ಶುಕ್ರವಾರ, ಜೂನ್ 25, 2021
26 °C
ಇನ್ನು ಮುಂದೆ 100 ಸಹಾಯವಾಣಿ ಬದಲು 112 ಬಳಕೆ; ಎಂಟು ತುರ್ತು ಸ್ಪಂದನೆ ವಾಹನಗಳಿಗೆ ರೇವೂರ ಚಾಲನೆ

15 ನಿಮಿಷಗಳಲ್ಲಿ ಬರಲಿದೆ ಪೊಲೀಸ್ ವಾಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಯಾವುದೇ ಅಹಿತಕರ ಘಟನೆ ನಡೆದ ಸಂದರ್ಭದಲ್ಲಿ 112ಗೆ ಕರೆ ಮಾಡಿದ ಮುಂದಿನ 15 ನಿಮಿಷಗಳಲ್ಲಿ ಪೊಲೀಸ್‌ ವಾಹನ ನಿಮ್ಮ ನೆರವಿಗೆ ಬರಲಿದೆ.

ಇಂಥದೊಂದು ಸಹಾಯವಾಣಿಯನ್ನು ಕಲಬುರ್ಗಿ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಆರಂಭಿಸಲಾಗಿದ್ದು, ಇದಕ್ಕಾಗಿ ಎಂಟು ನೂತನ ಸ್ಕಾರ್ಪಿಯೊ ವಾಹನಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯ ಹಣಕಾಸು ನೆರವಿನಲ್ಲಿ ಖರೀದಿಸಲಾಗಿದೆ.

ನೂತನ ವಾಹನಗಳಿಗೆ ಬುಧವಾರ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ‌ಮೋದಿ ಹಾಗೂ ‌ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ದೇಶದಾದ್ಯಂತ ಕಾನೂನು ಸುವ್ಯವಸ್ಥೆ ‌ಪಾಲನೆ ಹಾಗೂ ತುರ್ತು ಪರಿಸ್ಥಿತಿಯ ತಕ್ಷಣದ ಸ್ಪಂದನೆಗಾಗಿ ಇಆರ್‌ಎಸ್ಎಸ್ (ಎಮರ್ಜೆನ್ಸಿ ‌ರೆಸ್ಪಾನ್ಸ್ ಸಪೋರ್ಟ್ ಸಿಸ್ಟಂ) ಯೋಜನೆಯಡಿ ಪ್ರತ್ಯೇಕ ವಾಹನಗಳನ್ನು ವ್ಯವಸ್ಥೆ ಮಾಡಿದ್ದಾರೆ. ಇದನ್ನು ರಾಜ್ಯದಲ್ಲಿ ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಅಮಿತ್ ಶಾ ಅವರು ಚಾಲನೆ ನೀಡಿದ್ದರು. ಕಲಬುರ್ಗಿಯಲ್ಲಿ ನೂತನ ವಾಹನಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೇ ಹಸಿರು ನಿಶಾನೆ ತೋರಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಅವರು ಇಲ್ಲಿಗೆ ಬಂದಿಲ್ಲ’ ಎಂದರು.

‘ಕಲಬುರ್ಗಿಯಲ್ಲಿ ಎಂಟು ವಾಹನಗಳ ಖರೀದಿಗೆ ಪೊಲೀಸ್ ‌ಕಮಿಷನರ್ ಅವರು ಮಂಡಳಿಯಿಂದ ಆರ್ಥಿಕ ನೆರವು ಕೋರಿದ್ದರು. ₹ 1 ಕೋಟಿ ವೆಚ್ಚದಲ್ಲಿ ಸ್ಕಾರ್ಪಿಯೊ ವಾಹನಗಳನ್ನು ‌ಖರೀದಿಸಿ ಕೊಡಲಾಗಿದೆ. ಸಿಗ್ನಲ್ ವ್ಯವಸ್ಥೆ ಬಲವರ್ಧನೆಗಾಗಿ ₹ 1 ಕೋಟಿ ನೀಡಲಾಗಿದೆ. ಅಗತ್ಯ ಬಿದ್ದರೆ ಇನ್ನಷ್ಟು ಹಣಕಾಸು ನೆರವು ನೀಡಲು ‌ಸಿದ್ಧ. ಇದರಿಂದ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಚೆನ್ನಾಗಿ ನಡೆದರೆ ಸಾಕು' ಎಂದರು.

ಪೊಲೀಸ್ ‌ಕಮಿಷನರ್ ಎನ್. ಸತೀಶಕುಮಾರ್ ಮಾತನಾಡಿ, ‘ಕರೆ ಬಂದ 15 ನಿಮಿಷಗಳಲ್ಲಿ ಪೊಲೀಸರು ಈ ವಾಹನದ ಮೂಲಕ ತೆರಳಬಹುದಾಗಿದೆ. ಬೆಂಗಳೂರಿನ ಕಂಟ್ರೋಲ್ ರೂಮ್‌ನಿಂದ ಇವುಗಳನ್ನು ನಿಯಂತ್ರಿಸಲಾಗುತ್ತದೆ. ಅಮೆರಿಕದಲ್ಲಿ ತುರ್ತು ಸ್ಪಂದನೆಗೆ 911 ಸಂಖ್ಯೆ ‌ಇರುವಂತೆ ಭಾರತದಲ್ಲಿ 112 ಸಂಖ್ಯೆ ನೀಡಲಾಗಿದೆ. ಇನ್ನು ಮುಂದೆ 100 ಸಂಖ್ಯೆ ಬದಲು ಪೊಲೀಸ್ ಕಂಟ್ರೋಲ್ ರೂಮ್ ತಲುಪಲು 112 ಸಂಖ್ಯೆಯನ್ನೇ ಬಳಸಬೇಕು. ಈ ಬಗ್ಗೆ ಕೆಲವೇ ದಿನಗಳಲ್ಲಿ ಅಭಿಯಾನ ನಡೆಸಲಿದ್ದೇವೆ’ ಎಂದರು.

‘ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ದೀಪಗಳನ್ನು ಅಳವಡಿಸಲು ಟೆಂಡರ್ ಅಂತಿಮವಾಗಿದ್ದು, ಗುತ್ತಿಗೆದಾರರಿಗೆ ಕಾರ್ಯಾದೇಶವನ್ನೂ ನೀಡಲಾಗಿದೆ. ಇನ್ನೊಂದು ತಿಂಗಳಲ್ಲಿ ಈ ಕಾಮಗಾರಿ ಮುಕ್ತಾಯವಾಗಲಿದೆ’ ಎಂದು ಹೇಳಿದರು.

ಕೆಕೆಆರ್‌ಡಿಬಿ ಕಾರ್ಯದರ್ಶಿ ಹಾಗೂ ‌ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ್ ಮಾತನಾಡಿ, ‘ಕಲಬುರ್ಗಿ ನಗರದಲ್ಲಿ 6.5 ಲಕ್ಷ ಜನಸಂಖ್ಯೆ ಇದ್ದು, ಕಾನೂನು ಮತ್ತು ಸುವ್ಯವಸ್ಥೆಗೆ ಸುಸಜ್ಜಿತ ವಾಹನಗಳು ಅವಶ್ಯ. ಆದ್ದರಿಂದ ಕೆಕೆಆರ್‌ಡಿಬಿ ವಾಹನಗಳನ್ನು ಖರೀದಿಸಲು ಹಣಕಾಸು ನೆರವು ನೀಡಿದೆ’ ಎಂದರು.

ಡಿಸಿಪಿ ಡಿ.ಕಿಶೋರಬಾಬು, ಎಸಿಪಿಗಳಾದ ಅಂಶುಕುಮಾರ್, ಗಿರೀಶ ಎಸ್‌.ಬಿ, ವಿವಿಧ ಠಾಣೆಗಳ ಪೊಲೀಸ್ ‌ಇನ್‌ಸ್ಪೆಕ್ಟರ್‌ಗಳು ಇದ್ದರು.

ಸ್ಟೇಶನ್ ಬಜಾರ್ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್ ಸಿದ್ದರಾಮೇಶ ಗಡೇದ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು