ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಆದಿತ್ಯನಾಥ ಸರ್ಕಾರ ವಜಾಕ್ಕೆ ಒತ್ತಾಯಿಸಿ ಪ್ರತಿಭಟನೆ

Last Updated 6 ಅಕ್ಟೋಬರ್ 2020, 2:31 IST
ಅಕ್ಷರ ಗಾತ್ರ

ಕಲಬುರ್ಗಿ: ಉತ್ತರ ಪ್ರದೇಶದಲ್ಲಿ ದಲಿತ ಯುವತಿಯರ ಅತ್ಯಾಚಾರ ಮತ್ತು ಹತ್ಯೆಯನ್ನು ತಡೆಯಲು ವಿಫಲರಾದ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದಬಿಜೆಪಿ ಸರ್ಕಾರವನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯಿತು.

ಇಷ್ಟೆಲ್ಲ ನಡೆಯುತ್ತಿದ್ದರೂ ಯೋಗಿ ಸರ್ಕಾರ ಕಂಡೂ ಕಾಣದಂತೆ ಸುಮ್ಮನಿದೆ. ನಮ್ಮ ಸರ್ಕಾರ ಇರುವುದು ಗೋವುಗಳ ರಕ್ಷಣೆಗೇ ಹೊರತು ಮಹಿಳೆಯರ ಸಂರಕ್ಷಣೆಗಲ್ಲ ಎಂದು ಅಲ್ಲಿನ ಮುಖ್ಯಮಂತ್ರಿ ಬೇಜವಾಬ್ದಾರಿಯುತ ಹೇಳಿಕೆ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹಾಥರಸ್ ಜಿಲ್ಲೆಯ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಸೇರಿದ 19 ವರ್ಷದ ಯುವತಿಯನ್ನು ಠಾಕೂರ್ ಎಂಬ ಮೇಲ್ಜಾತಿಯ ನಾಲ್ವರು ಯುವಕರು ಅತ್ಯಾಚಾರ ಎಸಗಿ ನಾಲಿಗೆ ಕತ್ತರಿಸಿದ್ದಾರೆ. ಈ ತಪ್ಪನ್ನು ಒಪ್ಪಿಕೊಳ್ಳುವ ಬದಲು ಆದಿತ್ಯನಾಥ ಸರ್ಕಾರ ಅತ್ಯಾಚಾರ ನಡೆದೇ ಇಲ್ಲ ಎಂದು ಮೊಂಡ ವಾದ ಮಾಡುತ್ತಿದೆ. ಈ ಬಗ್ಗೆ ಎಫ್‌ಎಸ್‌ಎಲ್‌ ವರದಿ ಬಂದಿದ್ದು, ಈಗಲಾದರೂ ಸತ್ಯವನ್ನು ಒಪ್ಪಿಕೊಂಡು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮೃತಪಟ್ಟ ಯುವತಿ ಕುಟುಂಬಕ್ಕೆ ₹ 50 ಲಕ್ಷ ಪರಿಹಾರ ನೀಡಬೇಕು. ಅವರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಆರೋಪಿಗಳಿಗೆ ಮರಣ ದಂಡನೆ ವಿಧಿಸಲು ನೆರವಾಗುವಂತೆ ಸೂಕ್ತ ಸಾಕ್ಷ್ಯಗಳನ್ನು ಒದಗಿಸಬೇಕು. ಆರೋಪಿಗಳಿಗೆ ರಕ್ಷಣೆ ನೀಡಿದ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದರು.

ಸಮನ್ವಯ ಸಮಿತಿ ಸಂಚಾಲಕರಾದ ಭೀಮರಾವ ಟಿ.ಟಿ., ಗುರುಶಾಂತ ಪಟ್ಟೇದಾರ, ಬಸಣ್ಣ ಸಿಂಗೆ, ನಂದಕುಮಾರ ಪಾಟೀಲ, ಶ್ಯಾಮ ನಾಟಿಕರ, ಮಲ್ಲಿಕಾರ್ಜುನ ಗಾಜರೆ, ಕಾಶಿರಾಯ ನಂದೂರಕರ, ಯಲ್ಲಪ್ಪ ನಾಯಿಕೋಡಿ, ಮೈತ್ರಿ ರೇಣುಕಾ ಸಿಂಗೆ, ಪರಮೇಶ್ವರ ಖಾನಾಪುರ, ಎಸ್‌.ಎಸ್‌.ತವಡೆ, ದಿಗಂಬರ ಬೆಳಮಗಿ, ಮಲ್ಲಪ್ಪ ಹೊಸಮನಿ ಇತರರು ಇದ್ದರು.

ಡಾ.ಅಂಬೇಡ್ಕರ್ ಜನಪರ ವೇದಿಕೆ: ಹಾಥರಸ್‌ನ ಯುವತಿಯ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಡಾ.ಬಿ.ಆರ್.ಅಂಬೇಡ್ಕರ್ ಜನಪರ ವೇದಿಕೆ ಸದಸ್ಯರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಯುವತಿಯರಿಗೆ ರಕ್ಷಣೆ ನೀಡಬೇಕಾದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಇಡೀ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿರುವುದು ಅತ್ಯಂತ ಹೇಯಕೃತ್ಯವಾಗಿದೆ ಎಂದರು.

ಅಲ್ಲದೇ, ಉತ್ತರ ಪ್ರದೇಶದ ಶಹಾಜಹಾನ್ ‍ಪುರ, ಗೋರಖಪುರ ಜಿಲ್ಲೆಗಳಲ್ಲಿ, ರಾಜಸ್ಥಾನ, ಗುಜರಾತ್, ಕರ್ನಾಟಕ, ಬಿಹಾರ, ಮಧ್ಯಪ್ರದೇಶ ರಾಜ್ಯಗಳಲ್ಲಿಯೂ ನಿರಂತರವಾಗಿ ಅತ್ಯಾಚಾರಗಳು, ಕೊಲೆ ಪ್ರಕರಣಗಳು ನಡೆಯುತ್ತಿರುವುದನ್ನು ಗಮನಿಸಿದರೆ ಈ ದೇಶದಲ್ಲಿ ಬಡವರಿಗೆ, ಹಿಂದುಳಿದವರಿಗೆ ಮತ್ತು ದಲಿತ ಹೆಣ್ಣುಮಕ್ಕಳಿಗೆ ರಕ್ಷಣೆ ನೀಡುವಲ್ಲಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾದಂತಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ವೇದಿಕೆ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಎಂ. ಕಾಂಬಳೆ, ಜಿಲ್ಲಾ ಉಪಾಧ್ಯಕ್ಷ ಶಿವಶರಣಪ್ಪ ಬಿ., ಪ್ರಧಾನ ಕಾರ್ಯದರ್ಶಿ ಜ್ಞಾನಮಿತ್ರ ಭೈರಾಮಡಗಿ, ಖಜಾಂಚಿ ಉತ್ತಮ ಕಾಂಬಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT