ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿರುವ ಕೋವಿಡ್‌: ಜಿಲ್ಲಾಡಳಿತ ಸಿದ್ಧತೆ

ವೈದ್ಯರು, ಸ್ಟಾಫ್‌ ನರ್ಸ್‌, ಸಿಬ್ಬಂದಿ ತಂಡಗಳ ರಚನೆ; ಸದ್ಯಕ್ಕಿಲ್ಲ ಸಿಬ್ಬಂದಿ, ಸೌಕರ್ಯಗಳ ಕೊರತೆ
Last Updated 29 ಮೇ 2020, 12:02 IST
ಅಕ್ಷರ ಗಾತ್ರ

ಕಲಬುರ್ಗಿ: ವಲಸಿಗರಿಂದಾಗಿ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಪರಿಸ್ಥಿತಿ ಮನಗಂಡಿರುವ ಜಿಲ್ಲಾಡಳಿತ ಇದರ ಸಮರ್ಥ ನಿರ್ವಹಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಜಿಮ್ಸ್‌ ಹಾಗೂ ಇಎಸ್‌ಐಸಿ ಆಸ್ಪತ್ರೆ ಸೇರಿ 150 ವೈದ್ಯರ ತಂಡ ರಚಿಸಲಾಗಿದೆ. ಇದರಲ್ಲಿ ಮುಕ್ಕಾಲು ಭಾಗ ವೈದ್ಯರು ಈಗಾಗಲೇ ಕೋವಿಡ್‌ ಆಸ್ಪತ್ರೆಯ ಹೊಣೆ ಹೊತ್ತಿದ್ದಾರೆ. 220 ಸ್ಟಾಫ್‌ ನರ್ಸ್‌, 240 ‘ಡಿ’ ದರ್ಜೆಯ ಸಿಬ್ಬಂದಿಯ ತಂಡವೂ ಸನ್ನದ್ಧವಾಗಿದ್ದು, ಇದರಲ್ಲಿಯೂ ಅರ್ಧದಷ್ಟು ಸಿಬ್ಬಂದಿಯನ್ನು ಈಗಾಗಲೇ ನಿಯೋಜನೆ ಮಾಡಲಾಗಿದೆ.

ವೈದ್ಯರು ಹಾಗೂ ನರ್ಸ್‌ಗಳ ತಂಡಗಳನ್ನು ತಲಾ ಆರು ತಾಸಿನಂತೆ, ನಾಲ್ಕು ಶಿಫ್ಟ್‌ಗಳ ಮೇಲೆ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತಿದೆ. ಪಿಪಿಇ ಕಿಟ್‌ ಧರಿಸಿ, ಐಸೋಲೇಷನ್‌ ವಾರ್ಡ್‌ನಲ್ಲಿ ಕೆಲಸ ಮಾಡುವವರಿಗೆ ಉಸಿರಾಟದ ತೊಂದರೆ ಆಗದಂತೆ ಈ ಶಿಫ್ಟ್‌ ಮಾಡಲಾಗಿದೆ. ಉಳಿದಂತೆ, ಸಾಮಾನ್ಯ ಕಾಯಿಲೆಗಳ ವಿಭಾಗದಲ್ಲಿ ಯಥಾ ಪ್ರಕಾರ ಎಂಟು ತಾಸು ಕೆಲಸ ಮುಂದುವರಿದಿದೆ.

ಟ್ರಾಮಾ ಕೇಸ್‌ ಸೆಂಟರ್‌ ಬಳಕೆ: ವೆಂಟಿಲೇಟರ್‌, ಬೆಡ್‌ಗಳು, ಐಸಿಯು ಘಟಕ, ಮಲ್ಟಿಪ್ಯಾರಾ ಮಾನಿಟರ್ಸ್‌ ವ್ಯವಸ್ಥೆ, ಔಷಧಾಲಯ ಸೇರಿದಂತೆ ತುರ್ತು ಚಿಕಿತ್ಸೆ ಅಗತ್ಯವಿರುವ ಎಲ್ಲ ಸಿದ್ಧತೆಗಳೂ ಟ್ರಾಮಾ ಕೇರ್‌ ಸೆಂಟರ್‌ನಲ್ಲಿ ಇವೆ.

ಜಿಲ್ಲಾಡಳಿತ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಅಗತ್ಯ ವೈದ್ಯಕೀಯ ಸೌಕರ್ಯಗಳನ್ನು ಖರೀದಿಸಲಾಗಿದೆ.

ಪ್ರಯೋಗಾಲಯ ನಿರಾತಂಕ: ಜಿಮ್ಸ್‌ನಲ್ಲಿ ತೆರೆದ ಕೊರೊನಾ ವೈರಾಣು ಪತ್ತೆ ಪ್ರಯೋಗಾಲಯಕ್ಕೆ ಮೇ 16ರಂದು ಮತ್ತೆ 5 ಸಾವಿರ ಕಿಟ್‌ಗಳ ಸರಬರಾಜು ಆಗಿದೆ. ಆದರೆ, ಕಲಬುರ್ಗಿ, ಯಾದಗಿರಿ, ಬೀದರ್‌ ಹಾಗೂ ರಾಯಚೂರು ಜಿಲ್ಲೆಗಳಿಂದಲೂ ಮಾದರಿಗಳ ಸಂಗ್ರಹವೂ ಹೆಚ್ಚುತ್ತಿದೆ.

ಇಷ್ಟೆಲ್ಲದರ ಮೇಲೂ ಇನ್ನೂ ಒಂದು ತಿಂಗಳು ಕಿಟ್‌ಗಳ ಕೊರತೆ ಇಲ್ಲ. ಮುಂಜಾಗ್ರತಾ ಕ್ರಮವಾಗಿ ಮತ್ತಷ್ಟು ಸೌಕರ್ಯಗಳ ಬೇಡಿಕೆ ಸಲ್ಲಿಸಲಾಗಿದೆ ಎನ್ನುತ್ತವೆ ಜಿಮ್ಸ್‌ ಮೂಲಗಳು.

ಒಂದೇ ತಿಂಗಳಲ್ಲಿ ಎರಡು ಪಟ್ಟು ಪ್ರಕರಣ:ಮಾರ್ಚ್‌ 10ರಂದು ಮೊದಲ ಕೋವಿಡ್‌ ಪ್ರಕರಣ ಪತ್ತೆಯಾದ ಮೇಲೆ, ಅವರ ನೇರ ಹಾಗೂ ಪರೋಕ್ಷ ಸಂಪರ್ಕಕ್ಕೆ ಬಂದ ನಾಲ್ವರಲ್ಲಿ ಮಾತ್ರ ವೈರಾಣು ಕಾಣಿಸಿಕೊಂಡಿತು. ಮಾರ್ಚ್‌ ಕೊನೆಯ ವಾರದಲ್ಲಿ ‘ತಬ್ಲಿಗಿ’ಗಳ ಕಾರಣ ಸೋಂಕಿತರ ಸಂಖ್ಯೆ 60 ದಾಟಿತು. ಈಗ ಮೂರನೇ ಹಂತರದಲ್ಲಿ, ಮಹಾರಾಷ್ಟ್ರಕ್ಕೆ ವಲಸೆ ಹೋಗಿ ಮರಳಿದ ಕಾರ್ಮಿಕರಿಂದ ಇನ್ನೂರರ ಗಡಿಯ ಹತ್ತಿರ ಬಂದಿದೆ. ಮೇ ಹಾಗೂ ಏಪ್ರಿಲ್‌ ತಿಂಗಳಲ್ಲಿ ಪತ್ತೆಯಾದ ಸೋಂಕಿತರಿಗಿಂತ ಮೇ ತಿಂಗಳಲ್ಲಿ ಎರಡು ಪಟ್ಟು ಆಗಿದೆ.

ವಿವಿಧ ನೆಲೆಗಳಿಂದ ಜಿಲ್ಲೆಗೆ ಈವರೆಗೆ ಸುಮಾರು 60 ಸಾವಿರ ಮಂದಿ ಮರಳಿದ್ದಾರೆ. ಹೊರರಾಜ್ಯದಿಂದ ಬಂದ ಸಾವಿರಾರು ಮಂದು ಇನ್ನೂ ಕ್ವಾರಂಟೈನ್‌ ಕೆಂದ್ರಗಳಲ್ಲಿದ್ದಾರೆ. ಪರಿಣಾಮ, ಅಲ್ಲಿಂದಲೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಆರೋಗ್ಯ ಇಲಾಖೆ; ಪರಿಸ್ಥಿತಿ ನಿಯಂತ್ರಣಕ್ಕೆ ತಕ್ಕ ಸಿದ್ಧತೆ ಮಾಡಿಕೊಂಡಿದೆ.

ಹೆಚ್ಚುವರಿ 6 ವೆಂಟಿಲೇಟರ್‌

ಜಿಮ್ಸ್‌ ಹಾಗೂ ಇಎಸ್‌ಐಸಿ ಆಸ್ಪತ್ರೆಗಳಲ್ಲಿ ಈಗಾಗಲೇ 14 ವೆಂಟಿಲೇಟರ್‌ಗಳು ಇದ್ದು, ಸದ್ಯಕ್ಕೆ ಕೊರತೆ ಉಂಟಾಗಿಲ್ಲ. ಆದರೆ, ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಕಾರಣ ಮತ್ತೆ ಆರು ವೆಂಟಿಲೇಟರ್‌ಗಳನ್ನೂ ಆರೋಗ್ಯ ಇಲಾಖೆ ತರಿಸಿಕೊಂಡಿದೆ. ಈಗ ವೆಂಟಿಲೇಟರ್‌ಗಳ ಸಂಖ್ಯೆ 20ಕ್ಕೆ ಏರಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾದರೂ ನಿರ್ವಹಣೆ ಸಾಧ್ಯವಾಗಲಿದೆ ಎನ್ನುತ್ತಾರೆ ಜಿಮ್ಸ್‌ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT