ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ಡೆಂಗಿ, ಚಿಕೂನ್‌ಗುನ್ಯಾ ಉಲ್ಬಣ: ಹೆಚ್ಚಿದ ಆತಂಕ

ಪ್ರಕರಣಗಳ ಅಂಕಿ–ಅಂಶದ ಮಾಹಿತಿ ನೀಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಹಿಂದೇಟು
Published 5 ಆಗಸ್ಟ್ 2024, 5:32 IST
Last Updated 5 ಆಗಸ್ಟ್ 2024, 5:32 IST
ಅಕ್ಷರ ಗಾತ್ರ

ಕಲಬುರಗಿ: ಮಳೆಗಾಲ ಇರುವುದರಿಂದ ಎಲ್ಲೆಡೆ ನೆಗಡಿ, ಕೆಮ್ಮು, ಜ್ವರದಂತಹ ಸಾಂಕ್ರಾಮಿಕ ರೋಗಗಳ ತಾಂಡವ ಶುರುವಾಗಿದೆ. ಜಿಲ್ಲೆಯಲ್ಲಿ ಪ್ರಮುಖವಾಗಿ ‘ಈಡಿಸ್ ಈಜಿಪ್ಟಿ’ ಸೊಳ್ಳೆಯಿಂದ ಹರಡುವ ಡೆಂಗಿ ಜ್ವರ ಜನರನ್ನು ಬಾಧಿಸುತ್ತಿದೆ. ಇದರಿಂದ ರೋಗಿಗಳಲ್ಲಿ ಆತಂಕ ಹೆಚ್ಚಿದೆ.

ಆರೋಗ್ಯ ಇಲಾಖೆಯ ಮಾಹಿತಿಯಂತೆ ಜನವರಿಯಿಂದ ಆ 3ರವರೆಗೆ 4,480 ರಕ್ತದ ಮಾದರಿಗಳ ಪರೀಕ್ಷೆ ನಡೆಸಿದ್ದು, 503 ಜನರಿಗೆ ಡೆಂಗಿ ದೃಢಪಟ್ಟಿದೆ. ಶನಿವಾರವೇ 22 ಪ್ರಕರಣ ಪತ್ತೆಯಾಗಿವೆ. ಕಳೆದ ವರ್ಷ ಜನವರಿಯಿಂದ ಜುಲೈ ತಿಂಗಳ ಅಂತ್ಯಕ್ಕೆ 94 ಜನರಿಗೆ ಮಾತ್ರ ಡೆಂಗಿ ದೃಢಪಟ್ಟಿತ್ತು!

ಚಿಕೂನ್‌ಗುನ್ಯಾ ಪತ್ತೆಗೆ ಈ ವರ್ಷದಲ್ಲಿ 1,487 ರಕ್ತದ ಮಾದರಿಗಳನ್ನು ಪರೀಕ್ಷಿಸಿದ್ದು, 111 ಪ್ರಕರಣಗಳು ದೃಢಪಟ್ಟಿವೆ. ಜುಲೈ ತಿಂಗಳಲ್ಲಿಯೇ 54 ಜನರಲ್ಲಿ ಚಿಕೂನ್‌ಗುನ್ಯಾ ಪ್ರಕರಣ ಕಂಡುಬಂದಿದೆ! ಕಳೆದ 2023ರಲ್ಲಿ ಜನವರಿಯಿಂದ ಜುಲೈವರೆಗೆ 460 ರಕ್ತದ ಮಾದರಿಗಳನ್ನು ಪರೀಕ್ಷಿಸಿದ್ದು, 24 ಜನರಿಗೆ ಮಾತ್ರ ಚಿಕೂನ್‌ಗುನ್ಯಾ ದೃಢಪಟ್ಟಿತ್ತು.

ನಿಂತ ನೀರಿನ ಎಲ್ಲ ತಾಣಗಳು ಸೊಳ್ಳೆ ಉತ್ಪತ್ತಿಯ ಕೇಂದ್ರವಾಗಿರುತ್ತವೆ. ಡೆಂಗಿ, ಚಿಕೂನ್‌ಗುನ್ಯಾ ಮತ್ತು ಮಲೇರಿಯಾ ಬಾಧಿಸಲು ಸೊಳ್ಳೆಗಳೇ ಕಾರಣ. ಆದರೆ, ನಗರದಲ್ಲಿ ನಿಯಮಿತವಾಗಿ ಕಸ ವಿಲೇವಾರಿ ಆಗದಿರುವುದು, ಚರಂಡಿ ನೀರು ಸರಾಗವಾಗಿ ಹರಿದು ಹೋಗದಿರುವುದು, ಪ್ಲಾಸ್ಟಿಕ್‌ ಮತ್ತು ತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ನಿಂತಿರುವುದು ಈ ರೋಗ ಉಲ್ಬಣಕ್ಕೆ ಮೂಲ ಕಾರಣ.

ಕಲಬುರಗಿಯ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ 4–5 ದಿನಗಳಿಂದ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಕೇಂದ್ರ ಬಸ್‌ ನಿಲ್ದಾಣ ಮತ್ತು ರಾಮಮಂದಿರಕ್ಕೆ ತೆರಳುವ ಪ್ರಯಾಣಿಕರು ಗಲೀಜು ನೀರಿನಲ್ಲಿಯೇ ಮೂಗು ಮುಚ್ಚಿಕೊಂಡು ಆಟೊ ಹತ್ತುವಂತಾಗಿದೆ. ಪಾಲಿಕೆಗೆ ದೂರು ಹೇಳಿದರೂ ಸ್ಪಂದಿಸುತ್ತಿಲ್ಲ ಎಂದು ಹೋಟೆಲ್, ಬೇಕರಿ ಸೇರಿ ವಿವಿಧ ಮಳಿಗೆಗಳ ವ್ಯಾಪಾರಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದೇ ಮಾರ್ಗವಾಗಿ ದಿನಕ್ಕೆ ಒಂದು ಬಾರಿಯಾದರೂ ಸಂಚಾರ ಮಾಡುತ್ತಾರೆ. ಆದರೆ, ಈ ಸಮಸ್ಯೆ ಯಾರ ಕಣ್ಣಿಗೂ ಕಾಣದಿರುವುದು ನಗರದಲ್ಲಿನ ಒಳಚರಂಡಿ ವ್ಯವಸ್ಥೆಯನ್ನು ಅಣಕಿಸುವಂತಿದೆ ಎಂದರು.

‘ಸ್ವಚ್ಛತೆ ಕಾಪಾಡುವಲ್ಲಿ ಮತ್ತು ಸೊಳ್ಳೆಗಳ ನಿಯಂತ್ರಣದಲ್ಲಿ ಜನರ ಸಹಭಾಗಿತ್ವ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ ತನ್ನ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಬಾರದು’ ಎಂದು ಸಂಘ–ಸಂಸ್ಥೆಗಳ ಪ್ರಮುಖರು ಒತ್ತಾಯಿಸುತ್ತಾರೆ.

ಮಾಹಿತಿ ನೀಡಲು ನಿರಾಕರಣೆ: ಪ್ರಸಕ್ತ ವರ್ಷದಲ್ಲಿ ಹೆಚ್ಚಿನ ಜನ ಡೆಂಗಿ ರೋಗದಿಂದ ಬಳಲುತ್ತಿರುವ ಬಗ್ಗೆ ತಾಲ್ಲೂಕುವಾರು ಮತ್ತು ಯಾವ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬಂದಿದೆ ಎಂದು ಸಂಬಂಧಿಸಿದ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ ಅಧಿಕಾರಿಗಳು ಮಾಹಿತಿ ಕೊಡಲು ನಿರಾಕರಿಸಿದರು. ಡಿಎಚ್‌ಒ ಕಚೇರಿಯಿಂದ ಕೂಡ ಸಮರ್ಪಕ ಮಾಹಿತಿ ದೊರೆಯಲಿಲ್ಲ.

‘ಗ್ರಾಮೀಣಕ್ಕಿಂತ ಕಲಬುರಗಿ ನಗರ ಪ್ರದೇಶದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ. ಮಾಣಿಕೇಶ್ವರಿ ನಗರ, ಎನ್‌.ಆರ್‌.ನಗರ, ಸೇಂಟ್‌ ಜಾನ್ಸ್‌ ಏರಿಯಾ, ಶಿವಾಜಿ ನಗರದಲ್ಲಿ ಪ್ರಕರಣಗಳು ದೃಢಪಟ್ಟಿವೆ. ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುವಂತೆ ತಿಳಿಸಲಾಗಿದೆ. ಎಲಿಸಾ ಟೆಸ್ಟ್‌ ಪಾಸಿಟಿವ್‌ ಬಂದರೆ ಮಾತ್ರ ಡೆಂಗಿ ಎಂದು ಪರಿಗಣಿಸುತ್ತೇವೆ. ಇದು ಜಿಮ್ಸ್‌ನ ಡಿಪಿಎಚ್‌ಎಲ್‌ ಮತ್ತು ವಿಆರ್‌ಡಿಎಲ್‌ ಲ್ಯಾಬ್‌ನಲ್ಲಿ ಮಾತ್ರ ನಿಖರ ಪರೀಕ್ಷೆ ಆಗುತ್ತದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರತಿಕಾಂತ ಸ್ವಾಮಿ ತಿಳಿಸಿದರು.

‘ಪ್ರತಿ ಶುಕ್ರವಾರ ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ಮಾಡಲಾಗುತ್ತಿದೆ. ಜೊತೆಗೆ ನೀರು ಶೇಖರಣೆಯ ವಸ್ತುಗಳನ್ನು ಮುಚ್ಚಿಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಡೆಂಗಿ ಪ್ರಕರಣ ದೃಢಪಟ್ಟ ಪ್ರದೇಶಗಳಲ್ಲಿ ಫಾಗಿಂಗ್‌ ಮಾಡಿಸಲಾಗುತ್ತಿದೆ. ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿ ಸಹಕಾರದಲ್ಲಿ ಲಾರ್ವಾ ಸಮೀಕ್ಷೆ, ಫಾಗಿಂಗ್‌ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಎಸ್‌ವಿಪಿ ಸರ್ಕಲ್‌ ನಮಗೆ ಮೆಜೆಸ್ಟಿಕ್‌ ಇದ್ದಂತೆ. 4–5 ದಿನಗಳಿಂದ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಪ್ರತಿದಿನ ಸಾವಿರಾರು ಜನ ಸಂಚರಿಸುವ ಪ್ರಮುಖ ವೃತ್ತದಲ್ಲಿಯೇ ಈ ಪರಿಸ್ಥಿತಿ ಇದೆ -ಎಂ.ಎಸ್‌.ಪಾಟೀಲ ನರಿಬೋಳ ಸಾಮಾಜಿಕ ಕಾರ್ಯಕರ್ತ

ಜೇವರ್ಗಿ ತಾಲ್ಲೂಕಿನಲ್ಲಿ ಡೆಂಗಿ ಪ್ರಕರಣಗಳು ಅಷ್ಟಾಗಿ ಕಂಡುಬಂದಿಲ್ಲ. ಮನೆಮನೆಗೆ ತೆರಳಿ ಲಾರ್ವಾ ಸರ್ವೆ ಮಾಡುತ್ತಿದ್ದು ಜನರಲ್ಲಿ ಜಾಗೃತಿಯೂ ಮೂಡಿಸಲಾಗುತ್ತಿದೆ

-ಡಾ.ಸಿದ್ದು ಪಾಟೀಲ ತಾಲ್ಲೂಕು ಆರೋಗ್ಯಾಧಿಕಾರಿ ಜೇವರ್ಗಿ

ರೋಗಗಳು ಹರಡುವಿಕೆಗೆ ಸೊಳ್ಳೆಗಳ ಜತೆಗೆ ಹಂದಿಗಳು ಕಾರಣವಾಗುತ್ತಿದ್ದು ಹಳ್ಳಿ ಮತ್ತು ಪಟ್ಟಣಗಳಲ್ಲಿ ಹಂದಿಗಳನ್ನು ನಿಯಂತ್ರಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು

- ಲಕ್ಷ್ಮಿನರಸಿಂಹರಡ್ಡಿ ನರನಾಳ ಸಾಮಾಜಿಕ ಕಾರ್ಯಕರ್ತ ಚಿಂಚೋಳಿ

ಚಿತ್ತಾಪುರ: ಫಾಗಿಂಗ್ ಮರೆತ ಆಡಳಿತ

-ಮಲ್ಲಿಕಾರ್ಜುನ ಎಂ.ಎಚ್.

ಚಿತ್ತಾಪುರ: ಕಳೆದ ಜುಲೈ ತಿಂಗಳಲ್ಲಿ ತಾಲ್ಲೂಕಿನ (ಚಿತ್ತಾಪುರ ಶಹಾಬಾದ್ ಕಾಳಗಿ ತಾಲ್ಲೂಕು ಸೇರಿ) ವ್ಯಾಪ್ತಿಯಲ್ಲಿ ಒಟ್ಟು 28 ಡೆಂಗಿ ಜ್ವರ ಹರಡಿರುವ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಜನರಲ್ಲಿ ಡೆಂಗಿ ಮತ್ತಷ್ಟು ಹೆಚ್ಚುವ ಆತಂಕ ಶುರುವಾಗಿದೆ. ಮಳೆಗಾಲದಲ್ಲಿ ಹೆಚ್ಚಾಗುವ ಸೊಳ್ಳೆಗಳ ಉತ್ಪತ್ತಿ ಮತ್ತು ನಿಯಂತ್ರಣಕ್ಕೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿ ಸೇರಿದಂತೆ ತಾಲ್ಲೂಕು ಆಡಳಿತವು ಸಂಜೆ ಸಮಯದಲ್ಲಿ ಫಾಗಿಂಗ್ ಮಾಡುವುದು ಬಹುತೇಕ ಮರೆತಂತೆ ಕಾಣುತ್ತಿದೆ. ಸೊಳ್ಳೆಗಳ ಕಾಟ ಮತ್ತು ಡೆಂಗಿ ಪ್ರಕರಣಗಳು ಹೆಚ್ಚಾಗಿದ್ದರೂ ಎಲ್ಲಿಯೂ ಫಾಗಿಂಗ್ ಮಾಡುತ್ತಿಲ್ಲ ಎನ್ನುವ ಸಾಮಾನ್ಯ ದೂರು ಜನರಿಂದ ಕೇಳಿಬರುತ್ತಿದೆ. ಸೊಳ್ಳೆಗಳ ಉತ್ಪತ್ತಿ ತಾಣಗಳಾದ ಕೊಳಚೆ ನೀರು ನಿಲ್ಲುವ ಸ್ಥಳ ಕಸಕಡ್ಡಿಯಿಂದ ತುಂಬಿರುವ ಚರಂಡಿ ಹಸಿರು ಪಾಚಿಗಟ್ಟಿದ ನೀರಿನ ಸ್ಥಳಗಳಲ್ಲಿ ಬ್ಲೀಚಿಂಗ್ ಪೌಡರ್ ಸಿಂಪಡಿಸುವ ಕನಿಷ್ಠ ಕೆಲಸ ಕೂಡ ಸಂಬಂಧಿತರು ಮಾಡುತ್ತಿಲ್ಲ. ಜನರ ಆರೋಗ್ಯ ರಕ್ಷಣೆಗೆ ಆರೋಗ್ಯ ಇಲಾಖೆ ಸೇರಿದಂತೆ ಗ್ರಾಮ ಆಡಳಿತವು ಹೆಚ್ಚಿನ ಕಳಕಳಿ ವಹಿಸಬೇಕು ಎಂದು ಜನ ಆಗ್ರಹಿಸುತ್ತಿದ್ದಾರೆ. ಸಾಂಕ್ರಾಮಿಕ ರೋಗದ ಕುರಿತು ಸಭೆ: ‘ಮಳೆಗಾಲದಲ್ಲಿ ಕಂಡುಬರುವ ಸಾಂಕ್ರಾಮಿಕ ರೋಗಗಳು ಹರಡದಂತೆ ಹಾಗೂ ನಿಯಂತ್ರಣಕ್ಕೆ ತಾಲ್ಲೂಕು ಆರೋಗ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಭೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಗ್ರಾಮದೊಳಗೆ ಸ್ವಚ್ಛತೆ ಕುಡಿಯುವ ನೀರು ಶುದ್ಧವಾಗಿರುವಂತೆ ನೋಡಿಕೊಳ್ಳಲು ಪ್ರತಿ ಗ್ರಾಮ ಪಂಚಾಯಿತಿ ಅಧಿಕಾರಿಗೆ ಸೂಚಿಸಲಾಗಿದೆ’ ಎಂದು ತಾಲ್ಲೂಕು ಪ್ರಭಾರ ಆರೋಗ್ಯಾಧಿಕಾರಿ ಡಾ.ಸೈಯದ್ ರಜಿವುಲ್ಲಾ ಖಾದರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮಹಾರಾಷ್ಟ್ರದ ಆಸ್ಪತ್ರೆಗಳತ್ತ ರೋಗಿಗಳು

-ಶಿವಾನಂದ ಹಸರಗುಂಡಗಿ

ಅಫಜಲಪುರ: ತಾಲ್ಲೂಕಿನಲ್ಲಿ ಜುಲೈ ತಿಂಗಳಿಂದ ಡೆಂಗಿ ಜ್ವರದ ಹಾವಳಿ ಹೆಚ್ಚಾಗಿದೆ. ಆದರೆ ಬಹುತೇಕ ರೋಗಿಗಳು ಸಾರ್ವಜನಿಕ ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಮತ್ತು ಕಾಳಜಿ ಇಲ್ಲದ ಕಾರಣ ಪಕ್ಕದಲ್ಲಿರುವ ಮಹಾರಾಷ್ಟ್ರದ ಸೋಲಾಪುರಕ್ಕೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ‘ನನಗೆ ವಾರದ ಹಿಂದೆ ಜ್ವರ ಬಂದಿದ್ದು ಕಡಿಮೆಯಾಗಿರಲಿಲ್ಲ. ರಕ್ತ ತಪಾಸಣೆ ಮಾಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಹೋಗಿದ್ದೆ. ಮಾತ್ರೆ ನೀಡಿದರೂ ಕಡಿಮೆಯಾಗಲಿಲ್ಲ. ಮತ್ತಷ್ಟು ಹೆಚ್ಚಾಯಿತು. ನಂತರ ಸೋಲಾಪುರದ ಖಾಸಗಿ ಆಸ್ಪತ್ರೆಗೆ ಹೋಗಿದ್ದೆ. ಒಂದು ವಾರ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದು ಆರಾಮಾಗಿ ಬಂದಿದ್ದೇನೆ. ₹ 1 ಲಕ್ಷ ಖರ್ಚಾಗಿದೆ. ಆದರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 100 ಹಾಸಿಗೆ ಆಸ್ಪತ್ರೆಯಿದ್ದರೂ ರೋಗಿಗಳಿಗೆ ಸರಿಯಾಗಿ ನೋಡಿಕೊಳ್ಳುತ್ತಿಲ್ಲ’ ಎಂದು ಹೇಳಲು ಇಚ್ಛಿಸದ ಡೆಂಗಿ ಜ್ವರ ಪೀಡಿತ ರೋಗಿಯೊಬ್ಬರು ದೂರಿದರು. ‘ಕೇವಲ ಡೆಂಗಿ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಿದರೆ ಪ್ರಯೋಜನವಿಲ್ಲ. ಡೆಂಗಿ ಪೀಡಿತ ರೋಗಿಗಳಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಆಗಬೇಕು. ಅವರಿಗೆ ಗುಣಮಟ್ಟದ ಮಾತ್ರೆಗಳು ಮತ್ತು ಆಹಾರ ನೀಡಬೇಕು. ವೈದ್ಯರು ಮೇಲಿಂದ ಮೇಲೆ ವಾರ್ಡುಗಳಿಗೆ ಭೇಟಿ ನೀಡಬೇಕು. ಒಮ್ಮೆ ರೋಗಿಯನ್ನು ನೋಡಿ ಹೋದರೆ ಮತ್ತೆ ಬರುವುದೇ ಇಲ್ಲ. ಹೀಗಾಗಿ ಸಾರ್ವಜನಿಕ ಆಸ್ಪತ್ರೆಗಳಿಗೆ ರೋಗಿಗಳು ಬರುವುದು ಕಡಿಮೆಯಾಗುತ್ತಿದೆ’ ಎಂದು ಮತ್ತೊಬ್ಬ ಡೆಂಗಿ ಪೀಡಿತ ರೋಗಿ ಅಸಮಾಧಾನ ವ್ಯಕ್ತಪಡಿಸಿದರು.

ಜಾಗೃತಿ ಜಾಥಾ ಪ್ರತಿ ವಾರ ಜ್ವರ ಸಮೀಕ್ಷೆ

-ಜಗನ್ನಾಥ ಡಿ.ಶೇರಿಕಾರ

ಚಿಂಚೋಳಿ: ತಾಲ್ಲೂಕಿನಲ್ಲಿ ಸಾಂಕ್ರಾಮಿಕ ರೋಗಗಳು ಹತೋಟಿಯಲ್ಲಿವೆ. ಡೆಂಗಿ ಮಲೇರಿಯಾ ರೋಗಗಳ ನಿಯಂತ್ರಣಕ್ಕೆ ಪ್ರತಿ ವಾರ ಆಶಾ ಕಾರ್ಯಕರ್ತೆಯರಿಂದ ಲಾರ್ವಾ ಸಮೀಕ್ಷೆ ಮತ್ತು ಜ್ವರ ಸಮೀಕ್ಷೆ ನಡೆಸಿದರೆ ನಗರ ಪ್ರದೇಶದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಆರೋಗ್ಯ ಸುರಕ್ಷಾಧಿಕಾರಿಗಳು ಪುರಸಭೆ ಸಿಬ್ಬಂದಿ ಸಹಕಾರದೊಂದಿಗೆ ನಡೆಸಲಾಗುತ್ತಿದೆ. ತಾಲ್ಲೂಕಿನಲ್ಲಿ ಈವರೆಗೆ 37 ಡೆಂಗಿ ಪ್ರಕರಣ ವರದಿಯಾಗಿದ್ದು ಯಾವುದೇ ಸಾವು ಸಂಭವಿಸಿಲ್ಲ. ಬಹುತೇಕ ಮಂದಿ ಗುಣಮುಖರಾಗಿದ್ದಾರೆ. ಡೆಂಗಿ ಪತ್ತೆಯಾದ ವ್ಯಕ್ತಿಯ ಮನೆಯ ಸುತ್ತಲು 40 ಮನೆಗಳ ಜನರಲ್ಲಿ ಜ್ವರ ಸಮೀಕ್ಷೆ ಮಾಡಿ ಜ್ವರದಿಂದ ಯಾರಾದರೂ ಬಳಲುತ್ತಿದ್ದರೆ ಅಂತಹವರ ರಕ್ತದ ಮಾದರಿ ಸಂಗ್ರಹಿಸಲಾಗುತ್ತಿದೆ. ಅಲ್ಲಲ್ಲಿ ಡೆಂಗಿ ಮಲೇರಿಯಾ ರೋಗ ಪತ್ತೆಯಾದರೂ ಪರಿಸ್ಥಿತಿ ಹತೋಟಿಯಲ್ಲಿದೆ. ಗ್ರಾ.ಪಂ.ಗಳ ವತಿಯಿಂದ ನೀರು ಸಂಗ್ರಹಿಸುವ ಟ್ಯಾಂಕ್‌ಗಳ ಸ್ವಚ್ಛಗೊಳಿಸುವಿಕೆ ಅಲ್ಲಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಜಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯಲು ಹಿಂದೇಟು

ಕಲಬುರಗಿಯ ಜಿಮ್ಸ್‌ ಆಸ್ಪತ್ರೆಯಲ್ಲಿ ಡೆಂಗಿ ದೃಢಪಟ್ಟ ಮಹಿಳೆಯರು ಮತ್ತು ಪುರುಷರಿಗಾಗಿ ಎರಡು ವಾರ್ಡ್‌ಗಳನ್ನು ತೆರೆಯಲಾಗಿದೆ. ಆದರೆ ಅಲ್ಲಿ ಚಿಕಿತ್ಸೆ ಪಡೆಯಲು ರೋಗಿಗಳು ಹಿಂದೇಟು ಹಾಕುತ್ತಿದ್ದಾರೆ. ಒಳರೋಗಿ ಚೀಟಿ ರಕ್ತ ಪರೀಕ್ಷೆ ಬಿಲ್‌ ಮಾಡಿಸಲು ರಕ್ತದ ಮಾದರಿ ನೀಡಲು ಮತ್ತು ವರದಿ ಪಡೆಯಲು ಸೇರಿದಂತೆ ಗಂಟೆಗಟ್ಟಲೇ ಪಾಳಿಯಲ್ಲಿ ನಿಲ್ಲಬೇಕು. ಮುಖ್ಯ ವೈದ್ಯರು ಸಹ ನಿಯಮಿತವಾಗಿ ರೋಗಿಗಳನ್ನು ಪರೀಕ್ಷಿಸುವುದಿಲ್ಲ. ಕಲಿಕಾ ವಿದ್ಯಾರ್ಥಿಗಳನ್ನು ಪ್ರಶ್ನಿಸಿದರೆ ವೈದ್ಯರು ಈಗ ಬರುತ್ತಾರೆ ಆಗ ಬರುತ್ತಾರೆ ಎಂದು ಕಾಲ ದೂಡುತ್ತಾರೆ. ಸ್ವಚ್ಛತೆಯೂ ಇಲ್ಲವಾಗಿದೆ’ ಎಂದು ರೋಗಿಗಳ ಸಂಬಂಧಿಕರು ದೂರಿದರು.

ಪೂರಕ ಮಾಹಿತಿ: ವೆಂಕಟೇಶ ಆರ್‌.ಹರವಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT