ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಲು ಸೂಚನೆ

ಭೂಕಂಪನ: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ತುರ್ತು ಸಭೆ
Last Updated 14 ಅಕ್ಟೋಬರ್ 2021, 3:04 IST
ಅಕ್ಷರ ಗಾತ್ರ

ಕಲಬುರಗಿ: ಚಿಂಚೋಳಿ ಮತ್ತು ಕಾಳಗಿ ತಾಲ್ಲೂಕುಗಳಲ್ಲಿ ಭೂಮಿ ಕಂಪಿಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ವಿಪತ್ತು ಸಂಭವಿಸಿದಲ್ಲಿ ಎದುರಿಸಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬುಧವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣೆ ಸಮಿತಿಯ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ‘ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಭೂಮಿ ಕಂಪಿಸುತ್ತಿರುವ ಕಾರಣ ಜನ ಭಯಭೀತರಾಗಿದ್ದು, ಅವರಿಗೆ ಅಧಿಕಾರಿಗಳು ಧೈರ್ಯ ತುಂಬುವ ಕೆಲಸ ಮಾಡಬೇಕು. ಜನರಲ್ಲಿ ಭೂಕಂಪನದ ಬಗ್ಗೆ ಅರಿವು ಮೂಡಿಸಬೇಕು’ ಎಂದರು.

ಪ್ರವಾಹ ಸಂದರ್ಭದಲ್ಲಿ ನಿಯೋಜಿಸಲಾದ ಅಧಿಕಾರಿಗಳೇ ಇಲ್ಲೂ ನೋಡಲ್ ಅಧಿಕಾರಿಗಳಾಗಿ ಮುಂದುವರಿಯಲಿದ್ದಾರೆ. ಜಿಲ್ಲೆಯಲ್ಲಿ ಭೂಮಿ ಕಂಪಿಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಪ್ರವಾಹ ಸಂದರ್ಭದಲ್ಲಿ ಕೈಗೊಂಡ ಕ್ರಮಗಳ ರೀತಿಯಲ್ಲೇ ಸಮರೋಪಾದಿಯಲ್ಲಿ ಶ್ರಮಿಸಬೇಕು. ಭೂಕಂಪನ ಸಂಭವಿಸಿದ ಸ್ಥಳಗಳಲ್ಲಿ ಅವಶ್ಯಕವಿರುವವರಿಗೆ ಸಾಮೂಹಿಕ ಶೆಡ್‌ಗಳ ನಿರ್ಮಾಣ ಮಾಡಬೇಕು. ಅಲ್ಲಿ ಊಟ, ನೀರು, ಹಾಸಿಗೆ, ಬೆಡ್‌ಶೀಟ್ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಮಾಡುವ ಜವಾಬ್ದಾರಿಯನ್ನು ಅಧಿಕಾರಿಗಳು ನಿರ್ವಹಿಸಬೇಕು ಎಂದು ತಿಳಿಸಿದರು.

ಭೂಮಿ ಕಂಪಿಸಿರುವ ಗ್ರಾಮಗಳಲ್ಲಿನ ಮನೆಗಳ ಬಾಳಿಕೆ ಸಾಮರ್ಥ್ಯದ ಬಗ್ಗೆ ಸರ್ವೆ ಮಾಡಬೇಕು. ಗಟ್ಟಿಮುಟ್ಟಾಗಿರುವ ಮನೆಗಳಲ್ಲಿನ ಸುರಕ್ಷಿತ ಕೋಣೆಗಳನ್ನು ಗುರುತಿಸಬೇಕು. ಆ ಮನೆಯವರಿಗೆ ಇಂತಹ ಕೋಣೆಗಳಲ್ಲಿರಲು ಸಲಹೆ ನೀಡಬೇಕು. ಹಳ್ಳಿಗಳಲ್ಲಿ ಇರುವ ಸುರಕ್ಷಿತ ಸರ್ಕಾರಿ ಕಟ್ಟಡ, ಸಮುದಾಯ ಭವನ, ಶಾಲೆಗಳನ್ನು ಗುರುತಿಸಬೇಕು. ಈ ತಾಣಗಳಲ್ಲಿ ಜನರಿರಲು ತಿಳಿಸಬೇಕು. ಅಂಗವಿಕಲರು, ಗರ್ಭಿಣಿಯರ ಪಟ್ಟಿ ಮಾಡಿ ಅವರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರಿಯಮ್ ಜಾರ್ಜ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ, ಉಪವಿಭಾಗಾಧಿಕಾರಿಗಳಾದ ಮೋನಾ ರೂಟ್, ಬಿ.ವಿ. ಅಶ್ವಿಜಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT