ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿಯಂತ್ರಣಕ್ಕೆ ಇನ್ನಷ್ಟು ಬಿಗಿ ಕ್ರಮ

ಹಿರಿಯ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಿದ ಜಿಲ್ಲಾಧಿಕಾರಿ ಶರತ್, ಪರಿಣಾಮಕಾರಿ ಕ್ರಮಕ್ಕೆ ಸೂಚನೆ
Last Updated 10 ಜುಲೈ 2020, 15:36 IST
ಅಕ್ಷರ ಗಾತ್ರ

ಕಲಬುರ್ಗಿ: ‘ಜಿಲ್ಲೆಯಲ್ಲಿ ಕೊರೊನಾ ವೈರಾಣು ನಿಯಂತ್ರಣ ಮಾಡಲು ಜನರು ಸಹಕರಿಸಬೇಕು. ಮಾಸ್ಕ್ ಧರಿಸುವುದು ಹಾಗೂ ಅಂತರ ಕಾಪಾಡುವುದನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸುವವರ ಮೇಲೆ ಕಠಿಕಣ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಬಿ.ಶರತ್‌ ಎಚ್ಚರಿಸಿದರು.

ನಗರದಲ್ಲಿ ಶುಕ್ರವಾರ ಜಿಲ್ಲೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ನಗರ ಹಾಗೂ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಮುಂದೆ ಕೈಗೊಳ್ಳಬೇಕಾದ ಕಠಿಣ ಕ್ರಮಗಳ ಬಗ್ಗೆ ಯೋಚಿಸಬೇಕಿದೆ. ವಿಷಮಶೀತ ಜ್ವರ (ಐಎಲ್‌ಐ) ಹಾಗೂ ತೀವ್ರ ಉಸಿರಾಟದ ತೊಂದರೆ (ಎಸ್ಎಆರ್‌ಐ) ಪ್ರಕರಣಗಳೇ ಹೆಚ್ಚಾಗುತ್ತಿವೆ. ಈ ಬಗ್ಗೆ ವಿಶೇಷ ಗಮನ ಹರಿಸಬೇಕು’ ಎಂದರು.

‌‘ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ ಹೆಚ್ಚಿನ ಕೊರೊನಾ ಪಾಸಿಜಿಟ್ ಸಂಖ್ಯೆಗಳ ಜೊತೆಗೆ ಸಾವಿನ ಸಂಖ್ಯೆಯು ಹೆಚ್ಚುತ್ತಿದೆ. ರೋಗಿಗಳಿಗೆ ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಗುಣಮಟ್ಟದ ವೈದ್ಯಕೀಯ ವ್ಯವಸ್ಥೆ, ಹಾಸಿಗೆ ಹೆಚ್ಚಳ ಸೇರಿದಂತೆ ಆಸ್ಪತ್ರೆಗಳ ಮೂಲ ಸೌಲಭ್ಯ ಹೆಚ್ಚಿಸುವ ಅಗತ್ಯವಿದೆ. ಅಧಿಕಾರಿಗಳು ಈಗಿನಿಂದಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು’ ಎಂದೂ ಹೇಳಿದರು.

‘ಮಾಸ್ಕ್ ಧರಿಸುವುದು, ಅಂತರ ಹಾಗೂ ಶುಚಿತ್ವ ಕಾಪಾಡುವುದೇ ಕೊರೊನಾ ತಡೆಯಲು ದಾರಿ. ಜಿಲ್ಲೆಯ ಜನತೆ ಇದನ್ನು ತಪ್ಪದೇ ಪಾಲಿಸಬೇಕು. ಅನಗತ್ಯ ಓಡಾಟ ಹಾಗೂ ಗುಂಪಾಗಿ ಸೇರಬಾರದು. ಆಗಾಗ ಸಾಬೂನುನಿಂದ ಕೈ ತೊಳೆದುಕೊಳ್ಳಬೇಕು ಮತ್ತು ಮನೆಯ ಸುತ್ತಮುತ್ತ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಮನೆಯಲ್ಲಿ ದೀರ್ಘ ಕಾಯಿಲೆಯಿಂದ ಬಳಲುತ್ತಿರುವವರು, ಹಿರಿಯ ನಾಗರಿಕರು ಹಾಗೂ ಮಕ್ಕಳು ಇದ್ದಲ್ಲಿ ಅವರ ಆರೋಗ್ಯದ ಬಗ್ಗೆ ಕುಟುಂಬಸ್ಥರು ವಿಶೇಷ ಕಾಳಜಿ ವಹಿಸಬೇಕು. ಹೊರಗಡೆಯಿಂದ ಮನೆಗೆ ಹೋದ ನಂತರ ನೇರವಾಗಿ ಕಾಯಿಲೆ ಪೀಡಿತರನ್ನು ಭೇಟಿಯಾಗಬಾರದು’ ಎಂದೂ ಹೇಳಿದರು.

ಅಂಗಡಿ– ಮುಂಗಟ್ಟುಗಳ ವಿರುದ್ಧ ಕ್ರಮ: ‘ಅನ್‍ಲಾಕ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಹುತೇಕ ಚಟುವಟಿಕೆಗಳು ಚಾಲ್ತಿಯಲ್ಲಿದ್ದು, ಅಂಗಡಿ ಮುಂಗಟ್ಟುಗಳ ಮುಂದೆ ಸಾರ್ವಜನಿಕರು ಗುಂಪಾಗಿ ಸೇರಿದ್ದಲ್ಲಿ ಅಥವಾ ಸಾಮಾಜಿಕ ಅಂತರ ಕಾಪಾಡಲು ಅಂಗಡಿಗಳು ವಿಫಲವಾದಲ್ಲಿ ಅಂತಹ ಅಂಗಡಿ– ಮುಂಗಟ್ಟುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಗೃಹ ಬಂಧನ ಉಲ್ಲಂಘಿಸುವಂತಿಲ್ಲ: ‘ಅನ್ಯ ರಾಜ್ಯದಿಂದ ಬಂದವರು ಅಥವಾ ಕೊರೊನಾ ಸೋಂಕಿತರ ಸಂಪರ್ಕಕ್ಕೆ ಒಳಗಾದವರಿಗೆ 14 ದಿನಗಳ ಕಾಲ ಹೋಂ ಕ್ವಾರಂಟೈನ್ ಕಡ್ಡಾಯವಾಗಿದ್ದು, ಯಾರಾದರೂ ಇದನ್ನು ಉಲ್ಲಂಘಿಸಿದ್ದಲ್ಲಿ ಅಂತಹವರ ವಿರುದ್ಧ ಎಫ್.ಐ.ಆರ್. ದಾಖಲಿಸಬೇಕು’ ಎಂದು ಅಧಿಕಾರಿಗಳಿಗೆ ಶರತ್ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವಿರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ಕಿಶೋರಬಾಬು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಳಿನ ಅತುಲ್, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎ. ಜಬ್ಬಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ್, ಉಪ ವಿಭಾಗಾಧಿಕಾರಿಗಳಾದ ರಾಮಚಂದ್ರ ಗಡಾದೆ, ರಮೇಶ ಕೋಲಾರ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT