ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ: ದತ್ತ ದರ್ಶನಕ್ಕೆ ಹರಿದು ಬಂದ ಭಕ್ತರ ದಂಡು

Published 26 ಡಿಸೆಂಬರ್ 2023, 7:34 IST
Last Updated 26 ಡಿಸೆಂಬರ್ 2023, 7:34 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ ದೇವಲಗಾಣಗಾಪುರದ ದತ್ತ ಮಹಾರಾಜರ ದೇವಸ್ಥಾನದಲ್ಲಿ ಸೋಮವಾರ ಲಕ್ಷಾಂತರ ಭಕ್ತಕರ ಮಧ್ಯೆ ದತ್ತ ಜನ್ಮೋತ್ಸವ ಸಂಭ್ರಮದಿಂದ ಜರುಗಿತು.

ದತ್ತ ಜನ್ಮೋತ್ಸವ ನಿಮಿತ್ತವಾಗಿ ದತ್ತ ಮೂರ್ತಿ ಹಾಗೂ ಪಾದುಕೆಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಕಾಕಡ ಆರತಿ ಮಾಡಲಾಯಿತು. ಮಧ್ಯಾಹ್ನ 12 ಗಂಟೆಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬಾಲ ದತ್ತ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡಿ, ಜೋಗುಳ ಹಾಡಲಾಯಿತು. ಈ ವೇಳೆ ‘ದತ್ತಾತ್ರೇಯ ಮಹಾರಾಜಕಿ ಜೈ’ ಎಂದು ಅರ್ಚಕರು, ನೆರೆದಿದ್ದ ಭಕ್ತರು ಜೈಕಾರ ಮೊಳಗಿಸಿದರು.

ಪಾದುಕಾ ಪೂಜೆ, ರುದ್ರಾಭಿಷೇಕ, ದೀಪಾರಾಧನೆ, ಮಧುಕರಿ ಮತ್ತು ಅನ್ನದಾನ ಸೇವೆಗಳು ಜರುಗಿದವು. ನಂತರ ದೇವಸ್ಥಾನದ ಆವರಣದಲ್ಲಿ ದತ್ತ ಮಹಾರಾಜರ ಪಲ್ಲಕ್ಕಿ ಉತ್ಸವ ಜರುಗಿತು. ಭಕ್ತರು ತೊಟ್ಟಿಲು ಕಾರ್ಯಕ್ರಮದಲ್ಲಿ ಭಾಗವಹಿಸಿ ಹೂವು, ಹಣ್ಣುಗಳನ್ನು ಅರ್ಪಿಸಿ ಪುನೀತರಾದರು. ನೈವೇದ್ಯ, ಮಹಾಮಂಗಳಾರತಿ ಬಳಿಕ ಅನ್ನ ಪ್ರಸಾದ ವಿತರಿಸಲಾ ಯಿತು. ದತ್ತಾತ್ರೇಯರ ಜನ್ಮವೃತ್ತಾಂತದ ಕುರಿತು ಭಜನೆ ಪ್ರಸ್ತುಪಡಿಸಲಾಯಿತು.

ದೇವಸ್ಥಾನವನ್ನು ಮಲ್ಲಿಗೆ, ಕನಕಾಂಬರ, ಸೇವಂತಿಗೆ, ಚೆಂಡು ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ದತ್ತ ಮಹಾರಾಜರ ದರ್ಶನಕ್ಕೆ ಭಕ್ತರು ನಸುಕಿನ ಜಾವದಿಂದಲೇ ಸುಮಾರು ಒಂದು ಕಿಲೋ ಮೀಟರ್‌ವರೆಗೆ ಸರದಿಯಲ್ಲಿ ಕಾಯುತ್ತಿರುವುದು ಕಂಡುಬಂತು. ಅಂಗವಿಕಲರಿಗೆ ಮತ್ತು ವಯೋವೃದ್ಧರಿಗೆ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆ ಮಾಡಬೇಕು ಎಂದು ಭಕ್ತರು ತಿಳಿಸಿದರು.

‘ನಾವು ಬೇರೆ ಬೇರೆ ರಾಜ್ಯದಿಂದ ಜಯಂತಿಗೆ ಬರುತ್ತೇವೆ. ದತ್ತ ಮಹಾರಾಜರ ದೇವಸ್ಥಾನ ಒಳಗಡೆ ಚಿಕ್ಕದಾಗಿರುವುದರಿಂದ ತೊಟ್ಟಿಲು ಕಾರ್ಯಕ್ರಮ ಬಹಳಷ್ಟು ಭಕ್ತರಿಗೆ ಕಾಣಿಸುವುದಿಲ್ಲ. ದೇವಸ್ಥಾನ ಸಮಿತಿಯವರು ಎಲ್ಲರಿಗೆ ದತ್ತ ಜನ್ಮೋತ್ಸವ ಕಾರ್ಯಕ್ರಮವನ್ನು ನೋಡುವ ವ್ಯವಸ್ಥೆ ಮಾಡಬೇಕು’ ಎಂದು ಮಹಾರಾಷ್ಟ್ರದ ಯಾತ್ರಿಗಳು ಕೋರಿದರು.

ದತ್ತ ಮಹಾರಾಜರ ಜನ್ಮೋತ್ಸವ ಕಾರ್ಯಕ್ರಮ ನಿಮಿತ್ತವಾಗಿ ಒಂದು ವಾರದಿಂದ ದೇಶದ ವಿವಿಧ ರಾಜ್ಯಗಳಿಂದ ಮುಖ್ಯವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಹೆಚ್ಚಿನ ಭಕ್ತರು ದತ್ತ ಮಹಾರಾಜರ ದರ್ಶನ ಪಡೆಯುತ್ತಿದ್ದಾರೆ. ತೊಟ್ಟಿ ಲೋತ್ಸವ ಕಣ್ತುಂಬಿಕೊಳ್ಳಲು ನೆರೆಯ ಮಹಾರಾಷ್ಟ್ರ, ತೆಲಂಗಾಂಣ, ಆಂಧ್ರಪ್ರದೇಶ, ಗುಜರಾತ್‌, ಗೋವಾ ಮತ್ತು ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಬಂದಿದ್ದರು.

ಚೌಡಾಪುರ, ಆನೂರು ರಸ್ತೆ ಸೇರಿ ದಂತೆ ದೇವಸ್ಥಾನದ ಬೀದಿಗಳಲ್ಲಿ ಭಕ್ತರಿ ಗಾಗಿ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಹರಕೆ ಹೊತ್ತ ಯಾತ್ರಿಕರು ಸಿಹಿ ಪದಾರ್ಥಗಳು ಹಾಗೂ ಹಣ್ಣು–ಹಂಪಲಗಳನ್ನು ದಾನ ಮಾಡಿದರು.

ಅರ್ಚಕರ ಸಂಘದ ಕಾರ್ಯದರ್ಶಿ ಗಂಗಾಧರ್ ಶ್ರೀಕಾಂತ ಭಟ್ ಪೂಜಾರಿ, ಮುಖ್ಯ ಅರ್ಚಕರಾದ ವಸಂತ ವಿನಾಯಕ ಭಟ್‌ ಪೂಜಾರಿ, ವೃಷಭ ಪೂಜಾರಿ, ಸಚಿನ್ ಪೂಜಾರಿ, ಪ್ರಸನ್ನ ಭಟ್ ಪೂಜಾರಿ, ಪ್ರಿಯಾಂಕ್ ಪೂಜಾರಿ, ಕರುಣಾಕರ ಭಟ್ ಪೂಜಾರಿ, ನಾಗೇಶ್ ಭಟ್ ಪೂಜಾರಿ, ಸಂಗಮ್ ಕ್ಷೇತ್ರದ ವ್ಯವಸ್ಥಾಪಕರಾದ ಮಡಿವಾಳಪ್ಪ ವಡಗೇರಿ, ಸತೀಶ ರಜಪೂತ, ದತ್ತು ಡಾಂಗೆ, ರೂಪಾ ಮಡೆ ಪಾಲ್ಗೊಂಡಿದ್ದರು.

ಸಂಗಮದಲ್ಲಿ ಭಕ್ತರಿಂದ ಪುಣ್ಯಸ್ನಾನ

ಅಮರ್ಜಾ–ಭೀಮಾ ನದಿಯ ಸಂಗಮ ಸ್ಥಾನದಲ್ಲಿ ಬೆಳಿಗೆಯಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿದರು. ಬಳಿಕ ಔದುಂಬರ ಮರದ ಕೆಳಗಿನ ಮಂಟಪದಲ್ಲಿ ಕಾಯಿ, ಕರ್ಪೂರ ಅರ್ಪಿಸಿ ಭಕ್ತಿ ಮೆರೆದರು.

ನದಿಯಲ್ಲಿ ನೀರು ಸಾಕಷ್ಟಿರುವುದರಿಂದ ಭಕ್ತರಿಗೆ ಅನುಕೂಲವಾಯಿತು. ದತ್ತ ಪಾದುಕಾ ದರ್ಶನಕ್ಕೆ ತೆರಳುವ ಮುನ್ನ ಯಾತ್ರಿಕರು ಸಂಗಮದಲ್ಲಿ ಪುಣ್ಯಸ್ನಾನ ಮಾಡುವುದು ವಾಡಿಕೆ. ಸ್ನಾನದ ನಂತರ ನಿರ್ಗುಣ ಮಠ (ದತ್ತ ಮಂದಿರ), ಸಂಗಮೇಶ್ವರ ಸ್ವಾಮಿ ದೇವಸ್ಥಾನ ಮತ್ತು ಕಲ್ಲೇಶ್ವರ ದೇಗುಲದಲ್ಲಿ ದರ್ಶನ ಪಡೆದರು.

ರಥೋತ್ಸವ ಇಂದು: ಬಿಗಿ ಭದ್ರತೆ

‘ದತ್ತ ಜಯಂತಿ ನಿಮಿತ್ತಿ ಮಂಗಳವಾರ (ಡಿ.26) ದತ್ತಾತ್ರೇಯ ಮಹಾರಾಜರ ರಥೋತ್ಸವ ನಡೆಯಲಿದ್ದು, ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ’ ಎಂದು ದೇವಸ್ಥಾನ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ನಾಮದೇವ ರಾಥೋಡ್ ತಿಳಿಸಿದರು.

‘ರಥೋತ್ಸವಕ್ಕೆ ಸಕಲ ತಯಾರಿ ಪೂರ್ಣಗೊಂಡಿವೆ. ದತ್ತ ಮಹಾರಾಜರ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇದೆ’ ಎಂದರು.

‘ರಥೋತ್ಸವಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಒಟ್ಟು 200 ಜನರನ್ನು ಭದ್ರತೆಗೆ ನೇಮಿಸ ಲಾಗಿದೆ’ ಎಂದು ಡಿವೈಎಸ್ಪಿ ಬಿ.ಆರ್‌.ಗೋಪಿ ತಿಳಿಸಿದರು.

ದಟ್ಟಣೆ: ರಸ್ತೆ ವಿಸ್ತರಣೆಗೆ ಮನವಿ

ವಿಜಯಪುರ, ಮಹಾರಾಷ್ಟ್ರದಿಂದ ತಾಲ್ಲೂಕಿನ ಆನೂರು ಮಾರ್ಗವಾಗಿ ದತ್ತ ಕ್ಷೇತ್ರಕ್ಕೆ ಬರುವ ರಸ್ತೆಯಲ್ಲಿ ವಾಹನ ದಟ್ಟಣೆ ಕಂಡುಬಂತು. ಕಿರಿದಾದ ಈ ರಸ್ತೆಯನ್ನು ವಿಸ್ತರಣೆ ಮಾಡಿ, ಭಕ್ತರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಸ್ಥಳೀಯರ ಮನವಿ.

‘ಆನೂರು ಮಾರ್ಗವಾಗಿ ದೇವಲಗಾಣಗಾಪುರಕ್ಕೆ ಬರಲು ಸುಮಾರು 10 ಕಿ.ಮೀ. ಕಡಿಮೆ ಆಗುತ್ತದೆ. ಚೌಡಾಪುರ ಮಾರ್ಗ ಬಿಟ್ಟು ಇದೇ ಮಾರ್ಗವಾಗಿ ಬರುತ್ತಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿದೆ’ ಎನ್ನುತ್ತಾರೆ ಅರ್ಚಕರ ಸಂಘದ ಕಾರ್ಯದರ್ಶಿ ಗಂಗಾಧರ್ ಶ್ರೀಕಾಂತ್ ಭಟ್ ಪೂಜಾರಿ.

‘ವಾಹನ ದಟ್ಟಣೆಯಿಂದ ಸುಮಾರು ಅರ್ಧ ಸಂಚಾರ ಸ್ಥಗಿತವಾಗಿತ್ತು. ಭಕ್ತರು ರಸ್ತೆಯಲ್ಲಿ ಟ್ರಾಫಿಕ್‌ನಲ್ಲಿ ಸಿಲುಕು ಸಂಕಷ್ಟಪಟ್ಟರು. ಇದನ್ನು ತಪ್ಪಿಸಲು ರಸ್ತೆ ವಿಸ್ತರಣೆ ಮಾಡಬೇಕು ಇಲ್ಲವೇ ಮೇಲ್ದರ್ಜೆಗೆ ಏರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT