ಭಾನುವಾರ, ಸೆಪ್ಟೆಂಬರ್ 26, 2021
25 °C

ಕಲಬುರ್ಗಿ: ಕಾಂಗ್ರೆಸ್ ಶಾಸಕಿ ಫಾತಿಮಾ ಅಳಿಯನಿಗೆ ಪೊಲೀಸ್ ಕಮಿಷನರ್ ಥಳಿತ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಕಲಬುರ್ಗಿ: ಬುಧವಾರ ತಡರಾತ್ರಿ ನಗರದ ಹಫ್ತ್ ಗುಂಬಜ್ ಬಳಿ ಪೊಲೀಸ್ ಕಮಿಷನರ್ ಡಾ.ವೈ.ಎಸ್. ರವಿಕುಮಾರ್ ತಮಗೆ ಮನಬಂದಂತೆ ಥಳಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕಿ ಖನೀಜ್ ಫಾತಿಮಾ ಅವರ ಅಳಿಯ ಆದಿಲ್ ಸುಲೇಮಾನ್ ಶೇಖ್ ಆರೋಪಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರಿ ನಮ್ಮ ಅತ್ತೆ ಖನೀಜ್ ಫಾತಿಮಾ ಅವರನ್ನು ಮನೆಗೆ ಬಿಟ್ಟು ವಾಪಸ್ ಬರುವಾಗ ಕಾರು ತಡೆದ ಕಮಿಷನರ್ ಅವರು ಮನಬಂದಂತೆ ಥಳಿಸಿದರು.

ಮೊದಲಿಗೆ ಪೊಲೀಸ್ ಸಿಬ್ಬಂದಿಗೆ ನನಗೆ ಹೊಡೆದು ಕಾಲು ಮುರಿಯುವಂತೆ ಹೇಳಿದರು. ಅವರು ಹೊಡೆಯಲು ಹಿಂದೆ ಮುಂದೆ ನೋಡಿದಾಗ ಅವರೇ ಪೊಲೀಸರಿಗೂ ಥಳಿಸಿದರು ಎಂದರು.

ಶಾಸಕಿ ಖನೀಜ್‌ ಫಾತಿಮಾ ಮಾತನಾಡಿ, ಬಿಜೆಪಿಯವರು ಚುನಾವಣೆಯಲ್ಲಿ ಸೋಲುವ ಭಯದಿಂದ ಹೀಗೆ ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ. ಯಾವುದೇ ತಪ್ಪು ಮಾಡದಿದ್ದರೂ ಹೀಗೆ ಥಳಿಸಿದ್ದು ಖಂಡನೀಯ ಎಂದು ಹೇಳಿದರು.

ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಯಾವುದೇ ವ್ಯಕ್ತಿಗೆ ಹಲ್ಲೆ ಮಾಡುವ ಅಧಿಕಾರ ಪೊಲೀಸರಿಗೆ ಇಲ್ಲ. ಒಂದೊಮ್ಮೆ ನಿಯಮ ಉಲ್ಲಂಘಿಸಿದ್ದರೆ ಪ್ರಕರಣ ದಾಖಲಿಸಬೇಕಿತ್ತು. ಬಿಜೆಪಿ ಶಾಸಕರು ಪಾಲಿಕೆ ಚುನಾವಣೆಯಲ್ಲಿ ತಮ್ಮ ಪಕ್ಷ ಸೋಲುವ ಭಯದಿಂದ ಹೀಗೆ ಮಾಡಿಸಿದ್ದಾರೆ.

ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸುತ್ತೇವೆ. ಚುನಾವಣಾ ಆಯುಕ್ತರು, ಗೃಹಸಚಿವರಿಗೆ ಈ ಸಂಬಂಧ ಪಕ್ಷದಿಂದ ದೂರು ನೀಡುತ್ತೇವೆ. ಶುಕ್ರವಾರ ಚುನಾವಣೆ ಇದ್ದುದರಿಂದ ನಾವು ಪ್ರತಿಭಟನೆ ಮಾಡುತ್ತಿಲ್ಲ. ಸುಸೂತ್ರವಾಗಿ ಚುನಾವಣೆ ನಡೆಸುವುದಕ್ಕೆ ನಮ್ಮ ಸಹಕಾರ ಇರಲಿದೆ ಎಂದರು.

ಆರೋಪ ನಿರಾಕರಣೆ: ಹಲ್ಲೆ ನಡೆಸಿದ ಕುರಿತು ತಮ್ಮ ವಿರುದ್ಧ ಮಾಡಲಾದ ಆರೋಪವನ್ನು ಪೊಲೀಸ್ ಕಮಿಷನರ್ ರವಿಕುಮಾರ್ ತಳ್ಳಿ ಹಾಕಿದ್ದಾರೆ‌‌. 

ನಾನು ರಾತ್ರಿ ಹೋಗಿಲ್ಲ. ರಾತ್ರಿ ಕರ್ಫ್ಯೂ ಇದ್ದುದರಿಂದ ಪೊಲೀಸರು ಅವರಿಗೆ ಎಚ್ಚರಿಕೆ ನೀಡಿ ಕಳಿಸಿರಬಹುದು. ಚುನಾವಣೆ ಬಹಿರಂಗ ಪ್ರಚಾರ ಮುಕ್ತಾಯವಾಗಿದ್ದರಿಂದ ಯಾರೂ ರಾತ್ರಿ ಸಂಚರಿಸಲು ಅವಕಾಶವಿಲ್ಲ ಎಂದು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು