ಕಲಬುರಗಿ: ಇಲ್ಲಿನ ಕಲಬುರಗಿ ತಾಲ್ಲೂಕಿನ ಅವರಾದ (ಬಿ) ಗ್ರಾಮ ಪಂಚಾಯಿತಿಯಲ್ಲಿ ವಿವಿಧ ವಸತಿ ಯೋಜನೆಗಳಡಿ ಮಂಜೂರಾದ 37 ಮನೆಗಳನ್ನು ನಿರ್ಮಿಸದೆ ₹37.57 ಲಕ್ಷ ದುರ್ಬಳಕೆ ಮಾಡಿಕೊಂಡಿದ್ದು ಕುಂದು–ಕೊರತೆ ನಿವಾರಣಾ ಪ್ರಾಧಿಕಾರದ ವಿಚಾರಣೆಯಲ್ಲಿ ಸಾಬೀತಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಸ್‌ಎಟಿ) ಆದೇಶಿಸಿದೆ.
2013–14ನೇ ಸಾಲಿನಿಂದ ನಂತರದ ವರ್ಷಗಳಲ್ಲಿ ಅಂಬೇಡ್ಕರ್, ಬಸವ ವಸತಿ ಯೋಜನೆಗಳ ಮನೆ ನಿರ್ಮಾಣದಲ್ಲಿ ಅಂದಾಜು ₹39 ಲಕ್ಷ ಮೊತ್ತದ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿತ್ತು. ಗ್ರಾಮದ ನಿವಾಸಿ ಷಣ್ಮುಖಪ್ಪ ಎಂ. ಹೊಸಮನಿ ಅವರು ದಾಖಲೆಗಳೊಂದಿಗೆ ಕುಂದು–ಕೊರತೆ ನಿವಾರಣಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರು.
ದೂರು ಆಧಾರಿಸಿ ಪ್ರಾಧಿಕಾರವು ಸಂಬಂಧಿಸಿದ ಪಿಡಿಒಗಳು, ದೂರುದಾರರನ್ನು ಕರೆಯಿಸಿ, ದಾಖಲೆಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಿತ್ತು. ವಿಚಾರಣೆಯಲ್ಲಿ ಅವ್ಯವಹಾರ ನಡೆದಿದ್ದು ಕಂಡುಬಂದಿದ್ದರಿಂದ ದುರ್ಬಳಕೆಯಾದ ಅನುದಾನದ ವಸೂಲಾತಿ ಹಾಗೂ ಶಿಸ್ತು ಕ್ರಮಕ್ಕೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಿತ್ತು. ಇದನ್ನು ಪ್ರಶ್ನಿಸಿದ ಸಂಬಂಧಪಟ್ಟ ಪಿಡಿಒಗಳು, ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಪಿಡಿಒಗಳ ಮನವಿ ಪುರಸ್ಕರಿಸಿ ನ್ಯಾಯಮಂಡಳಿಯು ಈ ಬಗ್ಗೆ ವಿಚಾರಣೆ ನಡೆಸಿತು. 2024ರ ಜೂನ್ 14ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ (ಆರ್‌ಡಿಪಿಆರ್) ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದ ಕೆಎಟಿ, ಅವರಾದ (ಬಿ) ಗ್ರಾಮ ಪಂಚಾಯಿತಿಯ ವಸತಿ ಪ್ರಕರಣದ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಿ, ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ವಿಚಾರಣೆ ಮುಗಿಯುವವರೆಗೂ ಹಣ ವಸೂಲಿ ಮಾಡುವಂತಿಲ್ಲ. ಆದೇಶ ಪತ್ರ ತಲುಪಿದ ಆರು ತಿಂಗಳ ಒಳಗಾಗಿ ತನಿಖೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ದೂರುದಾರ ಬೇಸರ: ‘ಒಂಬತ್ತು ವರ್ಷಗಳ ಹಿಂದಿನಿಂದ ನಡೆದ ಅವ್ಯವಹಾರದ ಬಗ್ಗೆ ದೂರು ಕೊಟ್ಟು ಮೂರು ವರ್ಷಗಳು ಕಳೆದಿವೆ. ಪ್ರಾಧಿಕಾರ ಒಂದೂವರೆ ವರ್ಷ ವಿಚಾರಣೆ ಮಾಡಿ, ಶಿಸ್ತು ಕ್ರಮಕ್ಕೆ ಆರ್‌ಡಿಪಿಆರ್‌ಗೆ ಆದೇಶಿಸಿದ್ದರೂ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ಷಣ್ಮುಖಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪಿಡಿಒಗಳು ಗ್ರಾಮ ಸಭೆ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದರು. ಫಲಾನುಭವಿಗಳು ಮನೆಗಳನ್ನು ಕಟ್ಟದೆ ಬೇರೆಯವರ ಮನೆಗಳನ್ನು ತೋರಿಸಿ ಅನುದಾನವನ್ನು ಲಪಟಾಯಿಸಿದ್ದರಯ, ಫಲಾನುಭವಿಗಳ ಕೋಡ್ ಸಂಖ್ಯೆ ಪರಿಶೀಲಿಸಿದಾಗ ಭೌತಿಕವಾಗಿ ಮನೆಗಳು ಕಟ್ಟದಿರುವುದು ಗಮನಕ್ಕೆ ಬಂತು. ಪಿಡಿಒಗಳು ಬಂದು ಪರಿಶೀಲಿಸಿದರೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಹೀಗಾಗಿ, ಕುಂದು–ಕೊರತೆ ನಿವಾರಣಾ ಪ್ರಾಧಿಕಾರದ ಮೊರೆ ಹೋಗಬೇಕಾಯಿತು’ ಎಂದರು.
‘ನಾಲ್ವರು ಪಿಡಿಒಗಳ ವಿರುದ್ಧ ದೂರು’
‘ವಸತಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪಿಡಿಒಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪ್ರಾಧಿಕಾರವು ತನ್ನ ಆದೇಶದಲ್ಲಿ ಹೇಳಿತ್ತು. ಪಿಡಿಒಗಳು ಅದಕ್ಕೆ ತಡೆತಂದು ಕೆಎಸ್‌ಎಟಿ ಮೊರೆ ಹೋದರು’ ಎಂದು ಕಲಬುರಗಿ ತಾಲ್ಲೂಕು ಪಂಚಾಯಿತಿ ಇಒ ಸೈಯದ್ ಪಟೇಲ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ವಿಚಾರಣೆ ನಡೆಸಿದ ಕೆಇಟಿ ಅನುದಾನ ದುರ್ಬಳಕೆ ಆಗಿದ್ದು ಕಂಡುಬಂದಿದೆ. ರಾಜ್ಯಮಟ್ಟದಲ್ಲಿ ತನಿಖಾ ತಂಡವನ್ನು ರಚಿಸಿ ತನಿಖೆ ನಡೆಸುವಂತೆ ಆರ್‌ಡಿಪಿಆರ್‌ಗೆ ಆದೇಶಿಸಿದ್ದು ಆರು ತಿಂಗಳ ಕಾಲಾವಕಾಶವನ್ನೂ ನೀಡಿದೆ’ ಎಂದರು. ‘ಫಲಾನುಭವಿಗಳು ಬೇರೆಯವರ ಮನೆಗಳ ಜಿಪಿಎಸ್ ಫೋಟೊಗಳನ್ನು ತೋರಿಸಿ ಹಂತ– ಹಂತವಾಗಿ ಅನುದಾನ ಪಡೆದುಕೊಂಡಿದ್ದಾಗಿ ದೂರುದಾರ 2018ರಲ್ಲಿ ನೀಡಿ ದೂರಿನಲ್ಲಿ ಉಲ್ಲೇಖಿಸಿದ್ದರು’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.