ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಲೆ ಆರಂಭಕ್ಕೆ ದಿನಗಣನೆ; ಶೇ 54.37 ಪಠ್ಯಪುಸ್ತಕ ಮಾತ್ರ ಸರಬರಾಜು

ಪೂರ್ಣ ಪ್ರಮಾಣದಲ್ಲಿ ಪೂರೈಕೆಯಾಗದ ಪಠ್ಯಪುಸ್ತಕ
Published 25 ಮೇ 2024, 7:39 IST
Last Updated 25 ಮೇ 2024, 7:39 IST
ಅಕ್ಷರ ಗಾತ್ರ

ಕಲಬುರಗಿ: ಪ್ರತಿ ವರ್ಷ ಶಾಲೆಗಳು ಪುನರಾರಂಭಗೊಂಡಾಗ ಪಠ್ಯಪುಸ್ತಕಗಳು ಬಂದಿಲ್ಲ ಎಂಬ ದೂರು ವಿದ್ಯಾರ್ಥಿಗಳು ಮತ್ತು ಪಾಲಕರಿಂದ ಕೇಳಿಬರುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು ಈ ಬಾರಿಯೂ ಪೂರ್ಣ ಪರಿಹಾರ ಕಂಡುಕೊಂಡಿಲ್ಲ.

ಶಾಲೆ ಪ್ರಾರಂಭಕ್ಕೆ 5 ದಿನಗಳು ಮಾತ್ರ ಬಾಕಿ ಉಳಿದಿವೆ. ಸರ್ಕಾರದಿಂದ ಪಠ್ಯಪುಸ್ತಕಗಳ ಸರಬರಾಜು ಕಾರ್ಯವೂ ನಡೆಯುತ್ತಿದೆ. ಆದರೆ, ಈವರೆಗೆ ಶೇ 54.37ರಷ್ಟು ಪುಸ್ತಕಗಳು ಮಾತ್ರ ದಾಸ್ತಾನು ಮಾಡಲಾಗಿದೆ. ಜಿಲ್ಲೆಯಲ್ಲಿ ಈ ಬಾರಿ 1ರಿಂದ 10ನೇ ತರಗತಿವರೆಗಿನ ಸರ್ಕಾರಿ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ವಿತರಣೆ ಹಾಗೂ ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ ಮಾರಾಟಕ್ಕಾಗಿ 64,79,597 ಪಠ್ಯಪುಸ್ತಕಗಳಿಗೆ ಬೇಡಿಕೆ ಬಂದಿದೆ.

ಸರ್ಕಾರಿ ಶಾಲೆಗಳಿಗೆ ಉಚಿತ ವಿತರಣೆಗಾಗಿ 22,92,059 ಪುಸ್ತಕಗಳು ಹಾಗೂ ಮಾರಾಟಕ್ಕಾಗಿ 12,31,118 ಪುಸ್ತಕಗಳನ್ನು ಸರಬರಾಜು ಮಾಡಲಾಗಿದೆ. ಶೇ 49.09ರಷ್ಟು ಪುಸ್ತಕಗಳು ಉಚಿತವಾಗಿ ಸರಬರಾಜಿಗೆ ಕಳುಹಿಸಿದರೆ, ಶೇ 69.99ರಷ್ಟು ಪುಸ್ತಕಗಳು ಮಾರಾಟಕ್ಕೆ ಕಳುಹಿಸಲಾಗಿದೆ ಎಂಬುದು ಇಲಾಖೆ ನೀಡಿದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

‘2024–25ನೇ ಶೈಕ್ಷಣಿಕ ವರ್ಷದ ಶಾಲೆಗಳು ಮೇ 29ರಿಂದ ಆರಂಭವಾಗಲಿದೆ. ವಾರದೊಳಗೆ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಪಠ್ಯಪುಸ್ತಕಗಳನ್ನು ಎಲ್ಲ ಶಾಲೆಗಳಿಗೆ ತಲುಪಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ಈಗಾಗಲೇ ಮಕ್ಕಳಿಗೆ ಉಚಿತ ವಿತರಣೆ, ಮಾರಾಟಕ್ಕಾಗಿ ಪಠ್ಯಪುಸ್ತಕಗಳನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರಗಳಿಗೆ ಸರಬರಾಜು ಮಾಡಲಾಗಿದೆ. ಕ್ಷೇತ್ರ ಸಂಪನ್ಮೂಲ ಕೇಂದ್ರಗಳಿಂದ ಶಾಲಾ ಮುಖ್ಯ ಶಿಕ್ಷಕರು ಪಠ್ಯಪುಸ್ತಕಗಳನ್ನು ಶಾಲೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ’ ಎಂದು ಇಲಾಖೆಯ ಪಠ್ಯಪುಸ್ತಕ ವಿತರಣೆಯ ನೋಡಲ್‌ ಅಧಿಕಾರಿ ಹೀರಾಬಾಯಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಕಾರ್ಯವೂ ನಡೆಯುತ್ತಿದೆ. ಹಿಂದಿನ ಬಾಕಿ ಒಳಗೊಂಡಂತೆ 2,55,680 ಸಮವಸ್ತ್ರಗಳನ್ನು ಈಗಾಗಲೇ ಸರಬರಾಜು ಮಾಡಲಾಗಿದೆ. 1ರಿಂದ 2ನೇ ತರಗತಿ 49,166, 3ರಿಂದ 4ನೇ ತರಗತಿಯ ವಿದ್ಯಾರ್ಥಿಗಳಿಗೆ 57,528, 5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗಾಗಿ 72,243, 8ರಿಂದ 10ನೇ ತರಗತಿವರೆಗೆ 76,763 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆಗೆ ಸರಬರಾಜು ಮಾಡಲಾಗಿದೆ’ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಖಾಸಗಿ ಶಾಲೆಗಳಿಗೂ ಪಠ್ಯ ಪುಸ್ತಕ ಮಾರಾಟ: ಒಂದರಿಂದ ಹತ್ತನೇ ತರಗತಿವರೆಗಿನ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಇಲಾಖೆ ಉಚಿತವಾಗಿ ಪಠ್ಯಪುಸ್ತಕಗಳನ್ನು ವಿತರಿಸುತ್ತಿದೆ. ರಾಜ್ಯ ಪಠ್ಯಕ್ರಮ ಅನುಸರಿಸುವ ಖಾಸಗಿ ಶಾಲೆಗಳು ಶೇ 10ರಷ್ಟು ಮುಂಗಡ ಹಣ ನೀಡಿ ಪಠ್ಯಪುಸ್ತಕಗಳಿಗೆ ಬೇಡಿಕೆ ಪಟ್ಟಿ ಸಲ್ಲಿಸಿದರೆ, ಅವುಗಳಿಗೂ ಇಲಾಖೆಯೇ ಪಠ್ಯಪುಸ್ತಕಗಳು ಪೂರೈಸಲಿದೆ. ಪುಸ್ತಕಗಳು ಪಡೆಯುವಾಗ ಪೂರ್ತಿ ಹಣ ನೀಡಿ ಪುಸ್ತಕ ಪಡೆಯಬಹುದಾಗಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿ.

ಕಲಬುರಗಿಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಗೋದಾಮಿನಲ್ಲಿ ಬುಧವಾರ ಶಾಲಾ ಸಿಬ್ಬಂದಿಯೊಬ್ಬರಿಗೆ ಶಿಕ್ಷಣ ಇಲಾಖೆ ಸಿಬ್ಬಂದಿ ಪುಸ್ತಕಗಳನ್ನು ವಿತರಣೆ ಮಾಡಿದರು
ಕಲಬುರಗಿಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಗೋದಾಮಿನಲ್ಲಿ ಬುಧವಾರ ಶಾಲಾ ಸಿಬ್ಬಂದಿಯೊಬ್ಬರಿಗೆ ಶಿಕ್ಷಣ ಇಲಾಖೆ ಸಿಬ್ಬಂದಿ ಪುಸ್ತಕಗಳನ್ನು ವಿತರಣೆ ಮಾಡಿದರು

Cut-off box - ‘ಶಾಲೆ ಆರಂಭ ವೇಳೆಗೆ ಶೇ75ಕ್ಕಿಂತಲೂ ಹೆಚ್ಚು ಪಠ್ಯಪುಸ್ತಕ ಸರಬರಾಜು’ ‘ಜಿಲ್ಲೆಗೆ ಬೇಕಾಗುವಷ್ಟು ಎಲ್ಲ ವಿಷಯಗಳ ಪುಸ್ತಕಗಳನ್ನು ಸರಬರಾಜು ಮಾಡಲಾಗುತ್ತಿದೆ. ಶಾಲೆ ಪ್ರಾರಂಭವಾಗುವ ವೇಳೆಗೆ ಶೇ75ಕ್ಕಿಂತ ಹೆಚ್ಚು ಪುಸ್ತಕಗಳು ಬರಲಿವೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು. ‘ದಿನಾಲೂ ಇಲಾಖೆಯಿಂದ ಪುಸ್ತಕಗಳ ವಿತರಣೆಯ ವಾಹನಗಳು ಬರುತ್ತಿವೆ. ಪುಸ್ತಕಗಳ ದಾಸ್ತಾನು ಸಹ ನಡೆಯುತ್ತಿದೆ. ಈಗಾಗಲೇ ಎಲ್ಲ ತಾಲ್ಲೂಕು ವ್ಯಾಪಿಯಲ್ಲಿ ಸಹ ಉಚಿತ ವಿತರಣೆ ಹಾಗೂ ಮಾರಾಟಕ್ಕೆ ಪುಸ್ತಕಗಳ ಪೂರೈಕೆ ಮಾಡಲಾಗಿದೆ. ಮೇ 29ರಿಂದಲೇ ಶಾಲಾರಂಭವಾಗಲಿದ್ದು ಅಂದು ಶಾಲೆಯ ಮುಖ್ಯಶಿಕ್ಷಕರು 30ರಂದು ಸಹ ಶಿಕ್ಷಕರು ಶಾಲೆಗೆ ಬರಲಿದ್ದಾರೆ. 31ರಂದು ಮಕ್ಕಳು ಶಾಲೆಗೆ ಹಾಜರಾಗಲಿದ್ದಾರೆ’ ಎಂದು ಹೇಳಿದರು.

Cut-off box - ಶಾಲಾ ಪಠ್ಯಪುಸ್ತಕಗಳ ವಿವರ ತಾಲ್ಲೂಕು;ಬೇಡಿಕೆ;ಪೂರೈಕೆ ಆಳಂದ;761770;405510 ಅಫಜಲಪುರ;682080;361533 ಚಿಂಚೋಳಿ;564563;286365 ಚಿತ್ತಾಪುರ;937187;509555 ಕಲಬುರಗಿ ಉತ್ತರ;1225451;702049 ಕಲಬುರಗಿ ದಕ್ಷಿಣ ವಲಯ;909245;535515 ಜೇವರ್ಗಿ;867787;447660 ಸೇಡಂ;531514;274990 ಒಟ್ಟು;6479597;3523177 ಆಧಾರ: ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಮೇ 24 2024ರವರೆಗೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT