುರಗಿಯ ಟೌನ್‌ಹಾಲ್‌ನಲ್ಲಿ ಸಮ್ಮೇಳನ ನಡೆದಿತ್ತು. ಆಗ ಪಕ್ಷದ ಮುಖಂಡ ಶ್ರೀನಿವಾಸ ಗುಡಿ ಅವರು ನಮಗೆಲ್ಲ ಸ್ಫೂರ್ತಿಯಾಗಿದ್ದರು. ಬಹುತ್ವ ಭಾರತಕ್ಕೆ ಇತ್ತೀಚಿನ ವರ್ಷಗಳಲ್ಲಿ ಅಪಾಯ ಎದುರಾಗಿದ್ದು, ಎಲ್ಲ ಪ್ರಗತಿಪರ ಮನಸ್ಸುಗಳು ಒಗ್ಗೂಡಿ ಆ ಅಪಾಯದಿಂದ ಪಾರು ಮಾಡಬೇಕಿದೆ’ ಎಂದರು.

ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಮಾರುತಿ ಗೋಖಲೆ ಮಾತನಾಡಿ, ‘ಉದ್ಯಮಿಗಳು ಇದೀಗ ಚುನಾವಣೆಯಲ್ಲಿ ತಮಗೆ ಬೇಕಾದ ಪಕ್ಷಗಳಿಗೆ ಹಣ ಹೂಡಿಕೆ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದ ತಕ್ಷಣ ತಮಗೆ ಬೇಕಾದ ನೀತಿಗಳನ್ನು ರೂಪಿಸಿಕೊಂಡು ಶ್ರೀಮಂತರಾಗುತ್ತಿದ್ದಾರೆ. ಬಡವರು ಬಳಸುವ ಅಗತ್ಯ ವಸ್ತುಗಳ ಮೇಲೆ ಅತ್ಯಧಿಕ ಜಿಎಸ್‌ಟಿ ವಿಧಿಸುವ ಕೇಂದ್ರ ಸರ್ಕಾರವು ಶ್ರೀಮಂತರು ಬಳಸುವ ಚಿನ್ನ, ವಜ್ರದ ಮೇಲೆ ಕಡಿಮೆ ತೆರಿಗೆ ಹಾಕುತ್ತಿರುವುದು ದುರಂತ’ ಎಂದರು.

ಇದಕ್ಕೂ ಮುನ್ನ ಸೂಪರ್ ಮಾರ್ಕೆಟ್‌ನಿಂದ ಸಮ್ಮೇಳನ ನಡೆದ ವೀರಶೈವ ಕಲ್ಯಾಣ ಮಂಟಪದವರೆಗೆ ಬೃಹತ್ ಮೆರವಣಿಗೆ ನಡೆಯಿತು. ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಮೆರವಣಿಗೆಗೆ ಚಾಲನೆ ನೀಡಿದರು.

ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಡಾ.ಕೆ.ಎಸ್‌. ಜನಾರ್ದನ, ಅಖಿಲ ಭಾರತ ಕಿಸಾನ್ ಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ಜಿಲ್ಲಾ ಸಹಕಾರ್ಯದರ್ಶಿಗಳಾದ ಮಹೇಶಕುಮಾರ ರಾಠೋಡ, ಪ್ರಭುದೇವ ಯಳಸಂಗಿ, ವಿವಿಧ ತಾಲ್ಲೂಕು ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಕೆಲ್ಲೂರ, ಭೀಮರಾಯ ಮುದಬಸಪ್ಪಗೋಳ, ಮೈಲಾರಿ ಜೋಗೆ, ಪದ್ಮಾವತಿ ಮಾಲಿಪಾಟೀಲ, ಸಿದ್ದಣ್ಣ ಕಣ್ಣೂರ, ಹಣಮಂತರಾಯ ಅಟ್ಟೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT