ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ಒಕ್ಕೂಟ ವ್ಯವಸ್ಥೆ ನಾಶ: ಸಿಪಿಎಂ

ಸಿಪಿಎಂ ರಾಜಕೀಯ ಸಮಾವೇಶ: ಕಾಂಗ್ರೆಸ್‌ ಬೆಂಬಲಿಸಲು ನಿರ್ಧಾರ
Published 29 ಏಪ್ರಿಲ್ 2024, 4:13 IST
Last Updated 29 ಏಪ್ರಿಲ್ 2024, 4:13 IST
ಅಕ್ಷರ ಗಾತ್ರ

ಕಲಬುರಗಿ: ‘ಭಾರತದ ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡುತ್ತಿರುವ ಬಿಜೆಪಿ ಕೂಟವನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಬೇಕು’ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಸಿಪಿಎಂ ರಾಜಕೀಯ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕೋಮುವಾದಿ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳನ್ನು ಸೋಲಿಸಬೇಕಿದೆ. ಕಾರ್ಪೊರೇಟ್‌ ಸಂಸ್ಥೆಗಳ ಹಿತಾಸಕ್ತಿ ಕಾಪಾಡಲು ಹಾಗೂ ಕೋಮು ದಂಗೆ ಹಬ್ಬಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಾಂಗಲ್ಯ ಸರ ಪ್ರಸ್ತಾಪಿಸಿದ್ದಾರೆ. ತಾವೇ ಮಾಂಗಲ್ಯ ಕಟ್ಟಿದ ತಮ್ಮ ಪತ್ನಿಗೆ ನ್ಯಾಯ ಕೊಡಲು ಆಗಲಿಲ್ಲ’ ಎಂದು ಟೀಕಿಸಿದರು.

‘ಪುಲ್ವಾಮಾ ದಾಳಿಯಲ್ಲಿ ಸೈನಿಕರ ಪತ್ನಿಯರು ಮಾಂಗಲ್ಯದಿಂದ ವಂಚಿತರಾಗಲು ಯಾರು ಕಾರಣ? ರೈತ ವಿರೋಧಿ ಮಸೂದೆಗಳ ವಿರುದ್ಧದ ಹೋರಾಟದಲ್ಲಿ ಮೃತರಾದ ಸುಮಾರು 750 ರೈತರ ಪತ್ನಿಯರು ಮಾಂಗಲ್ಯದಿಂದ ವಂಚಿತರಾಗಲು ಮೋದಿ ಅವರೇ ಕಾರಣ. ಇದನ್ನು ಮರೆಮಾಚಲು ಸುಳ್ಳುಗಳನ್ನು ಹೇಳುತ್ತಿದ್ದಾರೆ’ ಎಂದರು.

ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ಕೆ.ಪ್ರಕಾಶ ಮಾತನಾಡಿ, ‘ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 111ನೇ ಸ್ಥಾನಕ್ಕೆ ಇಳಿದಿದೆ. ನಿತ್ಯ ಸುಮಾರು 80 ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿವೆ. ದೇಶದ ಶೇ 10ರಷ್ಟು ಜನರ ಬಳಿ ದೇಶದ ಒಟ್ಟು ಆದಾಯದ ಶೇ 77ರಷ್ಟು ಸಂಪತ್ತು ಇದೆ. ಶೇ 50ರಷ್ಟು ಜನರು ಶೇ 3ರಷ್ಟು ಆಸ್ತಿ ಹೊಂದಿದ್ದಾರೆ. ಬಿಜೆಪಿಗರು ಈ ಬಗ್ಗೆ ಮಾತನಾಡದೆ ಜನರಿಗೆ ಸುಳ್ಳುಗಳನ್ನು ಹೇಳುತ್ತಿದ್ದಾರೆ’ ಎಂದು ಕಿಡಿಕಾರಿದರು. 

‘ಮೋದಿ ಅವರು ಬ್ಯಾಂಕ್‌ಗಳಲ್ಲಿ ಶೂನ್ಯ ಬ್ಯಾಲೆನ್ಸ್‌ ಹೆಸರಿನಲ್ಲಿ ಲಕ್ಷಾಂತರ ಖಾತೆಗಳನ್ನು ತೆರಿಸಿದರು. ಆದರೆ, ಅದೇ ಖಾತೆಗಳಿಂದ ₹25 ಸಾವಿರ ಕೋಟಿ ವಸೂಲಿ ಮಾಡಿದ್ದಾರೆ. ಕನಿಷ್ಠ ಬ್ಯಾಲೆನ್ಸ್, ಎಸ್ಎಂಎಸ್ ಚಾರ್ಜ್, ಎಟಿಎಂ ಚಾರ್ಜ್ ನೆಪದಲ್ಲಿ ಹಣ ವಸೂಲಿಗೆ ಇಳಿದಿದ್ದಾರೆ. ಜನರ ಹಣ ವಸೂಲಿಗೆ ನಾನಾ ಹಾದಿಗಳನ್ನು ಕಂಡುಕೊಂಡಿದ್ದಾರೆ’ ಎಂದು ಆರೋಪಿಸಿದರು.

ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಮಾತನಾಡಿ, ‘ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಚುನಾವಣೆಗಳು ನಡೆಯುವುದಿಲ್ಲ. ಸರ್ವಾಧಿಕಾರದ ಮೂಲಕ ದೇಶದ ಚುಕ್ಕಾಣಿ ಹಿಡಿಯುತ್ತದೆ. ಶ್ರಮಿಕರ ಬದುಕಿಗೆ ಅಪಾಯ ಎದುರಾಗಲಿದೆ. ಹೀಗಾಗಿ, ಈ ಬಾರಿ ನಮ್ಮ ಪಕ್ಷವು ಅನೇಕ ದೌರ್ಬಲ್ಯಗಳನ್ನು ಹೊಂದಿರುವ ಕಾಂಗ್ರೆಸ್‌ ಬೆಂಬಲಿಸಲು ನಿರ್ಣಯ ಮಾಡಿದೆ’ ಎಂದು ಹೇಳಿದರು.

ವಿದ್ಯಾರ್ಥಿ ಯುವಜನ ಸಂಘಟನೆಯು ‘ದೇಶ ಉಳಿಸಿ’ ನಾಟಕ ಪ್ರದರ್ಶನ ನೀಡಿತು. ಕ್ರಾಂತಿಕಾರಿ ಗೀತೆಗಳನ್ನು ಹಾಡಲಾಯಿತು.

ಮುಖಂಡರಾದ ಭೀಮಶೆಟ್ಟಿ ಯಂಪಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಎಂ.ಬಿ.ಸಜ್ಜನ್, ಜಾವೇದ್ ಹುಸೇನ್, ಪಾಂಡುರಂಗ ಮಾವಿನಕರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT