ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೊಂದು ‘ರಂಗಭೂಮಿ’

ಕುಸನೂರ ರಸ್ತೆಯ ಜಿಡಿಎ ಲೇಔಟ್‌ನ ರಂಗಕರ್ಮಿ ಶಂಕರಯ್ಯ ಘಂಟಿ ಶ್ರಮ
Last Updated 22 ಏಪ್ರಿಲ್ 2021, 4:33 IST
ಅಕ್ಷರ ಗಾತ್ರ

ಕಲಬುರ್ಗಿ: ಮಾಡುವ ಛಲವೊಂದಿದ್ದರೆ ಅಂದುಕೊಂಡಿದ್ದನ್ನು ಸಾಧಿಸಬಹುದು ಎಂಬ ಮಾತಿಗೆ ಉದಾಹರಣೆಯಾಗಿ ಹಿರಿಯ ರಂಗಕರ್ಮಿ ಶಂಕರಯ್ಯ ಘಂಟಿ ಅವರ ಜನರಂಗ ‘ಆಪ್ತರಂಗಭೂಮಿ’ ಕಾಣಿಸುತ್ತದೆ.

2020ರ ಜುಲೈನಲ್ಲಿ ಇಲ್ಲಿನ ಕುಸನೂರ ರಸ್ತೆಯ ಜಿಡಿಎ ಲೇಔಟ್‌ನಲ್ಲಿ ಮನೆಯೊಂದನ್ನು ಕಟ್ಟಿಸಿರುವ ಘಂಟಿ ಅವರಿಗೆ ಅದನ್ನು ರಂಗಭೂಮಿಯ ಚಟುವಟಿಕೆಯ ತಾಣವನ್ನಾಗಿ ಮಾಡಬೇಕು ಎಂಬ ಆಸೆ ಇತ್ತು. ಅದಕ್ಕಾಗಿ ಸ್ವತಃ ವಾಸ್ತುಶಿಲ್ಪಿಯಾಗಿರುವ ತಮ್ಮ ಪುತ್ರನ ಸಹಾಯದಿಂದ ಹಾಗೂ ತಮ್ಮ ರಂಗಭೂಮಿಯ ಅನುಭವದಿಂದ ಮನೆಯಲ್ಲಿಯೇ ರಂಗಮಂದಿರ ನಿರ್ಮಿಸಿದ್ದಾರೆ.

ಈಗಾಗಲೇ ಇಲ್ಲಿ ಎರಡು ನಾಟಕ ಪ್ರದರ್ಶನಗಳೂ ಯಶಸ್ವಿಯಾಗಿ ಜರುಗಿದ್ದು, ಹಲವು ರಂಗಭೂಮಿಗೆ ಸಂಬಂಧಿಸಿದ ವಿಚಾರ ವಿನಿಮಯಗಳಿಗೂ ಇದು ವೇದಿಕೆಯಾಗಿದೆ.

‘ಸಮುದಾಯ’ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಶಂಕರಯ್ಯ ಘಂಟಿ ಅವರು ನಂತರ ತಮ್ಮದೇ ಆದ ‘ಜನರಂಗ’ ನಾಟಕ ತಂಡವನ್ನು ಕಟ್ಟಿಕೊಂಡು ರಂಗ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.

ಕೆಲ ವರ್ಷಗಳ ಹಿಂದೆ ನಾಟಕ ಅಕಾಡೆಮಿ ಪ್ರಶಸ್ತಿ ಬಂದಾಗ ಅದರಿಂದ ಬಂದ ಹಣವನ್ನು ರಂಗಭೂಮಿಯ ಬೆಳವಣಿಗೆಗೇ ಖರ್ಚು ಮಾಡಬೇಕು ಎಂಬ ಆಸೆಯಿಂದ ಮನೆಯ ಒಂದು ಭಾಗವನ್ನು ರಂಗಭೂಮಿ ಚಟುವಟಿಕೆಗಾಗಿ ಮೀಸಲಿರಿಸಬೇಕು ಎಂದು ನಿರ್ಣಯಿಸಿದರು. ಅದಕ್ಕೆ ತಕ್ಕಂತೆ ನಾಟಕವಾಡಲು ವೇದಿಕೆ, ಸುಮಾರು 80ರಿಂದ 100 ಪ್ರೇಕ್ಷಕರು ಕುಳಿತು
ಕೊಳ್ಳಬಹುದಾದಷ್ಟು ವೇದಿಕೆ ಎದುರಿನ ಜಾಗವನ್ನು ವಿನ್ಯಾಸಗೊಳಿಸಿದರು. ಧ್ವನಿ, ಬೆಳಕಿನ ವ್ಯವಸ್ಥೆ ಹಾಗೂ ನಾಟಕದ ಅಗತ್ಯಕ್ಕೆ ತಕ್ಕಂತೆ ವಿನ್ಯಾಸವನ್ನು ಮಾಡಿಕೊಳ್ಳಲು ಸಾಧ್ಯವಾಗುವಂತೆ ವೇದಿಕೆಯ ಎರಡೂ ಬದಿಗಳ ಮೇಲ್ಭಾಗದಲ್ಲಿ ಅಗತ್ಯ ಮಾರ್ಪಾಟುಗಳನ್ನು ಮಾಡಿಸಿದ್ದಾರೆ.

‘ಹುಮನಾಬಾದ್‌ ಕಡೆ ಸಿಗುವ ಕೆಂಪು ಕಲ್ಲುಗಳನ್ನು ಬಳಸಿ ಮನೆಯನ್ನು ಕಟ್ಟಿರುವುದರಿಂದ ಅಷ್ಟಾಗಿ ಸೆಕೆ ತಟ್ಟದು. ರಂಗಭೂಮಿಯಲ್ಲೇ ತಮ್ಮ ಬದುಕನ್ನು ಕಂಡುಕೊಳ್ಳಲು ಬಯಸಿರುವ ಕಲಾವಿದರಿಗೆ ಆದ್ಯತೆ ಮೇರೆಗೆ ಅವಕಾಶ ಕೊಡುತ್ತೇನೆ. ಇತ್ತೀಚೆಗೆ ಧಾರವಾಡದ ಆಟಮಾಟ ತಂಡದ ಮಹಾದೇವ ಹಡಪದ ಹಾಗೂ ಅವರ ತಂಡದವರು ಕಾರ್ಪೊರೇಟರ್ ಕೊಟ್ರೇಗೌಡ ನಾಟಕವನ್ನು ಪ್ರದರ್ಶಿಸಿದರು. ನಾಟಕ ನೋಡಲು ಬಂದವರು ಸ್ವಯಂಪ್ರೇರಣೆಯಿಂದ ₹ 4,500 ಹಣವನ್ನು ನೀಡಿದರು. ನನ್ನ ಕೈಯಿಂದ ₹ 2000 ಸೇರಿಸಿ ತಂಡದ ಕಲಾವಿದರಿಗೆ ಕೊಟ್ಟೆ’ ಎನ್ನುತ್ತಾರೆ ಶಂಕರಯ್ಯ ಘಂಟಿ.

‘ಪ್ರತಿ ವರ್ಷ ನನ್ನ ತಾಯಿಯ ಪುಣ್ಯತಿಥಿಯ ಸಂದರ್ಭದಲ್ಲಿ ಏನಾದರೂ ರಂಗಚಟುವಟಿಕೆ ಮಾಡಬೇಕು ಎಂಬ ಉದ್ದೇಶದಿಂದ ಹೊರಗಡೆ ನಾಟಕ ಪ್ರದರ್ಶನ ಏರ್ಪಡಿಸುತ್ತಿದ್ದೆ. ನಂತರ ದಿನಗಳಲ್ಲಿ ಮನೆಯಲ್ಲಿಯೇ ಥಿಯೇಟರ್‌ ನಿರ್ಮಿಸಬಾರದೇಕೆ ಎಂಬ ಪ್ರಶ್ನೆ ಎದುರಾಯಿತು. ಹಾಗಾಗಿ, ಇದ್ದ 40x60 ಜಾಗದಲ್ಲಿ ಒಂದಷ್ಟು ಭಾಗವನ್ನು ರಂಗ ಚಟುವಟಿಕೆಗಳಿಗೆ ಮೀಸಲಿಡುವ ಉದ್ದೇಶದಿಂದ ಇದನ್ನು ನಿರ್ಮಿಸಿದೆ. 14x12 ವೇದಿಕೆಯನ್ನು ನಿರ್ಮಾಣ ಮಾಡಿದೆ. ವೇದಿಕೆಯ ಹಿಂಭಾಗದಲ್ಲಿ ಗ್ರೀನ್‌ ರೂಮ್ ವ್ಯವಸ್ಥೆಯನ್ನೂ ಮಾಡಿದ್ದೇನೆ’ ಎಂದು ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT