ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ರೈತರ ಜೀವನದ ಜತೆ ಚೆಲ್ಲಾಟ ಬೇಡ’

ಚಿಂಚೋಳಿ ಸಿದ್ಧಸಿರಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಬಾಲರಾಜ್ ಗುತ್ತೇದಾರ ಆಗ್ರಹ
Published 29 ಆಗಸ್ಟ್ 2024, 14:46 IST
Last Updated 29 ಆಗಸ್ಟ್ 2024, 14:46 IST
ಅಕ್ಷರ ಗಾತ್ರ

ಕಲಬುರಗಿ: ‘ಜಿಲ್ಲೆಯ ಚಿಂಚೋಳಿಯಲ್ಲಿ ಆರಂಭಿಸಲಾಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒಡೆತನದ ಸಿದ್ಧಸಿರಿ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಯಾಚರಣೆಗೆ ಸಮ್ಮತಿ ಪತ್ರ ನೀಡುವಂತೆ ಹೈಕೋರ್ಟ್‌ ಆದೇಶಿಸಿದ್ದರೂ ರಾಜ್ಯದ ವಾಯುಮಾಲಿನ್ಯ ಇಲಾಖೆ ಅಧಿಕಾರಿಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನಿಯ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಾಲರಾಜ್ ಗುತ್ತೇದಾರ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಸಿದ್ಧಸಿರಿ ಸಕ್ಕರೆ ಕಾರ್ಖಾನೆ ಮಾಜಿ ಸಂಸದ ಡಾ. ಉಮೇಶ ಜಾಧವ, ಶಾಸಕ ಅವಿನಾಶ ಜಾಧವ ಹಾಗೂ ಚಿಂಚೋಳಿ ತಾಲ್ಲೂಕಿನ ರೈತರ ಶ್ರಮದ ಫಲವಾಗಿ ಪ್ರಾರಂಭವಾಗಿದೆ. ಚಿಂಚೋಳಿ, ಸೇಡಂ, ಕಾಳಗಿ ತಾಲ್ಲೂಕು ಸೇರಿದಂತೆ ಈ ಭಾಗದ ಹಲವು ನಿರುದ್ಯೋಗಿಗಳಿಗೆ ಉದ್ಯೋಗ ದೊರಕಲಿದೆ. ಇದರಿಂದ ಗುಣಮಟ್ಟದ ಶಿಕ್ಷಣ, ಆರೋಗ್ಯ, ರೈತರಿಗೆ ಉತ್ತಮ ಬೆಂಬಲ ಬೆಲೆ ಸೇರಿ ಹಲವು ಅನುಕೂಲ ಆಗಲಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ವಾಯುಮಾಲಿನ್ಯದ ನೆಪ ಹೇಳಿ ಕಂಪನಿಯನ್ನು ಮುಚ್ಚಿಸಿದೆ. ಸಿದ್ಧಸಿರಿ ಕಾರ್ಖಾನೆಯಿಂದ ಮಾತ್ರ ಮಾಲಿನ್ಯ ಆಗುತ್ತಿದೆಯಾ? ಸಿಮೆಂಟ್ ಕಾರ್ಖಾನೆಗಳು, ಪವರ್ ಪ್ಲಾಂಟ್‌ಗಳು ಸೇರಿ ಇತರೆ ಕಂಪನಿಗಳಿಂದ ಮಾಲಿನ್ಯ ಆಗುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

‘ಇದು ಕೇವಲ ರಾಜಕೀಯ ಪ್ರೇರಿತವಾಗಿದೆ. ಸರ್ಕಾರದ ಈ ಧೋರಣೆಯನ್ನು ರೈತರು ಗಮನಿಸುತ್ತಿದ್ದಾರೆ. ಕಾರ್ಖಾನೆ ಬಂದ್ ಆದ ಪರಿಣಾಮ ಕಬ್ಬು ಬೆಳೆದ ರೈತರು ಕಂಗಾಲಾಗಿದ್ದಾರೆ. ಕೂಡಲೇ ವಾಯುಮಾಲಿನ್ಯ ಇಲಾಖೆ ಅಧಿಕಾರಿಗಳು ಕೋರ್ಟ್‌ನ ಆದೇಶ ಪಾಲಿಸಿ ಅನುಮತಿ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ಎರಡು ಸಾವಿರ ಜನರಿಗೆ ಉದ್ಯೋಗ: ‘ಸಿದ್ಧಸಿರಿ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಎರಡು ಸಾವಿರ ಜನರಿಗೆ ಉದ್ಯೋಗ ದೊರೆತಿದೆ. ಸಾವಿರಾರು ರೈತರಿಗೆ ಲಾಭವಾಗುತ್ತಿದೆ. ಆದರೆ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಹೈಕೋರ್ಟ್ ಆದೇಶವಿದ್ದರೂ ಕಾರ್ಖಾನೆ ಮರು ಆರಂಭಕ್ಕೆ ಅನುಮತಿ ನೀಡುತ್ತಿಲ್ಲ. ಈ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವಿದೆ’ ಎಂದು ಬಾಲರಾಜ್ ಗುತ್ತೇದಾರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT