ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗಿಣಾ ನದಿಗೆ ಹೊಸ ಸೇತುವೆ ಯಾವಾಗ?

ಪ್ರವಾಹದಲ್ಲಿ ಮುಳುಗುವ ಸೇತುವೆಯಿಂದ ತೊಂದರೆ, ಶೀಘ್ರ ಸಮಸ್ಯೆ ಪರಿಹಾರಕ್ಕೆ ಸಾರ್ವಜನಿಕರ ಆಗ್ರಹ
Last Updated 26 ಸೆಪ್ಟೆಂಬರ್ 2020, 1:39 IST
ಅಕ್ಷರ ಗಾತ್ರ

ಚಿತ್ತಾಪುರ: 4 ದಶಕಗಳ ಹಿಂದೆ ತಾಲ್ಲೂಕಿನ ದಂಡೋತಿ ಗ್ರಾಮದ ಬಳಿ ಕಾಗಿಣಾ ನದಿಗೆ ಕಟ್ಟಲಾದ ಸೇತುವೆ ಎತ್ತರ ಕಡಿಮೆಯಿದ್ದು, ಮಳೆಗಾಲದಲ್ಲಿ ಉಕ್ಕಿ ಬರುವ ಪ್ರವಾಹದಲ್ಲಿ ಪದೇ ಪದೇ ಮುಳುಗುತ್ತದೆ. ಎಲ್ಲರ ಹಿತದೃಷ್ಟಿಯಿಂದ ಎತ್ತರವಾದ ಹೊಸ ಸೇತುವೆ ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರತಿ ವರ್ಷ ಮಳೆಗಾಲದಲ್ಲಿ ಸುರಿಯುವ ಮಳೆ ಮತ್ತು ನದಿಯಲ್ಲಿ ಬರುವ ಪ್ರವಾಹದಿಂದ ಸೇತುವೆ ಮುಳುಗಡೆಯಾಗುತ್ತದೆ. ಇದರಿಂದ ಸಾರಿಗೆ ಸಂಚಾರ ಸಂಪೂರ್ಣ ಬಂದ್ ಆಗುತ್ತದೆ ಅಲ್ಲದೇ ತಾಲ್ಲೂಕಿನ ಹಳ್ಳಿಗಳು ಅಲ್ಲದೇ ಕಾಳಗಿ, ಸೇಡಂ ತಾಲ್ಲೂಕು, ಜಿಲ್ಲಾ ಕೇಂದ್ರ ಕಲಬುರ್ಗಿ ಸಂಪರ್ಕ ಕಡಿದು ಹೋಗುತ್ತದೆ.

‘ಸೇತುವೆ ಮುಳುಗಡೆಯಿಂದ ಸಂಕಷ್ಟಕ್ಕೀಡಾಗುತ್ತೇವೆ. ಚಿತ್ತಾಪುರ ಪಟ್ಟಣಕ್ಕೆ ರೈತರು, ವ್ಯಾಪಾರಿಗಳು, ಸರ್ಕಾರಿ ನೌಕರರು, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಓಡಾಡಲು ತೊಂದರೆಯಾಗುತ್ತದೆ. ಬೇರೆ ಮಾರ್ಗ ದಲ್ಲಿ ಓಡಾಟ ಅಷ್ಟು ಸುಲಭವಾಗಿ ಇರುವುದಿಲ್ಲ’ ಎಂದು ಜನ ಹೇಳುತ್ತಾರೆ.

‘ದಂಡೋತಿ ಗ್ರಾಮದ ಹತ್ತಿರ ಕಾಗಿಣಾ ನದಿಗೆ ಹೊಸ ಸೇತುವೆ ನಿರ್ಮಿಸಲು ಲೋಕೋಪಯೋಗಿ ಇಲಾಖೆಯು ದಶಕದ ಹಿಂದೆಯೇ ₹30 ಕೋಟಿ ಅಂದಾಜು ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ, ಇದಕ್ಕೆ ಪೂರಕವಾಗಿ ಸರ್ಕಾರದಿಂದ ಇದುವರೆಗೆ ಸ್ಪಂದನೆ ಸಿಕ್ಕಿಲ್ಲ’ ಎಂದು ಜನರು ಬೇಸರದಿಂದ ಹೇಳುತ್ತಾರೆ.

ತೆಲಂಗಾಣದ ಗಡಿಯಿಂದ ಪುಟಪಾಕ್, ನಾರಾಯಣಪೇಟ, ಗುರುಮಠಕಲ್ ಮೂಲಕ ಬರುವ ರಾಜ್ಯ ಹೆದ್ದಾರಿ (ಎಸ್.ಎಚ್-126) ತಾಲ್ಲೂಕಿನ ಭೀಮನಹಳ್ಳಿ ಗ್ರಾಮದ ಹತ್ತಿರ ರಾಮತೀರ್ಥ, ಭಂಕಲಗಾ, ಹೊಸೂರ, ಸಾತನೂರ, ಚಿತ್ತಾಪುರ, ದಂಡೋತಿ, ಕಲಗುರ್ತಿ, ಹೆಬ್ಬಾಳ ಮಾರ್ಗವಾಗಿ ಕಮಲಾಪುರದ ಹತ್ತಿರ ಕಲಬುರ್ಗಿ- ಹುಮನಾಬಾದ್ ಹೆದ್ದಾರಿಗೆ ಕೂಡುತ್ತದೆ. ದಂಡೋತಿ ಸೇತುವೆ ನಿರ್ಮಿಸಲು ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ (ಕೆಎಸ್ಎಚ್‌ಡಿಪಿ) ಸೇತುವೆ ಕಾಮಗಾರಿ ಕೈಗೊಳ್ಳಲು ಸರ್ಕಾರಕ್ಕೆ ಅವಕಾಶವಿದೆ ಎಂದು ಲೋಕೋಪಯೋಗಿ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT