ಭಾನುವಾರ, ನವೆಂಬರ್ 29, 2020
25 °C
ನಗರವೂ ಸೇರಿದಂತೆ ಜಿಲ್ಲೆಯ ಎಲ್ಲ ಮಾರುಕಟ್ಟೆಗಳಲ್ಲಿ ಜನಜಂಗುಳಿ, ದುಬಾರಿಯಾದರೂ ಖರೀದಿಸಿದ ಜನ

ಕಲಬುರ್ಗಿ: ನೆರೆಯ ನಡುವೆಯೂ ದಸರೆ ಸಡಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಈ ಬಾರಿ ಅತಿವೃಷ್ಟಿ, ಪ್ರವಾಹ ಹಾಗೂ ಕೊರೊನಾ ಕಾಟ ಮಿತಿಮೀರಿದ್ದರೂ ನಾಡಹಬ್ಬಕ್ಕೆ ಮಾತ್ರ ಯಾವುದೇ ಅಡತಡೆಯಾಗಿಲ್ಲ. ಸಾರ್ವಜನಿಕ ದಸರೆಯನ್ನು ಸಂಕ್ಷಿಪ್ತವಾಗಿ ಆಚರಿಸಲಾಗುತ್ತಿದೆ. ಆದರೆ, ಮನೆಗಳಲ್ಲಿ ಮಾಡುವ ದುರ್ಗಾ ಪೂಜೆ, ಆಯುಧ ಪೂಜೆ ಹಾಗೂ ವಿಜಯ ದಶಮಿಯ ಸಂಭ್ರಮ ಮನೆ ಮಾಡಿದೆ.

ನವಮಿ ಅಂಗವಾಗಿ ಭಾನುವಾರ ಆಚರಿಸಲಾಗುವ ಆಯುಧ ಪೂಜೆ ಹಾಗೂ ಸೋಮವಾರ ನಡೆಯಲಿರುವ ವಿಜಯ ದಶಮಿಗಾಗಿ, ಶನಿವಾರದಿಂದಲೇ ಸಿದ್ಧತೆಗಳು ನಡೆದವು. ಇಲ್ಲಿನ ಸೂಪರ್‌ ಮಾರ್ಕೆಟ್‌, ಕಣ್ಣಿ ಮಾರುಕಟ್ಟೆ, ಶಹಾಬಜಾರ್‌, ಎಪಿಎಂಸಿ ಮುಂತಾದ ಮಾರುಕಟ್ಟೆಗಳಲ್ಲಿ ಜನಜಂಗುಳಿಯೇ ತುಂಬಿತ್ತು. ನಗರವೂ ಸೇರಿ ಜಿಲ್ಲೆಯ ಎಲ್ಲೆಡೆ ಈಗ ನಾಡಹಬ್ಬ ದಸರಾ ಸಡಗರ ಮನೆ ಮಾಡಿದೆ. ಮಕ್ಕಳಿಂದ ಹಿಡಿದು ಹಿರಿಯವರೆಗೂ ಎಲ್ಲರಿಗೂ ಬಿಡುವಿಲ್ಲದ ಕೆಲಸ.

ಅಂಬಾ ಭವಾನಿಯನ್ನು ಪ್ರತಿ ದಿನ ಆರಾಧಿಸಿದ ಜನ ಈಗ ದಸರೆಗೆ ಸಿದ್ಧವಾಗಿದ್ದಾರೆ. ಒಂದು ದಿನ ಮುಂಚಿತವಾಗಿಯೇ ಪೂಜಾ ಸಾಮಗ್ರಿ ಖರೀದಿಗೆ ಮುಗಿಬಿದ್ದರು. ಸಹಜವಾಗಿಯೇ ಹೂವು, ಹಣ್ಣು, ಬಾಳೆಕಂದು ಹಾಗೂ ಪೂಜಾ ಸಲಕರಣೆಗಳ ದರ ಏರಿಕೆಯಾಗಿದೆ. ಆದರೂ ಸಂಭ್ರಮಕ್ಕೇನೂ ಬರವಿಲ್ಲ.

ಹಬ್ಬಕ್ಕೆ ಅಗತ್ಯದ ಹೂ, ಹಣ್ಣು, ಕಬ್ಬು, ಬಾಳೆ ದಿಂಡು, ಮಹಿಳೆಯರಿಗೆ ಉಡಿ ತುಂಬುವ ಸಾಮಗ್ರಿ, ಮಣ್ಣಿನಮಡಿಕೆ, ತಟ್ಟೆ, ದೀಪ ಇವುಗಳೊಂದಿಗೆ ದಿನಸಿ ವಸ್ತು, ಬಟ್ಟೆ, ಆಭರಣ ಖರೀದಿಯಲ್ಲೂ ಜನ ತೊಡಗಿದ್ದಾರೆ.

ಕನಕಾಂಬರ, ಮಲ್ಲಿಗೆ, ಸೇವಂತಿಗೆ, ಗುಲಾಬಿ, ಸಂಪಿಗೆ, ಚೆಂಡು ಹೂ ಗಳ ಬೆಲೆ ಸ್ವಲ್ಪ ಹೆಚ್ಚಿದೆ. ಅದೇ ರೀತಿ ಸೇಬು, ದಾಳಿಂಬೆ, ಬಾಳೆಹಣ್ಣು, ಚಿಕ್ಕು, ಸೀತಾಫಲ, ಮೋಸಂಬಿ, ಪಪ್ಪಾಯ, ಹತ್ತಿ ಹಣ್ಣುಗಳು ಸಹ ಕೆಜಿಗೆ ₹ 120ರ ಗಡಿ ದಾಟಿವೆ. ಕೆಲವರು ಐದು ಮೂರು ಅಥವಾ ನಾಲ್ಕು ಹಣ್ಣುಗಳ ಒಂದು ಗುಂಪಿ ಹಾಕಿದ್ದು ತಲಾ ₹ 80ರಂತೆ ದರ ಕೂಗುತ್ತಿದ್ದಾರೆ.

ಬನ್ನಿಮರದ ಎಲೆಯೂ ಮಾರಾಟಕ್ಕೆ: ದಸರೆಗೆ ಬನ್ನಿ ಮರದ ಎಲೆಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಹಳ್ಳಿಗಳಿಂದ ಮರದ ಎಲೆಗಳನ್ನು ತಂದು ಗುಂಪೆ ಹಾಕಿಕೊಂಡ ರೈತ ಮಹಿಳೆಯರು, ಜನರನ್ನು ಕೂಗಿ ಕರೆದು ಮಾರಾಟ ಮಾಡುತ್ತಿರುವುದು ಕಂಡುಬಂತು. ಒಂದು ಹಿಡಿ ಬನ್ನಿ ಎಲೆಗೆ ₹ 20.

‘ನಾವು ನೀವು ಬಂಗಾರ ಹಂಚಿಕೊಂಡು, ಬಂಗಾರದ ಹಾಗೆ ಬಾಳೋಣ’ ಎಂದು ಶುಭಾಶಯ ಕೋರುವುದು ದಸರೆಯ ಸಾಂಪ್ರದಾಯಿಕ ಆಚರಣೆ. ಇದಕ್ಕಾಗಿ ಬನ್ನಿ ಮರದ ಎಲೆಗಳನ್ನೇ ಕೊಟ್ಟು ಅದನ್ನೇ ಬಂಗಾರದ ರೂಪದಲ್ಲಿ ನೋಡುವುದು ರೂಢಿ.

ಈ ಬಾರಿ ಅತಿವೃಷ್ಟಿಯ ಕಾರಣ ಬಹುಪಾಲು ಹಣ್ಣುಗಳ ಬೆಲೆ ಗಗನಕ್ಕೇರಿದೆ. ಹಣ್ಣಿಗಿಂತಲೂ ಹೆಚ್ಚು ದುಬಾರಿ ಆಗಿದ್ದು ಹೂವು. ತಿಂಗಳ ಹಿಂದೆ ₹ 30ಕ್ಕೆ ಮೊಳ ಸಿಗುತ್ತಿದ್ದ ಮಲ್ಲಿಗೆ, ಸೇವಂತಿ ಹೂವಿಗೆ ಈಗ ₹ 50 ರಿಂದ ₹ 80 ದರವಿದೆ. ಅದರಲ್ಲೂ ಚೆಂಡು ಹೂವನ್ನು ಮಾರಾಟ ಮಾಡುವವರು ಕೆ.ಜಿ.ಗೆ ₹ 60ರಂತೆ ಮಾರುತ್ತಿದ್ದುದು ಕಂಡುಬಂತು.

ನಾಲ್ಕು ದಂಟುಗಳಿರುವ ಒಂದು ಕಬ್ಬಿನ ಕಟ್‌ಗೆ ₹ 100, ಒಂದು ಬೂದುಗುಂಬಳಕ್ಕೆ ₹ 120 ಹಾಗೂ ಜೋಡಿ ಬಾಳೆಕಂದಿಗೆ ₹ 40 ದರ ಸಾಮಾನ್ಯವಾಗಿತ್ತು. ಉಳಿದಂತೆ ಆಲಂಕಾರಿಕ ಮಳಿಗೆಗಳ ಮುಂದೆ ಕೂಡ ಹಲವರು ಮುಗಿಬಿದ್ದು ವಸ್ತುಗಳನ್ನು ಖರೀದಿಸಿದ್ದು ಸಾಮಾನ್ಯವಾಗಿ ಕಂಡುಬಂತು.

ಮಾಸ್ಕ್‌, ಅಂತರ ಮರೆತ ಜನ

ಕೊರೊನಾ ವೈರಾಣು ಹರಡುವ ಭಯದಿಂದಾಗಿಯೇ ದಸರೆಯ ಹಬ್ಬವನ್ನು ಸಂಕ್ಷಿಪ್ತವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಆದರೆ, ಶನಿವಾರ ಮಾರುಕಟ್ಟೆಯಲ್ಲಿ ಕಂಡುಬಂದ ಜನಜಂಗುಳಿಗೆ ಇದಾವುದರ ಅರಿವೇ ಇಲ್ಲದಂತೆ ಭಾಸವಾಯಿತು.

ಕಿಕ್ಕಿರಿದು ಸೇರಿದ ಜನ ಪದೇಪದೇ ಚೌಕಾಸಿ ಮಾಡಿ ವಸ್ತುಗಳನ್ನು ಖರೀದಿಸಿದರು. ಹಬ್ಬದ ಖರೀದಿ ಭರಾಟೆಯಲ್ಲಿ ಮಾಸ್ಕ್‌, ಸ್ಯಾನಿಟೈಸರ್‌ ಕನಿಷ್ಠ ಅಂತರವನ್ನೂ ಮರೆತರು. ಹಳ್ಳಿಗಳಿಂದ ಹಲವಾರು ವ್ಯಾಪಾರಿಗಳು ಏಕಾಏಕಿ ಬಂದಿದ್ದರಿಂದ ಮಾರುಕಟ್ಟೆಯ ರಸ್ತೆ, ಫುಟ್‌ಪಾತ್‌, ಮಳಿಗೆಗಳು... ಹೀಗೆ ಎಲ್ಲಿಯೂ ಕನಿಷ್ಠ ಅಂತರವೂ ಇಲ್ಲದಂತೆ ನಡೆದುಕೊಳ್ಳುತ್ತಿರುವುದು ಸಾಮನ್ಯವಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು