ಕಲಬುರಗಿ: ರಾಜ್ಯ ಸರ್ಕಾರವು ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಬೆಳೆಹಾನಿ ಸಮೀಕ್ಷೆ ವರದಿ ಆಧರಿಸಿ, ಕ್ಷೇತ್ರಕ್ಕನುಗುಣವಾಗಿ ಇನ್‌ಪುಟ್ ಸಬ್ಸಿಡಿ ನೇರ ನಗದು ವರ್ಗಾವಣೆ ಮುಖಾಂತರ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರದ ಹಣ ವರ್ಗಾವಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಬರಪರಿಹಾರ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಮಾತನಾಡಿದರು.
ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮರೋಪಾದಿಯಲ್ಲಿ ರೈತರ ಹೊಲಗಳಿಗೆ ಭೇಟಿ ನೀಡಬೇಕು. ಮುಂಗಾರು ಹಂಗಾಮಿನ ಹಾನಿ ಕ್ಷೇತ್ರವನ್ನು ನೈಜವಾಗಿ ಸಮೀಕ್ಷೆ ಮಾಡಬೇಕು. ವಸ್ತುಸ್ಥಿತಿ ಬಗ್ಗೆ ವರದಿಯಲ್ಲಿ ಬಿಂಬಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಬೆಳೆ ಸಮೀಕ್ಷೆಯನ್ನು ಕೈಗೂಳ್ಳುವಾಗ ಸೂಪರ್‌ವೈಸರ್ ಲಾಗಿನ್‌ನಲ್ಲಿ ಸಮೀಕ್ಷಾ ಪ್ರಕ್ರಿಯೆಯನ್ನು ಅನುಮೋದಿಸುವಾಗ ಬೆಳೆ ಛಾಯಾಚಿತ್ರಗಳನ್ನು ಗಮನಿಸಿ, ಪರಿಶೀಲಿಸಿ ನ್ಯೂನತೆಗಳು, ತಪ್ಪುಗಳಾಗದಂತೆ ಅನುಮೋದಿಸಬೇಕು ಎಂದರು.
ಒಂದು ವೇಳೆ ಹೊಸದಾಗಿ ಇರುವ ತಾಲ್ಲೂಕುಗಳಲ್ಲಿ ಬೆಳೆ ಸಮೀಕ್ಷೆಯಲ್ಲಿ ಹಳ್ಳಿಗಳ ಕುರಿತಂತೆ ತಾಂತ್ರಿಕ ದೋಷವಿದ್ದರೆ ಸಮಸ್ಯೆಯನ್ನು ಜಂಟಿ ಕೃಷಿ ನಿರ್ದೇಶಕರು, ಉಪ ನಿರ್ದೇಶಕರು ಭೂಮಾಪನಾ ಇಲಾಖೆ ಮತ್ತು ಸ್ಥಳೀಯ ತಹಶೀಲ್ದಾರ್ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಗಮನಕ್ಕೆ ತಂದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಯಾವುದೇ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ, ತಕ್ಷಣ ಗ್ರಾಮೀಣ ಕುಡಿಯುವ ನೀರು ಸರಬುರಾಜು ಹಾಗೂ ನೈರ್ಮಲ್ಯ ಇಲಾಖೆ ಹಾಗೂ ಸ್ಥಳಿಯ ಗ್ರಾ.ಪಂ ಅಧಿಕಾರಿಗಳು ತುರ್ತು ಕ್ರಮ ಕೈಗೂಂಡು ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಮುಂಜಾಗ್ರತಾ ಕ್ರಮವಾಗಿ ಕುಡಿಯುವ ನೀರಿನ ಸಮಸ್ಯೆ ಇರುವ ಹಳ್ಳಿಗಳನ್ನು ಗುರುತಿಸಿ, ಅಂತಹ ಹಳ್ಳಿಗಳ ಪಟ್ಟಿ ಸಿದ್ಧಪಡಿಸಿ, ಮುಂಜಾಗ್ರತೆ ವಹಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಸರಬುರಾಜು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕಲಬುರಗಿ ನಗರಕ್ಕೆ ಸಂಬಂಧಿಸಿದಂತೆ ಕುಡಿಯುವ ನೀರಿನ ಪೂರೈಕೆ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಿ, ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ದನ ಕರುಗಳ ಸಂಖ್ಯೆಗೆ ಅನುಗುಣವಾಗಿ ಮೇವಿನ ಲಭ್ಯತೆ ಕುರಿತಂತೆ ಅಧಿಕಾರಿಗಳು, ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಬೇಕು. ಮೇವು ಲಭ್ಯತೆಯ ನೈಜಸ್ಥಿತಿಗತಿ ಅವಲೋಕಿಸಿ, ವರದಿ ಸಲ್ಲಿಸಲು ಹಾಗೂ ಮೇವಿನ ಕೊರತೆಯಾಗದಂತೆ ಮುನ್ನಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಇಲಾಖೆ, ಕಂದಾಯ ಇಲಾಖೆ, ಪಶುಸಂಗೋಪನೆ ಇಲಾಖೆ, ಗ್ರಾಮೀಣ ಹಾಗೂ ನಗರ ನೀರು ಸರಬುರಾಜು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.