ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಚುನಾವಣಾ ಕರ್ತವ್ಯ ನಿರತರಿಗೆ ‘ಇಡಿಸಿ’: ಮತಚಲಾವಣೆ ಹಕ್ಕು ತಪ್ಪುವ ಆತಂಕ

Published 7 ಮೇ 2024, 4:46 IST
Last Updated 7 ಮೇ 2024, 4:46 IST
ಅಕ್ಷರ ಗಾತ್ರ

ಕಲಬುರಗಿ: ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರಾಗಿ ನೋಂದಣಿಯಾಗಿ ಬೀದರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಆಳಂದ ಮತ್ತು ಚಿಂಚೋಳಿಯಲ್ಲಿ ಚುನಾವಣೆ ಕರ್ತವ್ಯಕ್ಕೆ ನಿಯೋಜಿತರಾದ ಕೆಲವು ಅಧಿಕಾರಿ, ಸಿಬ್ಬಂದಿಗೆ ‘ನಮೂನೆ 12ಎ’ ಅಡಿ ಚುನಾವಣಾ ಕರ್ತವ್ಯ ಪ್ರಮಾಣ ಪತ್ರ (ಇಡಿಸಿ) ನೀಡಿದ್ದರಿಂದ ಮತಚಲಾವಣೆಯ ಹಕ್ಕಿನಿಂದ ದೂರಾಗುವ ಆತಂಕ ಮೂಡಿದೆ.

ಚುನಾವಣೆಗೆ ನಿಯೋಜನೆಗೊಳ್ಳುವ ಸಿಬ್ಬಂದಿ ಸ್ವಕ್ಷೇತ್ರದಲ್ಲಿ (ಮತದಾನದ ಅರ್ಹತೆ ಹೊಂದಿರುವ ಲೋಕಸಭಾ ಕ್ಷೇತ್ರ) ಕರ್ತವ್ಯಕ್ಕೆ ನಿಯೋಜನೆಗೊಂಡರೆ ‘ಇಡಿಸಿ’ ಅಥವಾ ಬೇರೆ ಕ್ಷೇತ್ರಕ್ಕೆ ನಿಯೋಜನೆಗೊಂಡಿದ್ದರೆ ಅಂಚೆ ಮತದಾನದ ಪತ್ರ (ಪೋಸ್ಟಲ್‌ ಬ್ಯಾಲೆಟ್‌) ಪಡೆಯುತ್ತಾರೆ. ಅಂಚೆ ಮತದಾನಕ್ಕೆ ನಮೂನೆ–12 ಹಾಗೂ ‘ಇಡಿಸಿ’ಗೆ ನಮೂನೆ– 12ಎ ಅರ್ಜಿಯನ್ನು ಪೂರ್ತಿ ವಿವರಗಳೊಂದಿಗೆ ಭರ್ತಿ ಮಾಡಿ ಸಂಬಂಧಿಸಿದ ಸಹಾಯಕ ಚುನಾವಣೆ ಅಧಿಕಾರಿಗೆ ನೀಡಬೇಕು.

‘ಇಡಿಸಿ’ ಪಡೆದ ಕೆಲವರು ಆಳಂದ ಮತ್ತು ಚಿಂಚೋಳಿ ಕ್ಷೇತ್ರಗಳಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದಾರೆ. ಅವರು ತಮ್ಮ ನೋಂದಾಯಿತ ಕ್ಷೇತ್ರಕ್ಕೆ ಬಂದು ಮತ ಚಲಾಯಿಸಿ, ಮತ್ತೆ ವಾಪಸ್ ಹೋಗಿ ಚುನಾವಣಾ ಕೆಲಸಕ್ಕೆ ಹಾಜರಾಗುವ ಅನಿವಾರ್ಯತೆಯ ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ದೂರದ ತೆಲಂಗಾಣ ಮತ್ತು ಮಹಾರಾಷ್ಟ್ರದ ಗಡಿ ಸಮೀಪದ ರಾಜ್ಯದ ಗ್ರಾಮಗಳ ನಿಯೋಜಿತ ಮತಗಟ್ಟೆಯಲ್ಲಿ ಮಂಗಳವಾರ ಬೆಳಿಗ್ಗೆಯೇ ಇವಿಎಂ ಯಂತ್ರ, ವಿವಿ ಪ್ಯಾಟ್‌ಗಳನ್ನು ಮತದಾರರಿಗಾಗಿ ಅಣಿಗೊಳಿಸಬೇಕು. ಆ ನಂತರ ಅಲ್ಲಿಂದ ತಮ್ಮ ಸ್ವ ಕ್ಷೇತ್ರಕ್ಕೆ ಬಂದು ಮತ ಹಾಕಿ, ಮತ್ತೆ ವಾಪಸ್ ತೆರಳುವ ಸವಾಲು ಕೆಲವು ಸಿಬ್ಬಂದಿಗೆ ಎದುರಾಗಿದೆ.

‘ಅಂಚೆ ಮತಪತ್ರಕ್ಕಾಗಿ ಭರ್ತಿ ಮಾಡಿಕೊಟ್ಟ ನಮೂನೆ–12 ತೆಗೆದುಕೊಳ್ಳಲಿಲ್ಲ. ಅದರ ಬದಲಿಗೆ ನಮೂನೆ 12ಎ (ಇಡಿಸಿ) ಭರ್ತಿ ಮಾಡಿಕೊಂಡು ಪಡೆದರು. ಈಗ ನನಗೆ ಆಳಂದ ಕ್ಷೇತ್ರಕ್ಕೆ ನಿಯೋಜನೆ ಮಾಡಿದ್ದಾರೆ. ನನ್ನ ಮುದ್ರಿತ ‘ಇಡಿಸಿ’ ಕಲಬುರಗಿ ಕ್ಷೇತ್ರದಲ್ಲಿ ಮಾತ್ರ ಹಾಕಬೇಕು. ಚುನಾವಣಾ ಕೆಲಸದ ನಡುವೆ ಕಲಬುರಗಿಗೆ ಬಂದು ಮತ ಹಾಕಿ ವಾಪಸ್ ಹೋಗುವುದು ಕಷ್ಟವಾಗುತ್ತದೆ’ ಎಂದು ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದ ಶಿಕ್ಷಕರೊಬ್ಬರು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ಕಳೆದ 25 ವರ್ಷಗಳಿಂದ ಚುನಾವಣಾ ಕೆಲಸವನ್ನು ನಿರ್ವಹಿಸುತ್ತಿದ್ದೇನೆ. ಹಿಂದೆಂದೂ ಈ ರೀತಿ ಆಗಿರಲಿಲ್ಲ. ಇದೇ ಮೊದಲ ಬಾರಿಗೆ ಗೊಂದಲವಾಗಿದೆ. ಬೇರೊಂದು ಕ್ಷೇತ್ರಕ್ಕೆ ನಿಯೋಜನೆ ಮಾಡುವುದಾಗಿದ್ದರೆ ‘ಇಡಿಸಿ’ ನೀಡಿದ್ದು ಏಕೆ? ಇನ್ನೂ  ಕೆಲವರಿಗೆ ‘ಇಡಿಸಿ’ ಸಹ ಸಿಕ್ಕಿಲ್ಲ’ ಎಂದು ದೂರಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನೋಡಲ್ ಅಧಿಕಾರಿ ಸಕ್ರೆಪ್ಪಗೌಡ ಬಿರಾದಾರ, ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ‘ಇಡಿಸಿ’ ಇರಲಿಲ್ಲ. ಅದರ ಬದಲಿಗೆ ಬ್ಯಾಲೆಟ್ ಪೇಪರ್‌ ಇತ್ತು. ಆಳಂದದಲ್ಲಿ ಇದ್ದವರನ್ನು ಚಿಂಚೋಳಿಗೆ, ಚಿಂಚೋಳಿಯವರನ್ನು ಆಳಂದಕ್ಕೆ ನಿಯೋಜಿಸಲಾಗಿತ್ತು. ಸಿಬ್ಬಂದಿಯನ್ನು ರ್‍ಯಾಂಡಮ್ ಆಗಿ ನಿಯೋಜನೆ ಮಾಡಿದ್ದರಿಂದ ಆಳಂದ ಮತ್ತು ಚಿಂಚೋಳಿಗೆ ನಿಯೋಜನೆ ಆದವರಿಗೆ ತೊಂದರೆಯಾಗಿದೆ’ ಎಂದರು.

ಪರ್ಯಾಯ ವ್ಯವಸ್ಥೆಯ ಭರವಸೆ
‘ನಮೂನೆ– 12 ಭರ್ತಿ ಮಾಡಿಕೊಡುವ ಬದಲು ನಮೂನೆ– 12ಎ ‘ಇಡಿಸಿ’ ಕೊಟ್ಟಿದ್ದರಿಂದ ವ್ಯತ್ಯಾಸವಾಗಿದೆ. ಈಗಾಗಲೇ ಸುಮಾರು 70 ಸಿಬ್ಬಂದಿಯನ್ನು ಪತ್ತೆಹಚ್ಚಿ ಪಟ್ಟಿ ಮಾಡಿ ಸಹಾಯಕ ಚುನಾವಣಾ ಅಧಿಕಾರಿಗೆ ಕೊಟ್ಟಿದ್ದೇವೆ. ಅವರು ಪರ್ಯಾಯ ವ್ಯವಸ್ಥೆ ಮಾಡುತ್ತಾರೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಹಿರಿಯ ಚುನಾವಣಾ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಆಳಂದ ಮತ್ತು ಚಿಂಚೋಳಿಯಲ್ಲಿ ಕರ್ತವ್ಯ ನಿರತರಾದವರು ತಮ್ಮ ಸ್ವ ಕ್ಷೇತ್ರಕ್ಕೆ ಬಂದು ಮತಚಲಾಯಿಸಿ ವಾಪಸ್ ಹೋಗಿ ಮತ್ತೆ ಕರ್ತವ್ಯಕ್ಕೆ ಹಾಜರಿ ಆಗಲು ಸಮಯ ಅವಕಾಶ ಕೊಡುತ್ತಿವೆ. ಮತದಾನದಿಂದ ದೂರಾಗಲು ಯಾರಿಗೂ ಅವಕಾಶ ಮಾಡಿಕೊಡುವುದಿಲ್ಲ’ ಎಂದು ಹೇಳಿದರು.
7129 ‘ಇಡಿಸಿ’
ಕಲಬುರಗಿ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದ 7129 ಸಿಬ್ಬಂದಿಗೆ ‘ಇಡಿಸಿ’ ಮುದ್ರಿತ ಮತಪತ್ರ ನೀಡಲಾಗಿದೆ ಎಂದು ಚುನಾವಣಾ ನೋಡಲ್ ಅಧಿಕಾರಿಯೊಬ್ಬರು ತಿಳಿಸಿದರು. ಆಳಂದ ಮತ್ತು ಚಿಂಚೋಳಿಯಲ್ಲಿ 364 ‘ಇಡಿಸಿ’ ನೀಡಲಾಗಿದೆ. ಕಲಬುರಗಿ ದಕ್ಷಿಣದಲ್ಲಿ 1392 ಸೇಡಂನಲ್ಲಿ 619 ಗುರುಮಠಕಲ್‌ನಲ್ಲಿ 334 ಜೇವರ್ಗಿಯಲ್ಲಿ 752 ಕಲಬುರಗಿ ಉತ್ತರದಲ್ಲಿ 1397 ಚಿತ್ತಾಪುರದಲ್ಲಿ 419 ಕಲಬುರಗಿ ಗ್ರಾಮೀಣದಲ್ಲಿ 840 ಹಾಗೂ ಅಫಜಲಪುರದಲ್ಲಿ 1012 ಸಿಬ್ಬಂದಿ ‘ಇಡಿಸಿ’ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT