ಶನಿವಾರ, ಮೇ 8, 2021
19 °C
ಇಬ್ಬರು ಗರ್ಭಿಣಿಯರು, ಇಬ್ಬರು ಆರೋಗ್ಯ ಕಾರ್ಯಕರ್ತರು, ಎರಡು ಹಸುಳೆಗಳಿಗೂ ಅಂಟಿದ ಕೊರೊನಾ

ಕಲಬುರ್ಗಿ: ಒಂದೇ ದಿನ 624 ಮಂದಿಗೆ ಸೋಂಕು!

ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏಕಾಏಕಿ ಹೆಚ್ಚಳವಾಗಿದ್ದು, ಒಂದೇ ದಿನದಲ್ಲಿ 624 ಮಂದಿಗೆ ಸೋಂಕು ತಗುಲಿದ್ದು ಗುರುವಾರ ಪತ್ತೆಯಾಗಿದೆ. ಬೆಂಗಳೂರು ನಗರ ಹೊರತುಪಡಿಸಿದರೆ ರಾಜ್ಯದಲ್ಲಿ ಅತ್ಯಂತ ಹೆಚ್ಚು ‍ಪ್ರಕರಣಗಳು ಜಿಲ್ಲೆಯಲ್ಲಿ ಕಂಡುಬಂದಿವೆ.

2021ನೇ ಸಾಲಿನಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದೊಂದು ವಾರದಿಂದ 150ರಿಂದ 300ರ ಗಡಿಯಲ್ಲೇ ಇದ್ದ ಸೋಂಕಿತರ ಪ್ರಮಾಣ ಗುರುವಾರ ಏಕಾಏಕಿ ದ್ವಿಗುಣಗೊಂಡಿದ್ದು, ಜಿಲ್ಲೆಯ ಜನ ದಿಗಿಲುಗೊಳ್ಳುವಂತೆ ಮಾಡಿದೆ. ಕಳೆದ ವರ್ಷ (2020) ಕೂಡ 631 ಪ್ರಕರಣಗಳು ಒಂದೇ ದಿನ ಕಂಡುಬಂದಿದ್ದು ದಾಖಲೆಯಾಗಿ ಉಳಿದಿದೆ. ಅದನ್ನು ಬಟ್ಟರೆ ಇಷ್ಟು ದೊಡ್ಡ ಪ್ರಮಾಣದ ಸಂಖ್ಯೆ ಕಂಡುಬರುತ್ತಿರುವುದು ಇದು ಎರಡನೇ ಬಾರಿ.

ಬಹುಪಾಲು ಜನರಿಗೆ ವಿಷಮಶೀತ ಜ್ವರ: ಗುರುವಾರ ವರದಿಯಾದ ಎಲ್ಲ ಪ್ರಕರಣಗಳಲ್ಲಿ ಶೇ 90ರಷ್ಟು ಜನರಿಗೆ ವಿಷಮಶೀತ ಜ್ವರ (ಐಎಲ್‌ಐ) ಲಕ್ಷಣಗಳು ಕಂಡುಬಂದಿವೆ. ಕೇವಲ 8 ಮಂದಿಗೆ ಮಾತ್ರ ತೀವ್ರ ಉಸಿರಾಟದ ತೊಂದರೆ (ಎಸ್‌ಎಆರ್‌ಐ) ಕಾಣಿಸಿಕೊಂಡಿದೆ.

ಪ‍್ರಸಕ್ತ ಮಾರ್ಚ್‌ನಿಂದ ಇಲ್ಲಿಯವರೆಗೆ ಕಂಡುಬಂದ ಬಹುಪಾಲು ಪ್ರಕರಣಗಳಲ್ಲಿ ಸೋಂಕಿನ ಲಕ್ಷಣಗಳೇ ಇರಲಿಲ್ಲ. ಆದರೆ, ಕಳೆದ ಒಂದು ವಾರದಿಂದ ವಿಷಮಶೀತ ಜ್ವರದ ಲಕ್ಷಣಗಳು ಹೆಚ್ಚಿನ ಮಂದಿಗೆ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಗುರುವಾರ 624 ಪ್ರಕರಣಗಳಲ್ಲಿ 51 ಮಂದಿಗೆ ಮಾತ್ರ ಲಕ್ಷಣಗಳು ಇಲ್ಲ. ಇಳಿದವರೆಲ್ಲ ಒಂದಿಲ್ಲೊಂದು ಲಕ್ಷಣದಿಂದ ಬಳಲುತ್ತಿದ್ದಾರೆ ಎನ್ನುತ್ತಾರೆ ವೈದ್ಯರು.

ಮನೆಯಲ್ಲಿರದೇ ಓಡಾಡಿದರೆ ಅಪಾಯ: ‘ಲಕ್ಷಣಗಳು ಇಲ್ಲದವರಿಗೆ ಹೋಂ ಕ್ವಾರಂಟೈನ್‌ ಅಥವಾ ಹೋಂ ಐಸೋಲೇಷನ್‌ ಮಾಡಲಾಗುತ್ತಿದೆ. ಅದರಲ್ಲೂ ಹಲವರು ತಮಗೆ ಯಾವುದೇ ಲಕ್ಷಣಗಳು ಇಲ್ಲ ಎಂಬ ಕಾರಣಕ್ಕೆ ಹೊರಗಡೆ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಆರೋಗ್ಯ ದಿಢೀರ್‌ ಕ್ಷೀಣಿಸುತ್ತಿದೆ. ಇದೇ ಕಾರಣಕ್ಕೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಸಾವಿಗೀಡಾದವರಲ್ಲಿ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡವರೇ ಹೆಚ್ಚಾಗಿದ್ದಾರೆ. ಮೇಲಾಗಿ, ಅವರೆಲ್ಲ ಅಧಿಕ ರಕ್ತದೊತ್ತಡ, ಮಧುಮೇಹ ಸೇರಿದಂತೆ ಮುಂತಾದ ಕಾಯಿಲೆಗಳಿಂದ ಸೂಕ್ಷ್ಮ ಆರೋಗ್ಯ ಹೊಂದಿದವರು’ ಎಂದು ಜಿಲ್ಲಾ ಸರ್ಜನ್‌ ಡಾ.ಅಂಬಾರಾಯ ರುದ್ರವಾಡಿ ಹೇಳುತ್ತಾರೆ.

ಇಬ್ಬರು ಗರ್ಭಿಣಿಯರು, ಎರಡು ಮಕ್ಕಳಿಗೆ ಪಾಸಿಟಿವ್‌: ಗುರುವಾರ ಪತ್ತೆಯಾದ ಸೋಂಕಿತರಲ್ಲಿ ಇಬ್ಬರು ಗರ್ಭಿಣಿಯರು ಹಾಗೂ ಒಂದು ವರ್ಷದ ಎರಡು ಕಂದಮ್ಮಗಳೂ ಸೇರಿವೆ.

ನಗರದ ಸಮೀದ‍ ಕೋಟನೂರು ಜಿಡಿಎ ಬಡಾವಣೆಯ ಒಬ್ಬ ಗರ್ಭಿಣಿ ಹಾಗೂ ಸೇಡಂ ಬಳಿಯ ಪಿ.ಜಿ. ತಾಂಡಾದ ಇನ್ನೊಬ್ಬ ಗರ್ಭಿಣಿಗೆ ಕೋವಿಡ್‌ ಅಂಟಿಕೊಂಡಿದ್ದು, ಇಬ್ಬರನ್ನೂ ಐಸೋಲೇಷನ್‌ ವಾರ್ಡ್‌ ದಾಖಲಿಸಲಾಗಿದೆ.

ಇದರೊಂದಿಗೆ, ಕೊರೊನಾ ಸೇನಾನಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಆರೋಗ್ಯ ಕಾರ್ಯಕರ್ತರಿಗೂ ಸೋಂಕು ತಗುಲಿದೆ.

ಉಳಿದಂತೆ, 2ರಿಂದ 11 ವರ್ಷದೊಳಗಿನ ಎಂಟು ಬಾಲಕಿಯರು ಹಾಗೂ 8 ಬಾಲಕರೂ ಸೇರಿದ್ದಾರೆ.

ಸೋಂಕಿನಿಂದ ಮಹಿಳೆ ಸಾವು
ಕೊರೊನಾ ಸೋಂಕಿನಿಂದ ಕಲಬುರ್ಗಿ ನಗರದ 55 ವರ್ಷದ ಮಹಿಳೆ ಮೃತಪಟ್ಟಿದ್ದಾರೆ ಎಂದು ಗುರುವಾರದ ಅರೋಗ್ಯ ಬುಲೆಟಿನ್ ತಿಳಿಸಿದೆ. ಇದರೊಂದಿಗೆ ಇದುವರೆಗೂ ಮೃತಪಟ್ಟವರ ಸಂಖ್ಯೆ 372ಕ್ಕೆ ಏರಿಕೆಯಾಗಿದೆ.

ತೀವ್ರ ಉಸಿರಾಟದ ತೊಂದರೆ ಜೊತೆಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ನಗರದ ಬ್ರಹ್ಮಪುರ ಪ್ರದೇಶದ ಮಹಿಳೆ ಏ.13 ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ ಏ.15 ರಂದು ಮೃತಪಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.