ಕಲಬುರಗಿ: ‘ಲಿಂಗಾಯತರಿಗೆ ಅಖಂಡ ಚಾರಿತ್ರಿಕ ಪ್ರಜ್ಞೆ ಇದೆ. ಆದ್ದರಿಂದ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಸ್ವಾಮೀಜಿ ಕಲ್ಪಿತ ಪುರಾಣ ಪಾತ್ರವಾದ ಗಣೇಶನ ಪೂಜೆ ನಮ್ಮ ಸಂಸ್ಕೃತಿಯಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆ ಹಿಡಿದುಕೊಂಡು ಸ್ವಾಮೀಜಿಯನ್ನು ಅವಮಾನಿಸಿರುವುದು ಸರಿಯಲ್ಲ. ಇದನ್ನು ಖಂಡಿಸುತ್ತೇವೆ’ ಎಂದು ಚಿಂತಕ ಆರ್.ಕೆ.ಹುಡಗಿ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಿಂಗಾಯತರು ಲಿಂಗವನ್ನು ಬಿಟ್ಟು ಬೇರೆಯದ್ದನ್ನು ಪೂಜಿಸಬಾರದು ಎಂದು ಶರಣರು 12ನೇ ಶತಮಾನದಲ್ಲಿಯೇ ಹೇಳಿದ್ದಾರೆ. ಕಾಯಕ ಸಮಾಜಗಳೂ ಲಿಂಗಾಯತ ಧರ್ಮದ ಭಾಗವಾಗಿವೆ. ಸಾಣೆಹಳ್ಳಿ ಸ್ವಾಮೀಜಿ ಈ ಸಮಾಜಗಳಿಗೆ ಗಣೇಶನ ಪೂಜೆ ಮಾಡಬೇಡಿ ಎಂದು ಕರೆ ನೀಡಿದ್ದಾರೆ. ಇದರಲ್ಲಿ ತಪ್ಪಿಲ್ಲ’ ಎಂದರು.
ಬೌದ್ಧಿಕ ಆಂದೋಲನದ ಸಂದರ್ಭದಲ್ಲಿ ಹೊಸ ತತ್ವ ಪ್ರತಿಪಾದಿಸುವಾಗ ಹಿಂದಿನ ವಿಚಾರಧಾರೆಗಳನ್ನು ವಿಶ್ಲೇಷಿಸಿ ಅವುಗಳಲ್ಲಿಯ ಉತ್ತಮ ವಿಚಾರಗಳನ್ನು ಸ್ವೀಕರಿಸುವ ಹಾಗೂ ಕೆಟ್ಟವುಗಳನ್ನು ನಿರಾಕರಿಸುವ ಕ್ರಿಯೆ ಸಹಜ. ಜನರ ಬದುಕಿಗೆ ಕಂಟಕವಾಗಿದ್ದ ವೇದ, ಆಗಮ ಹಾಗೂ ಪುರಾಣಗಳನ್ನು ಶರಣರು ಟೀಕಿಸಿದ್ದರು. ಇಷ್ಟ ಲಿಂಗದ ತತ್ವವನ್ನು ಬೋಧಿಸಿದ್ದರು. ಅದೇ ಕೆಲಸವನ್ನು ಈಗ ಸಾಣೆಹಳ್ಳಿ ಸ್ವಾಮೀಜಿ ಮಾಡುತ್ತಿದ್ದಾರೆ ಎಂದು ಹೇಳಿದರು.
12ನೇ ಶತಮಾನದಲ್ಲಿ ಬಿಜ್ಜಳನ ಮಗನ ನೇತೃತ್ವದಲ್ಲಿ ಪ್ರತಿಕ್ರಾಂತಿ ಮಾಡಿಸಿ ಶರಣರನ್ನು ಹಿಂಸಿಸಿದ ಬ್ರಾಹ್ಮಣರು ಇಂದು ಬಸವ ಬೆಳಕಿನಲ್ಲಿ ಸಮಾಜಗಳ ಜಾಗೃತಿಗೆ ಶ್ರಮಿಸುತ್ತಿರುವ ಸಾಣೆಹಳ್ಳಿ ಸ್ವಾಮೀಜಿಯ ಬೆನ್ನು ಬಿದ್ದಿದ್ದಾರೆ. ಅಸಹ್ಯಕರವಾಗಿ ಲೇಖನಗಳನ್ನು ಬರೆಯುವ ಮೂಲಕ ಅವರನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಸ್ವಾಮೀಜಿಗಳು ಹೆದರಬೇಕಿಲ್ಲ. ಪ್ರಗತಿಪರ ಸಮಾಜ ಅವರ ಬೆನ್ನಿಗಿದೆ ಎಂದರು.
ಕೆಲ ಜಾತಿಗಳಿಗೆ ಶ್ರೇಷ್ಠತೆಯ ಮನಸ್ಥಿತಿ ಇನ್ನೂ ಹೋಗಿಲ್ಲ. ಶ್ರಮ ಸಂಸ್ಕೃತಿ ನೆಚ್ಚಿಕೊಂಡಿರುವ ಸಮಾಜಗಳ ಹೆಗಲ ಮೇಲೆ ಕುಳಿತು ಸವಾರಿ ಮಾಡಲು ಹವಣಿಸುತ್ತಿವೆ. ಎಲ್ಲರೂ ಜಾಗೃತರಾಗಿದ್ದಾರೆ. ಈಗ ನಿಮ್ಮನ್ನು ಯಾರೂ ಹೆಗಲ ಮೇಲೆ ಕೂಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಸಂಚಾಲಕ ಸಂಗಮೇಶ ಗುಬ್ಬೇವಾಡ ಮಾತನಾಡಿ, ‘ಲಿಂಗಾಯತ ಧರ್ಮದ ಪ್ರತ್ಯೇಕ ಮಾನ್ಯತೆ ಸಂದರ್ಭ ದಲ್ಲಿಯೂ ಕೆಲವರು ಹೋರಾಟಗಾರರನ್ನು ಅವಮಾನಿಸಿದರು. ಎಂ.ಎಂ.ಕಲಬುರ್ಗಿ ಅವರ ಕುರಿತೂ ಕೆಟ್ಟದಾಗಿ ಬರೆದಿದ್ದರು. ಇದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಲಾಗುವುದು’ ಎಂದು ಹೇಳಿದರು.
ಸಾಣೆಹಳ್ಳಿ ಸ್ವಾಮೀಜಿ ನಿರಂತರವಾಗಿ ಸಮಾಜ ಜಾಗೃತಿ ಕಾರ್ಯದಲ್ಲಿ ತೊಡಗಿದ್ದಾರೆ. ನಾಟಕ ತಂಡವೊಂದನ್ನು ಕಟ್ಟಿ ಬಸವಾದಿ ಶರಣರನ್ನು ಮನೆ, ಮನಗಳಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಇವರ ವಿರುದ್ಧ ಟೀಕೆ ಸಲ್ಲ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಎಸ್.ಮಹಾಗಾಂವಕರ್, ರವೀಂದ್ರ ಶಾಬಾದಿ, ದತ್ತಾತ್ರೇಯ, ರವಿ ಸಜ್ಜನ್, ಅಶೋಕ ಗೂಳಿ, ಬಸವರಾಜ, ಶಶಿಕಾಂತ, ಮಹಾಂತೇಶ ಹಾಗೂ ಮಹಾವೀರ ಜೈನ್ ಇದ್ದರು.
ವೈಚಾರಿಕ ಹೇಳಿಕೆ: ಅರ್ಜುನ ಭದ್ರೆ
ಕಲಬುರಗಿ: ‘ಗಣೇಶನ ಪೂಜೆ ನಮ್ಮ ಸಂಸ್ಕೃತಿಯಲ್ಲ ಎನ್ನುವ ಸಾಣೆಹಳ್ಳಿ ಸ್ವಾಮೀಜಿ ಹೇಳಿಕೆ ವೈಚಾರಿಕತೆಯಿಂದ ಕೂಡಿದೆ. ಸ್ವಾಮೀಜಿ ಹೇಳಿಕೆಯನ್ನು ನಮ್ಮ ಸಂಘಟನೆ ಬೆಂಬಲಿಸುತ್ತದೆ’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ (ಕ್ರಾಂತಿಕಾರಿ ಬಣ) ರಾಜ್ಯ ಸಂಚಾಲಕ ಅರ್ಜುನ ಭದ್ರೆ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಶರಣರು ಕಟ್ಟ ಬಯಸಿದ್ದು ಮಂದಿರಗಳನ್ನಲ್ಲ. ಅವರು ಮನಸ್ಸುಗಳನ್ನು ಕಟ್ಟ ಬಯಸಿದ್ದರು. ಈ ಪ್ರಜ್ಞೆ ಎಲ್ಲ ಕ್ಷೇತ್ರಗಳ ಮುಖಂಡರಿಗೂ ಬರಬೇಕಿದೆ. ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಕೆಲಸ ನಡೆಯಬೇಕಿದೆ. ಆ ಕೆಲಸವನ್ನು ಸಾಣೆಹಳ್ಳಿ ಸ್ವಾಮೀಜಿ ಮಾಡುತ್ತಿದ್ದಾರೆ’ ಎಂದರು. ಇಂದು ಮೌಲ್ಯಗಳ ಅಪಮೌಲ್ಯೀಕರಣ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಸವಾದಿ ಶರಣರ ಸಂದೇಶಗಳನ್ನು ಯುವಪೀಳಿಗೆಗೆ ತಲುಪಿಸುವ ಕೆಲಸ ಮಾಡಬೇಕು. ಸಾಣೆಹಳ್ಳಿ ಶ್ರೀಗಳು ಈ ಕೆಲಸವನ್ನು 2019 ರಿಂದ ಮತ್ತೆ ಕಲ್ಯಾಣ ಅಭಿಯಾನದ ಮೂಲಕ ಮಾಡುತ್ತಿದ್ದಾರೆ. ಅವರು ಶರಣರ ವಿಚಾರಗಳನ್ನು ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳಿಗೂ ತಲುಪಿಸಿದ್ದಾರೆ ಎಂದು ಹೇಳಿದರು. ‘ಗಣೇಶನ ಪೂಜೆ ನಮ್ಮ ಸಂಸ್ಕೃತಿಯಲ್ಲ. ಪೂಜೆ ಮಾಡಬೇಡಿ ಎಂದು ಸ್ವಾಮೀಜಿ ಲಿಂಗಾಯತ ಸಮಾಜಕ್ಕೆ ಹೇಳಿದ್ದಾರೆ. ಬೌದ್ಧ ಧರ್ಮದಲ್ಲಿ 22 ಪ್ರತಿಜ್ಞೆಗಳಿವೆ. ಬೌದ್ಧ ಧರ್ಮ ಸ್ವೀಕಾರ ಮಾಡುವಾಗ ಅವುಗಳನ್ನು ಬೋಧಿಸಲಾಗುತ್ತದೆ. ಅವುಗಳಲ್ಲಿ ಗಣಪತಿ ಲಕ್ಷ್ಮಿ ದೇವಿ ಹಾಗೂ ದೇವರನ್ನು ಪೂಜೆ ಮಾಡುವುದಿಲ್ಲ ಎನ್ನುವೂದು ಒಂದು. ಆದ್ದರಿಂದ ಹೇಳಿಕೆ ಹಿಡಿದುಕೊಂಡು ಸ್ವಾಮೀಜಿಯನ್ನು ಟೀಕಿಸುವುದು ಸಲ್ಲ’ ಎಂದರು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಖನ್ನಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.