ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಜಿಮ್ಸ್‌ ಆಸ್ಪತ್ರೆಯಲ್ಲಿ ಔಷಧ ಕೊರತೆ

ಸ್ಟಾಕ್‌ ಇಲ್ಲ ಎನ್ನುವ ಜಿಲ್ಲಾ ಆಸ್ಪತ್ರೆ ವಿತರಕರು: ಖಾಸಗಿ ಔಷಧ ಅಂಗಡಿಗಳತ್ತ ಹೆಜ್ಜೆ ಹಾಕುವ ರೋಗಿಗಳು
ವಿಶ್ವರಾಧ್ಯ ಎಸ್‌.ಹಂಗನಳ್ಳಿ
Published 28 ಡಿಸೆಂಬರ್ 2023, 6:10 IST
Last Updated 28 ಡಿಸೆಂಬರ್ 2023, 6:10 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಜಿಮ್ಸ್‌) ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತವಾಗಿ ವಿತರಿಸುವ ಔಷಧಗಳ ಕೊರತೆಯಾಗಿರುವ ಆರೋಪ ಕೇಳಿಬಂದಿದೆ.

ವೈದ್ಯರು ಬರೆಯುವ ಮಾತ್ರೆ ಅಥವಾ ಸಿರಪ್‌ಗಳಲ್ಲಿ ಅರ್ಧದಷ್ಟು ಜಿಮ್ಸ್‌ನಲ್ಲಿ ಸಿಗುವುದಿಲ್ಲ. ‘ನಮ್ಮಲ್ಲಿ ಇಲ್ಲ. ಹೊರಗಡೆ ತೆಗೆದುಕೊಳ್ಳಿ’ ಎಂದು ಆಸ್ಪತ್ರೆಯ ಔಷಧ ವಿಭಾಗದವರು ಹೇಳುತ್ತಾರೆ. ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿಯೇ ಔಷಧ ಇಲ್ಲ ಅಂದರೆ ಹೇಗೆ? ಎಂದು ರೋಗಿಗಳ ಸಂಬಂಧಿಕರು ಮತ್ತು ಔಷಧ ವಿಭಾಗದವರ ಮಧ್ಯೆ ವಾಗ್ವಾದವೂ ನಡೆಯುತ್ತದೆ. ಬಡ ರೋಗಿಗಳು ಗೊಣಗುತ್ತಲೇ ಖಾಸಗಿ ಔಷಧ ಅಂಗಡಿಗಳತ್ತ ಹೆಜ್ಜೆ ಹಾಕುತ್ತಾರೆ.

ಔಷಧ ವಿತರಣೆ ವಿಭಾಗದ ಮೇಲೆ ‘ಲಭ್ಯವಿರುವ ಔಷಧಿಗಳನ್ನು ಮಾತ್ರ ವಿತರಿಸಲಾಗುವುದು’, ‘ಹೊರರೋಗಿಗಳಿಗೆ ಮೂರು ದಿವಸಗಳ ಔಷಧ ವಿತರಿಸಲಾಗುವುದು’, ‘ಮಾನಸಿಕ, ಮಧುಮೇಹ, ಹೃದಯ ಸಂಬಂಧಿ ರೋಗದ ಔಷಧಗಳನ್ನು 15 ದಿವಸಗಳಿಗೆ ಮಾತ್ರ ವಿತರಿಸಲಾಗುವುದು’ ಎಂಬ ಚೀಟಿಗಳನ್ನು ಬಹಿರಂಗವಾಗಿಯೇ ಅಂಟಿಸಿರುವುದು ರೋಗಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದು ಜಿಮ್ಸ್‌ನಲ್ಲಿ ಔಷಧ ಕೊರತೆ ಆಗಿರುವುದನ್ನು ದೃಢಪಡಿಸುತ್ತದೆ.

‘ಬರೆದಿರುವ ಔಷಧಗಳಲ್ಲಿ ಅರ್ಧ ಸೇವಿಸುತ್ತೇವೆ ಎಂದರೆ ವೈದ್ಯರು ಬೈಯ್ಯುತ್ತಾರೆ. ಮೂರು ದಿನ ತೆಗೆದುಕೊಳ್ಳಿ, ವಾರದ ಕೋರ್ಸ್‌ ಇದೆ, 15 ದಿನ ಕಡ್ಡಾಯವಾಗಿ ತೆಗೆದುಕೊಳ್ಳಬೇಕು, ತಿಂಗಳ ಕೋರ್ಸ್‌ ಇದೆ, ಮಧ್ಯದಲ್ಲಿ ಬಿಡಬಾರದು ಎಂದು ಸಲಹೆ ನೀಡುತ್ತಾರೆ. ಆದರೆ, ಆಸ್ಪತ್ರೆಯ ವೈದ್ಯರು ಬರೆದ ಔಷಧಗಳೇ ಇಲ್ಲಿ ಸಿಗುವುದಿಲ್ಲ. ಚೀಟಿಯಲ್ಲಿ ಐದು ತರಹದ ಮಾತ್ರೆಗಳಿದ್ದರೆ ಎರಡು ತರಹದ ಮಾತ್ರೆ ಕೊಟ್ಟು ಉಳಿದ ಮೂರು ನಮ್ಮಲ್ಲಿಲ್ಲ ಎಂದು ಹೇಳಲಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವ ಅಸಿಡಿಟಿ ಮಾತ್ರೆಯೂ ಸಿಗುವುದಿಲ್ಲ. ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಚಿಕಿತ್ಸಾ ವಿಭಾಗದ ಔಷಧ ವಿತರಣೆ ಕೇಂದ್ರದಲ್ಲೂ ಇದೇ ಪರಿಸ್ಥಿತಿ ಇದೆ’ ಎಂದು ರೋಗಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಜಿಮ್ಸ್‌ ಆಸ್ಪತ್ರೆಗೆ ಅಕ್ಕಪಕ್ಕದ ಬೀದರ್‌, ಯಾದಗಿರಿ ಜಿಲ್ಲೆಗಳ ನೂರಾರು ರೋಗಿಗಳೂ ಚಿಕಿತ್ಸೆಗಾಗಿ ಬರುತ್ತಾರೆ. ಈ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡುವ ಹೆಚ್ಚಿನ ಸಂಖ್ಯೆಯ ಜನ ಬಡವರು, ಕೂಲಿಕಾರ್ಮಿಕರು ಆಗಿರುತ್ತಾರೆ. ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತದೆ. ಆದರೆ, ಜಿಲ್ಲಾ ಆಸ್ಪತ್ರೆಯಲ್ಲಿ ತೀರಾ ಸಾಮಾನ್ಯ ಔಷಧಗಳು ಕೂಡ ಸಿಗುತ್ತಿಲ್ಲ’ ಎಂದು ಸಂಘ–ಸಂಸ್ಥೆಗಳ ಪ್ರಮುಖರು ಆರೋಪಿಸುತ್ತಾರೆ.

‘ಕಲಬುರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಔಷಧ ಸಿಗುತ್ತದೆ ಎಂದು ಬಂದರೆ ಪ್ರಯೋಜನ ಆಗಲಿಲ್ಲ. ಕೈ ನೋವಿಗೆ ಸಂಬಂಧಿಸಿದ ಎರಡು ತರಹದ ಮಾತ್ರೆಗಳನ್ನು ಹೊರಗಡೆ ಔಷಧ ಅಂಗಡಿಯಲ್ಲಿ ₹320 ಕೊಟ್ಟು ಖರೀದಿಸಬೇಕಾಯಿತು’ ಎಂದು ರಾಜೇಶ್ವರಿ ತಡಕಲ್‌ ಹೇಳಿದರು.

ಪುರುಷರು–ಮಹಿಳೆಯರಿಗೆ ಒಂದೇ ಕೌಂಟರ್‌: ಔಷಧ ವಿತರಣೆಗೆ ಜಿಮ್ಸ್‌ನಲ್ಲಿ ಪುರುಷರು–ಮಹಿಳೆಯರಿಗೆ ಪ್ರತ್ಯೇಕ ಕೌಂಟರ್‌ಗಳಿದ್ದರೂ ಒಂದೇ ಕೌಂಟರ್‌ನಲ್ಲಿ ವಿತರಣೆ ಮಾಡಲಾಗುತ್ತದೆ. ಇನ್ನೊಂದು ಕೌಂಟರ್‌ ತೆರೆಯಿರಿ ಎಂದರೆ ವಿಭಾಗದವರು ನಮ್ಮ ಮಾತನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ ಎಂದು ಸರದಿಯಲ್ಲಿ ನಿಂತ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರು.

ಶ್ರವಣಕುಮಾರ ಡಿ.ನಾಯಕ
ಶ್ರವಣಕುಮಾರ ಡಿ.ನಾಯಕ
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಗುವಂತಹ ಔಷಧಗಳೂ ಜಿಮ್ಸ್‌ನಲ್ಲಿಲ್ಲ. ಜನರಿಗೆ ಬೇಕಾದ ಔಷಧ ಬದಲಿಗೆ ಕಮಿಷನ್‌ ಸಿಗುವಂತಹ ಔಷಧಗಳನ್ನು ಖರೀದಿಸಲಾಗುತ್ತಿದೆ. ಇದರಿಂದ ಸಮಸ್ಯೆ ಸೃಷ್ಟಿಯಾಗಿದೆ.
ಶ್ರವಣಕುಮಾರ ಡಿ.ನಾಯಕ ಸಂಸ್ಥಾಪಕ ಅಧ್ಯಕ್ಷ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ
ಡಾ.ಉಮೇಶ ಎಸ್‌.ಆರ್‌.
ಡಾ.ಉಮೇಶ ಎಸ್‌.ಆರ್‌.
ಜಿಮ್ಸ್‌ ಆಸ್ಪತ್ರೆಯ ವಿವಿಧ ವಿಭಾಗಗಳ ಬೇಡಿಕೆಯಂತೆ ಔಷಧಗಳ ಖರೀದಿಗೆ ಟೆಂಡರ್‌ ಕರೆಯಲಾಗಿದೆ. ಕಾರ್ಯಾದೇಶ ಪತ್ರ ಕೂಡ ಕೊಡಲಾಗಿದ್ದು ಅವಶ್ಯಕತೆಗೆ ತಕ್ಕಂತೆ ಔಷಧ ಸರಬರಾಜು ಆಗುತ್ತಿದೆ.
ಡಾ.ಉಮೇಶ ಎಸ್‌.ಆರ್‌. ಜಿಮ್ಸ್‌ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT