ಮಂಗಳವಾರ, ಅಕ್ಟೋಬರ್ 26, 2021
20 °C
ಕೋವಿಡ್‌ ನಂತರ ಚೇತರಿಸಿಕೊಂಡ ವಾಹನ ವ್ಯಾಪಾರ, ಪೂರೈಕೆಯ ಎರಡು ಪಟ್ಟು ಹೆಚ್ಚಿದ ಬೇಡಿಕೆ

ಕಲಬುರಗಿ: ಹಬ್ಬಕ್ಕೆ ವಾಹನಗಳ ಖರೀದಿ ಭರಾಟೆ

ಸಂತೋಷ ಈ. ಚಿನಗುಡಿ‌ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ನಿರೀಕ್ಷೆಯಂತೆಯೇ ದಸರೆ ಹಾಗೂ ದೀಪಾವಳಿ ಹಬ್ಬದ ಅಂಗವಾಗಿ ವಾಹನಗಳ ಖರೀದಿ ಜೋರಾಗಿದೆ. ನಗರದಲ್ಲಿರುವ ಎಲ್ಲ ಶೋ ರೂಮ್‌ಗಳಲ್ಲೂ ಬೈಕ್‌ ಹಾಗೂ ಕಾರ್‌ಗಳ ಖರೀದಿ ಭರ್ಜರಿಯಾಗಿ ನಡೆದಿದೆ. 

ಕಳೆದ ಮಾರ್ಚ್‌ನಿಂದ ಕೋವಿಡ್‌ ಕಾರಣ ವಾಹನ ತಯಾರಿಕೆ, ಸರಬರಾಜು ಹಾಗೂ ಖರೀದಿ ಕೂಡ ತೆವಳುತ್ತ ಸಾಗಿತ್ತು. ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಕೋವಿಡ್‌ ಮೂರನೇ ಅಲೆ ಬರುವ ಆತಂಕ ಮೂಡಿದ್ದರಿಂದ ಜನರು ವಾಹನಗಳ ಶೋ ರೂಮ್‌ನತ್ತ ಹೆಜ್ಜೆ ಹಾಕಲಿಲ್ಲ. ಈಗ ಹಬ್ಬಗಳ ಕಾರಣ ಬುಕಿಂಗ್‌ ಮಾಡುವವರ ಸಂಖ್ಯೆ ಏಕಾಏಕಿ ದುಪ್ಪಟ್ಟಾಗಿದೆ.

ಬದಲಾದ ಅಭಿರುಚಿ: ಕೋವಿಡ್ ಸಾಂಕ್ರಾಮಿಕದ ಕಾರಣ ನಾಲ್ಕುಚಕ್ರಗಳ ವಾಹನ ಖರೀದಿ ಮಾಡುವವರ ಅಭಿರುಚಿ ಬದಲಾಗಿದೆ. ಮಿನಿ ಬಸ್‌, ಆಟೊ, ಗೂಡ್ಸ್, ಟೆಂಪೊದಂಥ ವಾಹನಗಳ ಬೇಡಿಕೆ ಕಡಿಮೆಯಾಗಿದೆ. ವೈಯಕ್ತಿಕ ಹಾಗೂ ಕೌಟುಂಬಿಕ ಬಳಕೆಗೆ ಇರುವ ಕಾರ್‌ಗಳಿಗೇ ಹೆಚ್ಚು ಗ್ರಾಹಕರು ವಾಲಿದ್ದಾರೆ. ಕೊರೊನಾ ವೈರಾಣು ಅಂಟಿಕೊಳ್ಳದಂತೆ ಸಾರ್ವಜನಿಕ ಸಂಚಾರ ವಾಹನಗಳಿಂದ ದೂರವಿರಬೇಕು ಎಂಬ ಸುರಕ್ಷತಾ ಭಾವವೇ ಇದಕ್ಕೆ ಕಾರಣ ಎನ್ನುವುದು ಬಹುಪಾಲು ಶೋರೂಮ್‌ಗಳ ಮಾಲೀಕರ ಅಭಿಮತ.

ಕಳೆದೆರಡು ವರ್ಷಗಳಿಗಿಂತಲೂ ಈ ಬಾರಿ ಹಬ್ಬಕ್ಕೆ ವಾಹನಗಳ ಖರೀದಿ ಹೆಚ್ಚಾಗಿದೆ. ಆದರೆ, ಅದಕ್ಕೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ ಎಂಬುದು ವ್ಯಾಪಾರಿಗಳ ಗೋಳು. ಇದಕ್ಕೂ ಕೋವಿಡ್‌ ಕಾರಣ. ಮಾರ್ಗಸೂಚಿಗಳ ತೊಡಗಿನಿಂದಾಗಿ ಕಾರ್‌, ಬೈಕ್‌ಗಳ ತಯಾರಿ ಸಂಖ್ಯೆ ಕಡಿಮೆಯಾಗಿದೆ. ಇನ್ನೊಂದೆಡೆ ಸರಬರಾಜು ಸಮಸ್ಯೆ ಹಾಗೇಯೇ ಇದೆ. ಆದರೆ, ಬೇಡಿಕೆ ಪ್ರತಿವರ್ಷದಂತೆಯೇ ಮುಂದುವರಿದಿದೆ. ಹೀಗಾಗಿ, ವಾಹನ ಬುಕ್‌ ಮಾಡಿ ನಾಲ್ಕೈದು ತಿಂಗಳು ಕಾದು ಕುಳಿತವರೂ ಇದ್ದಾರೆ.

ಕಾರ್‌ ವ್ಯಾಪಾರಸ್ಥರು ಏನಂತಾರೆ?
ದೀಪಾವಳಿಗೆ ಖರೀದಿ ಹೆಚ್ಚುವ ನಿರೀಕ್ಷೆ

ಕಳೆದ ವರ್ಷ ಸಾಂಕ್ರಾಮಿಕ ವಿಪರೀತವಾಗಿದ್ದರಿಂದ ವೈಯಕ್ತಿಕ ವಾಹನಗಳ ಮಾರಾಟ ಹೆಚ್ಚಿತ್ತು. ನಮ್ಮಲ್ಲಿ ಈ ಬಾರಿ ಇನ್ನೂ ಬೇಡಿಕೆ ಬರುವ ನಿರೀಕ್ಷೆ ಇದೆ. ಕಳೆದ ಒಂದು ವರ್ಷದಲ್ಲಿ ವಿವಿಧ ಬಗೆಯ 330 ಕಾರ್‌ಗಳನ್ನು ಮಾರಿದ್ದೇವೆ. ದಸರಾ ಹಾಗೂ ದೀಪಾವಳಿ ಅಕ್ಟೋಬರ್‌ನಲ್ಲೇ ಬಂದಿದ್ದರಿಂದ ಖರೀದಿಸುವವರ ಸಂಖ್ಯೆ ಹೆಚ್ಚಾಗಿತ್ತು. ಈ ಬಾರಿ ದೀಪಾವಳಿಯವರೆಗೂ ಕಾಯಬೇಕಿದೆ.
–ಶ್ರೀಪಾದ ದೇಶಪಾಂಡೆ, ಜನರಲ್‌ ಮ್ಯಾನೇಜರ್, ಲಾಹೋಟಿ ಮಾರುತಿ ಸುಜುಕಿ ಶೋ ರೂಮ್‌

ಒಂದೇ ತಿಂಗಳಿಗೆ 101 ಕಾರ್‌ ಬುಕಿಂಗ್‌
ನಮ್ಮ ನಿರೀಕ್ಷೆ ಮೀರಿ ದಸರೆಗೆ ವಾಹನಗಳ ಬುಕಿಂಗ್‌ ಆಗಿವೆ. ಅಕ್ಟೋಬರ್‌ನಲ್ಲಷ್ಟೇ 101 ಕಾರ್‌ಗಳಿಗೆ ಬೇಡಿಕೆ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಬಹಳ ಉತ್ತಮ ಬೆಳವಣಿಗೆ. ಗ್ರಾಹಕರ ಬೇಡಿಕೆ ಹೆಚ್ಚಾಗಿದ್ದರೂ ಕಾರುಗಳನ್ನೂ ಪೂರೈಸಲು ಆಗದ ಸ್ಥಿತಿ ಇದೆ. ಕೋವಿಡ್‌ ಮಾರ್ಗಸೂಚಿ ಪಾಲಿಸಬೇಕಾದ ಕಾರಣ ಕಾರ್ಖಾನೆಗಳಲ್ಲೇ ಸಿದ್ಧಪಡಿಸುವ ಸಾಮರ್ಥ್ಯವನ್ನು ತಗ್ಗಿಸಲಾಗಿದೆ.
–ಅನ್ವರ್‌ ಪಟೇಲ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಶಾ ಹುಂಡೈ

ಚೇತರಿಕೆ ಕಂಡ ಸ್ಮಾರ್ಟ್‌ ಕಾರ್‌ ಬೇಡಿಕೆ
ನಮ್ಮಲ್ಲಿ ಪ್ರತಿ ತಿಂಗಳು ಸರಾಸರಿ 100 ಕಾರುಗಳು ಬಿಕರಿಯಾಗುತ್ತವೆ. ನವರಾತ್ರಿ ಮತ್ತು ದೀಪಾವಳಿಗೆ ಸಹಜವಾಗಿ ಈ ಸಂಖ್ಯೆ ಹೆಚ್ಚುತ್ತದೆ. ಈಗ ಆಧುನಿಕ ತಂತ್ರಜ್ಞಾನದ ಸ್ಮಾರ್ಟ್‌ ಕಾರ್‌ಗಳಲ್ಲಿ ‘ಸೆಮಿ ಕಂಡಕ್ಟರ್‌’ ಎಂಬ ಎಲೆಕ್ಟ್ರಾನಿಕ್‌ ಚಿಪ್‌ ಅಳವಡಿಕೆ ಬಂದಿದೆ. ಕೋವಿಡ್‌ ಕಾರಣ ಕಾರ್‌ ಸರಬರಾಜು ಕೂಡ ವಿಳಂಬವಾಗುತ್ತಿದೆ. ಹೀಗಾಗಿ, ಹಬ್ಬಗಳಿಗೆ ಖರೀದಿ ಮಾಡುವವರು ಮುಂಚಿತವಾಗಿಯೇ ಬುಕಿಂಗ್‌ ಮಾಡಿದ್ದಾರೆ.
–ಮಾರ್ಟಿನ್‌ ಲೂಥರ್, ಸೇಲ್ಸ್‌ ಜನರಲ್‌ ಮ್ಯಾನೇಜರ್, ಕಿಯಾ ಶೋ ರೂಮ್‌

*

ದ್ವಿಚಕ್ರವಾಹನಗಳು ವ್ಯಾಪಾರ ಹೇಗೇ?
ಆರಂಭದಲ್ಲೇ 40 ಬೈಕ್‌ ಬುಕ್

ಈ ತಿಂಗಳ ಆರಂಭಕ್ಕೆ 40 ಬೈಕ್‌ಗಳನ್ನು ಗ್ರಾಹಕರು ಬುಕ್‌ ಮಾಡಿದ್ದಾರೆ. ಅದರಲ್ಲೂ ಹೈ ಎಂಡ್‌ನ ಹೊಸ ಸ್ಟೈಲಿಷ್‌ ಬೈಕುಗಳಿಗೆ ಯುವಜನರಿಂದ ಹೆಚ್ಚು ಬೇಡಿಕೆ ಬಂದಿದೆ. ಆದರೆ, ಬೇಡಿಕೆಯ ಶೇ 50ರಷ್ಟನ್ನು ಮಾತ್ರ ಕಂಪನಿಗಳು ಪೂರೈಸಲು ಸಾಧ್ಯವಾಗಿದೆ. ಹೀಗಾಗಿ, ನೆಚ್ಚಿನ ಬೈಕ್‌ ಕೊಳ್ಳುವವರು ಕಾಯಲೇಬೇಕಾಗಿದೆ.
–ವಿಠಲ ಸುತ್ರಾವೆ, ಮುಖ್ಯಸ್ಥ ದೇವಾನಂದ ಸುಜುಕಿ ಶೋ ರೂಮ್‌

ದರ ಹೆಚ್ಚಾದರೂ ಕುಂದದ ಆಸಕ್ತಿ
ಕೆಲ ದ್ವಿಚಕ್ರ ವಾಹನಗಳ ದರ ಈಗ ಹೆಚ್ಚಾಗಿದೆ. ಬುಧವಾರ (ಅ. 6)ವೇ ಮತ್ತೆ ದರ ಪರಿಷ್ಕರಿಸಿದ್ದಾರೆ. ಇದರಿಂದ ಅವುಗಳ ವಿಮೆ ಮೊತ್ತ, ಸಾಲದ ಕಂತು, ತೆರಿಗೆ ಎಲ್ಲವೂ ಹೆಚ್ಚಾಗುತ್ತದೆ. ಈ ಬಾರಿ ಹಬ್ಬಕ್ಕೆ ಇದು ಕಷ್ಟ ತರಬಹುದು ಎಂದುಕೊಂಡಿದ್ದೇವು. ಆದರೂ ಜನರಿಂದ ಬೇಡಿಕೆ ಉತ್ತಮವಾಗಿಯೇ ಇದೆ.
–ವಿನೋದ ಕುಲಕರ್ಣಿ, ಮುಖ್ಯಸ್ಥ, ಟಿವಿಎಸ್‌ ಶೋರೂಮ್‌

ಹೈಎಂಡ್‌ ಬೈಕುಗಳಿಗೆ ಬೇಡಿಕೆ
ಹೊಸದಾಗಿ ಮಾರುಕಟ್ಟೆಗೆ ಬಂದ ಹೈಎಂಡ್‌ ಬೈಕುಗಳು 120ರಿಂದ 125 ಸಿ.ಸಿ ಸಾಮರ್ಥ ಹೊಂದಿವೆ. ಹಬ್ಬಕ್ಕೆ ಯುವಜನರಿಂದಲೇ ಹೆಚ್ಚು ಬೇಡಿಕೆ ಬಂದಿದೆ. ಅವುಗಳ ನಿರ್ಮಾಣ, ಪೂರೈಕೆಯಲ್ಲಿ ತುಸು ವಿಳಂಬವಾಗುತ್ತಿದೆ. ಉಳಿದಂತೆ 120 ಸಿ.ಸಿ.ಯ ಬೈಕುಗಳೂ ಪ್ರತಿವರ್ಷದಂತೆಯೇ ಬಿಕರಿಯಾಗುತ್ತಿವೆ. ಈ ವರ್ಷ ವ್ಯಾಪಾರದಲ್ಲಿ ಶೇ 80ರಷ್ಟು ಹೆಚ್ಚಳ ಕಂಡುಬಂದಿದೆ.
–ಸಂಜಯ ಚವ್ಹಾಣ, ಜನರಲ್‌ ಮ್ಯಾನೇಜರ್, ವಿಕೆಜಿ ಬಜಾಜ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.