ಬುಧವಾರ, ಜೂನ್ 23, 2021
22 °C
ಕಲಾಕೃತಿಗಳ ಮೂಲಕ ಜನರಲ್ಲಿ ಸ್ಥೈರ್ಯ ತುಂಬುತ್ತಿರುವ ಕಲಾವಿದೆ ಜಲಜಾಕ್ಷಿ ಕುಲಕರ್ಣಿ

ಕೊರೊನಾ ಜಾಗೃತಿಗೆ ಕುಂಚದ ಸ್ಪರ್ಶ

ಹನಮಂತ ಕೊಪ್ಪದ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಈಗ ಎಲ್ಲರೂ ಲಾಕ್‌ಡೌನ್‌ನಲ್ಲಿ ಬಂಧಿಯಾಗಿದ್ದಾರೆ. ಇಂಥ ಸಂದರ್ಭದಲ್ಲಿ ತಲ್ಲಣಗೊಂಡಿರುವ ಮನಸ್ಸುಗಳಿಗೆ ಹಾಗೂ ಸೋಂಕಿನ ವಿರುದ್ಧ ಹೋರಾಡುತ್ತಿರುವ ಕೊರೊನಾ ಸೇನಾನಿಗಳಿಗೆ ತಮ್ಮ ಕಲಾಕೃತಿಗಳ ಮೂಲಕ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ ಕಲಬುರ್ಗಿಯ ಚಿತ್ರಕಲಾವಿದೆ ಜಲಜಾಕ್ಷಿ ಕುಲಕರ್ಣಿ.

ಕೊರೊನಾ ವೈರಾಣು ವಿರುದ್ಧದ ಜಾಗೃತಿಗಾಗಿ ಜಲಜಾಕ್ಷಿ ಬಿಡಿಸಿದ ಹಲವಾರು ಚಿತ್ರಗಳು ಕಲಾಸಕ್ತರ ಗಮನ ಸೆಳೆಯುತ್ತಿವೆ. ‘ಮನೆಯಲ್ಲಿಯೇ ಇರಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು’ ಎಂಬ ಜಾಗೃತಿಯನ್ನು ಕುಂಚ ಕಲೆಯ ಮೂಲಕ ಮೂಡಿಸುತ್ತಿದ್ದಾರೆ. ‘ಸರ್ಕಾರ ಜಾರಿಮಾಡಿರುವ ಲಾಕ್‌ಡೌನ್‌ ಯಶಸ್ವಿಗೊಳಿಸಬೇಕು. ಧರ್ಮಬೇಧವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಸೋಂಕಿನ ವಿರುದ್ಧ ಹೋರಾಡೋಣ’ ಎಂಬ ಮನವಿಯನ್ನೂ ಕಲಾಕೃತಿಗಳ ಮೂಲಕ ಬಿಂಬಿಸಿದ್ದಾರೆ. ‘ಭಾರತ ಕೋವಿಡ್ ವಿರುದ್ಧ ಗೆಲ್ಲಲ್ಲಿದೆ’ ಎನ್ನುವ ವರ್ಣಚಿತ್ತಾರದ ಮೂಲಕ ಕೊರೊನಾ ಸೇನಾನಿಗಳಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡಿದ್ದಾರೆ.

ಸೇಡಂ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದವರಾದ ಅವರು ಬಾಲ್ಯದಲ್ಲಿಯೆ ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡವರು. ತಂದೆ ಪ್ರಭಾಕರ್‌ ರಾವ್ ಮಗಳ ಕಲಾಸಕ್ತಿಗೆ ಪ್ರೋತ್ಸಾಹಿಸಿ ಬೆನ್ನುಲುಬಾಗಿ ನಿಂತರು. ದಿ ಆರ್ಟ್ಸ್ ಇಂಟೆಗ್ರೆಷನ್ ಕಾಲೇಜಿನಲ್ಲಿ ಡಿಪ್ಲೊಮಾ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ವಿಷ್ಯವಲ್ ಆರ್ಟ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಸೃಜನಶೀಲ ಪೇಂಟಿಂಗ್ ಹಾಗೂ ಅಮೂರ್ತ ಕಲೆಯಲ್ಲಿ ಸಿದ್ಧಹಸ್ತರು.

ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, ಗುಂಪು ಪ್ರದರ್ಶನ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಹಲವು ಚಿತ್ರಕಲಾ ಸ್ಪರ್ಧೆ, ಚಿತ್ರಕಲಾ ಶಿಬಿರಗಳಲ್ಲಿ ಅವರು ಪಾಲ್ಗೊಂಡಿದ್ದಾರೆ.. 2006ರಲ್ಲಿ ಅಮೃತಸರದಲ್ಲಿ ಅಖಿಲ ಭಾರತ ಚಿತ್ರಕಲಾ ಪ್ರದರ್ಶನದಲ್ಲಿ ಅವರ ಕಲಾಕೃತಿ ಪ್ರದರ್ಶನಗೊಂಡಿತು.  ಅಲ್ಲಿಂದ ನಿರಂತರವಾಗಿ ಅವರ ಕಲಾಕೃತಿಗಳು ಚಿತ್ರಸಂತೆಗಳಲ್ಲಿ ಪ್ರದರ್ಶನಗೊಳ್ಳುತ್ತಿವೆ. ಕಲಬುರ್ಗಿಯೂ ಸೇರಿದಂತೆ ಬೆಂಗಳೂರು, ದೆಹಲಿ, ಮುಂಬೈ, ಪುಣೆ, ಹೈದರಾಬಾದ್‌ ಮುಂತಾದೆಡೆ ಅವರು ಕಲಾಕೃತಿ ಪ್ರದರ್ಶಿಸಿದ್ದಾರೆ. ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನದ ಪದಕ ಹಾಗೂ ನಗದು ಬಹುಮಾನಗಳನ್ನು ಅವರು ಗೆದ್ದಿದ್ದಾರೆ. ‌ಕಲಬುರ್ಗಿಯಲ್ಲಿ ಈಚೆಗೆ ನಡೆದ 8ನೇ ಚಿತ್ರಸಂತೆಯಲ್ಲಿ ಅವರ ಕಲಾಕೃತಿಗಳು ಪ್ರದರ್ಶನಗೊಂಡಿವೆ. 

2013ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಹಾಗೂ 2017ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಆಯೋಜಿಸಿದ್ದು ಅವರ ಹೆಗ್ಗಳಿಕೆ. 2013ರಲ್ಲಿ ಕಲಾ ಮಹೋತ್ಸವ ಪ್ರಶಸ್ತಿ, 2018ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿ, ಇಂಡಿಯನ್ ರಾಯಲ್ ಅಕಾಡೆಮಿ ಅವಾರ್ಡ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪಡೆದಿದ್ದಾರೆ. 2020ರಲ್ಲಿ ಕಲಬುರ್ಗಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರನ್ನು ಸನ್ಮಾನಿಸಲಾಗಿದೆ.

‘ನನಗೆ ಚಿತ್ರಕಲೆಯೆ ಪ್ರಪಂಚ. ನನ್ನ ಕಲಾಸಕ್ತಿಗೆ ಕುಟುಂಬದ ಬೆಂಬಲವಿದೆ. ಗುರುಗಳ ಆಶೀರ್ವಾದವೂ ಇದೆ. ಕೊರೊನಾ ಲಾಕ್‌ಡೌನ್ ಕಾಲದಲ್ಲಿ ಪ್ರತಿಯೊಬ್ಬರೂ ಕೋವಿಡ್ ಮಾರ್ಗಸೂಚಿ ಪಾಲಿಸುವ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು’ ಎನ್ನುತ್ತಾರೆ ಜಲಜಾಕ್ಷಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು