ಬುಧವಾರ, ಜೂನ್ 29, 2022
21 °C
ಕೋವಿಡ್‌ ಚುಚ್ಚುಮದ್ದು ಪಡೆಯಲು ನಿರಾಕರಿಸಿದ ಅಂಗವಿಕಲ ವ್ಯಕ್ತಿ, ಮನವೊಲಿಸಿದ ವಿ.ವಿ.ಜ್ಯೋತ್ಸ್ನಾ

ಕಲಬುರ್ಗಿ: ಧರಣಿ ಕೂತು ಲಸಿಕೆ ಕೊಡಿಸಿದ ಜಿಲ್ಲಾಧಿಕಾರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಅಫಜಲಪುರ ತಾಲ್ಲೂಕಿನ ಘತ್ತರಗಾ ಗ್ರಾಮದಲ್ಲಿ ಶನಿವಾರ ಅಂಗವಿಕಲ ವ್ಯಕ್ತಿಯೊಬ್ಬರಿಗೆ ಲಸಿಕೆ ಕೊಡಿಸಲು ಸ್ವತಃ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯೇ ಧರಣಿ ನಡೆಸಿದರು.

ಅಂಗವಿಕಲ ವ್ಯಕ್ತಿ ಬಲಭೀಮ ಭಯದಿಂದ ಕೋವಿಡ್‌ ಲಸಿಕೆ ಪಡೆಯಲು ನಿರಾಕರಿಸಿದಾಗ, ಅವರ ಮನವೊಲಿಸಲು  ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಸಾಕಷ್ಟು ತಿಳಿಹೇಳಿದರು. ‘ಏನೇ ಆದರೂ ನಾವು ಇಲ್ಲೇ ಇರುತ್ತೇವೆ. ವೈದ್ಯರೂ ಇದ್ದಾರೆ ಹೆದರಬೇಡಿ, ಲಸಿಕೆ ಪಡೆಯಿರಿ’ ಎಂದರು. ಇದ್ಯಾವುದಕ್ಕೂ ಆ ವ್ಯಕ್ತಿ ಓಗೊಡಲಿಲ್ಲ.

ಕೊನೆಗೆ ಅವರ ಮುಂದೆಯೇ ಧರಣಿ ಕೂತ ಜಿಲ್ಲಾಧಿಕಾರಿ, ‘ನೀವು ಲಸಿಕೆ ಪಡೆಯುವವರೆಗೂ ನಾನು ಏಳುವುದಿಲ್ಲ’ ಎಂದು ಪಟ್ಟು ಹಿಡಿದರು. ಅವರ ಜೊತೆಯಲ್ಲೇ ಇದ್ದ ಸಿಇಒ ಡಾ.ದಿಲೀಷ್‌ ಶಶಿ ಕೂಡ ಕುಳಿತರು. ಈ ಎಲ್ಲಾ ಬೆಳವಣಿಗೆ ಕಂಡು ಮನಸ್ಸು ಬದಲಿಸಿದ ಬಲಭೀಮ ಲಸಿಕೆ ಪಡೆದರು. ಸುತ್ತ ಸೇರಿದವರೆಲ್ಲ ಚಪ್ಪಾಳೆ ತಟ್ಟಿ ಅಭಿನಂದಿಸಿದರು.‌

ನಿರಾಕರಣೆಗೆ ಕಾರಣವೇನು?: ‘ಬಲಭೀಮ ಅವರು ಚಿಕ್ಕವರಿದ್ದಾಗ ಪೋಲಿಯೊ ಚುಚ್ಚುಮದ್ದು ಹಾಕಲಾಗಿತ್ತು. ಆದರೂ ಅವರಿಗೆ ಅಂಗವೈಕಲ್ಯದಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಈಗ ಕೋವಿಡ್‌ ಲಸಿಕೆ ಪಡೆದರೆ ಏನಾಗುವುದೋ ಎಂಬ ಭಯ ಅವರಲ್ಲಿ ಆವರಿಸಿತ್ತು’ ಎಂದು ಗ್ರಾಮಸ್ಥರು ತಿಳಿಸಿದರು.

ಈ ಬಗ್ಗೆ ತಿಳಿಹೇಳಿದ ಅಧಿಕಾರಿಗಳು, ಕೊನೆಗೂ ಲಸಿಕೆ ಕೊಡುವಲ್ಲಿ ಯಶಸ್ವಿಯಾದರು.

‘ಲಸಿಕೆಯಿಂದ ಯಾರೂ ಸತ್ತಿಲ್ಲ’

ಅಫಜಲಪುರ: ‘ಕೋವಿಡ್‌ ಸೋಂಕಿನಿಂದ ಸಾಕಷ್ಟು ಜನ ಮೃತಪಟ್ಟಿದ್ದಾರೆ. ಆದರೆ, ಕೋವಿಡ್ ಲಸಿಕೆಯಿಂದ ಮಾತ್ರ ಇನ್ನೂವರೆಗೂ ಯಾರೂ ಮೃತಪಟ್ಟಿಲ್ಲ. ಯಾರಿಗೂ ಇದರ ಬಗ್ಗೆ ಭಯ ಬೇಡ. ಎಲ್ಲರೂ ಸುರಕ್ಷಿತರಾಗಿ ಲಸಿಕೆ ಹಾಕಿಸಿಕೊಳ್ಳಬೇಕು‘ ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ತಿಳಿಸಿದರು.

ಘತ್ತರಗಾ ಗ್ರಾಮ ಪಂಚಾಯಿತಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಲಸಿಕೆಯಿಂದ ಸುರಕ್ಷಿತವಾಗಿ ಬದುಕಬಹುದು. ಶರೀರದಲ್ಲಿ ಲಸಿಕೆ ಹಾಕಿಕೊಂಡವರಿಗೆ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಷ್‌ ಶಶಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಠ್ಠಲ ನಾಟೀಕಾರ, ಸಹಾಯಕ ಆಯುಕ್ತ ರಾಮಚಂದ್ರ ಗಡದೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಬ್ದುಲ್ ನಬಿ, ತಾಲ್ಲೂಕು ವೈದ್ಯಾಧಿಕಾರಿ ರತ್ನಾಕರ ತೋರಣ, ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು