ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂಗೆ ದೂರು ನೀಡಿದ್ದ ಶಾಸಕರು: ಮುನಿಸಿಗೆ ಮುನ್ನುಡಿಯಾದ ಎಂಜಿನಿಯರ್ ವರ್ಗಾವಣೆ

ಐವರು ಶಾಸಕರು ಶಿಫಾರಸಿದ್ದರೂ ಹೊರಬೀಳದ ಆದೇಶ
Published 2 ಆಗಸ್ಟ್ 2023, 6:34 IST
Last Updated 2 ಆಗಸ್ಟ್ 2023, 6:34 IST
ಅಕ್ಷರ ಗಾತ್ರ

ಕಲಬುರಗಿ: ಸಚಿವರುಗಳು ತಮ್ಮ ಮಾತು ಕೇಳುತ್ತಿಲ್ಲ ಎಂದು ಅಸಮಾಧಾನಗೊಂಡ ಕಾಂಗ್ರೆಸ್ ಶಾಸಕರ ಒಂದು ಗುಂಪು ಆಳಂದ ಶಾಸಕ ಬಿ.ಆರ್. ಪಾಟೀಲ ಅವರ ನೇತೃತ್ವದಲ್ಲಿ ಶಾಸಕಾಂಗ ಸಭೆ ಕರೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದರ ಹಿಂದೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಒಬ್ಬರನ್ನು ಕಲಬುರಗಿ ಜಿಲ್ಲೆಗೆ ವರ್ಗಾವಣೆ ಮಾಡುವಂತೆ ಮಾಡಿದ್ದ ಬೇಡಿಕೆ ಈಡೇರದಿರುವುದು ಕಾರಣವಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.

ಮುನಿಸು ಶುರುವಾಗಲೂ ಇದೇ ಅಂಶ ಮೂಲವಾಗಿತ್ತು ಎನ್ನಲಾಗಿದೆ. ಜಿಲ್ಲೆಯ ಐವರು ಶಾಸಕರು ಸಹಿ ಹಾಕಿ ಆ ಅಧಿಕಾರಿಯನ್ನು ಕಲಬುರಗಿಯ ಲೋಕೋಪಯೋಗಿ ಇಲಾಖೆಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಸಚಿವರೊಬ್ಬರಿಗೆ ಮನವಿ ಸಲ್ಲಿಸಿದ್ದರು. ಆ ಮನವಿಯನ್ನು ಸಚಿವರು ಮಾನ್ಯ ಮಾಡಿರಲಿಲ್ಲ. ಅಂತಿಮವಾಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕವೇ ವರ್ಗಾವಣೆ ಆದೇಶ ಹೊರಬಿತ್ತು ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಶಾಸಕರು ಇಷ್ಟಕ್ಕೇ ಪತ್ರ ಬರೆಯುವ ಗೋಜಿಗೆ ಹೋಗಿರಲಿಲ್ಲ. ಆದರೆ, ವಿವಿಧ ಜಿಲ್ಲಾ ಉಸ್ತುವಾರಿ ಸಚಿವರು ಪ್ರಗತಿ ಪರಿಶೀಲನಾ ಸಭೆ ನಡೆಸುವ ವೇಳೆ ತಮ್ಮದೇ ಪಕ್ಷದ ಶಾಸಕರನ್ನು ಸಭೆಗೆ ಕರೆಯಲಿಲ್ಲ ಎಂಬುದು ಅಸಮಾಧಾನಕ್ಕೆ ಕಾರಣವಾದ ಮತ್ತೊಂದು ಅಂಶ ಎನ್ನಲಾಗಿದೆ.

‘ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಗೆ ನನಗೆ ಆಹ್ವಾನ ಇರಲಿಲ್ಲ. ನಾವೇನು ಜನಪ್ರತಿನಿಧಿಗಳಲ್ಲವೇ’ ಎಂದು ಶಾಸಕರೊಬ್ಬರು ಪ್ರಶ್ನಿಸಿದರು.

ಜೊತೆಗೆ, ಇತ್ತೀಚೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್‌ಗಳೊಂದಿಗೆ ಕಲಬುರಗಿಯಲ್ಲಿ ಸಭೆ ನಡೆಸಿದರು. ಆ ಸಭೆಗೆ ಸೌಜನ್ಯಕ್ಕೂ ತಮ್ಮನ್ನು ಕರೆದಿಲ್ಲ ಎಂದು ಶಾಸಕರು ‘ಪ್ರಜಾವಾಣಿ’ ಬಳಿ ತಮ್ಮ ಅಳಲು ತೋಡಿಕೊಂಡರು.

‘ಜಿಲ್ಲೆಯಲ್ಲಿ ಸಾಕಷ್ಟು ಮಳೆಯಿಂದಾಗಿ ಬೆಳೆ ನಷ್ಟವಾಗಿದೆ. ಜನ, ಜಾನುವಾರುಗಳಿಗೆ ತೊಂದರೆಯಾಗಿದೆ. ಮನೆಗಳು ಕುಸಿದು ಬಿದ್ದಿವೆ. ನಾವು ಕೊಡುವಷ್ಟು ವಾಸ್ತವದ ಮಾಹಿತಿಯನ್ನು ಅಧಿಕಾರಿಗಳು ಕೊಡಬಲ್ಲರೇ?’ ಎಂದು ಅವರು ಪ್ರಶ್ನಿಸಿದರು.

‘ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶಾಸಕರನ್ನು ಬಿಟ್ಟು ಸಭೆ ನಡೆಸಲು ನಮ್ಮ ತಕರಾರಿಲ್ಲ. ಆದರೆ, ಇಡೀ ದಿನದಲ್ಲಿ ಒಮ್ಮೆಯಾದರೂ ಸಮೀಪದ ನೆರೆ ಪೀಡಿತ ಸ್ಥಳಗಳಿಗೆ ಭೇಟಿ ನೀಡಬೇಕಿತ್ತಲ್ಲ. ಅದನ್ನೇಕೆ ಮಾಡಲಿಲ್ಲ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT