ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಜಗತ್‌ ವೃತ್ತದಲ್ಲಿ ರೈತರ ಮಾನವ ಸರಪಳಿ

ಭೂಸುಧಾರಣಾ ಕಾಯ್ದೆಗೆ ತಂದಿರುವ ತಿದ್ದುಪಡಿ ವಿರೋಧಿಸಿ ವಿವಿಧ ಸಂಘಟನೆಗಳ ಪ್ರತಿಭಟನೆ
Last Updated 25 ಸೆಪ್ಟೆಂಬರ್ 2020, 12:24 IST
ಅಕ್ಷರ ಗಾತ್ರ

ಕಲಬುರ್ಗಿ: ಭೂಸುಧಾರಣಾ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ಜತಗ್‌ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಮೊಳಗಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘ, ರಾಜ್ಯ ರೈತ ಸಂಘ, ಹಸಿರು ಸೇನೆ, ಸಿಐಟಿಯುಸಿ, ಎಸ್‌ಡಿಪಿಐ, ಕೆಕೆಆರ್‌, ಆರ್‌ಪಿಐ, ಕರ್ನಾಟಕ ರಕ್ಷಣಾ ವೇದಿಕೆ, ಎಸ್‌ಎಫ್ಐ, ಸಿಐಟಿಯು, ಜಿಲ್ಲಾ ಕಾರ್ಮಿಕರ ಹೋರಾಟ ಸಮಿತಿ, ಜೈ ಕನ್ನಡಿಗರ ರಕ್ಷಣಾ ವೇದಿಕೆ ಸೇರಿದಂತೆ 13ಕ್ಕೂ ಹೆಚ್ಚು ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ನೀಡಿದವು.

ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿದ ಬೆರಳೆಣಿಕೆಯಷ್ಟು ರೈತರು ಮೋದಿ ಸರ್ಕಾರದ ನಡೆಯ ವಿರುದ್ಧ ಘೋಷಣೆ ಕೂಗಿದರು. ಮಧ್ಯಾಹ್ನ 3ರ ಸುಮಾರಿಗೆ ಜಗತ್‌ ವೃತ್ತದಲ್ಲಿ ಸೇರಿದ ಹತ್ತಾರು ಜನ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ತೀವ್ರಗೊಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಮತ್ತು ಕಾರ್ಮಿಕ ವಿರೋಧ ಆಡಳಿತ ನಡೆಸುತ್ತಿವೆ. ಸ್ವತಃ ಸರ್ಕಾರವೇ ರೈತರನ್ನು ಕಾರ್ಪೊರೇಟ್‌ ಕುಳಗಳಿಗೆ ಮಾರಾಟ ಮಾಡುವ ಹುನ್ನಾರ ನಡೆಸಿದೆ. ಭೂ ಸುದಾರಣಾ ಕಾಯ್ದೆಯ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ ಮುಂತಾದವುಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡುತ್ತಿದೆ. ದೇಶದ ಜನರಿಗೇ ಬೇಡವಾದ ಕಾಯ್ದೆಗಳನ್ನು ಒತ್ತಾಯಪೂರ್ವಕವಾಗಿ ಜಾರಿ ಮಾಡುವ ಹಿಂದಿನ ಉದ್ದೇಶವೇನು ಎಂದು ಪ್ರತಿಭಟನೆಕಾರರು ಆಕ್ರೋಶ ಹೊರಹಾಕಿದರು.

ಹೊಸ ಕಾಯ್ದೆಯಿಂದ ಬಿತ್ತುವ ಮುನ್ನ, ಬೆಳೆಯುವ ಮುನ್ನವೇ ರೈತರ ವ್ಯಾಪಾರಿ ಕೈಯಲ್ಲಿ ಸಿಕ್ಕಿಕೊಳ್ಳುತ್ತಾನೆ. ಕೃಷಿ ಉತ್ಪಾದನೆಗೂ ಮುನ್ನವೇ ದೊಡ್ಡದೊಡ್ಡ ಕಂಪನಿಗಳು ಅದನ್ನು ಖರೀದಿ ಮಾಡಿಬಿಡುತ್ತವೆ. ಒಮ್ಮೆ ಕೃಷಿಯಲ್ಲಿ ಬಂಡವಾಳ ಶಾಹಿಗಳು ಕೈಹಾಕಿದರೆ ಅವರಿಂದ ರೈತರು ಹಾಗೂ ಸಣ್ಣ ವ್ಯಾಪಾರಿಗಳನ್ನು ಕಾಪಾಡುವುದು ಪ್ರಧಾನಿಯಿಂದಲೂ ಸಾಧ್ಯವಾಗುವುದಿಲ್ಲ. ಈ ಬಗ್ಗೆ ಕೇಂದ್ರ ಈಗಲಾದರೂ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.

ಒಂದು ವೇಳೆ ಸರ್ಕಾರಗಳು ಸುಗ್ರೀವಾಜ್ಞೆ ಅನುಸಾರ ಕಾಯ್ದೆಗಳನ್ನು ರಾಜ್ಯದಲ್ಲಿ ಜಾರಿಗೆ ತರಲು ಮುಂದಾದರೆ ಸ್ವಯಂ ಪ್ರೇರಿತ ಬಂದ್‌ ಆಚರಿಸುವುದು ಅನಿವಾರ್ಯವಾಗುತ್ತದೆ. ಇದರ ಸಾಂಕೇತಿಕವಾಗಿ ಸೆ. 28ರಂದು ದೇಶದಾದ್ಯಂತ ಬಂದ್‌ ಆಚರಿಸಲಾಗುತ್ತಿದ್ದು, ಅದೇ ದಿನ ಕಲಬುರ್ಗಿ ಜಿಲ್ಲೆಯಲ್ಲಿ ಬಂದ್‌ ಮಾಡಲಾಗುವುದು ಎಂದು ಮುಖಂಡರು ಎಚ್ಚರಿಕೆ ನೀಡಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಸಮನ್ವಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಭೀಮಾಶಂಕರ ಮಾಡಿಯಾಳ, ಆರ್‌ಕೆಎಸ್‌ ಕಾರ್ಯದರ್ಶಿ ಮಹೇಶ ಎಸ್.ಬಿ., ಆರ್‌ಪಿಐ ಅಧ್ಯಕ್ಷ ಎ.ಬಿ. ಹೊಸಮನಿ, ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸುಗೌಡ ಬಿರಾದಾರ, ಕಾರ್ಯಾಧ್ಯಕ್ಷೆ ಜಗದೇವಿ ಆರ್‌. ಹೆಗಡೆ, ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುದೇವ ಯಳಸಂಗಿ, ಕಾರ್ಮಿಕ ಮುಖಂಡ ನಾಗಯ್ಯಸ್ವಾಮಿ, ಸಿಐಟಿಯು ಮುಖಂಡರಾದ ಗಂಗಮ್ಮ ಬಿರಾದಾರ, ಎಐಎಡಬ್ಲ್ಯುಯು ಜಿಲ್ಲಾ ಘಟಕದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಇನ್ನೋಸ್‌ ಖಾನ್‌, ದಲಿತ ಸಂಘರ್ಷ ಸಮಿತಿ ಸಂಚಾಲಕ ಅರ್ಜುನ್‌ ಭದ್ರೆ, ಎಸ್‌ಎಫ್‌ಐ ಸಂಚಾಲಕ ಸಿದ್ಧಲಿಂಗ ಪಾಳಾ, ಡಬ್ಲ್ಯುಪಿಐ ಮುಖಂಡ ಮೊಬುನ್‌ ಅಹಮದ್‌, ಯೂತ್‌ ಫೋರಂ ಮುಖಂಡ ಮುಹಮದ್ ಮೋಖದ್ದಮ್‌, ಕರವೇ (ಪ್ರವೀಣ ಶೆಟ್ಟಿ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಎಂ. ಕಮ್ಮಾರ, ಡಿಎಚ್ಎಸ್‌ ಜಿಲ್ಲಾ ಸಂಚಾಲಕ ಸುಧಾಮ ಧನ್ನಿ, ವಿ.ವಿ. ನೌಕರರ ಸಂಘದ ಎಂ.ಬಿ. ಸಜ್ಜನ್‌, ಆಟೊ ಚಾಲಕರ ಸಂಘದ ಮಹಮದ್‌ ಹುಸೇನ್, ಟಿಪ್ಪು ಸುಲ್ತಾನ್‌ ಸಂಘಟನೆಯ ಕಾರ್ಯಾಧ್ಯಕ್ಷ ಆಯೂಬ್‌ ಖಾನ್‌ ನೇತೃತ್ವ ವಹಿಸಿದ್ದರು., ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಸಯ್ಯದ್‌ ದಸ್ತಗೀರ್‌, ರಿಜ್ವಾನ್‌ ಅಹ್ಮದ್‌, ಅಬ್ದುಲ್ ರಹೀಂ ನೇತೃತ್ವ ವಹಿಸಿದ್ದರು.

‘ಉಪಕಸಬುಗಳ ಕಗ್ಗೊಲೆ ಆಗುತ್ತದೆ’

ಕಲಬುರ್ಗಿ: ಭೂ ಸುಧಾರಣೆ ಕಾಯ್ದೆಯ ತಿದ್ದುಪಡಿಯಿಂದ ರೈತರು ಮಾತ್ರವಲ್ಲ ಉಪಕಸುಬುದಾರರು, ಹಂದಿ ಸಾಕಣೆ, ಮೀನುಗಾರಿಕೆ, ಕೋಳಿ ಸಾಕಣೆ, ಜೇನು ಸಾಕಣೆ ಮಾಡುವವರು, ಸಗಟು ವರ್ತಕರು, ಚಿಲ್ಲರೆ ವ್ಯಾಪಾರಿಗಳು, ಎಣ್ಣೆಕಾಳು ತಯಾರಕರು, ಗುಡಿ ಕೈಗಾರಿಕೆಗಳು, ಹತ್ತಿಬೀಜ, ಗೋಡಂಬಿ ಒಕ್ಕಲು ಮಾಡುವವರು ಹೀಗೆ ಎಲ್ಲ ಬಗೆಯ ಕಸುಬುದಾರರೂ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇಡೀ ಕೃಷಿ ಬದುಕು ಬಂಡವಾಳಶಾಹಿಗಳ ಕೈಗೊಂಬೆ ಆಗಲಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶರಣಬಸಪ್ಪ ಮಮಶೆಟ್ಟಿ ಆಕ್ರೋಶ ಹೊರಹಾಕಿದರು.

ಕೋವಿಡ್ ಸೋಂಕಿನಿಂದ ದೇಶದ ದುಡಿಯುವ ಹಾಗೂ ರೈತವರ್ಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇಂಥದರಲ್ಲಿ ಆರ್ಥಿಕ ಸಬಲೀಕರಣಕ್ಕೆ ಉಪಾಯ ಮಾಡುವುದನ್ನು ಬಿಟ್ಟು ನೊಂದವರ ನೋವಿನ ಮೇಲೆ ಬರೆ ಎಳೆಯುವ ಕೆಲಸವನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ. ಸಂಸತ್ತಿನಲ್ಲಿ ಚರ್ಚೆ ನಡೆಸದೆಯೇ ಮಸೂದೆಗಳನ್ನು ಜಾರಿಗೆ ತರುವ ಮೂಲಕ; ಬಿಜೆಪಿ ಸರ್ಕಾರ ತನ್ನ ಬಹುಮತದ ಶಕ್ತಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಭೀಮಾಶಂಕರ ಮಾಡಿಯಾಳ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT