ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಟ್ಟೆ ಕೊಡುವುದನ್ನು ನಿಲ್ಲಿಸಬೇಡಿ: ಎಂ.ಸರಸ್ವತಿ

‘ಮಕ್ಕಳ ಕೂಟ’ದ ನೇತೃತ್ವದಲ್ಲಿ ಪ್ರತಿಭಟನೆ
Last Updated 16 ಡಿಸೆಂಬರ್ 2021, 4:45 IST
ಅಕ್ಷರ ಗಾತ್ರ

ಕಲಬುರಗಿ: ಸರ್ಕಾರ ಮೊಟ್ಟೆ ಕೊಡುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ನಮಗೆ ಮೊಟ್ಟೆ ಮತ್ತು ಬಾಳೆ ಹಣ್ಣು ಬೇಕು ಎಂದು ‘ಮಕ್ಕಳ ಕೂಟ’ದ ನೇತೃತ್ವದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿನಿ ಎಂ.ಸರಸ್ವತಿ ಮಾತನಾಡಿ, ನಾವು ಬಡವರ ಮಕ್ಕಳು. ನಮಗೆ ಮೊಟ್ಟೆ, ಬಾಳೆ ಹಣ್ಣು ಎರಡೂ ಬೇಕು. ಇದಕ್ಕೆ ಕೆಲವು ಮಠಾಧೀಶರು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ.

ಮೊಟ್ಟೆ ತಿಂದರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಮೊಟ್ಟೆ ಕೊಡುವುದನ್ನು ನಿಲ್ಲಿಸಬಾರದು ಎಂದಳು.

ವಿದ್ಯಾರ್ಥಿ ಎಂ.ಸುರೇಶ ಮಾತನಾಡಿ, ನಮಗೆ ಐದು ರೂಪಾಯಿ ಕೊಟ್ಟು ಮೊಟ್ಟೆ ಖರೀದಿಸಲು ಆಗುವುದಿಲ್ಲ. ಸರ್ಕಾರ ನಮಗೆ ಉಚಿತವಾಗಿ ನೀಡುತ್ತಿದೆ. ಇದಕ್ಕೆ ಯಾರೂ ವಿರೋಧ ವ್ಯಕ್ತಪಡಿಸಬಾರದು ಎಂದು ಹೇಳಿದನು.

ಬಾಲ ಸಂಗಮ ಸಂಘಟನೆಯ ಸದಸ್ಯೆ ಪ್ರಿಯಾಂಕ ಮಾವಿನಕರ ಮಾತನಾಡಿ, ಬಡವರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಾರೆ. ಒಂದು ಹೊತ್ತಿನ ಊಟ ಕೊಡಲು ಆಗುವುದಿಲ್ಲ ಎಂದು ಎಷ್ಟೋ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದಾರೆ. ಶಾಲೆಯಲ್ಲಿ ಮೊಟ್ಟೆ, ಬಾಳೆಹಣ್ಣು, ಹಾಲು ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ ಎಂದರು.

ಮೊಟ್ಟೆ ಕೊಡುವ ವಿಷಯದಲ್ಲಿ ಮಠಾಧೀಶರು ಜಾತಿಯನ್ನು ಮಧ್ಯೆ ತರುತ್ತಿದ್ದಾರೆ. ಮಕ್ಕಳು ಎಲ್ಲರ ಜತೆಗೆ ಬೆರೆತು ಆರೋಗ್ಯದಿಂದ ಇರಬೇಕು ಎಂಬುದು ನಮ್ಮ ಉದ್ದೇಶ. ಮೊಟ್ಟೆ ಕೊಡುತ್ತಿರುವುದನ್ನು ವಿರೋಧಿಸುತ್ತಿರುವ ಮಠಾಧೀಶರು ಮಕ್ಕಳ ಆರೋಗ್ಯದ ಬಗ್ಗೆಯೂ ಯೋಚಿಸಬೇಕು ಎಂದು ಹೇಳಿದರು.

ಮೊಟ್ಟೆಯಲ್ಲಿ ಸಾಕಷ್ಟು ಪೌಷ್ಟಿಕಾಂಶಗಳು ಇವೆ ಎಂದು ವೈದ್ಯರೇ ಹೇಳಿದ್ದಾರೆ. ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ನೀಡಲಿ. ಒತ್ತಾಯದಿಂದ ಮಕ್ಕಳ ಮೇಲೆ ಆಹಾರ ಪದ್ಧತಿಯನ್ನು ಹೇರುತ್ತಿರುವುದು ಸರಿಯಲ್ಲ ಎಂದರು.

ಕಲಬುರಗಿ ಜಿಲ್ಲೆಯಲ್ಲಿ ಶೇ 74ಕ್ಕಿಂತ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಮಕ್ಕಳಿಗೆ ಮೊಟ್ಟೆ ನೀಡುವುದನ್ನು ನಿಲ್ಲಿಸಿದರೆ ಅಪೌಷ್ಟಿಕತೆ ಪ್ರಮಾಣ ಇನ್ನೂ ಹೆಚ್ಚುತ್ತದೆ. ಹೀಗಾಗಿ ಈಗ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರ ಮೊಟ್ಟೆ ನೀಡಲಾಗುತ್ತಿದೆ. ಅದನ್ನು ಪ್ರೌಢಶಾಲೆವರೆಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಮಕ್ಕಳಿಂದ ಪೌಷ್ಟಿಕ ಆಹಾರ ಕಿತ್ತುಕೊಳ್ಳುವ ವಿಷಯದಲ್ಲಿ ದೊಡ್ಡ ಷಡ್ಯಂತ್ರ ಅಡಗಿದೆ. ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆ ಹಣ್ಣು ಎರಡನ್ನೂ ನೀಡಿ. ತಮಗೆ ಯಾವುದು ಬೇಕು ಎಂದು ಅವರೇ ಆ‌ಯ್ಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT