ಭಾನುವಾರ, ಏಪ್ರಿಲ್ 18, 2021
24 °C
ಪರಿಶಿಷ್ಟ ಸಮುದಾಯದ ಗ್ರಾ.ಪಂ. ಅಧ್ಯಕ್ಷರು, ಸದಸ್ಯರ ಸಮಾರಂಭದಲ್ಲಿ ಕೆ.ಬಿ. ಶಾಣಪ್ಪ

ಚಪ್ಪಲಿ ಹೊಲಿದವರಿಗೆ ಈಗಲಾದರೂ ಅಧಿಕಾರ ಕೊಡಿ: ಮಾಜಿ ಸಚಿವ ಕೆ.ಬಿ. ಶಾಣಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ’ಶತಮಾನಗಳಿಂದ ಚಪ್ಪಲಿ ಹೊಲಿದು, ಊರನ್ನು ಸಾಫ್‌ ಮಾಡಿದ ಮಾದಿಗ ಸಮುದಾಯದವರಿಗೆ ಈಗಲಾದರೂ ಅಧಿಕಾರಿ ಕೊಡಿ‘ ಎಂದು ಮಾಜಿ ಸಚಿವ ಕೆ.ಬಿ. ಶಾಣಪ್ಪ ಅವರು ಒತ್ತಾಯಿಸಿದರು.

ದಲಿತ ಮಾದಿಗ ಸಮನ್ವಯ ಸಮಿತಿಯು ನಗರದ ಎಸ್‌.ಎಂ. ಪಂಡಿತ್ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಪರಿಶಿಷ್ಟ ಸಮುದಾಯದ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ’ಮಾದಿಗರನ್ನು ಬಿಟ್ಟು ಲಂಬಾಣಿ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅವರನ್ನು ಗೆಲ್ಲಿಸಿಕೊಂಡು ಬಂದರೆ ನಮಗೆ ಅಧಿಕಾರ ಸಿಗುವುದು ಯಾವಾಗ‘ ಎಂದು ವೇದಿಕೆಯಲ್ಲಿದ್ದ ವಿಧಾನಪರಿಷತ್ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಅಲ್ಲಮಪ್ರಭು ಪಾಟೀಲ ಅವರಿಗೆ ಪ್ರಶ್ನಿಸಿದರು.

ಉಪಜಾತಿಗೆ ಸ್ವಾಮೀಜಿಗಳು ಸೀಮಿತ

ಇಂದಿನ ಸ್ವಾಮೀಜಿಗಳು ಎಲ್ಲ ಸಮುದಾಯದ ಏಳಿಗೆ ಬಗ್ಗೆ ಚಿಂತೆ ಮಾಡುತ್ತಿಲ್ಲ. ಬದಲಾಗಿ ಪಂಚಮಸಾಲಿ, ಬಣಜಿಗ, ಗಾಣಿಗ ಹೀಗೆ ತಮ್ಮ ತಮ್ಮ ಉಪಜಾತಿಗಳ ಮೀಸಲಾತಿಗಾಗಿ ಹೋರಾಡುತ್ತಿದ್ದಾರೆ. ಯಡಿಯೂರಪ್ಪ ಅವರು ವಿವಿಧ ಜಾತಿ ಮಠಗಳಿಗೆ ₹ 189 ಕೋಟಿ ಬಿಡುಗಡೆ ಮಾಡಿದ್ದಾರೆ. ಅವರ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ಬಂದರೆ ಬೆಂಬಲಕ್ಕೆ ಇರಲಿ ಎಂದು ಅವರ ಭಾವನೆಯಾಗಿರಬಹುದು. ಸ್ವಾಮೀಜಿಗಳ ನಡೆಯನ್ನು ನೋಡಿದರೆ ಇವರೂ ಹಾಗೆಯೇ ನಡೆದುಕೊಳ್ಳುತ್ತಾರೆ ಎಂಬ ಸಂಶಯ ಬರುತ್ತದೆ. ಹಿಂದಿನ ಸ್ವಾಮೀಜಿಗಳು ಹೀಗೆ ಉಪಜಾತಿಯನ್ನು ಮುಂದಿಟ್ಟುಕೊಂಡು ಹೋರಾಡಿದ ಉದಾಹರಣೆಗಳಿಲ್ಲ. ಮಾದಿಗರು ಸೇರಿದಂತೆ ಎಲ್ಲ ಬಗೆಯ ದಲಿತರು ಹಿಂದಿನ ಸ್ವಾಮೀಜಿಗಳ ಬಗ್ಗೆ ಗೌರವ ಭಾವನೆ ಹೊಂದಿದ್ದರು. ಈಗಿನ ಸಂಕುಚಿತ ಮನೋಭಾವದ ಸ್ವಾಮೀಜಿಗಳನ್ನು ನೋಡಿದಾಗ ಖೇದವಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಾನ್ನಿಧ್ಯ ವಹಿಸಿದ್ದ ಹಿರಿಯೂರಿನ ಷಡಕ್ಷರಿ ಮುನಿಸ್ವಾಮಿ ದೇಶಿಕೇಂದ್ರ ಶ್ರೀಗಳು ಮಾತನಾಡಿ, ’ನಾವು ಬೆಳೆಯಬೇಕೆಂಬುದು ಆಂತರ್ಯದಲ್ಲಿ ಬರಬೇಕು. ನಾವು ನಮ್ಮಲ್ಲಿರುವವರನ್ನು ಗುರುತಿಸಬೇಕು. ನಾಯಕನಿಗೆ ಮಾತೃ ಹೃದಯ ಇರಬೇಕು. ಸಮುದಾಯದ ಜನರು ನಮ್ಮಲ್ಲಿ ಇರುವವರನ್ನು ಗುರುತಿಸುವ ಕೆಲಸ ಮಾಡಬೇಕು. ಆದರೆ, ಎಷ್ಟು ಜನ ಚಿಂತಕರು, ಸಾಹಿತಿಗಳು, ಪ್ರಗತಿಪರರು ಹಾಗೂ ಸ್ವಾಮೀಜಿಗಳನ್ನು ಗುರುತಿಸಿದ್ದೀರಿ‘ ಎಂದು ಪ್ರಶ್ನಿಸಿದರು.

’ವಿಧಾನಸೌಧದಲ್ಲಿ ನಮ್ಮ ಶಕ್ತಿ ಹೆಚ್ಚಾಗಬೇಕು. ದಲಿತರ ಮತ ಮಾತ್ರ ಬೇಕು. ಹಿತ ಬೇಡವೇ‌‌? ಎಂಟು ವರ್ಷಗಳಿಂದ ಸದಾಶಿವ ಆಯೋಗದ ವರದಿ ಕೊಳೆಯುತ್ತಿದೆ. ತಟ್ಟೆ ತೋರಿಸಿ ಅನ್ನ ಹಾಕಿ ಎಂದರೆ ತಟ್ಟೆಯನ್ನೇ ಮಂಗಮಾಯ ಮಾಡುತ್ತಿದ್ದಾರೆ. ಹೀಗೆ ಮಾಡಿದರೆ ತಿರಸ್ಕಾರ ಖಂಡಿತ‘ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ’ಅಧಿಕಾರ ವಿಕೇಂದ್ರೀಕರಣವಾಗಬೇಕೆಂಬ ದೃಷ್ಟಿಯಿಂದ ಪಂಚಾಯತ್ ವ್ಯವಸ್ಥೆ ಜಾರಿಯಾಯಿತು. ಪ್ರಧಾನಿಯಾಗಿದ್ದ ರಾಜೀವ ಗಾಂಧಿ ಅವರು ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ತಂದು ಸ್ಥಳೀಯವಾಗಿ ಅಧಿಕಾರ ಸಿಗುವಂತೆ. ಅಧಿಕಾರ ರಾಜಧಾನಿಯಲ್ಲಿರುವ ಜನಪ್ರತಿನಿಧಿಗಳ ಕೈಯಲ್ಲಷ್ಟೇ ಇರಬಾರದು ಎಂಬುದು ಅವರ ನಿಲುವಾಗಿತ್ತು‘  ಎಂದರು.

’ಗ್ರಾಮ ಪಂಚಾಯಿತಿಗಳ ಮೇಲೆ ಹೆಚ್ಚು ಜವಾಬ್ದಾರಿ ಇದೆ. ನಿಮ್ಮ–ನಿಮ್ಮ ಗ್ರಾಮದಲ್ಲಿ ನೀವು ಪ್ರಭಾವಿಗಳಾಗಿದ್ದೀರಿ‌. ಹೀಗಾಗಿ ಆಯ್ಕೆಯಾಗಿ ಬಂದಿದ್ದೀರಿ‌. ಅಲ್ಲಿ ನಮ್ಮ ಜಾತಿಯವರು ಮಾತ್ರ ನಮ್ಮನ್ನು ಆಯ್ಕೆ ಮಾಡಿಲ್ಲ‌. ಎಲ್ಲ ಜಾತಿಯವರು ಆಯ್ಕೆ ಮಾಡಿ ಕಳಿಸಿದ್ದಾರೆ. ಅವರೆಲ್ಲರ ಹಿತವನ್ನು ಕಾಯಬೇಕು‘ ಎಂದು ಹೇಳಿದರು.

ದಲಿತ ಮಾದಿಗ ಸಮನ್ವಯ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ ತಾರಫೈಲ್ ಮಾತನಾಡಿ, ’ದೇಶದ ವಿಷಯ ಬಂದಾಗ ಯಾವ ಜಾತಿಯೂ ದೊಡ್ಡದಲ್ಲ. ಹಾಗೆ ಸಮಾಜದ ಸಮಸ್ಯೆ ಬಂದಾಗ ಜಾತಿ, ಧರ್ಮ ಮರೆತು ಒಂದಾಗಿ ಹೋರಾಟ ಮಾಡಬೇಕಿದೆ.‌ ಜನರ ಆಶೀರ್ವಾದದಿಂದ ಆಯ್ಕೆ ಆಗಿರುತ್ತೇವೆ. ಸಿಕ್ಕ ಸಮಯದಲ್ಲಿ ಜನರಿಗೆ ಏನು ಮಾಡಿದ್ದೇವೆ ಎಂಬುದು ಮುಖ್ಯ‘ ಎಂದರು.

’ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ಅವರು 371 (ಜೆ) ಜಾರಿಗೆ ತರಲು ಶ್ರಮಿಸಿದರು. ಈಗ 371 ಒಂದು ಜಾತಿ, ಪಕ್ಷಕ್ಕೆ ಸೀಮಿತವಾಗಿಲ್ಲ. ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷದವರು, ಎಲ್ಲ ಧರ್ಮ, ಜಾತಿಯವರ ಮಕ್ಕಳು ವೈದ್ಯರು, ಎಂಜಿನಿಯರಿಂಗ್ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಬೇಕು‘ ಎಂದು ಸಲಹೆ ನೀಡಿದರು.

ಸಮಿತಿ ಉಪಾಧ್ಯಕ್ಷ ಗೋಪಾಲರಾವ ಕಟ್ಟಿಮನಿ ಮಾತನಾಡಿ, ’ಬಹುವರ್ಷಗಳ ಬೇಡಿಕೆಯಾದ ಸದಾಶಿವ ಆಯೋಗದ ವರದಿ ನೆನಗುದಿಗೆ ಬಂದಿದೆ. ಯಡಿಯೂರಪ್ಪನವರು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ದಲಿತರ ಕೆಲಸ ಮಾಡುತ್ತೇನೆ ಎಂದು ಭರವಸೆ ‌ನೀಡಿದ್ದರು. ಆದರೆ, ಎರಡು ವರ್ಷ ಕಳೆಯುತ್ತಿದ್ದರೂ ತಾವು ಕೊಟ್ಟ ಭರವಸೆಯನ್ನು ಮರೆತು ಬಿಟ್ಟಿದ್ದಾರೆ. ಹೀಗಾಗಿ ನಮ್ಮ ಪರಿಸ್ಥಿತಿ ಬಾಳೆ ಗಿಡದ ಎಲೆಯಂತೆ ಉಂಡು ಬಿಸಾಡಿದಂತೆ ಆಗಿದೆ. ಬೆಂಗಳೂರಿನಲ್ಲಿ ಮಾ 8ರಂದು ವಿರಾಟ್ ಶಕ್ತಿ ಪ್ರದರ್ಶನಕ್ಕೆ ಪ್ರತಿ ಮನೆಯಿಂದ ಒಬ್ಬರು ಭಾಗಿಯಾಗಬೇಕು‘ ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಶಾಮ ನಾಟೀಕರ್, ಚಂದ್ರಿಕಾ ಪರಮೇಶ್ವರ, ಸಫಾಯಿ ಕರ್ಮಚಾರಿ ಆಯೋಗದ ಸದಸ್ಯೆ ಗೀತಾ ರಾಜು ವಾಡೇಕರ್, ಬಸವರಾಜ ಕೆ. ಜವಳಿ, ಸುಭಾಷ್ ಬಿ. ಕಾಂಬಳೆ, ದಿಗಂಬರ ತ್ರಿಮೂರ್ತಿ ಇತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು