ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣರ ಸೇವೆಯಿಂದ ಸಮಸ್ಯೆಗಳು ದೂರ: ಅಮರ ಹಿರೇಮಠ

ಅಮರ ಹಿರೇಮಠಗೆ ವಚನ ಸಂಗೀತ ವಿಭೂಷಣ ಪ್ರಶಸ್ತಿ ಪ್ರದಾನ
Published 9 ಜನವರಿ 2024, 15:52 IST
Last Updated 9 ಜನವರಿ 2024, 15:52 IST
ಅಕ್ಷರ ಗಾತ್ರ

ಕಲಬುರಗಿ: ‘ನಿಸ್ವಾರ್ಥವಾಗಿ ಮಾಡುವ ಶರಣರ ಸೇವೆಯಿಂದ ಜೀವನದಲ್ಲಿ ಎದುರಾಗುವ ಸಮಸ್ಯೆಗಳು ದೂರ ಆಗುತ್ತವೆ’ ಎಂದು ಅಮರ ಕಲಾವೃಂದದ ಅಮರ ಹಿರೇಮಠ ಹೇಳಿದರು.

ನಗರದ ಜಯನಗರದ ಅನುಭವ ಮಂಟಪದಲ್ಲಿ ಕಲಬುರಗಿ ಬಸವ ಸಮಿತಿ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ವತಿಯಿಂದ ಭಾನುವಾರ ಲಿಂ. ಸೋಮನಾಥಪ್ಪ ಬಸವಣ್ಣಪ್ಪ ಖೂಬಾ ಸ್ಮರಣಾರ್ಥ ಹಮ್ಮಿಕೊಂಡಿದ್ದ ಅರಿವಿನ ಮನೆ 782ನೆಯ ಕಾರ್ಯಕ್ರಮ, ‘ವಚನ ಸಂಕ್ರಾಂತಿ’ ಹಾಗೂ ‘ಡಾ. ಬಿ.ಡಿ. ಜತ್ತಿ ವಚನ ಸಂಗೀತ ವಿಭೂಷಣ ಪ್ರಶಸ್ತಿ ಪ್ರದಾನ-2024’ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ತಮ್ಮ ಜೀವನ, ನಡೆದು ಬಂದ ದಾರಿಯನ್ನು ಹಂಚಿಕೊಂಡ ಹಿರೇಮಠ ಅವರು, ‘ಸಂಗೀತ, ಸಾಹಿತ್ಯ, ನಾಟಕ, ನೃತ್ಯದ ಜೊತೆಗೆ ಪಂಚಾಂಗ ಬರೆಯುವಷ್ಟು ಜ್ಯೋತಿಷ್ಯ ಬರುವ ಕಾರಣ ‘ಪ್ರಜಾವಾಣಿ’ಯಲ್ಲಿ ಸಕಲ ಕಲಾವಲ್ಲಭ ಎಂದು ಸಂದರ್ಶನ ಬಂದಿತ್ತು’ ಎಂದು ನೆನಪಿಸಿಕೊಂಡರು.

‘ದಕ್ಷಿಣೆ ಕೊಡದೇ ಸಂಗೀತ ಕಲಿತ ನನಗೆ ಯಾರಾದರೂ ದುಡ್ಡು ಕೊಡಲು ಬಂದರೆ ಮುಜುಗರ ಉಂಟಾಗುತ್ತದೆ’ ಎಂದರು.

ಸಂಗೀತ, ನಾಟಕ, ನೃತ್ಯ ನಿರ್ದೇಶನ ಮಾಡುತ್ತ ‘ಅಮರಪ್ರಿಯ’ ಎಂದು ಖ್ಯಾತರಾದ ಅಮರ ಹಿರೇಮಠ ಅವರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ₹25 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.

ಕೊಳಲು ವಾದನ: ವಚನ–ಸಂಗೀತ– ಧ್ಯಾನ ಎಂಬ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಬಾಪು ಪದ್ಮನಾಭ ಅವರಿಂದ ಜರುಗಿದ ಸಂಗೀತ ಗಾಯನ ಮನ ಸೆಳೆಯಿತು. ಪದ್ಮನಾಭ ಅವರ ಕೊಳಲು ವಾದನ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿತು.

ಸಹ ಕಲಾವಿದರಾದ ಸುನಿಲ್ ಸುಬ್ರಹ್ಮಣ್ಯ ಅವರು ಮೃದಂಗ, ರಮಾಕಾಂತ ರಾವುತ್‌ ತಬಲಾ, ಶ್ರೀನಿಧಿ ಕೌಂಡಿನ್ಯ ಅವರು ಘಟಂ, ಚನ್ನಯ್ಯ ಸಗರಮಠ ಅವರು ಸಹ ಕೊಳಲು ವಾದನದ ಸಾಥ್‌ ನೀಡಿದರು.

ಕಲಬುರಗಿ ಬಸವ ಸಮಿತಿಯ ಅಧ್ಯಕ್ಷೆ ವಿಲಾಸವತಿ ಖೂಬಾ, ದತ್ತಿ ದಾಸೋಹಿ ರಾಜೇಂದ್ರ ಖೂಬಾ, ಕಲ್ಲಪ್ಪ ವಾಲಿ, ಬಂಡೆಪ್ಪ ಕೇಸು, ವೀರಣ್ಣ ದಂಡೆ ಪಾಲ್ಗೊಂಡಿದ್ದರು. ಸಾಹಿತಿ ಜಯಶ್ರೀ ದಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆನಂದ ಸಿದ್ಧಮಣಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT