ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಂ: ಪೊಲೀಸ್ ಠಾಣೆಗೆ ಕಾಯಕಲ್ಪ ಯಾವಾಗ?

ಸೇಡಂ: ಮಳೆಯಾದಾಗ ಜಲಾವೃತಗೊಳ್ಳುವ ಕಟ್ಟಡ; ಕಂಪ್ಯೂಟರ್, ದಾಖಲೆಪತ್ರಗಳಿಗಿಲ್ಲ ಸುರಕ್ಷತೆ
Last Updated 1 ಅಕ್ಟೋಬರ್ 2020, 8:19 IST
ಅಕ್ಷರ ಗಾತ್ರ

ಸೇಡಂ: ಪಟ್ಟಣದ ಪೊಲೀಸ್ ಠಾಣೆಯು ನೂತನ ಕಟ್ಟಡ ಕಾಣದೆ ಮಳೆಯಾದಾಗಲೆಲ್ಲ ಜಲಾವೃತಗೊಳ್ಳುವ ಹಳೆಯ ಕಟ್ಟಡದಲ್ಲಿಯೇ ಕೆಲಸ ನಿರ್ವಹಿಸುವ ದುಸ್ಥಿತಿ ಇದೆ.

19ನೇ ಶತಮಾನದ ಪೂರ್ವಾರ್ಧದ ನಿಜಾಮರ ಕಾಲದಲ್ಲಿ ನಿರ್ಮಾಣವಾಗಿದೆ ಎನ್ನಲಾದ ಸೇಡಂ ಪೊಲೀಸ್ ಠಾಣೆಯ ಕಟ್ಟಡದ ಪರಿಸ್ಥಿತಿ ಇಂದಿಗೂ ಶೋಚನೀಯವಾಗಿಯೇ ಉಳಿದಿದೆ. ಕೆಲ ವರ್ಷಗಳ ಹಿಂದೆ ಕಟ್ಟಡ ಅಲ್ಪಸ್ವಲ್ಪ ಸುಣ್ಣ-ಬಣ್ಣ ಕಂಡಿದೆಯಾದರೂ ಸಮಗ್ರವಾಗಿ ನವೀಕರಣಗೊಂಡಿಲ್ಲ. ಸಮಾಜವನ್ನು ಕಾಯುವ ಪೊಲೀಸರ ಠಾಣೆಯಲ್ಲಿನ ಸಾಮಗ್ರಿಗಳು, ಕಂಪ್ಯೂಟರ್‌ ಅಸುರಕ್ಷಿ ತವಾಗಿರುವುದು ವಿಪರ್ಯಾಸವೇ ಸರಿ ಎನ್ನುತ್ತಾರೆ ಸೇಡಂ ನಾಗರಿಕರು.

ಮಳೆಗಾಲ ಬಂದರಂತೂ ಪೊಲೀಸ್‌ ಠಾಣೆಯಲ್ಲಿನ ದಾಖಲೆಪತ್ರ, ಶಸ್ತ್ರಾಸ್ತ್ರ, ಕಂಪ್ಯೂಟರ್‌ ಮತ್ತಿತರ ಸಾಮಗ್ರಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಹೇಗೆ ಎನ್ನುವುದೇ ಪೊಲೀಸರಿಗೆ ತಲೆನೋವಾಗಿದೆ. ನಾಲ್ಕು ವರ್ಷಗಳ ಹಿಂದೆ ಸುರಿದ ಭಾರಿ ಮಳೆಗೆ ಪಿಎಸ್ಐ ಕುಳಿತುಕೊಳ್ಳುವ ಕೊಠಡಿ, ಕಂಪ್ಯೂಟರ್‌ ಕೊಠಡಿ ಹಾಗೂ ಹಾಲ್‌ ಸಂಪೂರ್ಣ ಜಲಾವೃತಗೊಂಡಿತ್ತು. ಇದೇ ಸೆ.18ರಂದು ಸುರಿದ 133 ಮಿ.ಮೀ ಮಳೆಗೆ ಇಡೀ ಪೊಲೀಸ್‌ ಠಾಣೆ ನೀರಲ್ಲಿ ಮುಳುಗಿ ಕಂಪ್ಯೂಟರ್ ಸೇರಿದಂತೆ ವಿವಿಧ ಸಾಮಗ್ರಿಗಳು ಕೆಟ್ಟು ಹೋಗಿದ್ದವು.

ಠಾಣೆಯಲ್ಲಿ ನುಗ್ಗಿದ ನೀರಿನಲ್ಲಿಯೇ ಪೊಲೀಸರು ದಿನವಿಡೀ ಕುಳಿತು ಕಾರ್ಯನಿರ್ವಹಿಸಿದರು. ಪಿಎಸ್‌ಐ ಜೀಪ್ ಕೂಡ ಒಂದು ದಿನ ನಿಂತು, ಮಾರನೇ ದಿನ ಸಂಚರಿಸಿತು. ದಿನವಿಡೀ ಜನರೇಟರ್‌ ಮೂಲಕ ನೀರು ತೆಗೆಯುವಲ್ಲಿಯೇ ಪೊಲೀಸರು ಹರಸಾಹಸಪಟ್ಟರು. ಅಲ್ಲದೆ ನೀರಲ್ಲಿ ಒದ್ದೆಯಾದ ಕಾಗದಪತ್ರಗಳನ್ನು ಬಿಸಿಲಲ್ಲಿ ಒಣಗಿಸಿ ಮತ್ತೆ ಸುರಕ್ಷತವಾಗಿಡಲು ಹರಸಾಹಸ ಪಡಬೇಕಾಯಿತು.

ಪಟ್ಟಣದಲ್ಲಿ ಜನಸಂಖ್ಯೆಗೆ ತಕ್ಕಂತೆ ಹಳೆ ಆಸ್ಪತ್ರೆಯಿಂದ ನೂತನ ಆಸ್ಪತ್ರೆ, ನೂತನ ಜೆಸ್ಕಾಂ ಇಲಾಖೆ ಕಟ್ಟಡ, ನೂತನ ಪ್ರವಾಸಿ ಮಂದಿರ, ನೂತನ ಬಸ್‌ ನಿಲ್ದಾಣ (ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ), ರೈಲು ನಿಲ್ದಾಣ ಕಟ್ಟಡಗಳು ಜೀರ್ಣೋದ್ಧಾರಗೊಂಡಿವೆ. ಮಿನಿ ವಿಧಾನಸೌಧ ಕಟ್ಟಡ ಕೂಡ ನಿರ್ಮಾಣವಾಗಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ಇದರ ಜೊತೆಗೆ ಪೊಲೀಸ್ ಠಾಣೆಯ ಮುಂದಿರುವ ರಸ್ತೆ ಕೂಡ ಅಭಿವೃದ್ಧಿ ಕಂಡಿದೆ. ಆದರೆ ಪೊಲೀಸ್‌ ಠಾಣೆ ಮಾತ್ರ ತಗ್ಗಿನಲ್ಲಿಯೇ ಇರುವುದರಿಂದ ನೀರು ನುಗ್ಗಿ ಜಲಾವೃತಗೊಳ್ಳುತ್ತಿದೆ’ ಎನ್ನುತ್ತಾರೆ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಗುತ್ತೇದಾರ.

‘ಪೊಲೀಸ್ ಠಾಣೆಯಿರುವ ಜಾಗದಲ್ಲಿಯೇ ಸಾಕಷ್ಟು ಸ್ಥಳ ಇದೆ. ಆದರೆ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ ನೂತನ ಕಟ್ಟಡ ನಿರ್ಮಿಸಿದರೆ ಪೊಲೀಸರು ಮಳೆಗಾಲದಲ್ಲಿ ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಸಾರ್ವಜನಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT