ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಧರ್ಮ, ರಾಷ್ಟ್ರೀಯತೆ ಹೆಸರಲ್ಲಿ ದಲಿತರಿಗೆ ಅಪಮಾನ: ಪೋತೆ

Published : 19 ಆಗಸ್ಟ್ 2024, 3:27 IST
Last Updated : 19 ಆಗಸ್ಟ್ 2024, 3:27 IST
ಫಾಲೋ ಮಾಡಿ
Comments

ಕಲಬುರಗಿ: ‘ಕಳೆದ ಒಂದು ದಶಕದಿಂದ ಧರ್ಮ ಮತ್ತು ರಾಷ್ಟ್ರೀಯತೆ ಹೆಸರಿನಲ್ಲಿ ದಲಿತರಿಗೆ ಅಪಮಾನ ಮಾಡುತ್ತಿದ್ದರು ನಾವೆಲ್ಲರೂ ಮೌನವಾಗಿದ್ದೇವೆ. ಕೆನೆಪದರ ಮತ್ತೆ ಪ್ರಸ್ತಾಪಿಸುತ್ತಿರುವುದು ನೋವಾಗುತ್ತಿದ್ದು, ದಲಿತ ಸಮುದಾಯ ತೋಳವಾಗಿ ದಾಳಿ ಮಾಡಬೇಕಿದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಮುಖ್ಯಸ್ಥ ಪ್ರೊ. ಎಚ್‌.ಟಿ. ಪೋತೆ ಹೇಳಿದರು.

ಇಲ್ಲಿನ ವಿಶ್ವೇಶ್ವರಯ್ಯ ಭವನದಲ್ಲಿ ಪರೋಪಕಾರಿ ಡಾ. ಶಿವರಾಮ ಮೋಘಾ ವೇದಿಕೆಯಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಆಯೋಜಿಸಿದ್ದ ಜಿಲ್ಲಾ ಪ್ರಥಮ ದಲಿತ ಚಳವಳಿ ಸಾಹಿತ್ಯ ಸಮ್ಮೇಳನದ ‘ಸಮ್ಮೇಳನಾಧ್ಯಕ್ಷರ ಬದುಕು ಮತ್ತು ಚಳವಳಿ’ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ನಮ್ಮ ಹಕ್ಕುಗಳನ್ನು ಕಸಿದುಕೊಂಡು, ಸಂವಿಧಾನ ಬದಲಾಯಿಸುವವರ ಜತೆಗೆ ಸೌಜನ್ಯದಿಂದ ಸುಮ್ಮನೆ ಕುಳಿತಿದ್ದೇವೆ. ಕಾಸಿನ ದಾರ ಕಟ್ಟಿಕೊಂಡು, ಶಾಲು ಹಾಕಿಕೊಂಡು ಓಡಾಡುತ್ತಿದ್ದೇವೆ. ತೋಳವೇ ಕುರಿ ಗುಂಪಿನ ಮಾಲೀಕ ಆಗುತ್ತಿದ್ದು, ಯಾವಾಗ ಕತ್ತರಿಸಿ ತಿನ್ನುತ್ತದೆಯೋ ಗೊತ್ತಿಲ್ಲ. ಆದರೂ ಅವರಿಗೆ ವೋಟ್ ಹಾಕಿ, ಗೆಲ್ಲಿಸಿ ಸಂವಿಧಾನ ತೆಗೆಯಲು ಅವಕಾಶ ಮಾಡಿಕೊಡುತ್ತಿದ್ದೇವೆ’ ಎಂದರು.

‘ಕೆನೆಪದರ ಮೀಸಲಾತಿ ಪ್ರಸ್ತಾಪವಾಗುತ್ತಿದ್ದರೂ ಲಕ್ಷಗಟ್ಟಲೆ ಸಂಬಳ ಪಡೆಯುವ ದಲಿತ ಸರ್ಕಾರಿ ನೌಕರರು ಬಾಯಿ ಬಿಡುತ್ತಿಲ್ಲ. ಒಮ್ಮೆ ಮೀಸಲಾತಿ ಹೋದರೆ ಅದರ ಮೌಲ್ಯ ಏನು ಎಂಬುದು ಗೊತ್ತಾಗುತ್ತದೆ. ಯಾರ ಜತೆಗೆ ನಿಲ್ಲಬೇಕು ಎಂಬುದು ಸಹ ಈಗ ಮುಖ್ಯವಾಗಿದೆ’ ಎಂದು ಎಚ್ಚರಿಸಿದರು.

‘ಬಾಲ್ಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಎದುರಿಸಿದ್ದ ಅಪಮಾನಗಳನ್ನು ಡಿ.ಜಿ. ಸಾಗರ ಅವರು ಶಾಲಾ ದಿನಗಳಲ್ಲಿ ಎದುರಿಸಿದ್ದರು. ಹೀಗಾಗಿ, ಬಾಲ್ಯದಲ್ಲಿಯೇ ಸ್ವಗ್ರಾಮ ನರೋಣವನ್ನು ತೊರೆದು ಹೋರಾಟದ ಹಾದಿಯನ್ನು ಆಯ್ದುಕೊಂಡರು. ಎದೆಯಲ್ಲಿ ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರನ್ನು ಇರಿಸಿಕೊಂಡು ಹೋರಾಟ ಮಾಡಿದವರು’ ಎಂದು ಅಭಿಪ್ರಾಯಪಟ್ಟರು.

ನರೋಣದ ಮಹಾಂತೇಶ ಸ್ವಾಮೀಜಿ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಶಿವಪ್ರಸಾದ ಗೊಲ್ಲಹಳ್ಳಿ, ಸಮ್ಮೇಳನ ಅಧ್ಯಕ್ಷ ಡಿ.ಜಿ. ಸಾಗರ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಪ್ರಮುಖರಾದ ಮಲ್ಲಿಕಾರ್ಜುನ ಶೆಟ್ಟಿ, ಬಾಬುರಾವ ಶೇರಿಕಾರ, ಅಂಬಾರಾಯ ಹಾಗರಗಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT