ಶನಿವಾರ, ನವೆಂಬರ್ 28, 2020
17 °C

ದರ ನಿಗದಿಗೆ ಆಗ್ರಹಿಸಿ ಕಬ್ಬು ಬೆಳೆಗಾರರ ಧರಣಿ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ದರ ನಿಗದಿ ಮಾಡದೇ, ರೈತರ ಸಭೆ ಕರೆದು ಚರ್ಚಿಸಿದೇ ಏಕಾಏಕಿ ಹಂಗಾಮು ಆರಂಭಿಸಿವೆ. ಈ ಕ್ರಮ ಖಂಡಿಸಿ ನ. 9ರಂದು ಯಡ್ರಾಮಿ ತಾಲ್ಲೂಕಿನ ನಾಗರಹಳ್ಳಿ ಕ್ರಾಸ್‌ನಲ್ಲಿ ರಸ್ತೆ ತಡೆ ಹಾಗೂ ಆಲಂದ ತಾಲ್ಲೂಕಿನ ಭೂಸನೂರು ಸಕ್ಕರೆ ಕಾರ್ಖಾನೆ ಮುಂದೆ ಧರಣಿ ನಡೆಸಲಾಗುವುದು’ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮುಖಂಡ ಶೌಕತ್‍ಅಲಿ ಆಲೂರ ತಿಳಿಸಿದರು.

‘ಕಾರ್ಖಾನೆಗಳು ಬಾಯ್ಲರ್ ಪೂಜೆ ಮಾಡಿ ಕಬ್ಬು ನುರಿಸಲು ತಯಾರಿ ಮಾಡಿಕೊಂಡಿವೆ. ಆದರೆ, ಇನ್ನೂ ಕಬ್ಬಿನ ದರವೇ ನಿಗದಿಯಾಗಿಲ್ಲ. ಕೆಲ ದಿನಗಳ ಹಿಂದೆ ಜಿಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ಕಬ್ಬಿನ ಬೆಲೆ ನಿಗದಿ ಮಾಡಲು ರೈತರ ಮತ್ತು ಕಾರ್ಖಾನೆಯವರ ಸಭೆ ಕರೆಯುವಂತೆ ಒತ್ತಾಯಿಸಿದ್ದೇವೆ. ಆದರೂ ಸಭೆ ಕರೆದಿಲ್ಲ. ಇದರಲ್ಲಿ ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯವೂ ಇದೆ’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.‌

‘ಈ ಹೋರಾಟವನ್ನು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ಅಖಿಲ ಭಾರತ ಕಿಸಾನ್‌ ಸಭಾ, ಬಿಸಿಲು ನಾಡಿನ ಹಸಿರು ಸೇನೆ ಜತೆಗೂಡಿಕೊಂಡು ನಡೆಸಲಿವೆ. ಕಬ್ಬು ಬೆಳೆಯಲು ಅಗುವ ವೆಚ್ಚ ಆಧರಿಸಿ ಮತ್ತು ಕೃಷಿ ಇಲಾಖೆ ವರದಿಯಂತೆ ಪ್ರತಿ ಟನ್ ಕಬ್ಬಿಗೆ ₹ 3500 ದರ ನಿಗದಿಪಡಿಸಬೇಕು. ಪ್ರತಿ ಟನ್‍ಗೆ ನೀಡುವ ಕಾಲು ಕೆ.ಜಿ ಸಕ್ಕರೆಯನ್ನು ಒಂದು ಕೆ.ಜಿ.ಗೆ ಹೆಚ್ಚಿಸಬೇಕು. ಆಯಾ ತಾಲ್ಲೂಕಿನ ರೈತರಿಗೆ ಅವರ ತಾಲೂಕಿನಲ್ಲಿಯೇ ಸಕ್ಕರೆ ವಿತರಿಸುವ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸುವುದಾಗಿ ತಿಳಿಸಿದರು.

‘ಅತಿವೃಷ್ಟಿ ಮತ್ತು ಪ್ರವಾಹದಿಂದ ಜಿಲ್ಲೆಯಲ್ಲಿ ಬೆಳೆಗಳು ಸಂಪೂರ್ಣ ಹಾನಿಯಗಿವೆ. ಶೇ 70ಕ್ಕಿಂತ ಹೆಚ್ಚು ಕಬ್ಬು ನಾಶವಾಗಿದ್ದು, ಯಡ್ರಾಮಿ ತಾಲ್ಲೂಕಿನಲ್ಲಿ 200 ಎಕರೆಗಿಂತ ಹೆಚ್ಚು ಶುಂಠಿ ಹಾನಿಯಾಗಿದೆ. ಬೆಳೆ ಹಾನಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಪ್ರತಿ ಎಕರೆಗೆ ₹ 20 ಸಾವಿರ ಪರಿಹಾರಧನ ನೀಡಬೇಕು’ ಎಂದೂ ಒತ್ತಾಯಿಸಿದರು.

ಮುಖಂಡರಾದ ಲಾಲೇಸಾಬ್‌ ಮಣಿಯಾರ ಯಡಾಮಿ, ಮೌಲಾ ಮುಲ್ಲಾ, ವಸಂತರಾವ ನರಿಬೋಳ, ತಮ್ಮಣ್ಣ ಬಾಗೇವಾಡಿ, ಈರಣ್ಣ ಭಜಂತ್ರಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.