ಶುಕ್ರವಾರ, ಫೆಬ್ರವರಿ 3, 2023
23 °C
‘ಪ್ರಜಾವಾಣಿ’ಯ ಅಮೃತ ಮಹೋತ್ಸವ: ಸಂವಾದ ಕಾರ್ಯಕ್ರಮದಲ್ಲಿ ವ್ಯಕ್ತವಾದ ಅಭಿಮತ

ಸಂವಿಧಾನದ ಆಶಯಗಳ ಜಾರಿ ‘ದಾರಿ’ ದೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಮತದಾನದ ಹಕ್ಕಿನ ವಿಷಯದಲ್ಲಿ ಮಾತ್ರ ನಾವೆಲ್ಲ ಒಂದಾಗಿದ್ದೇವೆ. ತಳ ಸಮುದಾಯಗಳಿಗೆ ಧಾರ್ಮಿಕ ಕೇಂದ್ರಗಳು ಇನ್ನೂ ಮುಕ್ತವಾಗಿಲ್ಲ. ಅಸ್ಪೃಶ್ಯತೆಯ ಸೋಂಕು ಸಂವಿಧಾನವನ್ನೂ ಬಿಟ್ಟಿಲ್ಲ. ಇದು ದೇಶದ ದುರಂತ..’

‘ಪ್ರಜಾವಾಣಿ’ಯ ಅಮೃತ ಮಹೋತ್ಸವ ವರ್ಷಾಚರಣೆಯ ಪ್ರಯುಕ್ತ ಗುರೂಜಿ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿ ‘ಪ್ರಜಾವಾಣಿ’ ಸೋಮವಾರ ಹಮ್ಮಿಕೊಂಡಿದ್ದ ‘ಸಂವಿಧಾನದ ಆಶಯಗಳು ಈಡೇರಿವೆಯೇ?’ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ವ್ಯಕ್ತವಾದ ಅಭಿಪ್ರಾಯಗಳಿವು.

‘ಸಂವಿಧಾನದ ಆಶಯಗಳು ಮತ್ತು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಕನಸು ಈಡೇರಿಲ್ಲ. ಆಶಯಗಳು ಈಡೇರಲು ಮತ್ತು ಕನಸುಗಳು ನನಸಾಗಲು ಭಾರತ ಇನ್ನೂ ದೂರ ಸಾಗಬೇಕು. ಪ್ರತಿಯೊಬ್ಬರೂ ರಾಜಕೀಯ ಪ್ರಜ್ಞೆ ಮತ್ತು ಸಂವಿಧಾನದ ಅರಿವು ಹೊಂದಬೇಕು. ಅರಿವಿನ ದಾರಿಯಲ್ಲಿ ನಡೆಯುವ ಧರ್ಮ ನಿರಪೇಕ್ಷ ರಾಜಕೀಯ ನಾಯಕರನ್ನು ಆಯ್ಕೆ ಮಾಡಬೇಕು’ ಎಂದು ಅಭಿಮತ ವ್ಯಕ್ತವಾಯಿತು.

ಶೋಭಾ ಮತ್ತು ತಂಡದವರು ಸಂವಿಧಾನದ ಪೂರ್ವ ಪೀಠಿಕೆಯನ್ನು ಹಾಡಾಗಿಸಿ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದಿದ್ದು ವಿಶೇಷವಾಗಿತ್ತು. ಗಣ್ಯರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಸಂವಾದ ಆರಂಭಿಸಿದ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್‌.ಟಿ.ಪೋತೆ, ‘ಸಂವಿಧಾನ ರಚಿಸಿದವರು ತಳ ಸಮುದಾಯದವರು ಎಂಬ ಕಾರಣಕ್ಕೆ ಈ ದೇಶವು ಸಂವಿಧಾನವನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳುತ್ತಿಲ್ಲ. ಸಂವಿಧಾನದ ಹಿಂದಿನ ಭೀಮಶಕ್ತಿಯಾಗಿದ್ದ ಬಾಬಾ ಸಾಹೇಬರ ತ್ಯಾಗವನ್ನೂ ಅರ್ಥ ಮಾಡಿಕೊಳ್ಳುತ್ತಿಲ್ಲ’ ಎಂದರು.

ದೇಶದಲ್ಲಿ ಚರಿತ್ರೆಗೆ ಅಪಚಾರ ಮಾಡುವ ಮೂಲಕ ಅಂಬೇಡ್ಕರ್‌ ಅವರಿಗೆ ಅಪಮಾನಿಸುವ ಕೆಲಸ ಮಾಡಲಾಗುತ್ತಿದೆ. ಸಂವಿಧಾನದ ಆಶಯಗಳ ಅನುಷ್ಠಾನ ನಿರಾಕರಿಸಲಾಗುತ್ತಿದೆ. ಬಹುತ್ವ ಎಂಬ ಮೌಲ್ಯವನ್ನು ಮರೆಯುತ್ತಿದ್ದೇವೆ’ ಎಂದರು.

ಮೀಸಲಾತಿ ಅಣಕಿಸುತ್ತಿದ್ದವರು ಇಂದೂ ಬಡತನದ ಹೆಸರಲ್ಲಿ ಶೇ 10ರಷ್ಟು ಮೀಸಲಾತಿ ಪಡೆದಿದ್ದಾರೆ. ಸರ್ಕಾರ ಅದನ್ನು ಜಾರಿ ಮಾಡುವ ಮೂಲಕ ಸಂವಿಧಾನದ ಮೀಸಲಾತಿ ಆಶಯಕ್ಕೆ ಧಕ್ಕೆ ತಂದಿದೆ. ದಲಿತರ ನೋವು ಅನುಭವಿಸದವರೂ ದಲಿತರ ಮೀಸಲಾತಿ ಕಸಿದುಕೊಳ್ಳಲು ಬಹಿರಂಗ ಹೋರಾಟ ನಡೆಸಿದ್ದಾರೆ. ಪ್ರಜ್ಞಾವಂತ ಸಮಾಜ ಇದನ್ನು ಖಂಡಿಸುತ್ತಿಲ್ಲ’ ಎಂದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲ
ಯದ ಸಹಾಯಕ ಪ್ರಾಧ್ಯಾಪಕ ಪ್ರೊ.ಅಪ್ಪಗೆರೆ ಸೋಮಶೇಖರ್ ಮಾತನಾಡಿ,‘ಸಂವಿಧಾನ ಹಾಗೂ ಅಂಬೇಡ್ಕರ್‌ ಅವರನ್ನು ಮರೆತ ಭಾರತಕ್ಕೆ ಭವಿಷ್ಯವಿಲ್ಲ. ಇದು ಮಾತು ಮರೆತ ಭಾರತ. ಈ ದೇಶ ಬುದ್ಧ, ಶರಣರು ಹಾಗೂ ಅಂಬೇಡ್ಕರರ ಮಾತನ್ನು ಕೇಳಿಸಿಕೊಳ್ಳಲಿಲ್ಲ. ಕೇಳಿಸಿಕೊಂಡಿದ್ದರೆ ಉತ್ತಮ ದೇಶ ನಿರ್ಮಾಣ ಆಗುತ್ತಿತ್ತು’ ಎಂದರು.

‘ನಮ್ಮದು ಸಂವಿಧಾನ ಅನಕ್ಷರಸ್ಥ ಭಾರತ. ಅಕ್ಷರಸ್ಥರಲ್ಲೂ ಸಂವಿಧಾನದ ಅನಕ್ಷರತೆ ಇದೆ. ಸ್ವಾತಂತ್ರ್ಯದ ನಂತರದಲ್ಲಿ ನಮ್ಮನ್ನು ನಾವೇ ಆಳಿಕೊಂಡಿದ್ದರೂ ಸಂವಿಧಾನದ ಆಶಯಗಳು ಈಡೇರಿಲ್ಲ. ದೆಹಲಿಯಲ್ಲಿ ಸಂವಿಧಾನದ ಪುಸ್ತಕ ಸುಟ್ಟಾಗ ದಲಿತರು ಮಾತ್ರ ಪ್ರತಿಭಟಿಸಿದರು. ಸಂವಿಧಾನದ ಬೆಳಕಿನಲ್ಲಿ ಬದುಕುತ್ತಿರುವ ಬೇರೆಯವರು ಪ್ರತಿರೋಧಿಸಲಿಲ್ಲ’ ಎಂದರು.

ಪ್ರಬುದ್ಧ ಭಾರತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕಿ ಅಶ್ವಿನಿ ಮದನಕರ್ ಮಾತನಾಡಿ,‘ಅಂಬೇಡ್ಕರ್ ಅವರು ಮಹಿಳೆಯರ ಬದುಕನ್ನು ಹಸನುಗೊಳಿಸಿದ್ದಾರೆ. ಇಲ್ಲದಿದ್ದರೆ ಮಹಿಳೆಯರು ದಾಸಿಯರಾಗಿ ಇರಬೇಕಾಗುತ್ತಿತ್ತು. ಆದ್ದರಿಂದ ಸಂವಿಧಾನಕ್ಕೆ ಅಪಾಯ ಎದುರಾದಾಗ, ಎಲ್ಲರೂ ಗಟ್ಟಿಯಾಗಿ ನಿಲ್ಲಬೇಕು’ ಎಂದರು.

ಇದೇ ವೇಳೆ ಸೂ‍ಪರ್‌ ಮಾರುಕಟ್ಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಲ್ಲೇಶ್‌ ನಾಟೇಕರ್ ಅವರನ್ನು ಗೌರವಿಸಲಾಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಇದ್ದರು.

ಪ್ರಜಾವಾಣಿ ಕಲಬುರಗಿ ಬ್ಯೂರೊ ಮುಖ್ಯಸ್ಥ ರಾಹುಲ ಬೆಳಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೋಜ್‌ಕುಮಾರ ಗುದ್ದಿ ಸ್ವಾಗತಿಸಿದರು. ಲಕ್ಷ್ಮಣ ಟಿ.ನಾಯ್ಕ ನಿರೂಪಿಸಿದರು. ಎಲ್‌.ಮಂಜುನಾಥ ವಂದಿಸಿದರು.

ಗುರೂಜಿ ಕಲಾ, ವಾಣಿಜ್ಯ ಪದವಿ ಕಾಲೇಜಿನ ಅಧ್ಯಕ್ಷ ಕಲ್ಯಾಣಕುಮಾರ್ ಶೀಲವಂತ ಮಾತನಾಡಿ,‘ಮಗು ಮರಣ ಹೊಂದಿದಾಗ ಅಂಬೇಡ್ಕರ್ ಅವರ ಪತ್ನಿ ‘ನೀವು ಓದಿನ ಕಡೆ ಗಮನ ಕೊಡಿ, ದೇಶದ ಬಡತನದ ನಿವಾರಣೆ ನಿಮ್ಮ ಗುರಿಯಾಗಲಿ ಎಂದು ಧೈರ್ಯ ತುಂಬುವ ಕೆಲಸ ಮಾ ಡುತ್ತಾರೆ. ಅವರು ಎಲ್ಲರಿಗೂ ಪ್ರೇರಣೆಯಾಗಲಿ’ ಎಂದು ಹೇಳಿದರು.

‘ಅಂಬೇಡ್ಕರ್‌ ಜ್ಞಾನದಿಂದಲೇ ಎಲ್ಲವನ್ನು ಸಾಧಿಸಬಹುದು ಎಂದು ನಂಬಿದ್ದರು. ಆದ್ದರಿಂದ ಎಲ್ಲರೂ ಜ್ಞಾನ ಸಂಪಾದನೆಗೆ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳು ಉತ್ತಮವಾಗಿ ಅಭ್ಯಾಸ ಮಾಡಿ ದೇಶಕ್ಕೆ ಕೀರ್ತಿ ತರಬೇಕು’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಯಶವಂತರಾಯ ಅಷ್ಠಗಿ ಮಾತನಾಡಿ,‘ಬುದ್ಧನ ಕಾಲದಲ್ಲಿ ಪ್ರಜಾಪ್ರಭುತ್ವ ಇತ್ತು. ಶಾಕ್ಯ ಸಂಘವೇ ಅದಕ್ಕೆ ದೊಡ್ಡ ಉದಾಹರಣೆ. ಬಳಿಕ 12ನೇ ಶತಮಾನದಲ್ಲಿ ಶರಣರು ಅನುಭವ ಮಂಟಪ ಸ್ಥಾಪಿಸಿದರು’ ಎಂದರು.

ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್ ಅವರನ್ನು ಬಿಟ್ಟು ಸಂವಿಧಾನ ಇಲ್ಲ. ಸಂವಿಧಾನ ಬಿಟ್ಟು ಅಂಬೇಡ್ಕರ್ ಇಲ್ಲ. ಅಂಬೇಡ್ಕರ್ ಅವರನ್ನು ಓದುತ್ತ ಹೋದಂತೆಲ್ಲ ಸಂವಿಧಾನ ಅರ್ಥವಾಗುತ್ತ ಹೋಗುತ್ತದೆ ಎಂದರು.

ಮುಕ್ತ ಸಂವಾದದಲ್ಲಿ ಸಭಿಕರ ಪ್ರಶ್ನೆಗಳಿಗೆ ಪ್ರೊ.ಎಚ್‌.ಟಿ.ಪೋತೆ ಮತ್ತು ಪ್ರೊ.ಅಪ್ಪಗೆರೆ ಸೋಮಶೇಖರ್ ಅವರು ಸಮಾಧಾನದಿಂದ ಉತ್ತರಿಸಿದರು.

ದಯಾನಂದ, ಉಪನ್ಯಾಸಕ: ಅಂಬೇಡ್ಕರ್ ಅವರ ಅರ್ಥಶಾಸ್ತ್ರದ ವಿಚಾರಗಳ ಅಳವಡಿಕೆಗೆ ಸರ್ಕಾರಕ್ಕೆ ನಿಮ್ಮ ಸಲಹೆ ಏನು?

l ಅಂಬೇಡ್ಕರ್ ಅವರನ್ನು ಒಂದು ವಿಷಯಕ್ಕೆ ಸೀಮಿತಗೊಳಿಸಿರುವುದು ಸರಿಯಲ್ಲ. ಅವರಿಗೆ ಎಲ್ಲ ವಿಷಯಗಳ ಜ್ಞಾನ ಇತ್ತು. ಅರ್ಥಶಾಸ್ತ್ರ ಆಳವಾಗಿ ಅಧ್ಯಯನ ಮಾಡಿದ್ದರು. ಅವರ ಅರ್ಥಶಾಸ್ತ್ರದ ವಿಷಯಗಳನ್ನು ಸರ್ಕಾರಗಳು ಅಳವಡಿಸಿಕೊಂಡರೆ ಉತ್ತಮ ಆಡಳಿತ ನೀಡಬಹುದು.

ಶಿವಗಂಗಾ ರುಮ್ಮಾ, ಪ್ರಾಧ್ಯಾಪಕಿ: ಕಲ್ಯಾಣ ರಾಜ್ಯದ ಜಾರಿಗೆ ಇಚ್ಛಾ ಶಕ್ತಿ ಪ್ರದರ್ಶಿಸುವ ಸರ್ಕಾರಗಳು ಆಯ್ಕೆಯಾಗುತ್ತಿಲ್ಲ ಏಕೆ?

l ಸಂವಿಧಾನವೇ ನಮ್ಮ ಧರ್ಮವಾಗಬೇಕು. ಪ್ರಜ್ಞಾವಂತರೆಲ್ಲ ಸಂವಿಧಾನದ ಕಡೆ ಹೋಗಬೇಕು. ಅರಿವಿನ ದಾರಿಯಲ್ಲಿ ನಡೆಯಬೇಕು. ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಇಚ್ಛಾಶಕ್ತಿಯುಳ್ಳ ಸರ್ಕಾರ ಆಯ್ಕೆ ಆಗಬೇಕು.

ಧರ್ಮಣ್ಣ ಕೋಣೆಕರ್, ವಕೀಲ: ದೇಶದಲ್ಲಿ ಪ್ರಜಾಪ್ರಭುತ್ವವಾದ ಹಾಗೂ ಮನುವಾದದ ನಡುವೆ ಸಂಘರ್ಷ ಏರ್ಪಟ್ಟಿದೆ. ಎತ್ತ ಸಾಗಬೇಕು?

l ಬಹುತ್ವದಲ್ಲಿ ನಂಬಿಕೆ ಇರುವ ಹಾಗೂ ಮೌಲ್ಯಗಳ ನೆಲೆಯಲ್ಲಿ ನಿಂತಿರುವ ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವದ ಮಾರ್ಗದಲ್ಲಿ ನಡೆಯಬೇಕಾದ ಅನಿವಾರ್ಯತೆ ಎಲ್ಲರಿಗೂ ಇದೆ.

ದೇವಣ್ಣ, ಯುವಕ: ಬಹುಪಕ್ಷ ಪದ್ಧತಿಯನ್ನು ಅಳವಡಿಸಿಕೊಂಡಿರುವ ಭಾರತ ಈಗ ದ್ವಿಪಕ್ಷ ಪದ್ಧತಿ ಕಡೆ ಮುಖ ಮಾಡಿದೆ. ಇದು ಉತ್ತಮ ಬೆಳವಣಿಗೆಯೇ?

l ಒಂದು ಪಕ್ಷಕ್ಕೆ ನಿರಂತರವಾಗಿ ಬಹುಮತ ಬರುವುದರಿಂದ ಅಪಾಯ ಇದೆ. ಧರ್ಮ–ರಾಜಕಾರಣದ ಅನೈತಿಕ ಸಂಬಂಧದ ಫಲಿತಾಂಶ ಇದು. ಇದರಿಂದ ದೇಶ ಅಭಿವೃದ್ಧಿ ಹೊಂದುವುದಿಲ್ಲ.

‘ಪ್ರಜಾವಾಣಿ’ ನಿರಂತರವಾಗಿ ಜನಪರ ಚಳವಳಿಗಳ ಬೆನ್ನಿಗೆ ನಿಲ್ಲುತ್ತ ಬಂದಿದೆ. ಇದು ಮುಕ್ತ ವಿಶ್ವವಿದ್ಯಾಲಯದ ರೀತಿ ಕೆಲಸ ಮಾಡುತ್ತಿದೆ. ಜನಾಭಿಪ್ರಾಯ ರೂಪಿಸುವ ಕೆಲಸ ಮಾಡುತ್ತಿದೆ.

ಡಾ.ಅಪ್ಪಗೆರೆ ಸೋಮಶೇಖರ್, ಸಹಾಯಕ ಪ್ರಾಧ್ಯಾಪಕ,

‘ಪ್ರಜಾವಾಣಿ’ಯು ನಿರಂತರವಾಗಿ ಅಕ್ಷರ ಕ್ರಾಂತಿ ಮಾಡುತ್ತಿದೆ. ವಿದ್ಯಾರ್ಥಿ ದೆಸೆ ಯಿಂದಲೂ ಪತ್ರಿಕೆ ಓದುತ್ತಿದ್ದೇನೆ. ಪತ್ರಿಕೆಯಲ್ಲಿ ನನ್ನ ಕಥೆ ಪ್ರಕಟವಾದ ನಂತರ ನನಗೆ ಸಾರಸ್ವತ ಲೋಕದಲ್ಲಿ ಗುರುತು ಸಿಕ್ಕಿತು.

ಡಾ.ಎಚ್‌.ಟಿ.ಪೋತೆ, ಪ್ರಾಧ್ಯಾಪಕ

‘ಪ್ರಜಾವಾಣಿ’ ಸಾಮಾಜಿಕ ವಿಷಯಗಳ ಕುರಿತು ಚರ್ಚೆಗಳನ್ನು ಹುಟ್ಟು ಹಾಕುತ್ತದೆ. ಜನರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಜನಪರವಾದ ಲೇಖನಗಳು ನಿರಂತರವಾಗಿ ಪ್ರಕಟವಾಗುತ್ತವೆ.

ಎನ್‌.ಬಿ.ಪಾಟೀಲ, ನಿವೃತ್ತ ಪ್ರಾಂಶುಪಾಲ

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ‘ಪ್ರಜಾವಾಣಿ’ ಪತ್ರಿಕೆಯು ಆ ಘನತೆಯನ್ನು ನಿರಂತರವಾಗಿ ಕಾಯ್ದುಕೊಂಡು ಬಂದಿದೆ.

ಅಶ್ವಿನಿ ಮದನಕರ್, ಜಿಲ್ಲಾ ಸಂಚಾಲಕಿ, ಪ್ರಬುದ್ಧ ಭಾರತ ಸಂಘರ್ಷ ಸಮಿತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು