ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಗರೇಟ್‌ ತರಲು ಹಣ ಕೇಳಿದ್ದಕ್ಕೆ ಹಲ್ಲೆ

ಸಿಗರೇಟ್ ಖರೀದಿಗೆ ಹಣ ಇಲ್ಲ ಎಂದವನ ತಲೆ ಮೇಲೆ ಕಲ್ಲು ಎತ್ತಿಹಾಕಲು ಮುಂದಾದ ದುಷ್ಕರ್ಮಿ
Published 14 ಮೇ 2024, 9:04 IST
Last Updated 14 ಮೇ 2024, 9:04 IST
ಅಕ್ಷರ ಗಾತ್ರ

ಕಲಬುರಗಿ: ಮನೆಯ ಸಮೀಪದಲ್ಲಿ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಗೆ ಸಿಗರೇಟ್‌ ತರುವಂತೆ ಹೇಳಿದ ಬೈಕ್ ಸವಾರ, ಸಿಗರೇಟ್ ಖರೀದಿಗೆ ಹಣ ಕೇಳಿದಕ್ಕೆ ಆತನ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ ಆರೋಪದಡಿ ಆರ್‌.ಜಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮ ಮಂದಿರ ನಿವಾಸಿ, ವಾಟರ್ ವಾಶ್ ನೌಕರ ಮಲ್ಲಿಕಾರ್ಜುನ ಶರಣಪ್ಪ ಹಲ್ಲೆಗೆ ಒಳಗಾದ ಸಂತ್ರಸ್ತ. ಹಲ್ಲೆ ಮಾಡಿದ ಆರೋಪದಡಿ ವಿಜಯಕುಮಾರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 11ರ ರಾತ್ರಿ ಊಟದ ಬಳಿಕ ಮನೆಯ ಸಮೀಪದ ರಸ್ತೆಯಲ್ಲಿ ಮಲ್ಲಿಕಾರ್ಜುನ ಅವರು ವಾಕಿಂಗ್ ಮಾಡುತ್ತಿದ್ದರು. ಬೈಕ್ ಮೇಲೆ ಬಂದ ವಿಜಯಕುಮಾರ ಎಂಬಾತ ಮಲ್ಲಿಕಾರ್ಜುನನ್ನು ಮಾತಿಗೆ ಎಳೆದು, ಸಿಗರೇಟ್ ತಂದುಕೊಂಡುವಂತೆ ತಾಕೀತು ಮಾಡಿದ್ದಾನೆ. ಹಣ ಕೊಟ್ಟರೆ ತರುವುದಾಗಿ ಸಂತ್ರಸ್ತ ಹೇಳಿದ. ‘ದುಡ್ಡು ಗಿಡ್ಡು ಏನೂ ಇಲ್ಲ. ನೀನೇ ತರಬೇಕು’ ಎಂದ ವಿಜಯಕುಮಾರ ಗದರಿದ್ದಾನೆ.  ‘ನನ್ನ ಬಳಿ ಹಣ ಇಲ್ಲ’ ಎಂದು ವಿಜಯಕುಮಾರ ಹೇಳಿದಾಗ, ಆತನನ್ನು ಅವಾಚ್ಯ ಪದಗಳಿಂದ ಬೈದು, ಕೈ ಮುಷ್ಟಿ ಮಾಡಿ ಜೋರಾಗಿ ಹೊಡೆದು ಗಾಯಗೊಳಿಸಿದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನೆಲಕ್ಕೆ ಕುಸಿದು ಬಿದ್ದರೂ ಸಂತ್ರಸ್ತನನ್ನು ಬಿಡಲಿಲ್ಲ. ಆತನ ಮುಖದ ಮೇಲೆ ಗಾಯಗೊಳಿಸಿದ. ಹಲ್ಲೆ ಮಾಡುವುದನ್ನು ಬಿಡಿಸಲು ಬಂದ ಹಣಮೇಶ ಅವರನ್ನು ನಿಂದಿಸಿ, ಆತನನ್ನು ಹೊಡೆಯಲು ವಿಜಯಕುಮಾರ ಬೆನ್ನು ಹತ್ತಿದ. ತಲೆಯ ಕಲ್ಲು ಎತ್ತಿಹಾಕಲು ಮುಂದಾದಾಗ ಸಂತ್ರಸ್ತನ ಸಹೋದರ ಅಯ್ಯಪ್ಪ ಬಂದು, ಆರೋಪಿಯನ್ನು ತಡೆದ. ಇಬ್ಬರಿಗೂ ಜೀವ ಬೆದರಿಕೆ ಹಾಕಿದ ವಿಜಯಕುಮಾರ, ಅಲ್ಲಿಂದ ಪರಾರಿಯಾದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಡಿತರ ಅಕ್ಕಿ ವಶ:

ಕಾಳಸಂತೆಯಲ್ಲಿ ಮಾರಲು ಮನೆಯಲ್ಲಿ ಸಂಗ್ರಹಿಸಿ ಇರಿಸಿದ್ದ ಪಡಿತರ ಅಕ್ಕಿಯನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ವಶಕ್ಕೆ ಪಡೆದಿದ್ದಾರೆ.

ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿದ ಆರೋಪದಡಿ ಆಹಾರ ನಿರೀಕ್ಷಕಿ ವಿದ್ಯಾಶ್ರೀ ಸಂದೀಪ ಪಾಟೀಲ ಅವರು ನೀಡಿದ ದೂರಿನ ಅನ್ವಯ, ಮನೆಯ ಮಾಲೀಕ ಬಾಬುರಾವ ಚವ್ಹಾಣ್ ಮತ್ತು ಶರಣು ಬಸವರಾಜ ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜೀವ ಗಾಂಧಿ ಕಾಲೊನಿಯ ಸೇವಾಲಾಲ್‌ ಚೌಕ್ ಸಮೀಪದ ಬಾಬುರಾವ್ ಮನೆಯಲ್ಲಿ ಇರಿಸಿದ್ದ ₹9,860 ಮೌಲ್ಯದ ಪಡಿತರ ಅಕ್ಕಿ ಜಪ್ತಿ ಮಾಡಿಕೊಳ್ಳಲಾಗಿದೆ.

ಬಾಳು ಕೊಡುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ:

ಪತ್ನಿ ಕಳೆದುಕೊಂಡ ಮಹಿಳೆಗೆ ಬಾಳು ಕೊಡುವುದಾಗಿ ನಂಬಿಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಎಂ.ಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 ವರ್ಷದ ಸಂತ್ರಸ್ತ ಮಹಿಳೆ ನೀಡಿದ ದೂರಿನ ಅನ್ವಯ, ಬಸವರಾಜ ಶಿವಣ್ಣ ಹಾಗೂ ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಆರೋಪದಡಿ ಬಸವರಾಜ ಪತ್ನಿ ಮತ್ತು ಆತನ ಮಗನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆಯ ಗಂಡ ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದ. ಮಹಿಳೆಗೆ ಮಾಸಾಶನ ಮತ್ತು ಗಂಡನ ಮರಣ ಪ್ರಮಾಣ ಪತ್ರ ಕೊಡಿಸಲು ನೆರವಾದ ಬಸವರಾಜ, ಬಾಳು ಕೊಡುವುದಾಗಿ ಆಕೆಯನ್ನು ನಂಬಿಸಿದ. ಹಲವು ಬಾರಿ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಎಂದು ಹೇಳಿದ್ದಾರೆ.

ಮೇ 10ರಂದು ಬಸವರಾಜ ಅವರ ಪತ್ನಿ ಹಾಗೂ ಆತನ ಮಗ ಸಂತ್ರಸ್ತೆಯ ಮನೆಗೆ ಬಂದು ಆಕೆಯನ್ನು ಎಳೆದಾಡಿದರು. ಜಾತಿ ನಿಂದನೆ ಮಾಡಿ, ಜೀವ ಬೆದರಿಕೆಯೂ ಹಾಕಿದರು. ಬಸವರಾಜ ಅವರು ಮಹಿಳೆಯಿಂದ ಸಾಲವಾಗಿ ಪಡೆದ ₹3.50 ಲಕ್ಷ ವಾಪಸ್ ಸಹ ಕೊಟ್ಟಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT