ಗುರುವಾರ , ಜುಲೈ 29, 2021
22 °C
ಮಹಾಗಾಂವ ಠಾಣೆ, ವಸತಿಗೃಹದ ಬಳಿ 150ಕ್ಕೂ ಹೆಚ್ಚು ಸಸಿ ನೆಟ್ಟ ಸಿಬ್ಬಂದಿ

ಕಲಬುರ್ಗಿ: ಪರಿಸರ ಸ್ನೇಹಿ ಪೊಲೀಸ್‌ ಠಾಣೆ

ಮನೋಜಕುಮಾರ್‌ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲೆಯಲ್ಲಿ ಕ್ರಮೇಣ ಪರಿಸರ ಕಾಳಜಿ ಬೆಳೆಯುತ್ತಿದ್ದು, ಎಲ್ಲೆಡೆ ಹಸಿರು ಹೆಚ್ಚುತ್ತಿದೆ. ಕಮಲಾಪುರ ತಾಲ್ಲೂಕಿನ ಮಹಾಗಾಂವ ಪೊಲೀಸ್‌ ಠಾಣೆಯೂ ಇದಕ್ಕೆ ಹೊರತಾಗಿಲ್ಲ.

23 ಹಳ್ಳಿಗಳ ವ್ಯಾಪ್ತಿಯನ್ನು ಹೊಂದಿರುವ ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣಗಳು ಕಡಿಮೆ. ಹೀಗಾಗಿ, ಬಿಡುವಿನ ವೇಳೆ ಯನ್ನು ಇಲ್ಲಿನ ಸಿಬ್ಬಂದಿ ಠಾಣೆ ಹಾಗೂ ವಸತಿ ಗೃಹದ ಸುತ್ತಮುತ್ತಲಿನ ಪ್ರದೇಶ ದಲ್ಲಿ ಹಸಿರನ್ನು ಬೆಳೆಸಲು ಬಳಕೆ ಮಾಡುತ್ತಿದ್ದಾರೆ. ಮೂರು ತಿಂಗಳ ಅವಧಿಯಲ್ಲಿ ಇಲ್ಲಿನ ಪಿಎಸ್‌ಐ ಹಸೇನ್‌ ಬಾಷಾ ಅವರ ಆಸಕ್ತಿಯ ಫಲವಾಗಿ ಅರಣ್ಯ ಇಲಾಖೆಯಿಂದ 150ಕ್ಕೂ ಅಧಿಕ ತರಹೇವಾರಿ ಸಸಿಗಳನ್ನು ತಂದು ನೆಡಲಾಗಿದೆ. ಸಾಂಪ್ರದಾಯಿಕ ಬೇವು, ಹೊಂಗೆಯ ಜೊತೆಗೆ ಬೇಗನೇ ಬೆಳೆಯುವ ಸಿಂಗಪುರ ಟ್ರೀಗಳನ್ನೂ ಇಲ್ಲಿ ತಂದು ಬೆಳೆಸಲಾಗುತ್ತಿದೆ.

ಇತ್ತೀಚೆಗೆ ಸುಮಾರು 500 ಅಡಿ ಆಳದವರೆಗೆ ಕೊಳವೆಬಾವಿ ಕೊರೆಸಿದ್ದರಿಂದ ಒಂದಿಷ್ಟು ನೀರು ಬಂದಿದೆ. ಅದೇ ನೀರನ್ನು ಸಸಿಗಳಿಗೆ ಹಾಕಲು ಬಳಸಲಾಗುತ್ತಿದೆ. ನೆಲದಿಂದ ಕೆಲವೇ ಇಂಚು ಆಳದಲ್ಲಿ ಶಿಲಾಪದರಗಳಿವೆ. ಹೀಗಾಗಿ, ಸಸಿಗಳು ಬೆಳೆಯುವ ಮಾತೇ ಇರಲಿಲ್ಲ. ಇದಕ್ಕೊಂದು ಉಪಾಯ ಮಾಡಿದ ಬಾಷಾ ಅವರು, ಬೆಳಕೋಟಾ ಗ್ರಾಮದ ಬಳಿ ಒಂದಷ್ಟು ಮಣ್ಣನ್ನು ತರಿಸಿ ಠಾಣೆಯ ಕಾಂಪೌಂಡ್‌ ಒಳಗೆ ಹಾಕಿಸಿದರು. ಆ ಮಣ್ಣಿನ ರಾಶಿಯ ಸುತ್ತ ಪುಟ್ಟ ಕಲ್ಲುಗಳ ಗೋಡೆಯನ್ನು ಕಟ್ಟಿಸಿದರು. ಆ ಮಣ್ಣಿನ ಮೇಲೆ ಸಸಿಗಳನ್ನು ನೆಟ್ಟರು. ಅದರ ರಕ್ಷಣೆಗಾಗಿ ಸುತ್ತಲೂ ಕಬ್ಬಿಣದ ಸಲಾಕೆಗಳನ್ನು ಇಡಿಸಿ ಬೇಲಿ ಹಾಕಿಸುತ್ತಿದ್ದಾರೆ.

ಇದಕ್ಕಾಗಿ ₹ 3 ಲಕ್ಷ ವೆಚ್ಚವಾಗಿದ್ದು, ಒಂದಷ್ಟು ತಮ್ಮ ಜೇಬಿನಿಂದ, ಮತ್ತೊಂದಷ್ಟು ನೆರವನ್ನು ದಾನಿಗಳಿಂದ ಪಡೆದು ನಂದನವನ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದ್ದಾರೆ. ಈ ಪ್ರಯತ್ನಕ್ಕೆ ಠಾಣೆಯ ಇತರ ಸಿಬ್ಬಂದಿಯ ನೆರವೂ ಸಾಕಷ್ಟಿದೆ ಎಂದು ಖುಷಿಯಿಂದ ಹೇಳುತ್ತಾರೆ ಹಸೇನ್‌ ಬಾಷಾ.

ಹೊಸದಾಗಿ ಕೊರೆಸಿದ ಕೊಳವೆಬಾವಿಗೆ ಜಲ ಮರುಪೂರಣ ವ್ಯವಸ್ಥೆಯನ್ನೂ ಮಾಡಿಕೊಳ್ಳಲು ಮುಂದಾಗಿದ್ದಾರೆ. ಠಾಣೆಯ ಛಾವಣಿಯ ನೀರು ನೇರವಾಗಿ ಕೊಳವೆಬಾವಿ ಸೇರಲು ಯೋಜನೆ ರೂಪಿಸಿದ್ದು, ಇದಕ್ಕಾಗಿ ಡಾ.ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ ಸದಸ್ಯರ ತಾಂತ್ರಿಕ ನೆರವನ್ನು ಪಡೆಯುತ್ತಿದ್ದಾರೆ.

ಕಾಂಪೌಂಡ್‌ ನಿರ್ಮಾಣ: ‘ಹಳೆಯದಾಗಿರುವ ಪೊಲೀಸ್‌ ಠಾಣೆ ಕಟ್ಟಡದ ಸುತ್ತಲೂ ಕಾಂಪೌಂಡ್‌ ಹಾಗೂ ಕಟ್ಟಡಕ್ಕೆ ಸುಣ್ಣಬಣ್ಣ ಬಳಿಸುವ ಯೋಜನೆಗಳಿದ್ದು, ಇವುಗಳನ್ನೂ ದಾನಿಗಳ ನೆರವಿನಿಂದ ಮಾಡಿಸುತ್ತಿದ್ದೇವೆ. ದೂರು ಕೊಡಲು ಬಂದವರಿಗೂ ಠಾಣೆ ಭಯ ಹುಟ್ಟದಿರಲಿ ಎಂಬುದು ನಮ್ಮ ಆಸೆಯಾಗಿದೆ’ ಎನ್ನುತ್ತಾರೆ ಅವರು.

‘ಬೇಸಿಗೆಯಲ್ಲಿ ಠಾಣೆಯ ಹೊರಭಾಗದಲ್ಲಿ ಕುಳಿತುಕೊಳ್ಳುವುದೇ ಕಷ್ಟವಾಗಿತ್ತು. ಇದೀಗ ಸಸಿಗಳು ಬೆಳೆಯುತ್ತಿರುವುದರಿಂದ ನಮಗೂ ಖುಷಿಯಾಗಿದೆ‘ ಎನ್ನುತ್ತಾರೆ ಠಾಣೆಯ ಸಿಬ್ಬಂದಿ ಅಶೋಕ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು