ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಯುಕೆ ಘಟಿಕೋತ್ಸವ: ಈ ಬಾರಿ ಯಾರಿಗೂ ಇಲ್ಲ ಗೌರವ ಡಾಕ್ಟರೇಟ್‌

Published 22 ಫೆಬ್ರುವರಿ 2024, 4:49 IST
Last Updated 22 ಫೆಬ್ರುವರಿ 2024, 4:49 IST
ಅಕ್ಷರ ಗಾತ್ರ

ಕಲಬುರಗಿ: ‘ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಫೆಬ್ರುವರಿ 23 ರಂದು ಏಳನೇ ಘಟಿಕೋತ್ಸವ ನಡೆಯಲಿದೆ’ ಎಂದು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ‘ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ವಿಶ್ವವಿದ್ಯಾಲಯದ ಕುಲಾಧಿಪತಿ ವಿಜಯ ಕೇಶವ ಗೋಖಲೆ ಅಧ್ಯಕ್ಷತೆ ವಹಿಸುವರು. ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಕುಲಸಚಿವ ಆರ್‌.ಆರ್‌.ಬಿರಾದಾರ ಹಾಗೂ ಪರೀಕ್ಷಾ ನಿಯಂತ್ರಣಾಧಿಕಾರಿ ಕೋಟಾ ಸಾಯಿಕೃಷ್ಣ ಉಪಸ್ಥಿತರಿರುವರು’ ಎಂದು ಹೇಳಿದರು.

ಈ ಘಟಿಕೋತ್ಸವದಲ್ಲಿ 2022ರ ಡಿಸೆಂಬರ್ ಅಥವಾ ಅದಕ್ಕೂ ಮೊದಲು ಅರ್ಹತೆ ಪಡೆದಿರುವ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ, ಎಂ.ಫಿಲ್, ಪಿಎಚ್‌.ಡಿ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. 

ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ಪಡೆಯಲು 696 ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 296 ವಿದ್ಯಾರ್ಥಿಗಳು ಸ್ನಾತಕ ಪದವಿ ಪಡೆಯುತ್ತಿದ್ದಾರೆ. 347 ವಿದ್ಯಾರ್ಥಿಗಳು ಸ್ನಾತಕೋತ್ತರ, ನಾಲ್ವರು ಎಂ.ಫಿಲ್ ಹಾಗೂ 49 ವಿದ್ಯಾರ್ಥಿಗಳು ಪಿಎಚ್‌.ಡಿ ಪದವಿ ಪಡೆಯಲಿದ್ದಾರೆ ಎಂದು ತಿಳಿಸಿದರು. 

ಒಬ್ಬ ವಿದ್ಯಾರ್ಥಿಗೆ ಒಂದು ಚಿನ್ನದ ಪದಕವನ್ನು ಮಾತ್ರ ನೀಡಲಾಗುತ್ತದೆ. ಘಟಿಕೋತ್ಸವದಲ್ಲಿ ಒಟ್ಟು 42 ಚಿನ್ನದ ಪದಕಗಳನ್ನು ನೀಡಲಾಗುತ್ತಿದೆ. ಅದರಲ್ಲಿ 29 ಸ್ನಾತಕೋತ್ತರ, 12 ಸ್ನಾತಕ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಎಂ.ಟೆಕ್‌ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕೋರ್ಸ್‌ನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ‘ಪ್ರೊ.ಎ.ಎಂ.ಪಠಾಣ್’ ಚಿನ್ನದ ಪದಕ ನೀಡಲಾಗುತ್ತದೆ. ಅಲ್ಲದೆ, ಇದೇ ವಿದ್ಯಾರ್ಥಿ ವಿಭಾಗದಿಂದಲೂ ಒಂದು ಚಿನ್ನದ ಪದಕ ಪಡೆಯಲಿದ್ದಾರೆ ಎಂದು ಹೇಳಿದರು.

‘ಗೌರವ ಡಾಕ್ಟರೇಟ್ ನೀಡಲು ರಾಷ್ಟ್ರಪತಿಗಳಿಂದ ಅನುಮತಿ ಪಡೆಯಬೇಕು. ಆದರೆ, ಅವರು ವಿದೇಶ ಪ್ರವಾಸದಲ್ಲಿದ್ದು, ನಮಗೆ ಹೆಸರುಗಳನ್ನು ಶಿಫಾರಸು ಮಾಡಿಲ್ಲ. ಹೀಗಾಗಿ ಘಟಿಕೋತ್ಸವದಲ್ಲಿ ಈ ಬಾರಿ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡುತ್ತಿಲ್ಲ’ ಎಂದರು.

ಕುಲಸಚಿವ ಆರ್‌.ಆರ್‌.ಬಿರಾದಾರ, ಪರೀಕ್ಷಾ ನಿಯಂತ್ರಣಾಧಿಕಾರಿ ಕೋಟಾ ಸಾಯಿಕೃಷ್ಣ, ಘಟಿಕೋತ್ಸವದ ಸಮನ್ವಯಾಧಿಕಾರಿ ಮೊಹಮ್ಮದ್‌ ಜೋಹೆರ್ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಗಣಪತಿ ಸಿನ್ನೂರ್ ಉಪಸ್ಥಿತರಿದ್ದರು. 

‘ಸರಸ್ವತಿ ಪೂಜೆ: ವಿವಾದ ಸಲ್ಲ’

ವಿಶ್ವವಿದ್ಯಾಲಯದ ಸರಸ್ವತಿ ಪೂಜೆ ವಿವಾದದ ಕುರಿತು ಪ್ರತಿಕ್ರಿಯಿಸಿದ ಪ್ರೊ.ಬಟ್ಟು ಸತ್ಯನಾರಾಯಣ ‘ದೇಶದಲ್ಲಿ ಎಲ್ಲರಿಗೂ ಧಾರ್ಮಿಕ ಹಕ್ಕುಗಳಿವೆ. ಮೊದಲಿನಿಂದಲೂ ಸರಸ್ವತಿ ಪೂಜೆ ಮಾಡಿಕೊಂಡು ಬರಲಾಗುತ್ತಿದೆ. ಯಾರ ಧಾರ್ಮಿಕ ಆಚರಣೆಗಳಿಗೂ ಅಡ್ಡಿಪಡಿಸಬಾರದು ಎನ್ನುವ ಕಾರಣಕ್ಕೆ ಪೂಜೆಯನ್ನು ತಡೆಯಲು ಹೋಗಿಲ್ಲ’ ಎಂದು ಪ್ರೊ.ಬಟ್ಟು ಸತ್ಯನಾರಾಯಣ ತಿಳಿಸಿದರು. ‘ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ರಾಜ್ಯದ ಏಕೈಕ ಕೇಂದ್ರೀಯ ವಿಶ್ವವಿದ್ಯಾಲಯ ಇದಾಗಿದೆ. ಜೀವನ ಹಾಳಾಗಬಾರದು ಎನ್ನುವ ಕಾರಣಕ್ಕೆ ವಿವಾದಕ್ಕೆ ಕಾರಣರಾದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ’ ಎಂದು ಕುಲಸಚಿವ ಆರ್‌.ಆರ್.ಬಿರಾದಾರ ಹೇಳಿದರು.

‘ಕೊನೆ ಕ್ಷಣದಲ್ಲಿ ಕಾರ್ಯಕ್ರಮ ನಿಗದಿ’

ಕಟ್ಟಡ ಉದ್ಘಾಟನೆಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಲಪತಿ ‘ಕೇಂದ್ರ ಶಿಕ್ಷಣ ಇಲಾಖೆ ಕಾಲ ಕಾಲಕ್ಕೆ ಕಟ್ಟಡಗಳ ಪ್ರಗತಿ ಪರಿಶೀಲಿಸುತ್ತದೆ. ಹಾಗೆ ಪರಿಶೀಲಿಸಿ ಕೊನೆ ಕ್ಷಣದಲ್ಲಿ ಕಾರ್ಯಕ್ರಮ ನಿಗದಿ ಮಾಡಿ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ಕಟ್ಟಡಗಳನ್ನು ಉದ್ಘಾಟಿಸಲಿದ್ದಾರೆ ಎಂದು ನಮಗೆ ಮಾಹಿತಿ ನೀಡಲಾಯಿತು. ಕಾರಣ ಸ್ಥಳೀಯ ಸಂಸದರನ್ನು ಮಾತ್ರ ಆಹ್ವಾನಿಸಲಾಗಿತ್ತು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT