ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪ‍ಷ್ಟ ದರ ನೀಡಲು ಕಬ್ಬು ಬೆಳೆಗಾರರ ಪಟ್ಟು

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ; ಕಬ್ಬು ಬೆಳೆಗಾರರು– ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಮಧ್ಯೆ ಮೂಡದ ಒಮ್ಮತ
Last Updated 21 ನವೆಂಬರ್ 2020, 14:08 IST
ಅಕ್ಷರ ಗಾತ್ರ

ಕಲಬುರ್ಗಿ: ಪ್ರಸಕ್ತ ಹಂಗಾಮಿನ ಕಬ್ಬಿಗೆ ದರ ನಿಗದಿ ಮಾಡುವ ಸಂಬಂಧ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ, ರೈತ ಮುಖಂಡರು ಹಾಗೂ ಕಬ್ಬು ಬೆಳೆಗಾರರ ಸಭೆ ಫಲಪ್ರದವಾಗಲಿಲ್ಲ. ಎಫ್‌ಆರ್‌ಪಿ ಆಧರಿಸಿ ದರ ನೀಡುತ್ತೇವೆ ಎಂದು ಕಾರ್ಖಾನೆಗಳ ಪ್ರತಿನಿಧಿಗಳು ಸ್ಪಷ್ಟಪಡಿಸಿದರು. ಇದನ್ನು ಒಪ್ಪದ ರೈತರು ಸ್ಪಷ್ಟ ದರ ನಿಗದಿ ಮಾಡಬೇಕು ಎಂದು ಪಟ್ಟುಹಿಡಿದರು.

‘ಈ ಹಿಂದೆ ಕೂಡ ಕಾರ್ಖಾನೆಗಳು ಎಫ್‌ಆರ್‌ಪಿ ಆಧರಿಸಿ ದರ ನೀಡಿಲ್ಲ. ಅನುಕೂಲಕರ ದರ ನಿಗದಿ ಮಾಡಿ, ಕಬ್ಬು ಕಟಾವು– ಸಾಗಣೆ ಮಾಡಿಕೊಂಡಿವೆ. ಈ ಬಾರಿ ಕೂಡ ಈಗಾಗಲೇ ಪಕ್ಕದ ಜಿಲ್ಲೆಯ ಕೆಲ ಕಾರ್ಖಾನೆಗಳು ಎಕ್ಸ್‌ಫೀಲ್ಡ್‌ ಆಧಾರದ ಮೇಲೆ ಟನ್‌ ಕಬ್ಬಿಗೆ ₹ 2,300 ನೀಡುವುದಾಗಿ ಘೋಷಣೆ ಮಾಡಿವೆ. ಅದೇ ರೀತಿ ಜಿಲ್ಲೆಯ ಕಾರ್ಖಾನೆಗಳು ಕೂಡ ಎಕ್ಸ್‌ಫೀಲ್ಡ್‌ ಆಧಾರದಲ್ಲಿ ₹ 2,400 ದರ ನಿಗದಿ ಮಾಡಬೇಕು’ ಎಂದು ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಜಗದೀಶ ಪಾಟೀಲ ರಾಜಾಪೂರ ಆಗ್ರಹಿಸಿದರು.

ಆದರೆ, ಇದಕ್ಕೆ ಸಮ್ಮತಿ ಸೂಚಿಸದ ಕಾರ್ಖಾನೆಗಳ ಪ್ರತಿನಿಧಿಗಳು, ‘ರಾಜ್ಯ ಸರ್ಕಾರದ ನಿಯಮಾವಳಿ ಪ್ರಕಾರ ನ್ಯಾಯ ಮತ್ತು ಲಾಭದಾಯಕ (ಎಫ್‌ಆರ್‌ಪಿ) ದರವನ್ನೇ ನೀಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರೈತರು, ‘ಎಫ್‌ಆರ್‌ಪಿನಲ್ಲಿ ರೈತರಿಗೆ ಅನ್ಯಾಯ ಆಗುತ್ತದೆ. ಹೆಸರಿಗೆ ಮಾತ್ರ ಕಾರ್ಖಾನೆಗಳವರು ಈ ನಿಯಮ ಹೇಳುತ್ತಾರೆ. ಆದರೆ, ಸಾಗಣೆಯಲ್ಲಿ ಸಾಕಷ್ಟು ಹೊರೆ ರೈತರ ಹೆಗಲಿಗೆ ಬೀಳುತ್ತದೆ. ಬೆಳೆಗಾರರೇ ಕಬ್ಬು ಕಟಾವು ಮಾಡಿ, ಲಾರಿಗಳಲ್ಲಿ ಸಾಗಣೆ ಮಾಡುವಷ್ಟು ಶಕ್ತರಿಲ್ಲ. ಈ ಕಾರಣಕ್ಕೆ ಕರ್ಖಾನೆಗಳು ಪದೇಪದೇ ಎಫ್‌ಆರ್‌ಪಿ ಜಪ ಮಾಡುತ್ತಾರೆ. ಈ ಬಾರಿ ಕಬ್ಬು ಬೆಳೆಗಾರರು ಕೂಡ ಸಾಕಷ್ಟು ಸಂಕಷ್ಟ, ನಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಎಫ್‌ಆರ್‌ಪಿ ಅಥವಾ ಎಸ್‌ಎಪಿ ಯಾವುದನ್ನೂ ಲೆಕ್ಕಕ್ಕೆ ಹಿಡಿಯದೇ, ಎಲ್ಲ ರೈತರಿಗೂ ಅನ್ವಯಿಸುವಂತೆ ಪ್ರತಿ ಟನ್‌ಗೆ ಒಂದು ದರ ನಿಗದಿ ಮಾಡಬೇಕು. ಇದಕ್ಕೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು’ ಎಂದು ಪಟ್ಟು ಒತ್ತಾಯಿಸಿದರು.

ಆಗ ಉತ್ತರಿಸಿದ ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ, ‘ರಾಜ್ಯ ಸರ್ಕಾರ ರೈತರಿಗಾಗಿಯೇ ಎಫ್‌ಆರ್‌ಪಿ ನಿಮಯ ಜಾರಿ ಮಾಡಿದೆ. ನಾವು ಕಾನೂನು ಮೀರಿ ನಡೆಯಲು ಬರುವುದಿಲ್ಲ. ಹಾಗಾಗಿ, ಎಲ್ಲ ಕಾರ್ಖಾನೆಗಳೂ ಎಫ್‌ಆರ್‌ಪಿ ಅನುಸರಿಸಬೇಕಾಗುತ್ತದೆ’ ಎಂದರು.

ಕಡ್ಡಾಯವಾಗಿ ಒಪ್ಪಂದ ಮಾಡಿಕೊಳ್ಳಿ: ‘ಕಾರ್ಖಾನೆಗಳು ಹಾಗೂ ರೈತರ ಮಧ್ಯೆ ವಿವಾದ ನಿಲ್ಲಬೇಕಾದರೆ ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳಲೇಬೇಕು’ ಎಂದೂ ಜಿಲ್ಲಾಧಿಕಾರಿ ಜೋತ್ಸ್ನಾ ಕಾರ್ಖಾನೆಗಳ ಆಡಳಿತ ಮಂಡಳಿಗಳ ಪ್ರತಿನಿಧಿಗಳಿಗೆ ತಾಕೀತು ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ, ಆಹಾರ ಮತ್ತು ನಾಗರಿಕ ಇಲಾಖೆಯ ಉಪನಿರ್ದೇಶಕ ದತ್ತಪ್ಪ ಕಲ್ಲೂರ, ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯದರ್ಶಿ ದತ್ತಾತ್ರೇಯ ಎಂ. ಕುಲಕರ್ಣಿ, ಜಿಲ್ಲಾ ಕಾರ್ಯದರ್ಶಿ ಧರ್ಮರಾಜ ಸಾಹು, ಎನ್.ಎಸ್.ಎಲ್. ಸಕ್ಕರೆ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ರಾಧಾಕೃಷ್ಣನ್, ರೇಣುಕಾ ಸಕ್ಕರೆ ಕಾರ್ಖಾನೆ ಅಧಿಕಾರಿ ಸಂಜೀವ ಕುಮಾರನಾಯಕ್, ಉಗಾರ ಸಕ್ಕರೆ ಕಾರ್ಖಾನೆಯ ಅಧಿಕಾರಿ ಅವಿನಾಶ ಶಿರಗಾಂವಕರ, ಕಬ್ಬು ಬೆಳೆಗಾರರ ಸಂಘದ ಎಲ್ಲ ತಾಲ್ಲೂಕು ಘಟಕಗಳ ಅಧ್ಯಕ್ಷರು ಇದ್ದರು.

‘ವಾರದಲ್ಲಿ ನ್ಯಾಯಾಂಗ ನಿಂದನೆ ಕೇಸ್‌’

ಕಲಬುರ್ಗಿ: ‘‌ಕೋರ್ಟ್‌ ಆದೇಶಾನುಸಾರ ರೈತರ ಪ್ರತಿ ಟನ್‌ ಕಬ್ಬಿಗೆ ಕೊಡಬೇಕಾದ ₹ 400 ಬಾಕಿಯನ್ನು ಇನ್ನೂ ನೀಡಿಲ್ಲ. ಎಂಟು ವರ್ಷಗಳಿಂದ ಈ ಬಾಕಿ ಉಳಿದುಕೊಂಡಿದೆ. ನ್ಯಾಯಾಲಯ ಆದೇಶ ಮಾಡಿದ ಮೇಲೂ ಕಾರ್ಖಾನೆಗಳು ಪಾಲಿಸಿಲ್ಲ. ಆದ್ದರಿಂದ ಒಂದು ವಾರದೊಳಗೆ ಬಾಕಿ ಉಳಿಸಿಕೊಂಡ ಕಾರ್ಖಾನೆಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು’ ಎಂದು ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಜಗದೀಶ ಪಾಟೀಲ ರಾಜಾಪೂರ ತಿಳಿಸಿದರು.

‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಅವರು, ‘2013–14ನೇ ಸಾಲಿನಲ್ಲಿ ಜಿಲ್ಲೆಯ ನಾಲ್ಕು ಕಂಪನಿಗಳಿಂದ ರೈತರಿಗೆ ಪ್ರತಿ ಟನ್‌ಗೆ ತಲಾ ₹ 400 ಕೊಡಬೇಕು. ಸದ್ಯಕ್ಕೆ ₹ 100 ಕೊಡಿ ಎಂದು ಕೋರ್ಟ್‌ ಆದೇಶ ನೀಡಿತ್ತು. ಆ ಪ್ರಕಾರ ರೇಣುಕಾ ಸಕ್ಕರೆ ಕಾರ್ಖಾನೆ ಹಾಗೂ ಉಗಾರ್‌ ಶುಗರ್ಸ್‌ನವರು ಕೊಟ್ಟಿದ್ದಾರೆ. ಆದರೆ, ಎನ್‌ಎಸ್‌ಎ ಹಾಗೂ ಕೋರ್‌ ಗ್ರೀನ್‌ ಶುಗರ್ಸ್‌ ಕಾರ್ಖಾನೆಗಳು ಇನ್ನೂ ನೀಡಿಲ್ಲ. ಇದರ ಒಟ್ಟು ಮೊತ್ತ ಈಗ ₹ 10.5 ಕೋಟಿ ಆಗುತ್ತದೆ. ಆದ್ದರಿಂದ ವಾರದಲ್ಲಿ ಹಣ ಪಾವತಿಸದಿದ್ದರೆ ನ್ಯಾಯಾಂಗ ನಿಂದನೆ ಕೇಸ್‌ ದಾಖಲಿಸಲು ನಿರ್ಧರಿಸಲಾಗಿದೆ’ ಎಂದರು.

15 ದಿನದಲ್ಲಿ ಪಾವತಿಸದಿದ್ದರೆ ಬಡ್ಡಿ
‘ಎಫ್‌ಆರ್‌ಪಿ ದರದಲ್ಲಿ ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚ ಸೇರುತ್ತದೆ. ಹಾಗಾಗಿ ಸಾಗಾಣೆ ಮತ್ತು ಕಟಾವು ಮೊತ್ತ ಕಡಿತಗೊಳಿಸಿ, ಕಬ್ಬು ಮಾರಾಟ ಮಾಡಿದ ಹಣವನ್ನು 15 ದಿನದೊಳಗಾಗಿ ರೈತರಿಗೆ ಪಾವತಿಸಬೇಕು. ಒಂದು ವೇಳೆ 15 ದಿನಗಳಲ್ಲಿ ಪಾವತಿಸದಿದ್ದಲ್ಲಿ ನಂತರದ ಅವಧಿಗೆ ವಾರ್ಷಿಕವಾಗಿ ಶೇ 15 ಬಡ್ಡಿಯೊಂದಿಗೆ ಪಾವತಿಸಲು ಸರ್ಕಾರದ ಸೂಚನೆ ಇದೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಜಿಲ್ಲಾಧಿಕಾರಿ ಜೋತ್ಸ್ನಾ ತಿಳಿಸಿದರು.

‘ಎಫ್‌ಆರ್‌ಪಿ ದರದಂತೆ ರೈತರಿಗೆ ಹಣ ಪಾವತಿಸುವ ಕುರಿತು ಪ್ರತಿವಾರ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ವರದಿ ಸಲ್ಲಿಸಬೇಕು. ಕಬ್ಬನ್ನು ಮಾರಾಟ ಮಾಡಲು ಮತ್ತು ಕೊಳ್ಳಲು ಸಕ್ಕರೆ ಕಾರ್ಖಾನೆ ಮತ್ತು ಕಬ್ಬು ಬೆಳೆಗಾರರ ನಡುವೆ ದ್ವಿಪಕ್ಷೀಯ ಒಡಂಬಡಿಕೆಯನ್ನು 2018-19ನೇ ಹಂಗಾಮಿನಿಂದಲೇ ಕಡ್ಡಾಯವಾಗಿ ಜಾರಿಗೊಳಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT