ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯು–16 ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿ: ಎನ್‌ವಿಜಿ ವಿರುದ್ಧ ಜಿಸಿಸಿಗೆ ಜಯ

ಕೆಎಸ್‌ಸಿಎ ರಾಯಚೂರು ವಲಯ
Published 20 ಮೇ 2024, 5:37 IST
Last Updated 20 ಮೇ 2024, 5:37 IST
ಅಕ್ಷರ ಗಾತ್ರ

ಕಲಬುರಗಿ: ಶ್ರೀಹರಿ ‍ಪಾಠಕ್‌ (58 ರನ್‌) ಗಳಿಸಿದ ಅರ್ಧ ಶತಕದ ಬಲದಿಂದ ಬೀದರ್‌ನ ಗಜಾನನ ಕ್ರಿಕೆಟ್‌ ಕ್ಲಬ್‌(ಜಿಸಿಸಿ) ತಂಡವು ಕೆಎಸ್‌ಸಿಎ ರಾಯಚೂರು ವಲಯದ 16 ವರ್ಷದೊಳಗಿನವರ ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಗೆದ್ದು ಬೀಗಿತು.

ನಗರದ ಎನ್‌ವಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಎನ್‌ವಿ ಜಿಮ್ಖಾನಾ ಕ್ರಿಕೆಟ್‌ ಕ್ಲಬ್‌(ಎನ್‌ವಿಜಿ) ತಂಡದ ವಿರುದ್ಧ ಐದು ವಿಕೆಟ್‌ಗಳ ಗೆಲುವು ಪಡೆಯಿತು. ಈ ಮೂಲಕ ಎನ್‌ವಿಜಿ ತಂಡವು ಟೂರ್ನಿಯಲ್ಲಿ ಸತತ ಎರಡನೇ ಸೋಲು ಕಂಡಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಎನ್‌ವಿಜಿ ತಂಡವು ಸಿದ್ದಲಿಂಗ ಆರ್‌.(56 ರನ್‌, 4x4, 6x1) ಹಾಗೂ ಪ್ರಜ್ವಲ್ ಕೆ.(62 ರನ್‌, 4x7) ತಲಾ ಅರ್ಧ ಶತಕಗಳ ಬಲದಿಂದ ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್‌ ನಷ್ಟಕ್ಕೆ 274 ರನ್‌ ಕಲೆ ಹಾಕಿತು. ಮನಿಷ್‌ ಆರ್‌.(34 ರನ್), ಮೊಹಮ್ಮದ್ ಮುಸ್ತಫಾ(27 ರನ್‌), ಮಯಾಂಕ್‌ ಎಂ.(24) ತಂಡದ ಮೊತ್ತ ಹೆಚ್ಚಿಸಲು ಕಾಣಿಕೆ ನೀಡಿದರು. ಈ ತಂಡಕ್ಕೆ 29 ವೈಡ್‌ ಸೇರಿದಂತೆ 50 ಇತರೆ ರನ್‌ಗಳು ಹರಿದು ಬಂದವು. ಜಿಸಿಸಿ ಪರವಾಗಿ ಪ್ರತೀಕ್‌(67ಕ್ಕೆ 2) ಹಾಗೂ ವಿವೇಕ (34ಕ್ಕೆ 2) ಉತ್ತಮ ಬೌಲಿಂಗ್ ಮಾಡಿದರು.

275 ರನ್‌ ಗುರಿ ಬೆನ್ನಟ್ಟಿದ ಜಿಸಿಸಿ ತಂಡಕ್ಕೆ ಆರಂಭಿಕ ಆಟಗಾರರಾದ ಶ್ರೀಹರಿ ‍ಪಾಠಕ್‌ ಹಾಗೂ ಮೊಹಮ್ಮದ್ ಫರಾನ್‌ ಉತ್ತಮ ಆರಂಭ ನೀಡಿದರು. ಮಾರ್ಷಲ್‌ ಆರ್‌.,(29 ರನ್‌), ವಿನೀತ್‌ (39 ರನ್‌) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಅಂತಿಮವಾಗಿ ಜಿಸಿಸಿ ತಂಡವು 38.2 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು 276 ರನ್‌ ಗಳಿಸಿ ಗೆದ್ದಿತು. ಈ ತಂಡಕ್ಕೆ 53 ವೈಡ್‌ಗಳು ಸೇರಿದಂತೆ 77 ಇತರೆ ರನ್‌ಗಳು ಹರಿದು ಬಂದವು.

ಎನ್‌ವಿಜಿ ಪರವಾಗಿ ಪ್ರಜ್ವಲ್‌ ಕೆ.(27ಕ್ಕೆ 2) ಹಾಗೂ ಅನುರಾಗ (34ಕ್ಕೆ2) ಉತ್ತಮ ಬೌಲಿಂಗ್‌ ಮಾಡಿದರು.

14 ರನ್‌ಗಳಿಗೆ ಆಲೌಟ್‌: ಟೂರ್ನಿಯ ಶನಿವಾರದ ಮೊದಲ ದಿನದ ಪಂದ್ಯದಲ್ಲಿ ಗ್ಯಾಲಕ್ಸಿ ಕ್ಲಿಕೆಟ್‌ ಕ್ಲಬ್‌ ತಂಡವು 281 ರನ್‌ಗಳಿಂದ ಎನ್‌ವಿ ಜಿಮ್ಖಾನಾ ವಿರುದ್ಧ ಗೆಲುವಿನ ನಗೆ ಬೀರಿತ್ತು.

ಮೊದಲು ಬ್ಯಾಟಿಂಗ್‌ ನಡೆಸಿದ್ದ ಗ್ಯಾಲಕ್ಸಿ ತಂಡವು ನಿಗದಿತ 48.3 ಓವರ್‌ಗಳಲ್ಲಿ 295 ರನ್‌ಗಳಿಗೆ ಆಲೌಟ್‌ ಆಗಿತ್ತು.

296 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಎನ್‌ವಿ ಜಿಮ್ಖಾನಾ ತಂಡವು ಕೇವಲ 14 ರನ್‌ಗಳಿಗೆ ಆಲೌಟ್‌ ಆಗಿತ್ತು.

ಸಂಕ್ಷಿಪ್ತ ಸ್ಕೋರ್‌: ಗ್ಯಾಲಕ್ಸಿ ತಂಡ: 48.3 ಓವರ್‌ಗಳಲ್ಲಿ 295 ರನ್‌( ವರುಣ 93, ಸಾಯಿ ರಾಮ 59, ಯಶ 33; ಸಂಜಯ 43ಕ್ಕೆ 3, ಮನಿಷ್‌ 23ಕ್ಕೆ3, ವಿಶ್ವನಾಥ 36ಕ್ಕೆ 2).

ಎನ್‌ವಿ ಜಿಮ್ಖಾನಾ ತಂಡ: 8.2 ಓವರ್‌ಗಳಲ್ಲಿ 14 ರನ್‌ಗಳಿಗೆ ಆಲೌಟ್‌ (ಮನಿಷ್ 5, ಸಂಜಯ 4, ಮಯಂಕ 2;ಶ್ರೀಕಾಂತ 5ಕ್ಕೆ6, ಸತ್ವಿಕ್‌ 9ಕ್ಕೆ4).

ಪ್ರಜ್ವಲ್ ಕೆ.
ಪ್ರಜ್ವಲ್ ಕೆ.
ಸಿದ್ದಲಿಂಗ ಆರ್‌.
ಸಿದ್ದಲಿಂಗ ಆರ್‌.
ವರುಣ
ವರುಣ
ಸಾಯಿರಾಮ
ಸಾಯಿರಾಮ
ಶ್ರೀಕಾಂತ
ಶ್ರೀಕಾಂತ
ಸತ್ವಿಕ್‌
ಸತ್ವಿಕ್‌

ಮೇ 29ರಂದು ಫೈನಲ್‌ ಪಂದ್ಯ

ಮೇ 18ರಂದು ಆರಂಭವಾಗಿರುವ ಕೆಎಸ್‌ಸಿಎ ರಾಯಚೂರು ವಲಯದ 16 ವರ್ಷದೊಳಗಿನವರ ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿಯಲ್ಲಿ ಏಳು ತಂಡಗಳು ಪಾಲ್ಗೊಂಡಿವೆ. ‘ಎ’ ವಿಭಾಗದಲ್ಲಿ ಮೂರು ತಂಡಗಳಿದ್ದು ತಲಾ ಎರಡು ಪಂದ್ಯಗಳನ್ನು ಆಡಲಿವೆ. ‘ಬಿ’ ವಿಭಾಗದಲ್ಲಿ ನಾಲ್ಕು ತಂಡಗಳಿದ್ದು ತಲಾ ಮೂರು ಪಂದ್ಯಗಳನ್ನು ಆಡಲಿವೆ. ಗೆಲ್ಲುವ ಪ್ರತಿ ತಂಡವು 4 ಪಾಯಿಂಟ್‌ಗಳನ್ನು ಪಡೆಯಲಿದೆ.

ಎರಡೂ ಗುಂಪುಗಳ ಅಗ್ರ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಮೊದಲ ಸೆಮಿಫೈನಲ್‌ನಲ್ಲಿ ‘ಎ’ ಗುಂಪಿನ ಅಗ್ರ ತಂಡವು ‘ಬಿ’ ಗುಂಪಿನ ಎರಡನೇ ಸ್ಥಾನದಲ್ಲಿರುವ ತಂಡದ ವಿರುದ್ಧ ಸೆಣಸಲಿದೆ. ಎರಡನೇ ಸೆಮಿಫೈನಲ್‌ನಲ್ಲಿ ‘ಬಿ’ಗುಂಪಿನ ಅಗ್ರ ತಂಡವು ‘ಎ’ ಗುಂಪಿನ ಎರಡನೇ ಸ್ಥಾನದಲ್ಲಿರುವ ತಂಡದ ವಿರುದ್ಧ ಹೋರಾಡಲಿದೆ. ಇಲ್ಲಿ ಗೆಲ್ಲುವ ಎರಡೂ ತಂಡಗಳು ಮೇ 29ರಂದು ನಡೆಯುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT