ಶನಿವಾರ, ಜುಲೈ 31, 2021
25 °C
ವಿಸ್ತೃತ ವರದಿ ನೀಡಲು ತಹಶೀಲ್ದಾರ್‌ಗೆ ಸಂಸದ ಉಮೇಶ ಜಾಧವ ಸೂಚನೆ

ಬೆಳೆ ಹಾನಿ ಜಂಟಿ ಸಮೀಕ್ಷೆ ನಡೆಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ನಾಗರಾಳ ಜಲಾಶಯದಿಂದ ಮುಲ್ಲಾಮಾರಿ ನದಿಗೆ ನೀರು ಬಿಟ್ಟಿರುವುದರಿಂದ ಪ್ರವಾಹ ಉಂಟಾಗಿದೆ. ಇದರಿಂದ ರೈತರ ಹೊಲಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿರುವ ಬಗ್ಗೆ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಬೇಕು ಎಂದು ಸಂಸದ ಡಾ. ಉಮೇಶ ಜಾಧವ ಸೂಚಿಸಿದರು.

ತಾಲ್ಲೂಕಿನ ಚಿಮ್ಮನಚೋಡ, ಕನಕಪುರ, ಚಿಂಚೋಳಿ ಸೇರಿದಂತೆ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ ಅವರು ಜನರ ಅಹವಾಲು ಆಲಿಸಿದರು. ಮನೆಗಳಿಗೆ ನೀರು ನುಗ್ಗಿ ಅಗತ್ಯ ವಸ್ತುಗಳು ಹಾಳಾಗಿರುವುದನ್ನು ಖುದ್ದು ವೀಕ್ಷಿಸಿದರು.

ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಿದ್ದರಿಂದ ಸಂಪರ್ಕ ಕಡಿತವಾದ ಬಗ್ಗೆ ಮಾಹಿತಿ ಪಡೆದ ಅವರು ವಿಸ್ತೃತ ವರದಿ ನೀಡುವಂತೆ ತಮ್ಮೊಂದಿಗಿದ್ದ ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ ಅವರಿಗೆ ಸೂಚಿಸಿದರು.

ತಾಲ್ಲೂಕಿನಲ್ಲಿ ಕಳೆದ ವಾರ ಚಿಂಚೋಳಿ ಪಟ್ಟಣದ 43 ಮನೆಗಳಿಗೆ, ಗುರುವಾರ 89 ಮನೆಗಳು ಸೇರಿ ಒಟ್ಟು 128 ಮನೆಗಳಿಗೆ ನೀರು ನುಗ್ಗಿದೆ. 35 ಮನೆಗಳು ಮಳೆಯಿಂದ ಭಾಗಶಃ ಉರುಳಿವೆ ಎಂದು ಅರುಣಕುಮಾರ ಕುಲಕರ್ಣಿ ತಿಳಿಸಿದರು.

ಪ್ರವಾಹದಿಂದ 31 ಹಳ್ಳಿ ಮತ್ತು 30 ತಾಂಡಾಗಳಿಗೆ ವಿದ್ಯುತ್ ಪೂರೈಸಲು ತೊಂದರೆಯಾಗಿದೆ. ಇವುಗಳನ್ನು ಸರಿ ಪಡಿಸುವ ಕೆಲಸ ನಡೆದಿದೆ ಎಂದು ಜೆಸ್ಕಾಂ ಎಇಇ ಉಮೇಶ ಗೋಲಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾ.ಪಂ. ಅಧ್ಯಕ್ಷರಾದ ರೇಣುಕಾ ಅಶೋಕ ಚವ್ಹಾಣ, ಇಒ ಅನಿಲಕುಮಾರ ರಾಠೋಡ್, ಬಿಜೆಪಿ ಹಿರಿಯ ಮುಖಂಡ ಶರಣಪ್ಪ ತಳವಾರ, ಸತೀಶರೆಡ್ಡಿ, ಮಲ್ಲು ಕೂಡಾಂಬಲ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.