ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ | ತೇವಾಂಶದ ಕೊರತೆ: ಮೊಳಕೆ ಬಾರದ ಜೋಳ, ಹತ್ತಿಗೂ ಕುತ್ತು!

Published 17 ನವೆಂಬರ್ 2023, 4:57 IST
Last Updated 17 ನವೆಂಬರ್ 2023, 4:57 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನಲ್ಲಿ ತೇವಾಂಶದ ಕೊರತೆಯಿಂದ ಹತ್ತಿ ಬೆಳೆ ಒಣಗುತ್ತಿದ್ದು ಬೆಳೆಗಾರರಿಗೆ ತೀವ್ರ ನಷ್ಟ ಉಂಟಾಗಿದೆ.
ಹತ್ತಿ ಬೇಸಾಯ ಕೈಬಿಟ್ಟಿದ್ದ ತಾಲ್ಲೂಕಿನ ರೈತರು, ಕಳೆದ ಕೆಲವು ವರ್ಷಗಳಿಂದ ಮತ್ತೆ ಹತ್ತಿ ಬೆಳೆಯಲು ಪ್ರಾರಂಭಿಸಿದ್ದಾರೆ. ಹೂಬಿಟ್ಟು ಕಾಯಿ ಬಲಗೊಳ್ಳುವ ಮೊದಲೇ ತೇವಾಂಶದ ಕೊರತೆ ಉಂಟಾಗಿದ್ದರಿಂದ ಕಾಯಿಗಳ ಗಾತ್ರ ಕುಸಿದಿದೆ. ಒಂದೆರಡು ಹತ್ತಿ ಕಾಯಿಯಿಂದ ಹತ್ತಿ ಬಿಡಿಸಿದರೆ ಬೊಗಸೆ ತುಂಬುತ್ತಿತ್ತು. ಆದರೆ ಪ್ರಸಕ್ತ ವರ್ಷ ಹತ್ತಾರು ಕಾಯಿಗಳಿಂದ ಹತ್ತಿ ಬಿಡಿಸಿದರೂ ಬೊಗಸೆ ತುಂಬುತ್ತಿಲ್ಲ.

ತಾಲ್ಲೂಕಿನಲ್ಲಿ ಸುಲೇಪೇಟ ಕಂದಾಯ ಹೋಬಳಿಯಲ್ಲಿ ಹತ್ತಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಇಲ್ಲಿ ಒಂದು ಸಾವಿರ ಹೆಕ್ಟೇರ್‌ಗಿಂತಲೂ ಅಧಿಕ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗುತ್ತಿದೆ. ಆದರೆ ಮಳೆಯ ಕೊರತೆಯಿಂದ ಹತ್ತಿ ಒಣಗುತ್ತಿದೆ.

ತಾಲ್ಲೂಕಿನ ನಿಡಗುಂದಾ, ಕರ್ಚಖೇಡ್, ಚತ್ರಸಾಲ, ವೆಂಕಟಾಪುರ, ಜಟ್ಟೂರು, ಹಲಕೋಡಾ, ಗಣಾಪುರ, ಭಕ್ತಂಪಳ್ಳಿ, ಪೊತಂಗಲ, ಬುರುಗಪಳ್ಳಿ, ಬೆಡಕಪಳ್ಳಿ, ಇರಗಪಳ್ಳಿ, ರಾಮತೀರ್ಥ, ಗರಗಪಳ್ಳಿ, ಶಾದಿಪುರ, ವೆಂಕಟಾಪುರ, ಸಂಗಾಪುರ ಮತ್ತಿತರ ಕಡೆಗಳಲ್ಲಿ ಹತ್ತಿ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಮಳೆಯ ಕೊರತೆಯಿಂದ ತಾಲ್ಲೂಕಿನಲ್ಲಿ ಜೋಳ ಬಿತ್ತನೆ ನಡೆಸಿದರೂ ಮೊಳಕೆ ಸರಿಯಾಗಿ ಬಂದಿಲ್ಲ. ತಗ್ಗು ಪ್ರದೇಶದಲ್ಲಿ ಮಾತ್ರ ಜೋಳದ ಮೊಳಕೆ ಕಾಣಿಸಿದರೆ, ಸ್ವಲ್ಪ ಎತ್ತರವಿರುವ ಒಡ್ಡು ಪ್ರದೇಶದ ಹೊಲಗಳಲ್ಲಿ ಜೋಳದ ಮೊಳಕೆ ಬಂದಿಲ್ಲ. ಇದರಿಂದ ರೈತರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಉತ್ತರದ ಕರ್ನಾಟಕದ ಪ್ರಮುಖ ಖಾದ್ಯ ಎನಿಸಿದ ರೊಟ್ಟಿಗೆ ಜೋಳ ಬೇಕೆ ಬೇಕು. ಆದರೆ ಜೋಳ ಮಾತ್ರ ಮೊಳಕೆ ಬಾರದೇ ರೈತರು ಕಂಗಾಲಾಗುವಂತೆ ಮಾಡಿದೆ.

ಎರಡು ಬಾರಿ ಹರಗಿ ಬಿತ್ತಿದರೂ ಮೊಳಕೆ ಬಂದಿಲ್ಲ ಎನ್ನುತ್ತಾರೆ ಪಸ್ತಪುರದ ಕೃಷಿಕರಾದ ನಾಗಣ್ಣ ದೇಸಾಯಿ ಮತ್ತು ರಾಮರಾವ್ ನಾವದಗಿ. ತಾಲ್ಲೂಕಿನ ಚತ್ರಸಾಲ, ಬುರಗಪಳ್ಳಿ, ಇರಗಪಳ್ಳಿ, ಭಕ್ತಂಪಳ್ಳಿ ಮತ್ತು ಪಸ್ತಪುರ ಮೊದಲಾದ ಕಡೆಗಳಲ್ಲಿ ಜೋಳದ ಮೊಳಕೆ ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ.

[object Object]
ಚಿಂಚೋಳಿ ತಾಲ್ಲೂಕು ಬುರುಗಪಳ್ಳಿ ಬಳಿ ಹತ್ತಿ ಬೆಳೆ ತೇವಾಂಶದ ಕೊರತೆಯಿಂದ ಒಣಗುತ್ತಿರುವುದು
[object Object]
ವಿಶ್ವನಾಥರಡ್ಡಿ ಪಾಟೀಲ ಪೊತಂಗಲ್ ಹತ್ತಿ ಬೆಳೆಗಾರರು
[object Object]
ಶಿವನಾಗೇಂದ್ರಪ್ಪ ಪಾಟೀಲ ಹಲಕೋಡಾ ಹತ್ತಿ ಬೆಳೆಗಾರ
[object Object]
ವೀರಶೆಟ್ಟಿ ರಾಠೋಡ್ ಸಹಾಯಕ ಕೃಷಿ ನಿರ್ದೆಶಕರು ಚಿಂಚೋಳಿ

ಕಳೆದ ವಾರದ ಸುರಿದ ಮಳೆಯಿಂದ ಹತ್ತಿ ಕಪ್ಪಾಗಿದೆ. ಹತ್ತಿ ಬಿಡಿಸಲು ಪ್ರತಿಕೆಜಿಗೆ ₹10 ಕೂಲಿ ನೀಡಿ ಕಾರ್ಮಿಕರಿಂದ ಹತ್ತಿ ಬಿಡಿಸಲಾಗುತ್ತಿದೆ. ಇಳುವರಿಯೂ ಕುಸಿದಿದೆ

- ವಿಶ್ವನಾಥರಡ್ಡಿ ಪಾಟೀಲ ಪೊತಂಗಲ್ ಹತ್ತಿ ಬೆಳೆಗಾರರು

ಹತ್ತಿ ಬೆಳೆ ಕಳೆದ ವರ್ಷ ಪ್ರತಿ ಎಕರೆಗೆ 10ರಿಂದ 12 ಕ್ವಿಂಟಲ್ ಇಳುವರಿ ಬಂದರೆ ಪ್ರಸಕ್ತ ವರ್ಷ 6 ರಿಂದ 8 ಕ್ವಿಂಟಲ್ ಬರುತ್ತಿದೆ. ಮಳೆಯ ಏರುಪೇರಿನಿಂದ ರೈತರು ನಷ್ಟ ಎದುರಿಸುವಂತಾಗಿದೆ

– ಶಿವನಾಗೇಂದ್ರಪ್ಪ ಪಾಟೀಲ ಹಲಕೋಡಾ ಹತ್ತಿ ಬೆಳೆಗಾರ

ತಾಲ್ಲೂಕಿನಲ್ಲಿ ಸುಲೇಪೇಟ ಹೋಬಳಿ 1254 ಹೆಕ್ಟೇರ್‌ ಚಿಂಚೋಳಿ ಹೋಬಳಿ 331 ಹಾಗೂ ಕೋಡ್ಲಿ ಐನಾಪುರ ಹೋಬಳಿ 85 ಸೇರಿ ಒಟ್ಟು 1592 ಹೆಕ್ಟೇರ್ ಪ್ರದೇಶದಲ್ಲಿ ಹತ್ತ ಬೆಳೆಯಲಾಗಿದೆ

–ವೀರಶೆಟ್ಟಿ ರಾಠೋಡ್ ಸಹಾಯಕ ಕೃಷಿ ನಿರ್ದೆಶಕರು ಚಿಂಚೋಳಿ

ಹತ್ತಿಗೆ ಮಾರುಕಟ್ಟೆಯೇ ಇಲ್ಲ; ಕುಸಿದ ದರ

ತಾಲ್ಲೂಕಿನಲ್ಲಿ ಹತ್ತಿ ಮಾರಾಟಕ್ಕೆ ಮಾರುಕಟ್ಟೆಯಿಲ್ಲ. ತೆಲಂಗಾಣದ ತಾಂಡೂರು ಬಳಿ ಲಕ್ಷಣಾಪುರ ಬಳಿಯ ಮಿಲ್ ಅನ್ನು ಇಲ್ಲಿನ ರೈತರು ಅವಲಂಬಿಸಿದ್ದಾರೆ. ಟ್ರ್ಯಾಕ್ಟರ್‌ ಲಾರಿ ಜೀಪ್‌ಗಳಲ್ಲಿ ಹತ್ತಿಯನ್ನು ಮಿಲ್‌ಗೆ ಮಾರಾಟಕ್ಕೆ ಒಯ್ದಾಗ ಅವರು ಕೇಳಿದ ಮೊತ್ತಕ್ಕೆ ಮಾರಾಟ ಮಾಡುವುದು ಅನಿವಾರ್ಯವಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹7200 ದರವಿದೆ. ಕಳೆದ ವರ್ಷ ₹10ಸಾವಿರಕ್ಕೆ ಕ್ವಿಂಟಲ್ ಮಾರಾಟ ಮಾಡಲಾಗಿತ್ತು ಎನ್ನುತ್ತಾರೆ ಹಲಕೋಡಾದ ರೈತ ಶಿವನಾಗೇಂದ್ರಪ್ಪ ಪಾಟೀಲ. ತೆಲಂಗಾಣದಲ್ಲಿ ಚುನಾವಣೆಯಿರುವುದರಿಂದ ರೈತರಿಗೆ ಕೈಗೆ ಹಣ ನೀಡದೇ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT