ಕಲಬುರ್ಗಿ: ತಾಲ್ಲೂಕಿನ ಹರಸೂರು ಗ್ರಾಮದಲ್ಲಿ ಸೋಮವಾರ ದೀಪಾವಳಿ ಸಡಗರ ಮನೆ ಮಾಡಿತು. ಬಲಿಪಾಡ್ಯಮಿ ವಿಶೇಷವಾಗಿ ಹಳ್ಳಿಯ ಯುವಕರು ವೈವಿಧ್ಯಮಯ ಸೋಗು ಹಾಕಿ ಕುಣಿದು ಕುಪ್ಪಳಿಸಿದರು. ಪ್ರತಿ ಬಾರಿ ದೀಪಾವಳಿಯಲ್ಲಿ ಸೋಗಿನ ಕುಣಿತ ಈ ಗ್ರಾಮದಲ್ಲಿ ವಿಶೇಷವಾದದ್ದು.

ಹರಸೂರು ಜೈಭೀಮ ತರುಣ ಸಂಘದ ನೇತೃತ್ವದಲ್ಲಿ ಆಯೋಜಿಸಿದ್ದ ಈ ಸಾಂಪ್ರದಾಯಿಕ ಕುಣಿತದಲ್ಲಿ ಯುವಕರು ರಾಮ, ಕೃಷ್ಣ, ರಾವಣ, ಹನುಮಂತ, ಸೀತೆ, ಮಹಿಷಿ, ಲಕ್ಷ್ಮಿ, ಸರಸ್ವತಿ, ಶಿವ, ಪಾರ್ವತಿ, ಜೋಕುಮಾರಸ್ವಾಮಿ... ಹೀಗೆ ವೈವಿಧ್ಯಮಯ ಪೌರಾಣಿಕ ವೇಷ ಧರಿಸಿಕೊಂಡು ಸಂಭ್ರಮಿಸಿದರು. ದೇವ
ಸ್ಥಾನದ ಅಂಗಳದ ಮುಂದೆ ಹಾಕಿದ ವಿಶಾಲ ರಂಗವಲ್ಲಿ ಮೇಲೆ ಕುಣಿಯುತ್ತ, ಹಾಡುತ್ತ ಕೋಲಾಟ ಆಡಿದರು.

ತರುಣ ಸಂಘದ ಹಿರಿಯ ಮುಖಂಡರು ಡೋಲು ಬಾರಿಸುತ್ತ, ಜನಪದ ಗೀತೆಗಳನ್ನು ಹಾಡಿದರು. ಸುತ್ತಲೂ ಸೇರಿದವರೆಲ್ಲ ಸಿಳ್ಳೆ- ಕೇಕೆ ಹಾಕುತ್ತ ವೇಷಧಾರಿ ಯುವಕರನ್ನು ಹುರುದುಂಬಿಸಿದರು.

‘ಬಂದೇನೋ ಗಣಪ ನಿನಗ ವಂದಿಸಾಕ...’, ‘ಹಳ್ಳಿಯ ಹೆಣ್ಣೋ ಬಾಳಿನ ಕಣ್ಣೋ ಹೋಯ್ ಹೋಯ್ ಹೋಯ್...’ ಮುಂತಾದ ಜನಪದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು. ಅದಕ್ಕೆ ತಕ್ಕಂತೆ ಕಲಾವಿದರ ಇನ್ನೊಂದು ತಂಡ ಡೋಲು, ತಾಳಗನ್ನು ಬಾರಿಸಿತು. ಇತ್ತ ತಾಳಕ್ಕೆ ತಕ್ಕಂತೆ ಕೋಲು ಬಡಿಯುತ್ತ ಕಣವನ್ನು ಸುತ್ತುತ್ತ ಕುಣಿಯುವ ವೇಷಧಾರಿಗಳು. ಈ ಸಂಭ್ರಮ ನೋಡಲು ಪುಟಾಣಿಗಳಾದಿಯಾಗಿ ಮಹಿಳೆಯರು, ಹಿರಿಯರೂ ಸೇರಿದ್ದರು.

ಗರಿಗರಿ ಎನ್ನುವಂಥ ಬಣ್ಣಬಣ್ಣದ ಸೀರೆಗಳನ್ನು ಉಟ್ಟುಕೊಂಡು, ಉದ್ದುದ್ದ ಜಡೆ ಕಟ್ಟಿಕೊಂಡು, ಬೈತಲೆ ಬೊಟ್ಟು, ಕುಂಕುಮ ಧರಿಸಿ, ಬೆಂಡೋಲೆ, ಬಳೆ, ಸರಗಿಸರ, ಬೋರಮಾಳ, ನೆಕ್ಲೆಸ್, ಕಾಲ್ಗೆಜ್ಜೆ, ತೋಳುಬದಿ, ಸೊಂಟಪಟ್ಟಿ... ಅಬ್ಬಾ! ಒಂದೇ ಎರಡೇ... ದೇವತೆಯೊಬ್ಬಳಿಗೆ ಮಾಡಬಹುದಾದ ಎಲ್ಲ ಅಲಂಕಾರವನ್ನೂ ಕ್ರಮಬದ್ಧವಾಗಿ ಮಾಡಿಕೊಂಡು ಗಮನ ಸೆಳೆದರು.

ಸಿದ್ಧಾರ್ಥ, ಶಿವಯೋಗಿ, ಜೈಭೀಮ್, ನವೀನ್, ಪ್ರದೀಪ್, ವಿಠಲ, ಶರಣಕುಮಾರ್, ಜೀವನ್, ಶರಣು, ಸುಂದರ್ ಮುಂತಾದ ಯುವಕರು ಸಂಕೋಚ ಬಿಟ್ಟು, ಸೀರೆಯುಟ್ಟು ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಹಳ್ಳಿಯ ಹುಡುಗರೇ ಇವರ ಮೇಕಪ್ ಮ್ಯಾನ್ಗಳು, ವ್ಯರ್ಥ ರಟ್ಟು, ಪ್ಯಾರಿಸ್ ಪ್ಲಾಸ್ಟರಿನಿಂದ ಮಾಡಿದ ಕಿರೀಟ, ಬಟ್ಟೆ ಸುತ್ತಿ ಮಾಡಿದ ಹನುಮಂತನ ಬಾಲ, ಗದೆ, ರಟ್ಟಿನಿಂದ ಮಾಡಿದ ರಾವಣನ ಹತ್ತು ತಲೆಗಳು, ಬಿದಿರಿನಿಂದ ಮಾಡಿದ ಬಿಲ್ಲು, ಬಾಣ, ಬತ್ತಳಿಕೆ, ವ್ಯರ್ಥ ಸಿ.ಡಿ.ಗೊಂದು ಬೇರಿಂಗ್ ಅಳವಡಿಸಿ ಸದಾ ತಿರುಗುವಂತೆ ಮಾಡಿದ ವಿಷ್ಣುವಿನ ಚಕ್ರ... ಎಲ್ಲವೂ ಸಂಪೂರ್ಣ ಹಳ್ಳಿಪ್ರಭೆ. ಒಂದೂ ವಸ್ತುವನ್ನು ಹೊರಗಿನಿಂದ ಕೊಳ್ಳದೇ ತಮ್ಮಲ್ಲೇ ಇರುವ ವಸ್ತುಗಳನ್ನು ಬಳಸಿ ಶೃಂಗಾರ ಪ್ರಧಾನವಾಗಿ ಮೆರೆದಿದ್ದು ಮಾತ್ರ ಮನಸೋಲುವಂತೆ ಮಾಡಿತು.

ಲಕ್ಷ್ಮಿ ವೇಷ ಧರಿಸಿ ಕುಣಿಯುತ್ತಿದ್ದ ಅಳಿಯನೊಬ್ಬನಿಗೆ ಅವರ ಸೋದರತ್ತೆ ಚಿನ್ನದ ತಾಳಿ, ಬೋರಮಾಳ ಸರ ಹಾಕಿ ಸಂಭ್ರಮಿಸಿದರು. ಈ ಕುಣಿತ ನೋಡಲು ಬಂದಿದ್ದ ಮನೆಯ ಹೆಣ್ಣುಮಕ್ಕಳು ಸ್ವತಃ ತಮ್ಮ ಕೆಲವು ಆಭರಣಗಳನ್ನು ಬಿಚ್ಚಿ ಕುಣಿಯುವ ಹುಡುಗರಿಗೆ ಹಾಕಿ ಖುಷಿಪಟ್ಟರು. ಉಳಿದಂತೆ ಎಲ್ಲರೂ ಬಿಂಟೆಕ್ಸ್ ಸರ, ಮುತ್ತಿನಹಾರ, ಹೂವಿನ ಮಾಲೆಗಳನ್ನು ಹಾಕಿಕೊಂಡರು.

‘ಹರಸೂರು ಗ್ರಾಮದಲ್ಲಿ ಪ್ರತಿ ದೀಪಾವಳಿಗೂ ಈ ರೀತಿ ಪೌರಾಣಿಕ, ಐತಿಹಾಸಿಕ ಪಾತ್ರಗಳ ವೇಷ ಧರಿಸಿ ಕುಣಿಯುವುದು ವಾಡಿಕೆ. ನಾವು ಚಿಕ್ಕವರಾಗಿದ್ದಾಗಲೂ ಈ ರೀತಿ ವೇಷ ಧರಿಸಿ ಕುಣಿಯುತ್ತಿದ್ದೇವು. ಈಗ ಹುಡುಗರಿಗೆ ಪ್ರೋತ್ಸಾಹ ಕೊಡುತ್ತಿದ್ದೇವೆ. ಯಾವಾಗಿನಿಂದ ಈ ಸಂಪ್ರದಾಯ ಆರಂಭವಾಗಿದೆ ಎಂಬುದು ಗೊತ್ತಿಲ್ಲ. ನಾವು 50 ವಾರ್ಷಗಳಿಂದ ಹಿರಿಯರ ಸಂಪ್ರದಾಯ ಮುಂದುವರಿಸಿಕೊಂಡು ಬಂದಿದ್ದೇವೆ. ಇಡೀ ಜಿಲ್ಲೆಯಲ್ಲಿ ಹರಸೂರಿನಲ್ಲಿ ಇಂಥ ವಿಶಿಷ್ಟ ಆಚರಣೆ ಇದೆ’ ಎಂದು ಹಿರಿಯರಾದ ಕರಿಬಸಪ್ಪ, ದೇವಪ್ಪ, ನೀಲಕಂಠಪ್ಪ ರಾಣಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.