ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿಯೂ ಸರಳ ಈದ್‌

ರಂಜಾನ್‌ ಸಂಭ್ರಮ ಕಿತ್ತುಕೊಂಡ ಕೊರೊನಾ, ಸಿಹಿಖಾದ್ಯ– ಮಾಂಸಾಹಾರಗಳಿಗೆ ಮನೆಯಲ್ಲೇ ಸಿದ್ಧತೆ
Last Updated 13 ಮೇ 2021, 15:13 IST
ಅಕ್ಷರ ಗಾತ್ರ

ಕಲಬುರ್ಗಿ: ಮುಸ್ಲಿಮರ ಅತ್ಯಂತ ಶ್ರದ್ಧೆಯ ಹಬ್ಬ ‘ಈದ್‌ ಉಲ್‌ ಫಿತ್ರ್‌’ಗೆ ಮೇ 14ರಂದು ಮಹೂರ್ತ. ಆದರೆ, ಈ ಬಾರಿ ಕೊರೊನಾ ಕರಿನೆರಳು ಹಬ್ಬದ ಮೇಲೆ ಬಿದ್ದಿದೆ. ಮಸೀದಿಗಳಲ್ಲಿನ ಸಾಮೂಹಿಕ ಪ್ರಾರ್ಥನೆ ಹಾಗೂ ಈದ್ಗಾ ಮೈದಾನದ ಸಂಭ್ರಮಗಳನ್ನೆಲ್ಲ ಈ ವೈರಾಣು ನುಂಗಿ ಹಾಕಿದೆ. ಈ ಬಾರಿಯ ಈದ್‌ ಕೂಡ ಕೇವಲ ರೋಜಾಗೆ ಸೀಮಿತಗೊಂಡಿದೆ.

ಈ ತಿಂಗಳಲ್ಲೇ ಪವಿತ್ರ ಗ್ರಂಥ ‘ಕುರಾನ್‌’ ರಚನೆ ಪೂರ್ಣಗೊಂಡ ಕಾರಣ ಇದನ್ನು ‘ಕುರಾನಿನ ಮಾಸ’ ಎಂದೂ ಕರೆಯುತ್ತಾರೆ. ಒಂದಿಡೀ ತಿಂಗಳು ಕಠಿಣ ಉಪವಾಸ ವ್ರತ ಆಚರಿಸುವ ಮೂಲಕ ಅಲ್ಲಾಹಗೆ ಭಕ್ತಿ ಸಮರ್ಪಿಸುವ ಜತೆಗೆ, ಆರೋಗ್ಯವನ್ನೂ ಸುಧಾರಿಸಿಕೊಳ್ಳುವ ವೈಜ್ಞಾನಿಕ ತತ್ವ ಇದರಲ್ಲಿ ಅಡಗಿದೆ.‌ ಮಕ್ಕಳಾದಿಯಾಗಿ, ಮಹಿಳೆಯರು, ಹಿರಿಯರು ಕೂಡ ಶ್ರದ್ಧೆಯಿಂದ ಒಂದು ತಿಂಗಳ ರೋಜಾ ಮುಗಿಸಿದ್ದಾರೆ. ಆದರೆ, ಕೊನೆಯ ದಿನ ಚಂದ್ರನನ್ನು ನೋಡಿ ಹಬ್ಬ ಆಚರಿಸಬೇಕೆನ್ನುವ ಅವರ ಸಂಭ್ರಮಕ್ಕೆ ಕಾರ್ಮೋಡ ಕವಿದಿದೆ.‌

ಕೊರೊನಾ ಅತ್ಯಂತ ವೇಗವಾಗಿ ಹರಡುತ್ತಿರುವ ಕಾರಣ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ. ಇನ್ನೊಂದೆಡೆ, ಜಿಲ್ಲೆಯ ಈದ್ಗಾ ಸಮಿತಿಗಳು ಕೂಡ ಸಾಮೂಹಿಕ ಪ್ರಾರ್ಥನೆ ಕೈಬಿಟ್ಟು, ಮನೆಯಲ್ಲೇ ಭಕ್ತಿ ಸಮರ್ಪಿಸಲು ನಿರ್ಧರಿಸಿವೆ. ಹಬ್ಬದ ದಿನ ಐವರು ಮಾತ್ರ ಈದ್ಗಾಗೆ ಹೋಗಿ ಪ‍್ರಾರ್ಥನೆ ಸಲ್ಲಿಸಿ, ಸಂಪ್ರದಾಯ ಮುರಿಯದಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ.‌

ಮನೆಗಳಲ್ಲಿನ ಸಿದ್ಧತೆ ಹೇಗಿದೆ:ಸೂಫಿ ಸಂತರ ನಾಡು, ಬಹಮನಿ ಸುಲ್ತಾನರ ಕರ್ಮಭೂಮಿಯಾದ ಕಲಬುರ್ಗಿಯಲ್ಲಿ ರಂಜಾನ್‌ ಮಾಸವೆಂದರೆ ಬಗೆಬಗೆಯ ತಿಂಗಳು ಹಾಗೂ ಬಟ್ಟೆಗಳದ್ದೇ ದರ್ಬಾರು ಇರುತ್ತಿತ್ತು. ಎಲ್ಲ ಮಸೀದಿಗಳು, ದರ್ಗಾ, ಈದ್ಗಾ ಮೈದಾನಗಳು ಸಂಭ್ರಮಕ್ಕೆ ಸಾಕ್ಷಿಯಾಗಿ ನಿಲ್ಲುತ್ತಿದ್ದವು. ಮಾರುಕಟ್ಟೆಗಳಲ್ಲಂತೂ ಬಟ್ಟೆ, ಹಣ್ಣು, ಖರ್ಜೂರ, ಸಿಹಿ ಪದಾರ್ಥಗಳ ಖರೀದಿ ಮಧ್ಯರಾತ್ರಿಯವರೆಗೂ ನಡೆಯುತ್ತಿತ್ತು.

ಹಬ್ಬದಲ್ಲಿ ಜನಜಂಗುಳಿಗೆ ಸಾಕ್ಷಿ ಆಗುತ್ತಿದ್ದ ಮುಸ್ಲಿಂ ಚೌಕ್‌, ದರ್ಗಾ ರಸ್ತೆ, ಎಂಎಸ್‌ಕೆ ಮಿಲ್‌, ಸೂಪರ್‌ ಮಾರ್ಕೆಟ್‌, ಮೋಮಿನ್‌ಪುರದ ಖೂನಿ ಹವಾಲಾ, ಸಂತ್ರಾಸವಾಡಿ ಸೇರಿದಂತೆ ಎಲ್ಲೆಡೆ ಹಬ್ಬದ ಕಳೆ ಇಲ್ಲ. ಇಷ್ಟು ವರ್ಷ ಈ ಮಾರುಕಟ್ಟೆಗಳಲ್ಲಿ ಸಿಗುತ್ತಿದ್ದ ಬಗೆಬಗೆಯ ತಿನಿಸುಗಳಿಗೆ ಆಸ್ಪದವೇ ಇಲ್ಲ. ಆದರೆ, ಹಬ್ಬದ ಸಂಭ್ರಮಕ್ಕೆ ಕುಂದು ಬಾರದಂತೆ ಈಗ ಮನೆಯಲ್ಲೇ ತಿಂಡಿಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ ಗೃಹಿಣಿಯರು.

ಸಿಹಿ ತಿಂಡಿಗಳಾದ ಹೈದರಾಬಾದ್‌ ಹಲೀಮ್‌, ಶೀರಕುರ್ಮಾ, ಖದ್ದು ಕೀರ್‌, ಜಿಲೇಬಿ, ಹಾರೀಸ್‌, ಖಾರದ ತಿನಿಸುಗಳಾದ ಪಾಲಕ್‌ ಪಕೋಡ, ಈರುಳ್ಳಿ ಪಕೋಡ, ಭಜ್ಜಿ, ಶಂಕರಪಾಳಿ, ನಮಕ್‌ ಪಾಳಿ, ವೆಜ್‌ ಸಮೋಸಾಗಳನ್ನು ಮನೆಯಲ್ಲೇ ತಯಾರಿ ಮಾಡುವುದು ಈಗ ಮಹಿಳೆಯರ ಪಾಲಿಗೆ ಬಂದಿದೆ.

ಮಾಂಸಾಹಾರಕ್ಕೂ ಕೊರತೆ: ಚಿಕನ್‌ ಮತ್ತು ಮಟನ್‌ ಬಿರಿಯಾನಿ, ಚಿಕನ್ ‌ಕೀಮಾ, ಚಿಕನ್‌ ಸಮೋಸಾ, ಲೆಗ್‌ಪೀಸ್‌, ಚಿಕನ್‌ಫ್ರೈ, ತಂದೂರಿ ಮತ್ತು ರುಮಾಲಿ ರೋಟಿ ಈ ಹಬ್ಬದ ವಿಶೇಷ ಭೋಜನಗಳು. ಆದರೆ, ಈ ಬಾರಿ ಮಾಂಸ ವ್ಯಾಪಾರಕ್ಕೆ ಅವಕಾಶವಿಲ್ಲದ ಕಾರಣ ಮನೆಗಳಲ್ಲಿ ಇವುಗಳನ್ನು ತಯಾರಿಸಲು ಆಗುತ್ತಿಲ್ಲ. ಇದರ ಲಾಭವನ್ನು ಮಾಂಸಾಹಾರಿ ಹೋಟೆಲ್‌ಗಳು ಗಿಟ್ಟಿಸಿಕೊಳ್ಳಲು ಸಿದ್ಧತೆ ಮಾಡಿಕೊಂಡಿವೆ. ಹಬ್ಬದ ದಿನ ಸಾಕಷ್ಟು ಆಹಾರ ಪಾರ್ಸೆಲ್‌ ನೀಡಲು ತಯಾರಿ ಮಾಡಿಕೊಂಡಿವೆ.

‘ಈದ್‌ಉಲ್‌ ಫಿತ್ರ್‌’ಗೆ ಕ್ಷಣಗಣನೆ

ತಿಂಗಳ ಉಪವಾಸ ವ್ರತ ಆರಂಭಿಸಿರುವ ಮುಸ್ಲಿಂ ಸಮುದಾಯದವರೆಲ್ಲ ಇನ್ನೇನು ‘ಈದ್‌ಉಲ್‌ ಫಿತ್ರ್‌’ಗಾಗಿ ಕಾಯುತ್ತಿದ್ದಾರೆ. ‘ರಂಜಾನ್‌ ಮಾಸದಲ್ಲಿ ಸ್ವರ್ಗದ ಬಾಗಿಲು ತೆರೆದು– ನರಕದ ಬಾಗಿಲು ಮುಚ್ಚುತ್ತದೆ. ಹಾಗಾಗಿ, ಈ ತಿಂಗಳ ಪ್ರಾರ್ಥನೆಗೆ ಸಾವಿರಪಟ್ಟು ಮಹತ್ವ ಇದೆ’ ಎಂಬುದು ನಂಬಿಕೆ.

‘ರಂಜಾನ್‌ ಪ್ರಾರ್ಥನೆ ಹಾಗೂ ಉಪವಾಸದಿಂದ ಜೀವನದ ಪಾಪಗಳೆಲ್ಲ ಕಳೆದುಹೋಗುತ್ತವೆ. ಒಂದು ತಿಂಗಳ ವ್ರತ ಮಾಡುವುದರಿಂದ 70 ಪಟ್ಟು ಪುಣ್ಯ ಪ್ರಾಪ್ತಿಯಾಗುತ್ತದೆ. ಅದರಲ್ಲೂ ಈ ತಿಂಗಳಲ್ಲಿ ಒಂದು ವಿಶೇಷ ರಾತ್ರಿ ಬರುತ್ತದೆ. ಆ ಒಂದು ರಾತ್ರಿಯ ಪ್ರಾರ್ಥನೆ ಬರೋಬ್ಬರಿ 1,000 ತಿಂಗಳುಗಳ ಪ್ರಾರ್ಥನೆಗೆ ಸಮ’ ಎನ್ನುತ್ತಾರೆ ಮೌಲ್ವಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT