ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | 'ಸಂಸದ ಪ್ರಜ್ವಲ್‌ ಬಂಧಿಸಲು ಆಗ್ರಹ'

ವಿವಿಧ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ
Published 15 ಮೇ 2024, 14:12 IST
Last Updated 15 ಮೇ 2024, 14:12 IST
ಅಕ್ಷರ ಗಾತ್ರ

ಕಲಬುರಗಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಪತ್ತೆ ಮಾಡಿ ಬಂಧಿಸಬೇಕು. ಐಟಿ ಹಾಗೂ ಐಪಿಸಿ ಕಾಯ್ದೆಯನ್ನು ಹಾಕಿ ಮೊಕದ್ದಮೆ ಹೂಡಬೇಕು ಎಂದು ಆಗ್ರಹಿಸಿ ನಗರದ ಜಗತ್ ವೃತ್ತದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಹೋರಾಟಗಾರರು ಪ್ರತಿಭಟಿಸಿದರು.

‘ವಿಕೃತ ಲೈಂಗಿಕ ಸಮೂಹ ಅತ್ಯಾಚಾರ ಹಗರಣವು ಅತ್ಯಂತ ಹೇಯ ಹಾಗೂ ನಾಗರಿಕ ಸಮಾಜ ತಲೆತಗ್ಗಿಸುವ ಕೃತ್ಯವಾಗಿದೆ. ಸಂತ್ರಸ್ತರು ದೂರು ನೀಡದಂತೆ ಬೆದರಿಕೆ, ಅವರನ್ನು ಅಪಹರಿಸುವುದು, ಮಾಹಿತಿ ಇರುವವರು ಕಾನೂನು ಪಾಲಕರಿಗೆ ತಿಳಿಸದೇ ಮುಚ್ಚಿಡುವುದು ಸಹ ಘೋರ ಅಪರಾಧವಾಗಿದೆ’ ಎಂದು ಪ್ರತಿಭಟನಕಾರರು ದೂರಿದರು.

‘ಲೈಂಗಿಕ ಕಿರುಕುಳದ ಬಗ್ಗೆ ಗೊತ್ತಿದ್ದರೂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಿದ್ದು ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಮಾಡಿದ ಅಪಮಾನ. ಸಂತ್ರಸ್ತ ಮಹಿಳೆಯರು ಭೀತಿ ಇಲ್ಲದೇ ದೂರು ನೀಡುವ ವಾತಾವರಣ ನಿರ್ಮಾಣ ಮಾಡಬೇಕು. ಹಗರಣವನ್ನು ಗಂಭೀರವಾಗಿ ಪರಿಗಣಿಸಿ ಸಮರ್ಥ ತನಿಖೆಗೆ ಅವಕಾಶ ಮಾಡಿಕೊಡುವಂತೆ ರಾಜಕೀಯ ನಾಯಕರಿಗೆ ಸೂಚಿಸಬೇಕು’ ಎಂದು ಒತ್ತಾಯಿಸಿದರು.

‘ಎಸ್‌ಐಟಿ ತನಿಖೆಯು ಕಾಯ್ದೆಯ ಅನುಸಾರ ಕಾಲಮಿತಿಯೊಳಗೆ ನಡೆಯಬೇಕು. ಪ್ರಜ್ವಲ್‌ ರೇವಣ್ಣ ಹಿಂದಿನ ಚಾಲಕ ಕಾರ್ತಿಕರನ್ನು ಬಂಧಿಸಿ ವಿಚಾರಣೆಗೆ ಒ‌ಳಪಡಿಸಬೇಕು. ವಿಡಿಯೊಗಳನ್ನು ಹಂಚಿಕೆ ಮಾಡಿದವರ ವಿರುದ್ಧ ಸಾಮಾಜಿಕ ಸ್ವಾಸ್ಥ ಕದಡಿದ ಆರೋಪದ ಮೇಲೆ ಮೊಕದ್ದಮೆ ಹೂಡಬೇಕು’ ಎಂದು ಆಗ್ರಹಿಸಿದರು.

‘ಪ್ರಕರಣದ ಬಗ್ಗೆ ಏ.25ರಂದು ಮಹಿಳಾ ಆಯೋಗದಿಂದ ತನಿಖೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ. ಆದರೂ ಗೃಹ ಇಲಾಖೆ ಹಾಗೂ ಇಂಟಿಲಿಜೆನ್ಸ್‌ ವಿಭಾಗದ ವೈಫಲ್ಯದಿಂದ ಏ.27ರಂದು ಆರೋಪಿ ದೇಶ ಬಿಟ್ಟು ಹೋಗಿದ್ದಾನೆ. ಈ ಇಲಾಖೆ ಸಂಬಂಧಿಸಿದ ಅಧಿಕಾರಿಗಳನ್ನು ವಜಾ ಮಾಡಿ ವಿಚಾರಣೆ ಮಾಡಬೇಕು. ಎಸ್‌ಐಟಿ ತನಿಖೆ ಪೂರ್ಣಗೊಳ್ಳುವವರೆಗೆ ಎಚ್‌.ಡಿ.ರೇವಣ್ಣ ಅವರ ವಿಧಾನಸಭೆ ಸದಸ್ಯತ್ವವನ್ನು ತಾತ್ಕಾಲಿಕವಾಗಿ ರದ್ದುಪಡಿಬೇಕು’ ಎಂದು ಒತ್ತಾಯಿಸಿದರು.

‘ಈ ಆರೋಪಿಗಳ ನಡೆಯು ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವದ ವಿರೋಧಿ ಕೃತ್ಯವಾಗಿದೆ. ಸಂವಿಧಾನಾತ್ಮಕ ಹುದ್ದೆಗೆ ಎಸಗಿದ ಅಪಚಾರಕ್ಕೆ ಸರ್ಕಾರಿ ಕಟ್ಟಡವನ್ನು ಅಪರಾಧ ಕೃತ್ಯ ಬಳಸಿರುವುದಕ್ಕೆ ಮೊಕದ್ದಮೆ ಹೂಡಬೇಕು. ಈ ಕುಟುಂಬಕ್ಕೆ ನೀಡಲಾದ ಎಲ್ಲ ಸರ್ಕಾರಿ ಸೌಲಭ್ಯವನ್ನು ವಾಪಸ್‌ ಪಡೆಯಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಕೆ. ನೀಲಾ, ಪಾಂಡುರಂಗ, ಪ್ರಭು ಖಾನಾಪುರೆ, ಪದ್ಮಾ ಪಾಟೀಲ, ಶ್ರೀಮಂತ ಬಿರಾದಾರ, ಲವಿತ್ರ, ಪದ್ಮನಿ ಕಿರಣಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT