ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಕೆಎನ್‌ಎನ್ಎಲ್‌ನ ಆರು ಜನ ಎಂಜಿನಿಯರ್‌ಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು

Published 11 ಏಪ್ರಿಲ್ 2024, 7:38 IST
Last Updated 11 ಏಪ್ರಿಲ್ 2024, 7:38 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಕಮಲಾಪುರ, ಕಾಳಗಿ, ಚಿತ್ತಾಪುರ ತಾಲ್ಲೂಕಿನ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾದ ಗಂಡೋರಿ ನಾಲಾ ನೀರಾವರಿ ಯೋಜನೆಯಡಿ ನಿರ್ಮಿಸಲಾದ ಕಾಲುವೆಗಳ ದುರಸ್ತಿ ಕಾಮಗಾರಿಯಲ್ಲಿ ₹ 45 ಕೋಟಿಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿರುವ ಆರೋಪಗಳು ಕೇಳಿ ಬಂದಿದ್ದು, ಈ ಪ್ರಕರಣ ಇದೀಗ ಲೋಕಾಯುಕ್ತರ ಅಂಗಳವನ್ನೂ ತಲುಪಿದೆ.

ಗಂಡೋರಿ ನಾಲಾ ಎಡದಂತೆ ಹಾಗೂ ಬಲದಂಡೆ ಕಾಲುವೆಗಳ ಪಕ್ಕದಲ್ಲಿ ಸರ್ವಿಸ್ ರಸ್ತೆ, ಪರಿಶೀಲನಾ ಪಥವನ್ನು ನಿರ್ಮಿಸದೇ ಇದ್ದರೂ ₹ 8.98 ಕೋಟಿಗೂ ಅಧಿಕ ಮೊತ್ತವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. 2017ರಲ್ಲಿ ₹ 6.78 ಕೋಟಿ ಅಂದಾಜು ಮೊತ್ತವನ್ನು ಈ ಕಾಮಗಾರಿಗಳಿಗಾಗಿ ನಿಗದಿಪಡಿಸಲಾಗಿತ್ತು. ಅಂದಾಜು ಮೊತ್ತವನ್ನೂ ಮೀರಿ ಹೆಚ್ಚುವರಿಯಾಗಿ ₹ 2.20 ಕೋಟಿ ಸೇರಿಸಿ ಒಟ್ಟು ₹ 8.98 ಕೋಟಿ ಹಣವನ್ನು ಪಾವತಿ ಮಾಡಲಾಗಿದೆ ಎಂದು ಆರೋಪಿಸಿ ಮಹಾಗಾಂವ ಗ್ರಾಮದ ಯುವ ಮುಖಂಡ ವಿಶ್ವನಾಥ ತಡಕಲ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಹಲವು ದಾಖಲೆಗಳನ್ನೂ ಸಲ್ಲಿಸಿದ್ದಾರೆ.

ಮಹಾಗಾಂವ್ ಕ್ರಾಸ್‌ನ ಚಿಂಚೋಳಿ ರಸ್ತೆಯಲ್ಲಿರುವ ಗಂಡೋರಿ ಎಡದಂಡೆ ಕಾಲುವೆಯ 19ರಿಂದ 22ನೇ ಕಿ.ಮೀ.ವರೆಗೆ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದ ಸಂದರ್ಭದಲ್ಲಿ ಕಾಲುವೆಗೆ ಹತ್ತಿಕೊಂಡೇ ಇರಬೇಕಿದ್ದ ಪರಿಶೀಲನಾ ಪಥ ಎಂಬುದು ಕಂಡು ಬರಲಿಲ್ಲ. ಮೊದಲಿದ್ದ ಅಲ್ಲದೇ, ಮುಳ್ಳು ಕಂಟಿಗಳು, ಗಿಡ ಮರಗಳು ಬೆಳೆದಿದ್ದವು. ಕಾಲುವೆಯ ಎರಡೂ ಬದಿಯಲ್ಲಿ ಸರ್ವಿಸ್ ರಸ್ತೆ ಇರಬೇಕಿತ್ತು. ಆದರೆ, ಒಂದು ಬದಿ ಮಾತ್ರ ಸರ್ವಿಸ್ ರಸ್ತೆ ಕಂಡು ಬಂತು.

ಕಾಲುವೆ ಬಳಿ ಕಾಮಗಾರಿ ನಡೆದ ಕುರುಹುಗಳೇ ಕಂಡು ಬರಲಿಲ್ಲ. ಕಾಲುವೆಯಲ್ಲಿ ಹೂಳು, ಆಪು ಕಸ ತುಂಬಿಕೊಂಡಿತ್ತು. ಅಲ್ಲಲ್ಲಿ, ಕಾಲುವೆಗಳ ಸಿಮೆಂಟ್ ಕಿತ್ತು ಹೋಗಿರುವುದು, ಬಿರುಕು ಬಿಟ್ಟಿರುವುದು ಕಂಡು ಬಂತು.

ಲೋಕಾಯುಕ್ತ ಪೊಲೀಸರಿಗೆ ನಾಲ್ಕು ಪುಟಗಳ ದೂರು ಸಲ್ಲಿಸಿರುವ ವಿಶ್ವನಾಥ ತಡಕಲ್ ಅವರು, ‘2020ರ ಸೆಪ್ಟೆಂಬರ್ 24ರಂದು ಗಂಡೋರಿ ನಾಲಾ ಎಡದಂಡೆ ಕಾಲುವೆ ಹಾಗೂ ಬಲದಂಡೆ ಕಾಲುವೆಯ ಎರಡು ಬದಿಯ ಸರ್ವಿಸ್ ರೋಡ್, ಇನ್‌ಸ್ಪೆಕ್ಷನ್ ಪಾಥ್ ಗಳ ಬಿಲ್ಲನ್ನು ಪಾವತಿಸಿಲ್ಲ. ಸದರಿ ಕಾಮಗಾರಿ ಪ್ರಗತಿಯಲ್ಲಿರುತ್ತದೆ ಎಂದು ಸದನದಲ್ಲಿ ಉತ್ತರಿಸಿದ್ದರು. ಆದರೆ, ವರ್ಕ್‌ಸ್ಲಿಪ್‌ ಮಾಡಿ 2020ರ ಮಾರ್ಚ್‌ನಲ್ಲಿ ಅನುಮೋದನೆ ಮಾಡಿದ್ದರೆ, ಟಿಎಸ್‌ಸಿ 173ರ ನಡಾವಳಿ ಮತ್ತು ಕಲಬುರಗಿ ಮುಖ್ಯ ಎಂಜಿನಿಯರ್ ಪತ್ರದ ಸಂಖ್ಯೆ 4204 ಇದ್ದು, ಈ ಪತ್ರದ ಸಂಖ್ಯೆಯು ಅಫಜಲಪುರದ ಸೊನ್ನ ಭೀಮಾ ಜಲಾಶಯಕ್ಕೆ ಸಂಬಂಧಿಸಿದ್ದರೂ ಗಂಡೋರಿ ನಾಲಾ ಕಾಮಗಾರಿಗೆ ಲಗತ್ತಿಸಿ ಅನುಮೋದನೆ ಪಡೆದಿದ್ದಾರೆ’ ಎಂದು ಆರೋಪಿಸಿದ್ದಾರೆ. 

ಅಧಿಕಾರಿಗಳು ಸರಿಯಾಗಿ ಕಾಲುವೆ ಆಧುನೀಕರಣ ಮಾಡದೇ ಕರ್ತವ್ಯ ಲೋಪ ಎಸಗಿದ್ದರಿಂದ ರೈತರಿಗೆ ನೀರು ಸಿಗುತ್ತಿಲ್ಲ. ₹ 45 ಕೋಟಿಗೂ ಅಧಿಕ ಹಣ ದುರ್ಬಳಕೆಯಾಗಿದೆ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕು
ವಿಶ್ವನಾಥ ತಡಕಲ್ ದೂರುದಾರ
ಯಾರ ವಿರುದ್ಧ ದೂರು?
ದೂರುದಾರ ವಿಶ್ವನಾಥ ತಡಕಲ್ ಅವರು ಮುಖ್ಯ ಎಂಜಿನಿಯರ್ ಜಗನ್ನಾಥ ಹಾಲಿಂಗೆ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಜಾಕಾ ಎಇಇಗಳಾದ ಅಣ್ಣಪ್ಪ ಉದಗಿರೆ ಶಶಿಕಾಂತ ಘನಾತೆ ಹಾಲಿ ಎಇಇ ಗೋಪಾಲರೆಡ್ಡಿ ಜೆಇ ಅಲ್ತಾಫ್‌ ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT